ಬೆಂಗಳೂರು: ಬೆಳಗಾವಿಯ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡು ಪೊಲೀಸ್ ಇಲಾಖೆಯಿಂದ ನ್ಯಾಯಾಲಯಕ್ಕೆ ವಂಚನೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ಮಾಜಿ ಶಾಸಕ ಪಿ.ರಾಜೀವ್ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರಿನ ಮರುಸೃಷ್ಟಿಯು ರಾಜ್ಯ ಸರಕಾರ ಪ್ರಾಯೋಜಿತ ದೌರ್ಜನ್ಯ ಎಂದು ಟೀಕಿಸಿದರು. ಪೊಲೀಸ್ ಇಲಾಖೆಯನ್ನು ನಿಯಂತ್ರಿಸುವಲ್ಲಿ ವಿಫಲರಾದ ಡಾ. ಪರಮೇಶ್ವರ್ ಅವರು, ತಮ್ಮ ಹುದ್ದೆ ದುರ್ಬಳಕೆ ಮಾಡಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೂಡ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ಪೃಥ್ವಿ ಸಿಂಗ್ ಅವರ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರನು ಅವರ ಬೆಂಬಲಿಗರ ಜೊತೆ ಹಲ್ಲೆ ಮಾಡಿ ಅವರ ಕೈಯಿಂದ ಮೊಬೈಲ್ ಕಿತ್ತುಕೊಂಡಿದ್ದ ಘಟನೆ ನಡೆದಿದೆ. ಬಳಿಕ ಕೆಎಲ್ಇಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಗ ಪೃಥ್ವಿ ಸಿಂಗ್ ಅವರು 6 ಪುಟಗಳ ದೂರು ದಾಖಲಿಸಿದ್ದರು. ನಿನ್ನೆ ಪೃಥ್ವಿ ಸಿಂಗ್ ಅವರು ಸಂಶಯಗೊಂಡು ಟ್ರೂ ಕಾಪಿಗೆ ಮನವಿ ಸಲ್ಲಿಸಿದ್ದರು ಎಂದು ವಿವರಿಸಿದರು.
ಪೊಲೀಸರಿಗೆ ಕೇಳಿದಾಗ ಎಫ್ಐಆರ್ ಪ್ರತಿ, ದೂರಿನ ಪ್ರತಿ ಕೊಡುವುದಿಲ್ಲ. ಹಾಗಾಗಿ ಇಲಾಖೆ ಮೇಲೆ ಸಂಶಯಗೊಂಡು ನ್ಯಾಯಾಲಯದಿಂದ ಟ್ರೂ ಕಾಪಿ ಪಡೆದಿದ್ದಾರೆ. ಆಗ ಪೃಥ್ವಿ ಸಿಂಗ್ ಅವರು 6 ಪುಟಗಳ ದೂರಿನ ಬದಲಾಗಿ ಪೊಲೀಸರು ನಕಲಿ ದೂರಿನ ಕಾಪಿ ಸೃಷ್ಟಿಸಿ, 2 ಪುಟಗಳ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಸ್ಪಷ್ಟಗೊಂಡಿದೆ ಎಂದು ತಿಳಿಸಿದರು. ಇದು ಸಣ್ಣ ಅಪರಾಧವಲ್ಲ; ಸಂವಿಧಾನದ ಉಲ್ಲಂಘನೆ, ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಅವರು ತಿಳಿಸಿದರು. ಸರಕಾರವೇ ಇದರಲ್ಲಿ ಶಾಮೀಲಾಗಿದೆ ಎಂದರು.
ಕಾಪಿ ಪೇಸ್ಟ್ ಮೂಲಕ ಎಡಿಟ್ ಮಾಡಿ ಬೇಕಾದ ಕೆಲವೇ ವಾಕ್ಯಗಳನ್ನು ಬಳಸಿಕೊಂಡು ಪೊಲೀಸರೇ ನಕಲಿ ದೂರು ಸೃಷ್ಟಿಸಿದಂತಿದೆ. ಇದು ಸರಕಾರವೇ ನ್ಯಾಯಾಲಯಕ್ಕೆ ವಂಚಿಸಿದ ಪ್ರಕರಣ ಎಂದು ಆರೋಪಿಸಿದರು. ಒಬ್ಬ ಬಲಿಪಶು, ಫಿರ್ಯಾದುದಾರನ ದೂರು ಯಥಾವತ್ತಾಗಿ ನ್ಯಾಯಾಲಯಕ್ಕೆ ಹೋಗಬೇಕು. ಅದು ಹೋಗದಿದ್ದರೆ ಪೊಲೀಸರಿಂದ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆದಂತೆ ಎಂದರು.
ಐಪಿಸಿ 468 ಪ್ರಕಾರ ಸರಕಾರವೇ ನ್ಯಾಯಾಲಯಕ್ಕೆ ನಕಲಿ- ಮರುಸೃಷ್ಟಿಯ ದಾಖಲೆ ಒದಗಿಸಿದಂತಾಗಿದೆ. ಐಪಿಸಿ 471 ಪ್ರಕಾರ ನಕಲಿ ದಾಖಲೆಯನ್ನು ಸತ್ಯವಾದ ದಾಖಲೆ ಎಂದು ತೋರಿಸಿದ ಪ್ರಯತ್ನ ನಡೆದಿದೆ ಎಂದು ಟೀಕಿಸಿದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು, ಹೈಕೋರ್ಟ್ ಇದರ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಸರಕಾರದ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ದೂರನ್ನು ಮರುಸೃಷ್ಟಿಸಲು ತಮ್ಮ ಸಚಿವ ಸ್ಥಾನವನ್ನು, ಪೊಲೀಸ್ ಇಲಾಖೆಯನ್ನೇ ದುರ್ಬಳಕೆ ಮಾಡಿದ್ದಾರೆ. ಭಾರತದ ಇತಿಹಾಸದಲ್ಲೇ ಎಫ್ಐಆರ್ ಮರುಸೃಷ್ಟಿ (ಫ್ಯಾಬ್ರಿಕೇಟ್) ಮಾಡಿದ ಪ್ರಕರಣ ಇಲಾಖೆಯಲ್ಲೇ ಇದ್ದ ನಾನು ಇಲ್ಲಿವರೆಗೆ ಕೇಳಿಲ್ಲ. ಇನ್ನೊಂದೆಡೆ ಗೃಹ ಸಚಿವರು ಇಲಾಖೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ ಎಂದು ಆಕ್ಷೇಪಿಸಿದರು.
ನಾನು ಒಂದು ಪಕ್ಷದ ಕಾರ್ಯಕರ್ತನಾಗಿ ಸರಕಾರಕ್ಕೆ ಸವಾಲು ಹಾಕುವೆ. ದಲಿತ ಜನಾಂಗದ ಪೃಥ್ವಿ ಸಿಂಗ್ ಅವರು ಬರೆದು ಕೊಟ್ಟ ಮೂಲ ಸಹಿ ಇರುವ ದೂರನ್ನು ಕೋರ್ಟಿಗೆ ಕಳುಹಿಸಿಲ್ಲ. ಯಾವುದೋ ಸ್ಕ್ಯಾನ್ ಮಾಡಿದ ನಕಲಿ ಮರುಸೃಷ್ಟಿಸಿದ ದಾಖಲೆಯನ್ನು ಕಳುಹಿಸಿದ್ದಾರೆ ಎಂದು ದೂರಿದರು. ಇದು ಮೂಲ ಎಫ್ಐಆರ್ ಎಂದು ಸರಕಾರವು ಸಾಬೀತುಪಡಿಸಿದರೆ ನಾನು ಮಂಡಿಯೂರಿ ರಾಜ್ಯದ ಜನರ ಕ್ಷಮೆ ಕೇಳುವೆ ಎಂದು ತಿಳಿಸಿದರು. ಇದು ನಕಲಿ ಎಂದು ಸಾಬೀತಾದರೆ ತಕ್ಷಣಕ್ಕೆ ಎರಡೂ ಸಚಿವರಿಂದ ರಾಜೀನಾಮೆ ಪಡೆದುಕೊಳ್ಳಿ ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.
6 ಪುಟದ ದೂರನ್ನು ಎಡಿಟ್, ಕಾಪಿ ಪೇಸ್ಟ್ ಮಾಡಿ 2 ಪುಟಕ್ಕೆ ಇಳಿಸಲು ಕಾರಣ ಏನು ಎಂಬ ಕುರಿತು ವಿವರಿಸಿದ ಅವರು, ಪೃಥ್ವಿ ಸಿಂಗ್ ಅವರು ‘ನನ್ನ ಕಡೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು 10 ಲಕ್ಷವನ್ನು ಕಿತ್ತುಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದರು. ಇದನ್ನು ತಪ್ಪಿಸಲು ದೂರನ್ನು ಮರುಸೃಷ್ಟಿ ಮಾಡಿರಬಹುದು ಎಂದರು. ಆಗ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶಾಸಕರಾಗಿದ್ದರು. ಇದು ಜನಪ್ರತಿನಿಧಿಯಾಗಿ ಭ್ರಷ್ಟಾಚಾರ ಮಾಡಿದ ಪ್ರಕರಣ ಎಂದು ವಿವರ ನೀಡಿದರು.
ಬಲಪ್ರಯೋಗಿಸಿ ನನ್ನ ಕೈಯಿಂದ ಚನ್ನರಾಜ್ ಹಟ್ಟಿಹೊಳಿ ಮೊಬೈಲ್ ಕಿತ್ತುಕೊಂಡರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದು ರಾಬರಿ ಆಗುತ್ತದೆ. ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದಾಗಿ ತಿಳಿಸಿದ್ದಾರೆ. 307 ಅಡಿ ಇದು ಕೇಸಾಗಬೇಕಿತ್ತು. ಇವೆಲ್ಲವನ್ನು ಮುಚ್ಚಿ ಹಾಕಲು ಪೊಲೀಸರೇ ಸುಳ್ಳು ದೂರು ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಟೀಕಿಸಿದರು.
ಇಡೀ ದೇಶದಲ್ಲೇ ಸಂಚಲನ ಮತ್ತು ಸಂವೇದನೆ ಉಂಟು ಮಾಡುವ ಘಟನೆ ಇದು ಎಂದು ನಾನು ಭಾವಿಸುತ್ತೇನೆ. ಇದು ದೇಶಕ್ಕೇ ಮಾಡಿದ ಅವಮಾನ. ಸದನದಲ್ಲೂ ಇದರ ಕುರಿತು ಹೋರಾಟ ಮಾಡುತ್ತೇವೆ ಎಂದರು. ಸರಕಾರವೇ ನ್ಯಾಯಾಲಯಕ್ಕೆ ವಂಚನೆ ಮಾಡಿರುವ ಪ್ರಕರಣ ಇದು. ಡಾ. ಪರಮೇಶ್ವರ್ ಅವರು ಗೃಹ ಸಚಿವರಾಗಿ ಕಾರ್ಯನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪೃಥ್ವಿ ಸಿಂಗ್ ಅವರು ಮೊಬೈಲ್ ಕರೆ ಮೂಲಕ ಮಾತನಾಡಿ, 6 ಪುಟದ ದೂರಿನ ಪ್ರತಿ ನೀಡಿದ್ದೆ. ಈಗ ಅವರು ಮರುಸೃಷ್ಟಿ ಮಾಡಿದ ದೂರನ್ನು ಲಗತ್ತಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಸರಕಾರವು ಚನ್ನರಾಜ್ ಹಟ್ಟಿಹೊಳಿ ಮತ್ತು ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರರನ್ನು ಉಳಿಸಲು ಹೀಗೆ ಮಾಡುತ್ತಿದ್ದಾರೆ ಎಂದರು. ಕಮಿಷನರ್, ಡಿಸಿಪಿ ಅವರಿಗೆ ರಿಜಿಸ್ಟರ್ಡ್ ಪೋಸ್ಟ್ ಮೂಲಕ ನಾನು 6 ಪುಟಗಳ ದೂರನ್ನು ಕಳಿಸಿದ್ದೆ ಎಂದೂ ವಿವರಿಸಿದರು. ನಾನು ಸರಕಾರದ ಮೇಲೆ, ಪೊಲೀಸ್ ಇಲಾಖೆ ಮೇಲೆ ವಿಶ್ವಾಸ ಇಡಬೇಕೇ ಎಂದು ಪ್ರಶ್ನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.