ಬೆಂಗಳೂರು: ಶಿವಮೊಗ್ಗ ಘಟನೆ ಹಿಂದೆ ದುರುದ್ದೇಶ ಇದ್ದಂತಿದೆ. ರಾಜ್ಯದ ಶಾಂತಿ ಹಾಳು ಮಾಡುವ ಉದ್ದೇಶ ಇದ್ದಂತಿದೆ. ಆದ್ದರಿಂದ ಈ ಘಟನೆಯ ನ್ಯಾಯಾಂಗ ತನಿಖೆ ಮಾಡುವಂತೆ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ಒತ್ತಾಯಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಂಘಟನೆಗಳು ಮತ್ತು ಹಿಂದೂ ಕಾರ್ಯಕರ್ತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿದರು. ಪುನೀತ್ ಕೆರೆಹಳ್ಳಿ ಮೇಲಿನ ಸುಳ್ಳು ಆರೋಪಕ್ಕೆ ಗೃಹ ಸಚಿವರು ಉತ್ತರ ಕೊಡಲಿ ಎಂದು ಸವಾಲು ಹಾಕಿದರು. ಇಲ್ಲವಾದರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿ ಎಂದೂ ಆಗ್ರಹಿಸಿದರು.
ಕರ್ನಾಟಕಕ್ಕೆ ಮುಂದೆ ಬಹಳ ದೊಡ್ಡ ಅಪಾಯ ಕಾದಿದೆ. ಶಿವಮೊಗ್ಗ, ಕೋಲಾರ ಘಟನೆಗಳ ಮೂಲಕ ಟೆಸ್ಟಿಂಗ್ ಡೋಸ್ ಕೊಟ್ಟಿದ್ದಾರೆ. ಈಗ ಪಿಕ್ಚರ್ ಬಾಕಿ ಹೈ ಎಂಬಂತೆ ಟ್ರೈಲರ್ ತೋರಿಸುವ ಕೆಲಸ ಮಾಡಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗ ಅತಿ ಸೂಕ್ಷ್ಮ ಪ್ರದೇಶ. ಹರ್ಷನ ಹತ್ಯೆ ಆಗಿತ್ತು. ಕರ್ನಾಟಕವು 140 ದಿನಗಳಲ್ಲಿ ನಕಾರಾತ್ಮಕ ಕಾರಣಕ್ಕಾಗಿ ಸುದ್ದಿಯಾದುದೇ ಹೆಚ್ಚು. ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹಾಕುತ್ತಿದ್ದೀರಿ. ಸಹಜ ಸಾವಿನ ಮಾಹಿತಿ ಇದ್ದರೂ ಪುನೀತ್ ಕೆರೆಹಳ್ಳಿ ಮೇಲೆ ಕೊಲೆ ಮೊಕದ್ದಮೆ ಹಾಕಿದ್ದೀರಿ. ವೇಶ್ಯಾವಾಟಿಕೆ ಮಾಡುತ್ತಿದ್ದ ಎಂದು ಸುಳ್ಳುವರದಿ ಕೊಟ್ಟಿದ್ದೀರಿ. ಪುನೀತ್ ಜೀವಕ್ಕೇನಾದರೂ ಆದರೆ ಈ ಪಾಪಿಷ್ಟ ಸರಕಾರವೇ ಹೊಣೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 140 ದಿನಗಳು ಕಳೆದಿವೆ. ಕೋಮುವಾದಿ ಶಕ್ತಿಗಳು ಸಾರ್ವಜನಿಕವಾಗಿ ವಿಜೃಂಭಿಸಲು ಅವಕಾಶ ಮಾಡಿಕೊಟ್ಟಿದ್ದೇ ಈ ಸರಕಾರದ ಸಾಧನೆ ಎಂದು ವ್ಯಂಗ್ಯವಾಡಿದರು. ಬಹುಶಃ ಋಣ ತೀರಿಸುವ ದೃಷ್ಟಿಯಿಂದ ತಾಲಿಬಾನಿಗಳನ್ನು ಬೆಂಬಲಿಸುವ ಕೆಟ್ಟ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಈ ಸರಕಾರದ ನಡೆ ಅನುಮಾನಾಸ್ಪದ ಮತ್ತು ದುರುದ್ದೇಶದ ಹಿನ್ನೆಲೆಯಿಂದ ಕೂಡಿದೆ ಎಂದು ಟೀಕಿಸಿದರು.
ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಸಂದರ್ಭದಲ್ಲಿ ಬೆಳವಾವಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುತ್ತಾರೆ. ಭಟ್ಕಳದಲ್ಲಿ ಹಿಂದೂಗಳ ಹೆಣ ಎತ್ತಲು ಕೂಡ ಜನ ಇರಬಾರದು ಎಂದು ಮುಸ್ಲಿಮರೊಬ್ಬರು ಬರಹ ಬರೆದಿದ್ದರು. ಬೆಳಗಾವಿಯಲ್ಲಿ ಜೈನಮುನಿಯ ಭೀಕರ ಹತ್ಯೆ ಆಗಿದೆ. ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ನಡೆದಿದೆ. ಫಲಿತಾಂಶ ಬಂದ ಮರುದಿನವೇ ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದಿದೆ ಎಂದು ವಿವರಿಸಿದರು.
ಧಾರವಾಡದಲ್ಲಿ ಚುನಾವಣಾ ವಿಜಯೋತ್ಸವದ ಸಂದರ್ಭದಲ್ಲಿ ಚೂರಿ ಇರಿತ, ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಹಿಂದೂಗಳ ಬೈಕಿಗೆ ಬೆಂಕಿ ಹಾಕಿದ್ದಾರೆ. ಹಾಸನದಲ್ಲಿ ಪಿಸ್ತೂಲ್ ಹಿಡಿದು ಓಡಾಡಿ ಭಯ ಹುಟ್ಟಿಸುವ ಕೆಲಸ ನಡೆದಿದೆ. ಸಕಲೇಶಪುರದಲ್ಲಿ ಪರವಾನಗಿ ಇಲ್ಲದ ಬಂದೂಕು ಇಟ್ಟುಕೊಂಡು ಹಸುವಿನ ತಲೆ ಸೀಳಿ ಹತ್ಯೆ ಮಾಡಿದ್ದಾರೆ. ಕಡೂರಿನಲ್ಲಿ ವಿಘ್ನೇಶ್ ಎಂಬ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ನಂಜನಗೂಡಿನಲ್ಲಿ ಚಾಕುವಿನಿಂದ ಇರಿದು ಪರಾರಿ, ಬಾಗಲಕೋಟೆ ನವನಗರದಲ್ಲಿ ಬೀದಿ ದೀಪ ಬಂದ್ ಮಾಡಿ ಬಿಜೆಪಿ ಬೆಂಬಲಿಗರ ಮೇಲೆ ಹಲ್ಲೆ ನಡೆದಿದೆ. ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದರು. ಆದರೆ, ಅವರ ತವರು ಜಿಲ್ಲೆಯಲ್ಲಿ ಮತಾಂಧರ ಅಟ್ಟಹಾಸ ಮೆರೆಯಲು ಅವಕಾಶ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ಮೊದಲ ಅವಧಿಯ ಸಿಎಂ ಆಗಿದ್ದಾಗ ಟಿಪ್ಪುವಿನ ಓಲೈಕೆ, ಸರಕಾರದಿಂದ ಟಿಪ್ಪು ಜಯಂತಿ ಆರಂಭಿಸಲಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರರ ಸ್ಪರ್ಧೆಯಲ್ಲಿ ಈಗ ಸರ್ವ ಜನಾಂಗದ ಶಾಂತಿಯ ತೋಟದ ಶಾಂತಿ ಹಾಳು ಮಾಡಲು ಒಬ್ಬ ಟಿಪ್ಪು ಸಾಕಾಗುವುದಿಲ್ಲ ಎಂದು ಟಿಪ್ಪು ಜೊತೆ ಔರಂಗಜೇಬನ ವಿಜೃಂಭಣೆಗೆ ಅವಕಾಶ ಕೊಡುತ್ತಿದ್ದಾರೆ. ಮತಾಂಧರ ಮೆರೆಸುವ ಕೆಲಸಕ್ಕೆ ಈ ಸರಕಾರ ಬೆನ್ನೆಲುಬಾಗಿ ನಿಂತಿದೆ. ಪೊಲೀಸರ ಮೇಲೆ ಕಲ್ಲೆಸೆತ ಆದಾಗ ಎಸ್ಪಿಯೇ ಓಡಿಬರಬೇಕಾದ ಸ್ಥಿತಿ ಬರುತ್ತದೆ. ಗೃಹ ಸಚಿವ ಪರಮೇಶ್ವರರವರು ಇದೆಲ್ಲ ಸಾಮಾನ್ಯ ಎಂದು ಲಘುವಾಗಿ ತಳ್ಳಿ ಹಾಕುತ್ತಾರೆ ಎಂದು ಟೀಕಿಸಿದರು.
ಡಿಜೆ ಹಳ್ಳಿ, ಕೆಜಿ ಹಳ್ಳಿಯ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಮನೆಗೇ ಬೆಂಕಿ ಹಾಕಿದ್ದರು. ಹಲವು ಮನೆಗಳು ಮತ್ತು ನೂರಾರು ವಾಹನಗಳಿಗೆ ಬೆಂಕಿ ಹಾಕಿದ್ದರು. ಪೊಲೀಸ್ ಸ್ಟೇಷನ್ ಮೇಲೆ ಬೆಂಕಿ ಹಾಕಿದ್ದರು. ಅಂಥ ಗಂಭೀರ ಪ್ರಕರಣದ ಕೇಸು ವಾಪಸ್ ಪಡೆಯಲು ತನ್ವೀರ್ ಸೇಠ್ ಅವರು ಸರಕಾರಕ್ಕೆ ಪತ್ರ ಬರೆದಿದ್ದರು. ಆ ಸಾಲಿನಲ್ಲೇ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ದಾಳಿ ಸೇರಿ 12 ಪ್ರಕರಣಗಳಲ್ಲಿ ಆರೋಪಿಗಳಾಗಿರುವವರ ಕೇಸು ಹಿಂಪಡೆಯಲು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರರು ಪತ್ರ ಬರೆಯತ್ತಾರೆ. ಮತಾಂಧತೆಗೆ ಈ ಸರಕಾರ ಕುಮ್ಮಕ್ಕು ಕೊಡುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾಗಿಲ್ಲ ಎಂದರು.
ಸನಾತನ ಧರ್ಮದ ಅವಹೇಳನ ಮಾಡುವವರು ಇಲ್ಲಿ ಗಲಭೆ ಹುಟ್ಟಿಸುವವರು ಎನಿಸುತ್ತಿಲ್ಲ. ಅವಹೇಳನ ಮಾಡುವವರ ಮುಂಚೂಣಿಯಲ್ಲಿ ಪ್ರಿಯಾಂಕ್ ಖರ್ಗೆ ಅವರೇ ನಿಂತುಕೊಳ್ಳುತ್ತಾರೆ. ಅವಹೇಳನ ಮಾಡಿ ಉದಯನಿಧಿ ಸ್ಟಾಲಿನ್ ಪರ ನಿಲ್ಲುತ್ತಾರೆ ಎಂದು ವಿವರಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರ ಋಣ ತೀರಿಸುವ ಮಾತನಾಡಿದ್ದಾರೆ. ರಾಜ್ಯದ ಋಣ ತೀರಿಸಬೇಕೆಂದು ಅವರು ಹೇಳಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಯ ಚಿತ್ರಣವನ್ನೂ ಜನರ ಮುಂದಿಟ್ಟಿಲ್ಲ. ಮುಸ್ಲಿಮರ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ಕೊಡುವ ಮಾತನಾಡುತ್ತಾರೆ. ನಿಮಗೆ ಮುಸಲ್ಮಾನರು ಮಾತ್ರ ಮತ ಹಾಕಿದ್ದಾರಾ? ಜಾತ್ಯತೀತತೆ ಎಂದರೆ ಮುಸಲ್ಮಾನರ ಓಲೈಕೆಯೇ? ಕೋಮುವಾದಿ ರಾಜಕಾರಣ ನಿಮ್ಮದಲ್ಲವೇ? ಎಂದು ಕೇಳಿದರು.
ಶಿವಮೊಗ್ಗ ಮತ್ತು ಕೋಲಾರದಲ್ಲಿ ಪ್ರಚೋದನಕಾರಿ ಬರಹ, ಪ್ರಚೋದನಕಾರಿ ಕಟೌಟ್ಗಳು, ಟಿಪ್ಪು ಖಡ್ಗ ಮೆರೆಸಿದ ಹಿನ್ನೆಲೆಯನ್ನು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಕಾಫಿರರ ರಕ್ತಕ್ಕಾಗಿ ನನ್ನ ಖಡ್ಗ ತಹತಹಿಸುತ್ತಿದೆ ಎಂಬ ಬರೆಹ ಟಿಪ್ಪು ಖಡ್ಗದಲ್ಲಿದೆ. ಇಸ್ಲಾಮನ್ನು ನಂಬದಿರುವವರೆಲ್ಲರೂ ಕಾಫಿರರು. ಯಹೂದಿ, ಕ್ರಿಶ್ಚಿಯನ್, ಬೌದ್ಧ, ಸಿಕ್ಖ, ಪಾರ್ಸಿ, ಹಿಂದೂ- ಇವರೆಲ್ಲರೂ ಕಾಫಿರರು. ನಿಮ್ಮ ರಕ್ತ ಕುಡಿಯುವ ಮಾತು ಕೂಡ ಆ ಟಿಪ್ಪುವಿನ ಖಡ್ಗದ ಮೇಲಿನ ಬರಹ ಸೂಚಿಸುತ್ತದೆ ಎಂದು ಎಚ್ಚರಿಸಿದರು. ಅಂಥ ಖಡ್ಗ ಹಾಕಲು ಯಾಕೆ ಮತ್ತು ಹೇಗೆ ಅವಕಾಶ ಕೊಟ್ಟಿದ್ದೀರಿ? ಎಂದರಲ್ಲದೆ, ಉಡುಪಿಯಲ್ಲಿ ಭಗವಾಧ್ವಜ ಹಾಕಲು ಮತ್ತು ಬಂಟಿಂಗ್ಸ್ ಕಟ್ಟಿದಾಗ ತೆಗೆಸುತ್ತೀರಿ ಎಂದು ಆಕ್ಷೇಪಿಸಿದರು.
ಇಲ್ಲಿ ಟಿಪ್ಪುವಿನ ಖಡ್ಗ, ಔರಂಗಜೇಬನ ಫೋಟೊ ಹಾಕಲು ಯಾಕೆ ಅವಕಾಶ ಕೊಟ್ಟಿದ್ದೀರಿ. ಇತಿಹಾಸದಲ್ಲಿ ಔರಂಗಜೇಬ್ ಒಬ್ಬ ಮತಾಂಧನಲ್ಲವೇ? ಗುರು ತೇಜ್ ಬಹದ್ದೂರರನ್ನು ಹತ್ಯೆ ಮಾಡಿದ ಕ್ರೂರಿ ಯಾರು? ಕಾಶಿ ವಿಶ್ವನಾಥ ಮಂದಿರವನ್ನು ಧ್ವಂಸ ಮಾಡಿದ ವಿಧ್ವಂಸಕ ಯಾರು? ಮಥುರಾದ ಕೃಷ್ಣ ಮಂದಿರವನ್ನು ಮತ್ತೆ 3ನೇ ಬಾರಿ ಧ್ವಂಸ ಮಾಡಿದ ಕಿರಾತಕ ಯಾರು? ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ನಿಮ್ಮ ಔರಂಗಜೇಬ್ ಅಲ್ಲವೇ? ಅವನನ್ನು ಮೆರೆಸುವ ಉದ್ದೇಶ ಏನು? ಪೈಗಂಬರರ ಶಾಂತಿಯ ಸಂದೇಶ ಇದೇನಾ? ಎಂದರು.
ಮುಸ್ಲಿಮೇತರರ ಮೇಲೆ ಜಜಿಯ ತಲೆಗಂದಾಯ ಹೇರಿದ ಒಬ್ಬ ಪಾಪಿಯನ್ನು ಪ್ರಜಾಪ್ರಭುತ್ವದಲ್ಲಿ ಡಾ.ಅಂಬೇಡ್ಕರರು ಕೊಟ್ಟ ಸಂವಿಧಾನಕ್ಕೆ ಅಪಮಾನ ಮಾಡುವಂತೆ ಪ್ರತಿಷ್ಠಾಪಿಸಲು ಅವಕಾಶ ಕೊಟ್ಟಿದ್ದೀರಾ? ಇದಕ್ಕೆಲ್ಲ ಹೊಣೆ ಯಾರು? ನೀವೇ ಹೊಣೆ ಹೊರಬೇಕಲ್ಲವೇ? ಎಂದರಲ್ಲದೆ, ಭವಿಷ್ಯದಲ್ಲಿ ಅಫಜಲ್ ಗುರು, ಬಿನ್ ಲಾಡೆನ್, ಸದ್ದಾಂ ಹುಸೇನ್, ಮಹಮ್ಮದ್ ಆಲಿ ಜಿನ್ನಾನ ವೈಭವೀಕರಣ ನಡೆದರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದರು.
ದೇಶ ಕಟ್ಟುವ ಕೆಲಸ ಮಾಡಿದ ಅಲ್ಪಸಂಖ್ಯಾತರು ಬಹಳ ಜನ ಇದ್ದಾರೆ. ಸ್ವಾತಂತ್ರ್ಯ ವೀರ ಅಶ್ಫಕುಲ್ಲ ಖಾನ್, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಫೋಟೊ ಹಾಕಿದ್ದರೆ ಸಂತಸ ಪಡುತ್ತಿದ್ದೆವು. ಆದರೆ, ಮತಾಂಧರ ಫೋಟೊ ಹಾಕಿದ್ದರ ಉದ್ದೇಶ ಏನು? ಭಾರತ ವಿಭಜನೆ ಮಾಡಿದ್ದರಿಂದ ನೀವು ಸಂತೃಪ್ತರಾಗಿಲ್ಲ; ಆಗುವುದೂ ಇಲ್ಲವೆಂದು ಡಾ.ಅಂಬೇಡ್ಕರರು ಹೇಳಿದ ಮಾತನ್ನು ಸತ್ಯ ಮಾಡಲು ಹೊರಟಿದ್ದೀರಾ? ಎಂದು ಕೇಳಿದರು.
ಔರಂಗಜೇಬ್, ಟಿಪ್ಪು ವೈಭವೀಕರಣದ ಉದ್ದೇಶ ಭಾರತದಲ್ಲಿ ಮತ್ತೊಂದು ವಿಭಜನೆಯ ಸಂಚಿಗೆ ಪ್ರೋತ್ಸಾಹವಲ್ಲವೇ? ಬಾಲ ಬಿಚ್ಚಿದರೆ ಬಾಲ ಕಟ್ ಮಾಡುವುದಾಗಿ ಮರಿ ಖರ್ಗೆಯವರು ಹೇಳುತ್ತಿದ್ದರು. ಬಾಲ ಕಟ್ ಮಾಡುವ ಪೌರುಷ ಎಲ್ಲಿ ಹೋಯಿತು? ಹಿಂದೂ ಕಾರ್ಯಕರ್ತರ ಮೇಲೆ ಮಾತ್ರ ನಿಮ್ಮ ಪೌರುಷವೇ? ನೀವೆಲ್ಲಿ ಅಡಗಿದ್ದೀರಿ? ಎಂದು ಕೇಳಿದರು.
ಹಿಂದೂಗಳ ಮನೆಗೆ ನುಗ್ಗಿ ಹಲ್ಲೆ ಮಾಡಿದರೆ ಅದೊಂದು ಸಣ್ಣ ಘಟನೆಯಾಗಿ ಗೃಹ ಸಚಿವರಿಗೆ ಕಾಣುತ್ತದೆ. ಬಹಳ ವರ್ಷಗಳ ರಾಜಕೀಯ ಅನುಭವ ಇರುವ ಡಾ. ಪರಮೇಶ್ವರರನ್ನು ಯಾವ ದುರ್ಬಲತೆ ಕಾಡುತ್ತಿದೆ? ಎಂದು ಕೇಳಿದರು. 35 ಡಿಎಸ್ಪಿಗಳು, 138 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡುವ ಮೂಲಕ ನಾನೂ ಸಕ್ರಿಯ ಎಂದು ತೋರಿಸುವ ಕೆಲಸ ಮಾಡಿದ್ದಿರಿ. ಐಸಿಸ್ನವರು ಇದನ್ನೊಂದು ಲಾಂಚಿಂಗ್ ಪ್ಯಾಡ್ ಮಾಡಲು ಕರ್ನಾಟಕ- ಕೇರಳವನ್ನು ಉಪಯೋಗಿಸುತ್ತಿದ್ದಾರೆ ಎಂದು ಎನ್ಐಎ ಬಂಧಿತ ಉಗ್ರರಿಂದ ಸಿಕ್ಕಿದ ಮಾಹಿತಿ ನಿಮಗೆ ತಿಳಿದಿಲ್ಲವೇ? ಎಂದು ಪ್ರಶ್ನೆ ಮಾಡಿದರು.
ಮಂಗಳೂರಲ್ಲಿ ಬ್ಲಾಸ್ಟ್ ಆದ ಕುಕ್ಕರನ್ನು ತೀರ್ಥಹಳ್ಳಿಯಲ್ಲೇ ತಯಾರಿಸಿದ್ದು ನಿಮಗೆ ತಿಳಿದಿಲ್ಲವೇ? ಘನತೆವೆತ್ತ ಡಿಸಿಎಂ ಅವತ್ತು ‘ದೆ ಆರ್ ಅವರ್ ಬ್ರದರ್ಸ್’ ಎಂದಿದ್ದರಲ್ಲವೇ? ಬಾಂಬ್ ಇಡುವವರು, ಔರಂಗಜೇಬನನ್ನು ಓಲೈಸುವವರು, ಮತಾಂಧರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಬೆಂಕಿ ಹಾಕಿದವರು ನಿಮ್ಮ ಬ್ರದರ್ಸಾ ಎಂದು ಕೇಳಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ಅ. ದೇವೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.