ಇಂದಿನ ಆಧುನಿಕ ಯುಗದಲ್ಲಿ ಸಂಸ್ಕೃತಿ ಮತ್ತು ಆಚರಣೆಗಳು ರೂಪಾಂತರಗೊಳ್ಳುತ್ತಿರುವುದು ಆತಂಕಕಾರಿ. ಹಬ್ಬ ಹರಿದಿನಗಳು ಧಾರ್ಮಿಕ ಆಚರಣೆಗಳಿಗಿಂತ ಮೋಜಿಗಾಗಿ ನಡೆಸುತ್ತಿರುವುದು ವಿಪರ್ಯಾಸ. ಯಾವುದೇ ಆಚರಣೆಗಳಾಗಲಿ ಯಾವಾಗಲೂ ಸರಳ ಮತ್ತು ಸಹಜವಾಗಿ ಮಾಡಿದಲ್ಲಿ ಅದು ಸುಂದರ ಮತ್ತು ಪರಿಣಾಮಕಾರಿ. ಆದರೆ ಈ ಆಡಂಬರದ ಹೆಸರಿನಲ್ಲಿ ಇಂದಿನ ಯುವ ಜನಾಂಗ ತಮ್ಮ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ…
ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಹಬ್ಬಗಳನ್ನು ಆಚರಿಸುತ್ತಿದ್ದ ವಿಧಾನವನ್ನು ಒಮ್ಮೆ ಗಮನಿಸಿ. ನೆರೆಹೊರೆಯವರನ್ನು ಕರೆದು ಸಣ್ಣ ಪೂಜೆಯೋ ಕ್ರಮವನ್ನೋ ಮಾಡಿ ಸಿಹಿಯೂಟದೊಂದಿಗೆ ಹಬ್ಬ ಆಚರಿಸುತ್ತಿದ್ದರು. ಮನರಂಜನೆಗಾಗಿ ಸಣ್ಣ ಮಟ್ಟದ ಸಾಂಪ್ರಾದಾಯಿಕ ಆಟಗಳೋ , ಯಕ್ಷಗಾನ,ಕೋಲಾಟ ಮುಂತಾದ ಕುಣಿತಗಳು ಜತೆಯಾಗುತ್ತಿದ್ದವು. ಅದೆಲ್ಲಾ ಕೇಳುವಾಗಲೇ ಎಷ್ಟು ಚಂದ ಅನಿಸುತ್ತದೆ ಅಲ್ವಾ…!!
ಮೊನ್ನೆಯಷ್ಟೇ ದಿನಪತ್ರಿಕೆಯಲ್ಲಿ ಒಂದು ಸುದ್ದಿ ಓದಿದೆ. ನವರಾತ್ರಿ ಸಮಯದಲ್ಲಿ ಕೇವಲ 24 ಗಂಟೆಯಲ್ಲಿ ಸುಮಾರು ಹತ್ತಕ್ಕಿಂತಲೂ ಹೆಚ್ಚು ಜನ ಗಾರ್ಬಾ ನೃತ್ಯ ಮಾಡುತ್ತಿರುವಾಗ ಕುಸಿದುಬಿದ್ದು ಮೃತಪಟ್ಟ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗರ್ಬಾ ನೃತ್ಯ ವೇಳೆ ಅತಿ ಆವೇಶದಿಂದ ನರ್ತನ ಹೃದಯಾಘಾತಕ್ಕೆ ಮುಖ್ಯ ಕಾರಣ, ಕಿವಿಗಡಚಿಕ್ಕುವ ಡಿಜೆ ಸಂಗೀತವೂ ಹೃದಯದ ಮೇಲೆ ಪರಿಣಾಮಕಾರಿ, ಕೆಲವರು ಮಾದಕವಸ್ತು, ಮದ್ಯ ಸೇವಿಸಿರುವುದೂ ಹೃದಯಕ್ಕೆ ತೊಂದರೆ ಉಂಟು ಮಾಡುತ್ತದೆ ಎನ್ನುತ್ತಾರೆ ವೈದ್ಯರು….
ಇತ್ತೀಚೆಗೆ ಯಾವುದೇ ಕಾರ್ಯಕ್ರಮಗಳಿರಲಿ ನಮ್ಮ ಯುವಕ ಯುವತಿಯರಿಗೆ ಡಿಜೆ ಇಲ್ಲದೇ ಆಗುವುದೇ ಇಲ್ಲ ಎನ್ನುವಂತಾಗಿದೆ. ಮಗುವಿನ ನಾಮಕರಣದಲ್ಲೂ ಡಿಜೆ , ಮದುವೆಯಲ್ಲೂ ಡಿಜೆ ಅದಲ್ಲದೆ ದೇವರ ಮೆರವಣಿಗೆಯಲ್ಲೂ ಡಿಜೆ…
ಡಿಜೆ ಇರಲಿ , ಅದು ಬೇಡ ಎಂದು ಖಡಾಖಂಡಿತವಾಗಿ ಹೇಳುವುದಿಲ್ಲ. ಆದರೆ ದೇವರ ಮೆರವಣಿಗೆಯಲ್ಲಿ ಡಿಸ್ಕೋ ಹಾಡುಗಳನ್ನು ಹಾಕಿಕೊಂಡು ಮತ್ತಲ್ಲಿ ಕುಣಿಯುತ್ತಿರುವ ಯುವಜನತೆ ಎತ್ತ ಸಾಗುತ್ತಿದೆ ಅನ್ನುವುದು ಆಲೋಚಿಸಬೇಕಿದ ವಿಷಯ. ಅದೂ ಅಲ್ಲದೇ ಅಧ್ಯಯನಗಳ ಪ್ರಕಾರ 70 ರಿಂದ 85 ಡೆಸಿಬಲ್ ಗಿಂತ ಹೆಚ್ಚಿನ ಶಬ್ದ ಮನುಷ್ಯನಿಗೆ ಅತ್ಯಂತ ಹಾನಿಕಾರಕ. ಹೆಚ್ಚಾಗಿ ಈಗಿನ ಡಿಜೆಗಳು ಇದಕ್ಕಿಂತ ಹೆಚ್ಚಿನ ಶಬ್ದ ಮಾಡುತ್ತಿವೆ . ಮೊನ್ನೆ ಹೀಗೇ ಫೇಸ್ಬುಕ್ ನಲ್ಲಿ ಒಬ್ಬರ ಪೋಸ್ಟ್ ಓದುತ್ತಿದ್ದೆ. ಗಣೇಶ ಹಬ್ಬದ ಮೆರವಣಿಗೆಯ ಡಿಜೆ ಅವರ ಮನೆಯ ಹತ್ತಿರದಿಂದ ಸಾಗುವಾಗ ಮನೆಯ ಕಿಟಕಿ ಬಾಗಿಲುಗಳು, ವಾಹನಗಳು ಅಲ್ಲಾಡುತ್ತಿದ್ದವಂತೆ. ಇನ್ನೂ ಸಣ್ಣ ಪುಟ್ಟ ಕಂದಮ್ಮಗಳಿಗೆ , ಎಪ್ಪತ್ತು ವರ್ಷ ದಾಟಿದ ಹಿರಿಯರಿಗೆ ಈ ಸದ್ದು ತುಂಬಾ ಅಪಾಯಕಾರಿ.
ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ತಮ್ಮದೇ ಮೆರವಣಿಗೆಯಲ್ಲಿಯೋ ಅಥವಾ ತಮ್ಮದೇ ಸಂಬಂಧಿಕರೋ , ಸ್ನೇಹಿತರಿಗೋ ಹಾಗಾಗುವ ತನಕ ನಮ್ಮವರಿಗೆ ಬುದ್ಧಿ ಬರುವಂತೆ ಕಾಣುತ್ತಿಲ್ಲ…
ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ವಿಭಿನ್ನವಾಗಿ ನಿಲ್ಲುವುದು ಕೆಲವು ಸಂಸ್ಥೆಗಳು ಹಾಗೂ ಕಾರ್ಯಕ್ರಮಗಳು. ಡಿಜೆಯ ಬದಲು ಸುಂದರವಾದ ಕುಣಿತ ಭಜನೆಯೊಂದಿಗೆ ಮೆರವಣಿಗೆಗೆ , ಕಾರ್ಯಕ್ರಮಕ್ಕೆ ಶೋಭೆ ತಂದು ಕೊಡುತ್ತಿವೆ…
ಭಕ್ತಿಗೀತೆ ಮತ್ತು ಸಂಗೀತವನ್ನು ಒಳಗೊಂಡಿರುವ ಭಜನೆ, ಹಲವಾರು ಕಾರಣಗಳಿಗಾಗಿ ಧಾರ್ಮಿಕ ಅಥವಾ ಆಧ್ಯಾತ್ಮಿಕ ಮೆರವಣಿಗೆಗಳಲ್ಲಿ ಡಿಜೆ ಸಂಗೀತಕ್ಕಿಂತ ಹೆಚ್ಚು ಮಹತ್ವದ್ದಾಗಿದೆ. ಆಧ್ಯಾತ್ಮಿಕ ಸಂಪರ್ಕ , ಭಜನೆಯಲ್ಲಿ ಭಾಗವಹಿಸುವವರು ಮತ್ತು ಪಾಲ್ಗೊಳ್ಳುವವರ ನಡುವೆ ಆಳವಾದ ಆಧ್ಯಾತ್ಮಿಕ ಸಂಪರ್ಕವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಭಕ್ತಿ ಮತ್ತು ಗೌರವದ ಭಾವವನ್ನು ಬೆಳೆಸುತ್ತದೆ. ಸಾಂಸ್ಕೃತಿಕ ಸಂಪ್ರದಾಯ, ಭಜನೆ ಇದು ವ್ಯಕ್ತಿಗಳನ್ನು ಅವರ ಪರಂಪರೆಗೆ ಸಂಪರ್ಕಿಸುತ್ತದೆ. ಅವುಗಳ ಸಾರದಲ್ಲಿರುವ ಕಥೆಗಳು ನಮ್ಮ ಪುರಾಣದ , ಧರ್ಮದ ಶ್ರೇಷ್ಠತೆಯನ್ನು ಸಾರುತ್ತವೆ. ಭಜನೆಯು ಆಂತರಿಕ ಶಾಂತಿ, ಧ್ಯಾನ ಮತ್ತು ಪ್ರತಿಬಿಂಬವನ್ನು ಒತ್ತಿಹೇಳುತ್ತದೆ, ಮೆರವಣಿಗೆಯ ಆಧ್ಯಾತ್ಮಿಕ ಉದ್ದೇಶಗಳೊಂದಿಗೆ ಹೊಂದಿಕೆಯಾಗುತ್ತದೆ. ಭಜನೆಯು ಸಮುದಾಯವನ್ನು ಸಾಮರಸ್ಯ ಮತ್ತು ಧ್ಯಾನಸ್ಥ ವಾತಾವರಣದಲ್ಲಿ ಒಗ್ಗೂಡಿಸುತ್ತದೆ, ಏಕತೆ ಮತ್ತು ಒಗ್ಗಟ್ಟಿನ ಭಾವನೆಯನ್ನು ಉತ್ತೇಜಿಸುತ್ತದೆ. ಡಿಜೆ ಸಂಗೀತವು ಹೆಚ್ಚು ಸಂಭ್ರಮಾಚರಣೆಗಳಲ್ಲಿ ಸ್ಥಾನವನ್ನು ಹೊಂದಿದ್ದರೂ, ಧಾರ್ಮಿಕ ಅಥವಾ ಆಧ್ಯಾತ್ಮಿಕ ಮೆರವಣಿಗೆಗಳಲ್ಲಿ, ಭಜನೆಯು ಪವಿತ್ರ ಮತ್ತು ಚಿಂತನಶೀಲ ವಾತಾವರಣವನ್ನು ಸೃಷ್ಟಿಸುವ ಸಾಮರ್ಥ್ಯಕ್ಕಾಗಿ ಮೌಲ್ಯಯುತವಾಗಿದೆ….
ವೈದ್ಯರು ಕೊಡುವ ಔಷಧಿ ಬಾಯಿಗೆ ಕಹಿಯಾದರೂ ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಸಿಹಿಯನ್ನೇ ಉಂಟು ಮಾಡುತ್ತದೆ. ಹಾಗಾಗಿ ಆರೋಗ್ಯ, ಮಾನಸಿಕವಾಗಿ ವ್ಯತಿರಿಕ್ತ ಪರಿಣಾಮ ಬೀರುವ ಡಿಜೆಗಿಂತ , ಸರಳ ಹಾಗೂ ಸುಂದರ ಕುಣಿತ ಭಜನೆಗೆ ಹೆಚ್ಚು ಹೆಚ್ಚು ಪ್ರಾಮುಖ್ಯತೆ ನೀಡೋಣ.
✍️ಸಾತ್ವಿಕ್ ವಿ ನಾಯಕ್ ಆಜೇರು
ದ್ವಿತೀಯ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ , ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ , ಪುತ್ತೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.