
ಬೆಂಗಳೂರು: ಜಮೀರ್ ಅಹ್ಮದ್ ಅವರ ಹೇಳಿಕೆಯನ್ನು ಖಂಡಿಸಿ ಮತ್ತು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು ಒತ್ತಾಯಿಸಿ ಎಸ್ಸಿ ಮೋರ್ಚಾ ವತಿಯಿಂದ ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಕಟಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಡಿಸೆಂಬರ್ 2, 3 ಅಥವಾ ಸದನ ನಡೆಯುವಾಗಲೇ 4ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಸಚಿವ ಜಮೀರ್ ಅಹ್ಮದ್ ಅವರು ಮಂತ್ರಿಯಾಗಿ ಮುಂದುವರಿಯಲು ಯೋಗ್ಯರಲ್ಲ. ಆ ಕಾರಣದಿಂದ ಅವರು ಬೆಳಗಾವಿಯಲ್ಲಿ ನಡೆಯುವ ಸದನಕ್ಕೆ ಅವರು ಹಾಜರಾಗಬಾರದು ಎಂದು ಆಗ್ರಹಿಸಿದರು.
ಡಾ. ಅಂಬೇಡ್ಕರ್ರವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಕಪ್ಪುಚುಕ್ಕಿ ಇಡುವ ರೀತಿಯಲ್ಲಿ ಜಮೀರ್ ಅಹ್ಮದ್ ಅವರು ಮಾತನಾಡಿದ್ದಾರೆ. ಇದನ್ನು ಇಂದಿನ ಎಸ್ಸಿ ಮೋರ್ಚಾ ರಾಜ್ಯ ವಿಶೇóಷ ಸಭೆಯು ಖಂಡಿಸಿದೆ ಎಂದು ತಿಳಿಸಿದರು. ಸ್ಪೀಕರ್ ಸ್ಥಾನ ಎಂಬುದು ಸಾಂವಿಧಾನಿಕ ಸ್ಥಾನ. ಆ ಸ್ಥಾನಕ್ಕೆ ಪ್ರತಿಯೊಬ್ಬರೂ ಗೌರವ ಕೊಡಬೇಕಾಗುತ್ತದೆ; ಅದು ವ್ಯಕ್ತಿಗೆ ಕೊಡುವ ಗೌರವವಲ್ಲ ಎಂದು ವಿವರಿಸಿದರು.
ಜಮೀರ್ ಅವರು ಈ ಸ್ಥಾನವನ್ನು ಧರ್ಮಕ್ಕೆ ಅಂಟಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿದರು. ಜಮೀರ್ ಅವರನ್ನು ಆ ಸ್ಥಾನದಿಂದ ವಜಾ ಮಾಡಲು ಆಗ್ರಹಿಸಿದರು. ಇದೇವೇಳೆ ಅವರು ಮೋರ್ಚಾದ ವಿಶೇóಷ ಸಭೆಯ ಕುರಿತು ಮಾಹಿತಿ ಕೊಟ್ಟರು.
ಕಾಂತರಾಜು ಆಯೋಗದ ವರದಿ ನೀಡುವಾಗ ಎಲ್ಲರ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿಲ್ಲ. ಅದು ಜಾತಿಗಣತಿ ಅಲ್ಲ. ಜಾತಿಗಣತಿ ಮಾಡಲು ಸೆನ್ಸಸ್ ಡಿಪಾರ್ಟ್ಮೆಂಟ್ ಹೊರತುಪಡಿಸಿ ಬೇರೆ ಯಾರಿಗೂ ಅಧಿಕಾರ ಇಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.
ಅದು ಸಮೀಕ್ಷೆ ಮಾತ್ರ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದಿದ್ದರೆ ಅದಕ್ಕೆ ಮೌಲ್ಯವಿದೆ. ಆದರೆ, ಎಲ್ಲರ ವಿರೋಧದ ಮಧ್ಯದಲ್ಲಿ ಇಂಥ ವರದಿ ಬೇಕಿಲ್ಲ. ಎಲ್ಲರೂ ಒಪ್ಪುವ, ಮೆಚ್ಚುವ ರೀತಿಯಲ್ಲಿ ವರದಿ ಬಂದರೆ ನಮ್ಮ ಅಭ್ಯಂತರವಿಲ್ಲ. ಬಿಜೆಪಿ ಅದರ ವಿರೋಧ ಇದೆ ಎಂದಲ್ಲ ಎಂದು ತಿಳಿಸಿದರು.
ಕಾಂತರಾಜು ವರದಿ ಕಳ್ಳತನ ಆಗಿದ್ದರೆ ಯಾರು ಕಳ್ಳರು? ಕಳ್ಳರನ್ನು ಯಾರು ಹಿಡಿಯಬೇಕು? ಮೊದಲು ಅವರನ್ನು ಹಿಡಿಯಲಿ ಎಂದು ಆಗ್ರಹಿಸಿದರು. ಮೊದಲು ವರದಿ ಕೊಡಲು ಬಂದಾಗ ಬೇಡ ಎಂದಿದ್ದಾಗಿ ಸಿದ್ದರಾಮಯ್ಯ ಹೇಳಿದ್ದರು. ಈಗ ಮೂಲಪ್ರತಿ ಕಳವಾದ ಬಗ್ಗೆ ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದ್ದಾರೆ. ಕಳ್ಳರು ಯಾರು? ಸಿದ್ದರಾಮಯ್ಯನವರೇ? ಡಿ.ಕೆ.ಶಿವಕುಮಾರರೇ? ಎಂದು ಕೇಳಿದರು.
ಮೊದಲು ಕಳ್ಳನನ್ನು ಹುಡುಕಿ ಕೊಡಿ ಎಂದು ಆಗ್ರಹಿಸಿದರು. ಇದು ಜಾತಿ ಗಣತಿಯಲ್ಲ. ಇದು ಜಾತಿ ಜಾತಿಗಳ ನಡುವಿನ ಕಿತಾಪತಿ ಎಂದು ಆಕ್ಷೇಪ ಸೂಚಿಸಿದರು. ಇದನ್ನು ಸದ್ಯಕ್ಕೆ ಕೈಬಿಡಿ; ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಸರಿದೂಗಿಸಿ ಎಂದು ಸಲಹೆ ನೀಡಿದರು. ಸರ್ವಪಕ್ಷಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಿ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


