ಬೆಂಗಳೂರು: ಬರಗಾಲದ ಪರಿಸ್ಥಿತಿಯಲ್ಲೂ ಉಸ್ತುವಾರಿ ಸಚಿವರು ಪ್ರವಾಸ ಮಾಡುತ್ತಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಮರೆತು, ಅಧಿಕಾರದ ದರ್ಪ, ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಉತ್ತರವನ್ನು ಲೋಕಸಭಾ ಚುನಾವಣೆಯಲ್ಲಿ ನೀಡೋಣ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಹೊಸ ಸರಕಾರ ಬಂದಿದೆ. ಶೇ 40 ಸರಕಾರ ಎಂದು ಟೀಕಿಸಿದ್ದರು. ಮತದಾರರೂ ಅದನ್ನು ನಂಬಿದರು. ಹೊಸ ಕಾಂಗ್ರೆಸ್ ಸರಕಾರ ಬಂದು 6 ತಿಂಗಳಾಗಿದೆ. ಹಗಲುದರೋಡೆ, ಭ್ರಷ್ಟಾಚಾರ ಮೇರೆ ಮೀರಿದೆ. ಶೇ 40 ಕಮಿಷನ್, ಭ್ರಷ್ಟಾಚಾರದ ಅನುಷ್ಠಾನ ಕಾಂಗ್ರೆಸ್ ಸರಕಾರದಿಂದ ಆಗುತ್ತಿದೆ ಎಂದು ಆಕ್ಷೇಪಿಸಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನೂ ಮರೆಯದಿರೋಣ ಎಂದು ಕಿವಿಮಾತು ಹೇಳಿದ ಅವರು, ಅವನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಚುನಾವಣೆ ಗೆದ್ದ ಬಳಿಕ ನಾನು ಯಾವುದೇ ಸಮುದಾಯಕ್ಕೆ ಸೇರಿದವನಲ್ಲ. 28ಕ್ಕೆ 28 ಕ್ಷೇತ್ರ ಗೆಲ್ಲುವ ಜೊತೆಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ರಾಜ್ಯವನ್ನು ಬಿಜೆಪಿ ಭದ್ರಕೋಟೆಯಾಗಿ ಮಾಡಲು ಶ್ರಮಿಸುತ್ತೇನೆ ಎಂದರು.
ನಾವೇನೂ ಆಪರೇಷನ್ ಕಮಲ ಮಾಡುವುದಿಲ್ಲ. ಆಡಳಿತ ಪಕ್ಷದ ಶಾಸಕರೇ ರಸ್ತೆಯಲ್ಲಿ ಓಡಾಡದಂತಾಗಿದೆ. ಒಂದು ರೂಪಾಯಿ ಅನುದಾನ ಸಿಗುತ್ತಿಲ್ಲ. ಈ ದುಷ್ಟ ಸರಕಾರಕ್ಕೆ ಆ ಪಕ್ಷದ ಶಾಸಕರೇ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ, ಸಂಘ ಪರಿವಾರದ ಮಾರ್ಗದರ್ಶನದಡಿ ಬಿಜೆಪಿಗೆ ಶಕ್ತಿ ತುಂಬುತ್ತೇನೆ. ಹಗಲು ರಾತ್ರಿ ಪ್ರವಾಸ ಮಾಡಿ, ರೈತರು, ಬಡವರ ಪರವಾಗಿ ಧ್ವನಿ ಎತ್ತುವೆ. ಭ್ರಷ್ಟ ಸರಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಪ್ರಕಟಿಸಿದರು.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಜೀ, ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ, ಕೇಂದ್ರ ಗೃಹ ಸಚಿವ ಅಮಿತ್ ಶಾಜೀ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ಕೃಪಾಶೀರ್ವಾದದಿಂದ ಈ ಜವಾಬ್ದಾರಿ ಸಿಕ್ಕಿದೆ. ಇದಕ್ಕಾಗಿ ಎಲ್ಲ ರಾಷ್ಟ್ರೀಯ ನಾಯಕರಿಗೆ ಕೃತಜ್ಞತೆಗಳು ಎಂದು ತಿಳಿಸಿದರು. ನನ್ನ ಮೇಲಿನ ವಿಶ್ವಾಸ ಉಳಿಸಿಕೊಳ್ಳುವೆ. ಶಾಸಕರಾಗಿ ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ನಡ್ಡಾಜೀ ಅವರು ನನ್ನ ಹೆಸರು ಪ್ರಕಟಿಸಿದ ಬಳಿಕ ಎಲ್ಲ ಹಿರಿಯ ನಾಯಕರ ಜೊತೆ ಮಾತನಾಡಿದ್ದೇನೆ. ಪಕ್ಷದ ಎಲ್ಲ ಹಿರಿಯರು ನನಗೆ ಬೆನ್ನು ತಟ್ಟಿದ್ದಾರೆ. 28ರಲ್ಲಿ 28 ಕ್ಷೇತ್ರ ಗೆಲ್ಲುವ ಮೂಲಕ ದೇಶದ ಭವಿಷ್ಯ ನಿರ್ಮಿಸುವ ನಿಸ್ವಾರ್ಥ ಕೆಲಸಗಾರ, ದೇಶ ಮೊದಲೆಂಬ ವಿಚಾರ ಮನದಲ್ಲಿ ಇಟ್ಟುಕೊಂಡು ಕೈಂಕರ್ಯನಿರತ ಪ್ರಧಾನಿಯವರ ಕೈಯನ್ನು ಬಲಪಡಿಸಲಿದ್ದೇವೆ ಎಂದು ತಿಳಿಸಿದರು.
ದೇಶದ ಭವಿಷ್ಯ ರೂಪಿಸುವ ಲೋಕಸಭಾ ಚುನಾವಣೆಯು ಅತ್ಯಂತ ಮಹತ್ವದ್ದು, ನನಗಿತ್ತ ಸ್ಥಾನದ ಮಹತ್ವ ನನಗೆ ಗೊತ್ತಿದೆ. ಯಡಿಯೂರಪ್ಪ ಅವರ ಹೋರಾಟ, ಸಾಮಾನ್ಯ ಕಾರ್ಯಕರ್ತರಿಗೆ ಗೌರವ ಕೊಡುವ ಪ್ರವೃತ್ತಿ ನನಗೆ ತಿಳಿದಿದೆ. ಕಾರ್ಯಕರ್ತರು ತಲೆ ತಗ್ಗಿಸುವ ಸಂದರ್ಭ ಸೃಷ್ಟಿಸಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ನಿರ್ಗಮಿತ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಮಾತನಾಡಿ, ತಮಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರಲ್ಲದೆ, ಮುಂದೆಯೂ ವಿಜಯೇಂದ್ರರಿಗೆ ಎಲ್ಲ ರೀತಿಯ ಸಹಕಾರ ಮತ್ತು ಮಾರ್ಗದರ್ಶನ ನೀಡಲು ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.