ನವದೆಹಲಿ: ಹೊಸದಾಗಿ ನಿರ್ಮಿಸಲಾದ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಾಲನ ಪ್ರತಿಷ್ಠಾಪನೆಯ ವಿಧಿವಿಧಾನಗಳು ಇಂದಿನಿಂದ ಪ್ರಾರಂಭವಾಗಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮಾಹಿತಿ ನೀಡಿದೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಮಾತನಾಡಿ, ಜನವರಿ 22ರಂದು ನಾಲ್ವರು ಗಣ್ಯರ ಸಮ್ಮುಖದಲ್ಲಿ ಪ್ರಾಣ ಪ್ರತಿಷ್ಠೆ ಮಧ್ಯಾಹ್ನ 12.20ಕ್ಕೆ ಆರಂಭವಾಗಿ ಮಧ್ಯಾಹ್ನ 1 ಗಂಟೆಗೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.
ಮಂಗಳವಾರದಿಂದ ಆರಂಭವಾಗುವ ಧಾರ್ಮಿಕ ವಿಧಿವಿಧಾನಗಳು ಜನವರಿ 21ರವರೆಗೆ ನಡೆಯಲಿವೆ ಎಂದರು.
ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮೂರು ಗಂಟೆಗೂ ಹೆಚ್ಚು ಕಾಲ ನಡೆಯಲಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಜ್ಯಪಾಲ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಶ್ರೀ ರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಉಪಸ್ಥಿತರಿರುವರು ಎಂದಿದ್ದಾರೆ.
ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವ ಸಲುವಾಹಿ ಸಂತರು ಮತ್ತು ಆಹ್ವಾನಿತರನ್ನು ಸಮಯಕ್ಕೆ ಮುಂಚಿತವಾಗಿ ತಲುಪಲು ವಿನಂತಿಸಲಾಗಿದೆ. ಆಹ್ವಾನ ಪತ್ರಿಕೆ ವೈಯಕ್ತಿಕವಾಗಿದ್ದು, ಒಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ. ಗಣ್ಯರ ಸಹಾಯಕರು ಅಥವಾ ಶಿಷ್ಯರು ಹೊರಗೆ ಇರಬೇಕಾಗುತ್ತದೆ. ಏಕೆಂದರೆ ಸ್ಥಳದಲ್ಲಿ ಆಸನ ವ್ಯವಸ್ಥೆ ಸೀಮಿತವಾಗಿದೆ ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಏಳು ಸಾವಿರಕ್ಕೂ ಹೆಚ್ಚು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಆಮಂತ್ರಣ ಪತ್ರಿಕೆ ನೀಡುವ ಮುನ್ನ ಅಂಚೆ ಇಲಾಖೆ ಮೂಲಕ ಸಂತರಿಗೂ ಈ ಮಾಹಿತಿ ರವಾನಿಸಲಾಗಿದೆ. ಇದರಲ್ಲಿ ಕಾರ್ಯಕ್ರಮದ ವೇಳೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.