ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯರ ಸರಕಾರ ಅಧಿಕಾರಕ್ಕೆ ಬಂದು ಸುಮಾರು 6 ತಿಂಗಳು ಕಳೆದಿದೆ. ಪರಿಶಿಷ್ಟ ಜಾತಿ, ಜನಾಂಗಕ್ಕೆ ಮಂಜೂರಾದ 11,144 ಕೋಟಿ ರೂಪಾಯಿ ಅನುದಾನವನ್ನು ಬೇರೆಡೆ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆಕ್ಷೇಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆ ಹಣವನ್ನು ವಾಪಸ್ ಕೊಟ್ಟು ದಲಿತರ ಶಿಕ್ಷಣ, ಉದ್ಯೋಗ ಮತ್ತು ಅವರ ಭೂಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆಗೆ ಕೊಡಲು ಒತ್ತಾಯಿಸಿದ್ದೇವೆ. ಆದರೂ, ಕೂಡ ಸಿದ್ದರಾಮಯ್ಯನವರು ಕೊಡುತ್ತಿಲ್ಲ. ಅದಕ್ಕಾಗಿ ನಾವು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು. ಈ ಅಧಿವೇಶನದಲ್ಲಾದರೂ ಆ ಮೊತ್ತವನ್ನು ವಾಪಸ್ ಕೊಡುವರೆಂಬ ನಿರೀಕ್ಷೆ ವ್ಯಕ್ತಪಡಿಸಿದರು.
2022-23ನೇ ಸಾಲಿನ ಅನುದಾನದಲ್ಲಿ 10 ನಿಗಮಗಳ ಮೂಲಕ 10 ಜನಾಂಗಗಳ 50 ಸಾವಿರ ದಲಿತ ಜನಾಂಗದವರಿಗೆ (ಎಸ್ಸಿ, ಎಸ್ಟಿ) ಸಾಲ ಸೌಕರ್ಯ ಮಂಜೂರಾಗಿತ್ತು. ಸರಕಾರ ಬದಲಾದ ಕೂಡಲೇ ಹಣ ಬಿಡುಗಡೆ ಮಾಡದೆ ಸಿದ್ದರಾಮಯ್ಯನವರು ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಎಲ್ಲ ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆ ಮಾಡಲು ಆಗ್ರಹಿಸಿದರು.
ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತರ ಮೇಲೆ ಹಲ್ಲೆಗಳು ಜಾಸ್ತಿ ಆಗುತ್ತಿವೆ. ಅಧಿವೇಶನ ನಡೆಯುತ್ತಿರುವಾಗ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಎಂಬ ದಲಿತ ಯುವಕನ ಮೇಲೆ ಹಲ್ಲೆ ಆಗಿದೆ. 3 ದಿನ ಕಳೆದರೂ ಪೊಲೀಸರು ಎಫ್ಐಆರ್ ಮಾಡಿ ಆರೋಪಿಗಳನ್ನು ಬಂಧಿಸಿಲ್ಲ. ಇದು ದಲಿತವಿರೋಧಿ ನೀತಿ ಎಂದು ಟೀಕಿಸಿದರು. ಕೂಡಲೇ ದಲಿತರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ನನಗೆ ಸಂಘದ ನಿಕಟ ನಂಟಿದೆ. ಜಾತಿ ತಾರತಮ್ಯದ ನಡವಳಿಕೆಯನ್ನು ನಾನು ಸಂಘದಲ್ಲಿ ಕಂಡಿಲ್ಲ. ಅದಕ್ಕಾಗಿ, ನನ್ನ ಸೋದರ ಗೂಳಿಹಟ್ಟಿ ಶೇಖರ್ ಅವರು ಸುಳ್ಳು ಆಪಾದನೆ ಮಾಡಬಾರದು ಎಂದು ವಿನಂತಿಸುವುದಾಗಿ ತಿಳಿಸಿದರು. ರಾಜಕೀಯ ಕಾರಣಕ್ಕಾಗಿ ಸಂಘವನ್ನು ಮಧ್ಯದಲ್ಲಿ ಎಳೆದು ತರದಿರಿ ಎಂದು ಮನವಿ ಮಾಡಿದರು.
ವರ್ಗರಹಿತ, ಜಾತಿ ಇಲ್ಲದ ಸಮಾಜ ನಿರ್ಮಿಸುವುದೇ ಆರೆಸ್ಸೆಸ್ ಧ್ಯೇಯವಾಗಿದೆ. ಆರೆಸ್ಸೆಸ್ನಲ್ಲಿ ಇರುವವರಿಗೆ ಒಬ್ಬರಿಗೆ ಒಬ್ಬರ ಜಾತಿ ಗೊತ್ತಿರುವುದಿಲ್ಲ. ಯಾರು ಯಾರ ಜಾತಿಯನ್ನೂ ಕೇಳುವುದಿಲ್ಲ. ಎಲ್ಲರೂ ಅಲ್ಲಿ ಸರಿಸಮಾನರು. ಗುರೂಜಿ ಅವರು ಅಸ್ಪøಶ್ಯತೆ ಆಚರಣೆ ಮಾಡುವವರು ಕೊಳಕು ಮನಸ್ಸಿನವರು ಎಂದಿದ್ದರು. ಗೂಳಿಹಟ್ಟಿ ಶೇಖರ್ ಅವರ ಮನಸ್ಥಿತಿ ಯಾಕೆ ಹೀಗಾಗಿದೆ ಎಂದು ಗೊತ್ತಿಲ್ಲ. ಅವರು ಬಿಜೆಪಿಯಲ್ಲಿ ಇದ್ದಾಗ ಒಂದು, ಹೊರಗಡೆ ಹೋದಾಗ ಮತ್ತೊಂದು ರೀತಿ ಮಾತನಾಡುತ್ತಾರೆ. ಇದು ಸರಿಯಲ್ಲ ಎಂದು ಈ ಸಂಬಂಧ ಪ್ರಶ್ನೆಗೆ ಅವರು ಉತ್ತರ ಕೊಟ್ಟರು.
ಸಂವಿಧಾನ ಕರ್ತೃ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಸ್ಪøಶ್ಯತೆ ನೋವಿನಿಂದ ಹಿಂದೂ ಧರ್ಮವನ್ನು ತ್ಯಜಿಸಬೇಕಾಯಿತು ಎಂದು ವಿಶ್ಲೇಷಿಸಿದರು. ಇಂದಿಗೂ ಕೂಡ ದೇಶದಲ್ಲಿ ಅಸ್ಪøಶ್ಯತೆ ಆಚರಣೆ ನಿಂತಿಲ್ಲ. ಅಸ್ಪøಶ್ಯತೆ ಆಚರಣೆ ನಿಲ್ಲಿಸಲು, ಜಾತಿ ಹೆಸರಿನಲ್ಲಿ ಶೋಷಣೆ ವಿರುದ್ಧ ಬಸವಣ್ಣನವರು 12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ್ದರು ಎಂದು ನುಡಿದರು.
ನಮ್ಮ ಧರ್ಮ ಗುರುಗಳು, ಮಠಾಧೀಶರು, ಶರಣರು, ಸಂತರು, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅಸ್ಪøಶ್ಯತೆ ಹೋಗಲಾಡಿಸಲು ಹೋರಾಟ ಮಾಡಬೇಕೆಂದು ಅವರು ವಿನಂತಿಸಿದರು. ಅಸ್ಪøಶ್ಯತೆ ಕಾರಣಕ್ಕೆ ಆಗುವ ಧರ್ಮಾಂತರ ತಡೆಯಲು ಇದು ಅನಿವಾರ್ಯ ಎಂದು ತಿಳಿಸಿದರು. ಮಠಾಧೀಶರು, ಧರ್ಮಗುರುಗಳು ಮನಸ್ಸು ಮಾಡಿದರೆ ಕೇವಲ 3 ವರ್ಷಗಳಲ್ಲಿ ಅಸ್ಪøಶ್ಯತೆ ನಿವಾರಣೆ ಸಾಧ್ಯವಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.