ಬೆಂಗಳೂರು: ಬರ ಪರಿಸ್ಥಿತಿ ಅಧ್ಯಯನಕ್ಕೆ ಬಿಜೆಪಿಯ 17 ತಂಡಗಳು ರಾಜ್ಯದ ಎಲ್ಲ 33 ಜಿಲ್ಲೆಗಳಿಗೆ ಪ್ರವಾಸ ಮಾಡಲಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರತಿಯೊಂದು ತಂಡ 2 ಜಿಲ್ಲೆಗಳಿಗೆ ಭೇಟಿ ಕೊಡಲಿದೆ. ಯಡಿಯೂರಪ್ಪನವರ ತಂಡ ತುಮಕೂರು, ಮಧುಗಿರಿ, ಬೆಂಗಳೂರಿನ ಪ್ರವಾಸ ಮಾಡಲಿದೆ. ನಳಿನ್ಕುಮಾರ್ ಕಟೀಲ್ ಅವರ ತಂಡವು ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ಕೊಡಲಿದೆ. ಸಿ.ಟಿ.ರವಿಯವರ ತಂಡವು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದೆ ಎಂದರು.
ಈಶ್ವರಪ್ಪ- ಬಳ್ಳಾರಿ, ಕೊಪ್ಪಳ, ಸದಾನಂದಗೌಡರ ತಂಡ- ಮಂಡ್ಯ, ಹಾಸನ, ಗೋವಿಂದ ಕಾರಜೋಳ ಅವರು ಧಾರವಾಡ ಮತ್ತು ವಿಜಯನಗರ, ಬಸನಗೌಡ ಪಾಟೀಲ ಯತ್ನಾಳರು ಮೈಸೂರು, ಚಾಮರಾಜನಗರ- ಹೀಗೆ ವಿವಿಧ ತಂಡಗಳು ವಿವಿಧ ಜಿಲ್ಲೆಗಳಿಗೆ ತೆರಳುತ್ತಿವೆ ಎಂದು ವಿವರ ನೀಡಿದರು. ನವೆಂಬರ್ 10ರಂದು ಬರ ಪರಿಸ್ಥಿತಿ ಸಂಬಂಧ ವರದಿಯನ್ನು ಬಿಡುಗಡೆ ಮಾಡಲಿದ್ದು, ಅದನ್ನು ಸರಕಾರಕ್ಕೆ ಸಲ್ಲಿಸಲಿದ್ದೇವೆ ಎಂದರು. ಬರದ ಕುರಿತು ಚರ್ಚೆಗೆ ಅಧಿವೇಶನದಲ್ಲಿ ವಿಶೇಷ ಸಮಯ ನಿಗದಿಗೆ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಅಣೆಕಟ್ಟುಗಳಲ್ಲಿ ನೀರಿಲ್ಲ. ಜಮೀನುಗಳು ಒಡೆದು ಹೋಗಿವೆ. ಕುಡಿಯುವ ನೀರು ಲಭಿಸುತ್ತಿಲ್ಲ. ಟ್ಯಾಂಕರ್ಗಳಲ್ಲಿ ನೀರು ಪೂರೈಸುವ ಪರಿಸ್ಥಿತಿ ಇದೆ. ಕರೆಂಟ್ ದುಬಾರಿಯಾಗಿದೆ; ಸಣ್ಣ ಕೈಗಾರಿಕೆಗಳು ಬಂದ್ ಆಗಿವೆ ಎಂದು ವಿವರಿಸಿದರು.
ಬೋರ್ವೆಲ್ಗಳು ಬತ್ತಿ ಹೋಗಿವೆ. ನೀರಿದ್ದರೂ ಅದನ್ನು ಸರಬರಾಜು ಮಾಡಲು ವಿದ್ಯುತ್ ಇಲ್ಲ. ಎಪಿಎಂಸಿಗಳಿಗೆ ಸಂಪೂರ್ಣ ವ್ಯಾಪಾರ ಇಲ್ಲವಾಗಿದೆ. ಇದು ಸೇರಿ ಗೋಶಾಲೆಗಳಿಗೆ ಭೇಟಿ ಮಾಡಲು 17 ತಂಡಗಳನ್ನು ಪಕ್ಷವು ನಿಯೋಜಿಸಿದೆ ಎಂದು ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ, ನಳಿನ್ಕುಮಾರ್ ಕಟೀಲ್, ಸಿ.ಟಿ.ರವಿ, ವಿಜಯೇಂದ್ರ, ಅರವಿಂದ ಬೆಲ್ಲದ, ಶ್ರೀರಾಮುಲು, ಕೆ.ಎಸ್.ಈಶ್ವರಪ್ಪ, ಅರವಿಂದ ಲಿಂಬಾವಳಿ, ಬಸನಗೌಡ ಪಾಟೀಲ ಯತ್ನಾಳ, ಅರಗ ಜ್ಞಾನೇಂದ್ರ, ಸುನೀಲ್ ಕುಮಾರ್, ವಿಶ್ವೇóಶ್ವರ ಹೆಗಡೆ ಕಾಗೇರಿ, ಆರ್.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಡಿ.ವಿ.ಸದಾನಂದ ಗೌಡರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ರಾಜ್ಯದ ಎಲ್ಲ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಈ ತಂಡದಲ್ಲಿ ಇರುತ್ತಾರೆ. ಎಲ್ಲ 33 ಜಿಲ್ಲೆಗಳಿಗೆ 17 ತಂಡಗಳು ಪ್ರವಾಸ ಮಾಡಲಿವೆ ಎಂದು ತಿಳಿಸಿದರು.
ತೀವ್ರ ಬರ ಪರಿಸ್ಥಿತಿ ಇದ್ದರೂ ಕಲೆಕ್ಷನ್ ಮಾಡುವುದನ್ನು ಸರಕಾರ ನಿಲ್ಲಿಸಿಲ್ಲ. ಇದೊಂದು ಎಟಿಎಂ ಸರಕಾರ; ಇದೊಂದು ಲೂಟಿ ಸರಕಾರ ಎಂದು ಟೀಕಿಸಿದರು. ವರ್ಗಾವಣೆ ದಂಧೆ ನಿರಂತರವಾಗಿ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸಿದ ಎಫ್ಡಿಎ ಪರೀಕ್ಷೆಯಲ್ಲಿ 20 ಜನರಿಗೆ ನಿಗದಿತ ಅವಧಿಗೆ ಬದಲಿಗೆ ಒಂದು ಗಂಟೆ ಹೆಚ್ಚುವರಿ ಅವಧಿಯನ್ನು ನೀಡಿದ್ದು ಯಾಕೆ? ಎಂದು ಕೇಳಿದ ಅವರು, ಈ ಸಂಬಂಧ 9 ಜನರನ್ನು ಮಾತ್ರ ಬಂಧಿಸಲಾಗಿದೆ. ಯಾಕೆ ಆರ್.ಡಿ.ಪಾಟೀಲ್ ಬಂಧಿಸಿಲ್ಲ? ನಿಮ್ಮ ಕಾರ್ಯಕರ್ತನೆಂದು ಬಂಧಿಸಿಲ್ಲವೇ ಎಂದು ಕೇಳಿದರು.
ಈ ವಿಷಯವನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಳ್ಳಲಿದೆ. ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಿ ಎಂದು ಅವರು ಆಗ್ರಹಿಸಿದರು. ಕಲಬುರ್ಗಿ, ಯಾದಗಿರಿಯಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದ ಅವರು, ಅಧಿಕಾರಿಗಳು, ಸಚಿವರ ಸಹಕಾರ ಇಲ್ಲದೆ ಹೀಗಾಗಲು ಸಾಧ್ಯವಿಲ್ಲ ಎಂದು ಆರೋಪಿಸಿದರು. ಇದರ ಬಗ್ಗೆ ಸಮಗ್ರ ತನಿಖೆ ಮಾಡಿಸಲು ಒತ್ತಾಯಿಸಿದರು. ಈ ಕುರಿತು ಅಧ್ಯಯನಕ್ಕೆ ತಂಡವೊಂದು ಕಲಬುರ್ಗಿಗೆ ತೆರಳಲಿದೆ ಎಂದು ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.