ಬೆಂಗಳೂರು: ಬೆಂಗಳೂರು ಮಹಾನಗರದ ಭವಿಷ್ಯದ ಜಲಸಂಕಷ್ಟ ತಪ್ಪಿಸಲು ಮೇಕೆದಾಟು ಯೋಜನೆ ಜಾರಿ ಮಾಡಲು ಬಿಜೆಪಿ ಆಗ್ರಹಿಸಿದೆ.
ಈ ಸಂಬಂಧ ಇಂದು ಬಿಜೆಪಿ ನಿಯೋಗವು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೇರ್ಮನ್ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು. ಮುಂಬರುವ ದಿನಗಳಲ್ಲಿ ಬೆಂಗಳೂರು ಮಹಾನಗರಕ್ಕೆ ಉದ್ಭವಿಸುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆಯಲಾಯಿತು. ಬೆಂಗಳೂರು ನಗರವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಪ್ರಮುಖ ನಗರವಾಗಿದೆ. ಇಲ್ಲಿನ ಜಲಸಂಕಷ್ಟ ಸಾಧ್ಯತೆಯನ್ನು ಮನಗಂಡು ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಅನುಷ್ಠಾನ ಮಾಡುವಂತೆ ಒತ್ತಾಯಿಸಲಾಯಿತು.
ರಾಜ್ಯ ಸರ್ಕಾರವು ಸದರಿ ದಿನಗಳಲ್ಲಿ ನೀರಿನ ಒಳ ಹರಿವನ್ನು ಪರಿಗಣಿಸದೆ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಿ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿದೆ. ಇದರಿಂದ ರಾಜ್ಯದ ರೈತರಿಗೆ ಧಕ್ಕೆಯಾಗುವುದಲ್ಲದೆ ರಾಜ್ಯದ ರಾಜಧಾನಿ ಬೆಂಗಳೂರಿಗೆ, ಎಲ್ಲಾ ಜಿಲ್ಲೆಗಳ ನಗರಗಳ ಜನತೆಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಹಾಗೂ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮಾರ್ಪಡಿಸಿದ ಆದೇಶದನ್ವಯ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ರಾಜ್ಯವು ತನ್ನ ಗಡಿಯ ಒಳ ಭಾಗದಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕೈಗೊಳ್ಳಲು ಅವಕಾಶವಿರುತ್ತದೆ. ಕರ್ನಾಟಕ ರಾಜ್ಯವು ಮೇಕೆದಾಟು ಯೋಜನೆಯ ಪೂರ್ವ ಸಾಧ್ಯತ ವರದಿ (ಪ್ರಿ ಫೀಸಿಬಿಲಿಟಿ ರಿಪೋರ್ಟ್) ಅನ್ನು ದಿನಾಂಕ 4-8- 2018 ರಂದು ಕೇಂದ್ರ ಜಲ ಆಯೋಗಕ್ಕೆ ಸದರಿ ನಮ್ಮ ಪ್ರಸ್ತಾವನೆಯನ್ನು ಪರಿಗಣಿಸಿ ಕೇಂದ್ರ ಜಲ ಆಯೋಗವು ದಿನಾಂಕ 22-11-2018 ರಂದು ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಅನುಮತಿಯು ಸಹ ನೀಡಿತ್ತು ಎಂದು ಗಮನ ಸೆಳೆಯಲಾಯಿತು. ಕೇಂದ್ರ ಜಲ ಆಯೋಗದಿಂದ ಪೂರ್ವ ಸಾಧ್ಯತೆ ವರದಿಗೆ ಅನುಮತಿ ದೊರೆತ ನಂತರ 9,000 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಯನ್ನು ದಿನಾಂಕ 18-1-2019 ರಂದು ಸಲ್ಲಿಸಲಾಗಿದೆ. ಈ ಎಲ್ಲಾ ಕಾನೂನಾತ್ಮಕ ಅಂಶಗಳು ಕರ್ನಾಟಕದ ಪರವಾಗಿ ಇದ್ದರೂ ಸಹ ರಾಜ್ಯ ಸರ್ಕಾರವು ತನ್ನ ಇಚ್ಛಾಶಕ್ತಿಯನ್ನು ಮರೆತು ಮೇಕೆದಾಟು ಯೋಜನೆಯನ್ನು ರಾಜಕೀಯಗೊಳಿಸಲು ಹೊರಟಿದೆ ಎಂದು ಮನವಿ ತಿಳಿಸಿದೆ.
ಬೆಂಗಳೂರು ಮಹಾನಗರವು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಹಿರಿಮೆ ಗರಿಮೆಗಳಿಗೆ ಪ್ರಸಿದ್ಧಿಯಾಗಿದೆ. ಒಂದು ಕಾಲದಲ್ಲಿ ಸಾರ್ವಜನಿಕ ಉದ್ದಿಮೆಗಳಿಗೆ (ಪಬ್ಲಿಕ್ ಸೆಕ್ಟರ್) ಹೆಸರುವಾಸಿಯಾಗಿದ್ದ ಬೆಂಗಳೂರು ಮಹಾನಗರವು ಇಂದು ಸಿಲಿಕಾನ್ ವ್ಯಾಲಿಯಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಸಾಫ್ಟ್ವೇರ್ ರಫ್ತು ಮಾಡುವ ಮಹಾನಗರವಾಗಿದೆ. ಒಂದು ಟರ್ಮಿನಲ್ ನಿಂದ ಪ್ರಾರಂಭವಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇಂದು ಎರಡು ಟರ್ಮಿನಲ್ ಹೊಂದಿದೆ. ಜಗತ್ತಿನ ನಾನಾ ಮೂಲೆಗಳಿಂದ ವಿದೇಶಿ ಗಣ್ಯರು ಮತ್ತು ಉದ್ಯಮಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಬೆಂಗಳೂರು ಮಹಾನಗರವು ವಿದೇಶಿ ನೇರ ಹೂಡಿಕೆಗೆ (ಎಫ್ಡಿಐ) ಹೆಸರುವಾಸಿಯಾಗಿದೆ ಎಂದು ವಿವರಿಸಲಾಗಿದೆ.
ಇಂಥ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ಬಲವಾಗಿ ಕಾಡುವ ಸಂಭವವಿದೆ. ತಕ್ಷಣವೇ ಬೆಂಗಳೂರು ಜಲ ಮಂಡಳಿಯು ಸಿಡಬ್ಲ್ಯುಎಂಎಗೆ ಪತ್ರ ಬರೆದು ಮೇಕೆದಾಟು ಯೋಜನೆಯನ್ನು ಜರೂರಾಗಿ ಮಾಡಲು ಮೇಕೆದಾಟು ಯೋಜನೆಗೆ ತಮಿಳುನಾಡು ಸರಕಾರ ತೆಗೆದಿರುವ ತಕರಾರು ಎಲ್ಲಾ ಅರ್ಜಿಗಳನ್ನು ವಿಲೇ ಮಾಡಿ ಮೇಕೆದಾಟುವಿನಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಸಮತೋಲಿತ ಜಲಾಶಯ (ಬ್ಯಾಲೆನ್ಸಿಂಗ್ ರಿಸರ್ವ್ ಡ್ಯಾಮ್ ನಿರ್ಮಾಣ ಮಾಡಲು) ಅನುಮತಿ ನೀಡುವಂತೆ ಒತ್ತಾಯಿಸಬೇಕೆಂದು ಭಾರತೀಯ ಜನತಾ ಪಾರ್ಟಿ ಒತ್ತಾಯಿಸುತ್ತದೆ.
ಈ ತಕ್ಷಣವೇ ಬೆಂಗಳೂರು ಜಲ ಮಂಡಳಿ ವತಿಯಿಂದ ಜಲ ಸಂಪನ್ಮೂಲ ಸಚಿವರಿಗೆ ಪತ್ರ ಬರೆದು ಮುಂದಿನ ಮಳೆಗಾಲದವರೆಗೆ ಕಾವೇರಿ ಕೊಳ್ಳದ ಜನರಿಗೆ ಮತ್ತು ಬೆಂಗಳೂರು ಮಹಾನಗರಕ್ಕೆ ಅವಶ್ಯಕತೆ ಇರುವಷ್ಟು ನೀರನ್ನು ಲಭ್ಯವಿರುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಬೇಕೆಂದು ಭಾರತೀಯ ಜನತಾ ಪಾರ್ಟಿ ಅಗ್ರಹ ಪಡಿಸಿದೆ.
ಕಾವೇರಿ ಜಲ ವಿವಾದ ಕಣಿವೆ ರಾಜ್ಯಗಳ ಸಿವಿಲ್ ಮೇಲ್ಮನವಿಗಳಲ್ಲಿ ಅಂತಿಮ ವಾದವನ್ನು ಆಲಿಸಿದ ನಂತರ ಸರ್ವೋಚ್ಚ ನ್ಯಾಯಾಲಯವು ದಿನಾಂಕ 16/2/2018 ರ ಆದೇಶದಲ್ಲಿ ತನ್ನ ತೀರ್ಪನ್ನು ನೀಡಿತ್ತು. ಕರ್ನಾಟಕ ರಾಜ್ಯದ ನೀರಿನ ಹಂಚಿಕೆಯನ್ನು 270 ಟಿಎಂಸಿಯಿಂದ 284.75 ಟಿಎಂಸಿಗೆ ಹೆಚ್ಚಿಸಲಾಯಿತು. ಇದರಲ್ಲಿ 10 ಟಿಎಂಸಿಯನ್ನು ಬರಪೀಡಿತ ಪ್ರದೇಶಗಳಿಗೂ ಮತ್ತು 4.7, ಐದು ಟಿಎಂಸಿ ನೀರನ್ನು ಬೆಂಗಳೂರಿನ ನಗರ ಸೇರಿದಂತೆ ಕುಡಿಯುವ ಹಾಗೂ ಗೃಹ ಉಪಯೋಗಿ ಉದ್ದೇಶಕ್ಕಾಗಿ ನೀಡಲಾಗಿದೆ. ಸಾಮಾನ್ಯ ಜಲ ವರ್ಷದಲ್ಲಿ ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ 177.25 ಟಿಎಂಸಿ ನೀರನ್ನು ವಾರ್ಷಿಕವಾಗಿ ತಮಿಳುನಾಡು ರಾಜ್ಯಕ್ಕೆ ಹರಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ.
2023-24 ರ ಜಲ ವರ್ಷದಲ್ಲಿ ಕರ್ನಾಟಕ ಮತ್ತು ಕೇರಳದ ಕಾವೇರಿ ಕಣಿವೆಯ ಪ್ರದೇಶದಲ್ಲಿ ನೈರುತ್ಯ ಮಾನ್ಸೂನ್ ವೈಫಲ್ಯದಿಂದಾಗಿ 2023-24 ರ ಜಲ ವರ್ಷವೂ ಸಂಕಷ್ಟದ ವರ್ಷವಾಗಿದೆ. 2023-24 ನೇ ಸಾಲಿನ ಮಳೆಗಾಲದ ನೀರಾವರಿ ಆರಂಭದ ಋತು ಅಂದರೆ 1/6/2023-24 ಮೆಟ್ಟೂರು ಮತ್ತು ಭವಾನಿ ಅಣೆಕಟ್ಟುಗಳಲ್ಲಿ ಲಭ್ಯವಿದ್ದ ನೀರಿನ ಮಟ್ಟ 89.335 ಟಿಎಂಸಿ. ಮೆಟ್ಟೂರು ಅಣೆಕಟ್ಟೆಯಲ್ಲಿ 71.937 ಹಾಗೂ ಭವಾನಿ ಅಣೆಕಟ್ಟೆಯಲ್ಲಿ 17.395 ಲಭ್ಯವಿರುತ್ತದೆ ಇದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸಿಡಬ್ಲ್ಯುಡಿಟಿ/ ಕಾವೇರಿ ನ್ಯಾಯಮಂಡಳಿ ಪ್ರಕಾರ ತಮಿಳುನಾಡು ಕುರುವೈ ಬೆಳೆಯನ್ನು 1-80 ಬೆಳೆಯಬೇಕು ಹಾಗೂ 32 ಟಿಎಂಸಿ ನೀರನ್ನು ಮಾತ್ರ ಬಳಸಬೇಕು. ತಮಿಳುನಾಡು ಕಳೆದ ಆಗಸ್ಟ್ ಏಳರವರಿಗೆ 60.97 ಟಿಎಂಸಿ ನೀರನ್ನು ಕುರುವೈ ಬೆಳಗ್ಗೆ ಬಳಸಿದ್ದು ಕಾವೇರಿ ನ್ಯಾಯ ಮಂಡಳಿ ಆದೇಶದ ಎರಡು ಪಟ್ಟು ಹೆಚ್ಚಾಗಿದೆ. ದುರ್ದೈವ ಎಂದರೆ ಸಿಡಬ್ಲ್ಯುಎಂದ ಸಭೆಯಲ್ಲಿ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರೈತರು ಸರಿಸುಮಾರು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುರುವೈ ಬೆಳೆ ಬೆಳೆದಿರುವುದನ್ನು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಪ್ರಬಲವಾಗಿ ವಿಚಾರವನ್ನು ಮಂಡಿಸಿರುವುದಿಲ್ಲ. ಇದರಿಂದ ರಾಜ್ಯದ ರೈತರ ಹಿತಾಸಕ್ತಿಗೆ ತೀವ್ರ ಧಕ್ಕೆಯಾಗಿದೆ ಮತ್ತು ಬೆಂಗಳೂರಿನ ಕುಡಿಯುವ ನೀರಿಗೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟಿನಲ್ಲಿ ದಿನಕ್ಕೆ 24 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಅರ್ಜಿ ಸಲ್ಲಿಸಿದ ತಕ್ಷಣ ನಮ್ಮ ರಾಜ್ಯದ ಕಾವೇರಿ ಕಣಿವೆ ಡ್ಯಾಮ್ಗಳಿಂದ ತಮಿಳುನಾಡಿಗೆ ನೀರನ್ನು ಹರಿಬಿಟ್ಟಿರುವುದು ದುರ್ದೈವದ ಸಂಗತಿಯಾಗಿದೆ. ಇದು ರೈತರ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ತಿಳಿಸಲಾಗಿದೆ.
ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಕಾರ್ಯದರ್ಶಿಗಳು ದಿನಾಂಕ 25.07.2023ರ ಪತ್ರದಲ್ಲಿ ಕರ್ನಾಟಕದ ಜಲಾಶಯಗಳಿಂದ ದಿನಂಪ್ರತಿ ಹನ್ನೊಂದು ಸಾವಿರ ಕ್ಯೂಸೆಕ್ಸ್ ನೀರನ್ನು ಆರು ದಿನಗಳ ವರೆಗೆ ಬಿಡುಗಡೆ ಮಾಡುವಂತೆ ನಿರ್ದೇಶಿಸಿದಂತೆ ಕರ್ನಾಟಕ ರಾಜ್ಯವು ತನ್ನ ಜಲಾಶಯಗಳಿಂದ ನೀರನ್ನು ಬಿಡುಗಡೆ ಮಾಡಿದೆ ಐಸಿಸಿ ಸಭೆ ಕರೆಯದೆ ರಾಜ್ಯದಲ್ಲಿ ವಾಡಿಕೆ ಮಳೆಗಿಂತ ಮುಂಗಾರು ಮಳೆ ಕೊರತೆ ಇದ್ದರೂ ಸಹ ಮಂಡ್ಯದಲ್ಲಿ ರೈತರ ಮತ್ತು ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಕರೆಯದೆ ಏಕಾಏಕಿ ತಮಿಳುನಾಡಿಗೆ ನೀರನ್ನು ಹರಿಸಿ ಮತ್ತೆ ಕಾವೇರಿ ನೀರು ನಿಯಂತ್ರಣ ಸಮಿತಿಯು ದಿನಾಂಕ 31-7-2023 ರಂದು ದಿನಂಪ್ರತಿ 11000 ಕ್ಯೂಸೆಕ್ಸ್ ನೀರನ್ನು ಆರು ದಿನಗಳವರೆಗೆ ಬಿಡುಗಡೆ ಮಾಡುವಂತೆ 1/8/2023 ರಿಂದ 7/8/2023 ರವರೆಗೆ 55,790 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.
ತೀವ್ರ ಪ್ರತಿಭಟನೆಯ ಬಳಿಕ ಮನವಿ ಸಲ್ಲಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.