ಬೆಂಗಳೂರು: ರಾಜ್ಯದ ಶೇ 25ರಷ್ಟಿರುವ ಶೋಷಿತ, ಪೀಡಿತ, ವಂಚಿತ ತಳ ಸಮುದಾಯಗಳು ಎಂದರೆ ದಲಿತ ಸಮುದಾಯಗಳಿಗೆ ಅನ್ಯಾಯ ಆಗುತ್ತಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ಎಸ್ಇಎಸ್ಪಿ, ಎಸ್ಟಿಪಿ 11 ಸಾವಿರ ಕೋಟಿ ಮೊತ್ತದ ದುರುಪಯೋಗ ಆಗಿದೆ. ಇದರ ಬಗ್ಗೆ ಸದನದಲ್ಲಿ ಚರ್ಚೆಗೆ ಅರ್ಧ ಗಂಟೆ ಕೊಡುವುದಾಗಿ ಹೇಳಿದ್ದರೂ ಅವಕಾಶ ನೀಡಿಲ್ಲ. ‘ಗ್ಯಾರಂಟಿಗಳಿಗೆ ಎಸ್ಇಎಸ್ಪಿ, ಟಿಎಸ್ಪಿ ಹಣವನ್ನು ನೀಡಿದ್ದೀರಾ’ ಎಂಬ ಪ್ರಶ್ನೆಗೆ ‘ಮೀಸಲು ಹಣದ ದುರುಪಯೋಗ ಆಗಲು ಬಿಡುವುದಿಲ್ಲ’ ಎಂದು ಉತ್ತರ ಕೊಟ್ಟಿದ್ದಾರೆ. ಸುತ್ತಿ ಬಳಸಿ ದುರುಪಯೋಗ ಆಗಲು ಬಿಡುವುದಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರದಿಂದ ದಲಿತರಿಗೆ ನಿರಂತರವಾಗಿ ಅನ್ಯಾಯ ಆಗುತ್ತಿದೆ. ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ. ಕೂಲಿ ಕೆಲಸ ಮಾಡುವ ನಮ್ಮವರಿಗೆ ಶಕ್ತಿ ಯೋಜನೆಯಡಿ ಬಸ್ ಪ್ರಯಾಣದ ಪ್ರಯೋಜನ ಆಗುವುದಿಲ್ಲ. ನಮ್ಮ ಸರಕಾರವೇ ಹಿಂದೆ 75 ಯೂನಿಟ್ ವಿದ್ಯುತ್ ಕೊಟ್ಟಿತ್ತು. ನಮ್ಮವರಿಗೆ ಮನೆ ಆಧಾರ್ ಇಲ್ಲ; ಮನೆಯೂ ಇಲ್ಲ. ಖಾತೆಯೂ ಇಲ್ಲ. ನಾಲ್ಕು ಯೋಜನೆಗಾಗಿ 11,700 ಕೋಟಿಯನ್ನು ತೆಗೆದಿದ್ದೀರಿ. ಯಾವ ಜಾತಿ ಎಂದು ಕೇಳಿ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ. ಜನಸಂಖ್ಯೆಗೆ ಆಧರಿಸಿ ಮೀಸಲು ನಿಧಿಯಿಂದ ಹಣವನ್ನು ವರ್ಗಾವಣೆ ಮಾಡಿದ್ದು, ಬೇರೆಯವರಿಗೆ ಇದು ಉಪಯೋಗ ಆಗಲಿದೆ. ಜನರಲ್ ಪೂಲ್ಗೆ ಹಾಕಿದ್ದು, ಬೇರೆಯವರಿಗೆ ಪ್ರಯೋಜನ ಸಿಗಲಿದೆ ಎಂದು ಆಕ್ಷೇಪಿಸಿದರು.
34 ಸಾವಿರ ಕೋಟಿಯಿಂದ 11 ಸಾವಿರ ಕೋಟಿ ತೆಗೆದರೆ 23 ಸಾವಿರ ಕೋಟಿ ಆಗಲಿದೆ. ಅದನ್ನಾದರೂ ಒಪ್ಪಿಕೊಳ್ಳಿ. ಇಲ್ಲವೇ ಹಣ ವಾಪಸ್ ಹಾಕಿ ಎಂದು ಆಗ್ರಹಿಸಿದರು. ಮೂಗಿಗೆ ತುಪ್ಪ ಸವರದಿರಿ; ಮನೆ ಇಲ್ಲದ ದಲಿತರಿಗೆ ಮನೆ, ಭೂಮಿ ಕೊಡಿ. ಓದಿದವರಿಗೆ ಕೆಲಸ ಕೊಡಿ ಎಂದು ಒತ್ತಾಯಿಸಿದರು.
ನಮ್ಮ ಸರಕಾರವು ಸಮಾಜಕಲ್ಯಾಣಕ್ಕೆ 4,604 ಕೋಟಿ, ಈಗ ಕಾಂಗ್ರೆಸ್ನವರು 1,471 ಕೋಟಿ, ನಾವು ಉನ್ನತ ಶಿಕ್ಷಣಕ್ಕೆ 202 ಕೋಟಿ ಕೊಟ್ಟರೆ ಇವರು ಕೇವಲ 10 ಕೋಟಿ ನೀಡಿದ್ದಾರೆ. ಮತ್ತೆ ದಲಿತರು ಉದ್ಧಾರ ಆಗುವುದು ಹೇಗೆ? ವಸತಿಗೆ 1492 ಕೋಟಿ, ಇವರು 798 ಕೋಟಿ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಇದು ದಲಿತ ವಿರೋಧಿ ಸರಕಾರ ಎಂದು ಟೀಕಿಸಿದ ಅವರು, ಸರಕಾರದ ಗೊಡ್ಡುವಾದ ಖಂಡಿಸಿ ದಲಿತ ಸಚಿವ ಮಹದೇವಪ್ಪ ಅವರು ದಲಿತರಿಗೇ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗಳು ಇದಕ್ಕೆ ನೇರ ಹೊಣೆ ಎಂದರು.
ಮೀಸಲು ನಿಧಿ ಹಣ ವಾಪಸ್ ಕೊಡುವವರೆಗೆ ಹೋರಾಟಗಳು, ಪಾದಯಾತ್ರೆಗಳನ್ನು ಸಂಘಟಿಸುತ್ತೇವೆ ಎಂದ ಅವರು, ಸಣ್ಣ ವಿಷಯಕ್ಕೂ ಹೋರಾಟ ಮಾಡುತ್ತಿದ್ದ ದಲಿತ ಸಂಘಟನೆಗಳಲ್ಲಿ ಬಹುತೇಕ ಸಂಸ್ಥೆಗಳು ಸುಮ್ಮನಿವೆ. ಅವುಗಳ ಬಾಯಿ ಮುಚ್ಚಿಸುವ ಕೆಲಸವನ್ನು ಸರಕಾರ ಮಾಡಿದೆ ಎಂದು ತಿಳಿಸಿದರು.
ಮಹದೇವಪ್ಪ ಅವರಲ್ಲಿ ಡಾ,ಅಂಬೇಡ್ಕರ್ ಅವರ ರಕ್ತ ನಿಮ್ಮಲ್ಲಿ ಹರಿಯುತ್ತಿದ್ದರೆ ರಾಜೀನಾಮೆ ಕೊಟ್ಟು ಹೋರಾಟಕ್ಕೆ ಬನ್ನಿ ಎಂದು ಮನವಿ ಮಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.