ಸುಬ್ರಹ್ಮಣ್ಯ : ವಿದೇಶಗಳಿಂದ ಆಮದು ಆಗುವ ರಬ್ಬರ್ ಮೇಲೆ ತೆರಿಗೆ ಏರಿಕೆ ಮಾಡಬೇಕು ಹಾಗೂ ರಬ್ಬರ್ ಧಾರಣೆ ಏರಿಕೆ ಕಾಣುವವರೆಗೆ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು ಎಂದು ರಬ್ಬರ್ ಬೆಳೆಗಾರರು ಒತ್ತಾಯಿಸಿದ್ದಾರೆ.
ಗುತ್ತಿಗಾರು ಬಳಿಯ ಹಾಲೆಮಜಲು ವೆಂಕಟೇಶ್ವರ ಸಭಾಭವನದಲ್ಲಿ ರಬ್ಬರ್ ಬೆಲೆ ಕುಸಿತದ ಹಿನ್ನೆಲೆಯಲ್ಲಿ ರಬ್ಬರ್ ಬೆಳೆಗಾರರ ಸಭೆ ಸಮಾಲೋಚನಾ ಸಭೆ ನಡೆಯಿತು.ರಬ್ಬರ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಎಲ್ಲಾ ಬೆಳೆಗಾರರು ಈಗ ಒಂದಾಗಲೇ ಬೇಕಿದೆ.ಈ ಹಿಂದೆ ಧಾರಣೆ ಏರಿ ಬಳಿಕ ತೀರಾ ಕಡಿಮೆಯಾಗಿತ್ತು.ಅದಾದ ಬಳಿಕ ಉತ್ತಮ ಧಾರಣೆ ಇತ್ತು.ಆದರೆ ಇದೀಗ ಕಳೆದ ಒಂದೆರಡು ವರ್ಷದಿಂದ ಕುಸಿಯುವ ಹಾದಿಯಲ್ಲಿದೆ.ಈಗಂತೂ ಟ್ಯಾಪಿಂಗ್ ನಿಲ್ಲಿಸಬೇಕಾದ ಅನಿವಾರ್ಯತೆ ಬಂದಿದೆ.ಹೀಗಾಗಿ ಪಕ್ಷಾತೀತ ಹೋರಾಟ ಆಗಬೇಕಾಗಿದೆ ಎಂದು ರಬ್ಬರ್ ಬೆಳೆಗಾರ ಭರತ್ ಮುಂಡೋಡಿ ಹೇಳಿದರು.
ರಬ್ಬರ್ ಆಮದು ವಿಚಾರದಲ್ಲಿ ಶೇ.೫ ರಷ್ಟು ತೆರಿಗೆ ಏರಿಕೆ ಸಾಧ್ಯವಾದರೆ ಶೇ.50 ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ತೆರಿಗೆ ವಿಧಿಸಲು ಸಾಧ್ಯವಿದೆ.ಈ ಹಿನ್ನೆಲೆಯಲ್ಲಿ ಮಾತುಕತೆ ನಡೆಸಬೇಕಾಗಿದೆ ಎಂದು ಎಂ.ಡಿ. ವಿಜಯ ಕುಮಾರ್ ಹೇಳಿದರು. ಕೇರಳದಲ್ಲಿ ರಬ್ಬರ್ ಬೆಳೆಗಾರರಿಗೆ ಬೆಂಬಲ ಬೆಲೆ ಅಲ್ಲಿನ ಸರ್ಕಾರ ನೀಡಿದೆ. 300 ಕೋಟಿಯಷ್ಟು ಇದಕ್ಕಾಗಿ ಮೀಸಲಿಟ್ಟಿದೆ, ಇಲ್ಲಿನ ಸರ್ಕಾರ ಕೂಡಾ ಈ ಬಗ್ಗೆ ಯೋಚಿಸಬೇಕು.ಈ ಹಿಂದೆ ಅಡಿಕೆಗೆ ಬೆಂಬಲ ಬೆಲೆ ನೀಡಿದಂತೆ ಈಗಲೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರಬ್ಬರ್ ಬೆಳೆಗಾರ ಬಿಟ್ಟಿ ಬಿ ನೆಡುನೀಲಂ ಹೇಳಿದರು.
ರಬ್ಬರ್ ಬೆಳೆಗಾರರಿಗೆ ಈಗ ಅನುಕೂಲವಾಗುವ ದೃಷ್ಟಿಯಿಂದ ರಾಜಕೀಯ ಮರೆತು ಎಲ್ಲಾ ರೀತಿಯಿಂದಲೂ ಸಹಕಾರ ಮಾಡಬೇಕು, ಇದಕ್ಕಾಗಿ ಕೇರಳದ ಈಗಿನ ಹೋರಾಟ ಸ್ವರೂಪ ಅರಿತುಕೊಂಡು, ಸಮಗ್ರಮಾಹಿತಿ ಕಲೆ ಹಾಕಿ ಹೋರಾಟ ನಡೆಸಬೇಕಿದೆ. ಇದಕ್ಕಾಗಿ ಎಲ್ಲಾ ತಾಲೂಕುಗಳ ಬೆಳೆಗಾರರು ಒಂದಾಗಬೇಕಿದೆ ಎಂದು ಗುತ್ತಿಗಾರು ರಬ್ಬರ್ ಬೆಳೆಗಾರರ ಸಹಕಾರಿ ಸಂಗದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಬೆಳೆಗಾರರ ಪರವಾಗಿ ಮಾತನಾಡಿದ ವೆಂಕಪ್ಪ ಗೌಡ, ಈಗ ರಬ್ಬರ್ ಧಾರಣೆ ಇಳಿಕೆ ಹಾದಿಯಲ್ಲಿದ್ದರೂ ವಾಹನಗಳ ಟಯರ್ ಬೆಲೆ ಕುಸಿತವಾಗಿಲ್ಲ, ಅಂದರೆ ರಬ್ಬರ್ ಬೇಡಿಕೆ ಇದೆ ಎಂಬುದು ಖಚಿತ.ಆದರೆ ಈಗ ಹೋರಾಟದ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡನ್ನೂ ಈ ಬಗ್ಗೆ ಮಾತನಾಡಿಸುವ ಕೆಲಸ ಮಾಡಬೇಕಿದೆ ಎಂದರು.
ವೇದಿಕೆಯಲ್ಲಿ ರಬ್ಬರ್ ಬೆಳೆಗಾರರಾದ ಮಹೇಶ್ ಕುಮಾರ್ ಕರಿಕಳ, ವಿನೋದ್ ಕುಮಾರ್ ಮುಂಡೋಡಿ ಮಾತನಾಡಿದರು. ಬೆಳೆಗಾರರ ಪರವಾಗಿ ಪ್ರವೀಣ್ ಮುಂಡೋಡಿ, ವೆಂಕಟ್ರಮಣ ಕೇಂಬ್ರೋಳಿ,ಹಿಮಕರ ಎಕೆ ಮೊದಲಾದವರು ಮಾತನಾಡಿದರು. ಬಿಟ್ಟಿ ಬಿ ನೆಡುನೀಲಂ ಸ್ವಾಗತಿಸಿ ಹರೀಶ್ ಪೂಜಾರಿಕೋಡಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.