ಕಾರ್ಗಿಲ್ ಯುದ್ಧವು 20 ನೇ ಶತಮಾನದ ಕೊನೆಯ ಯುದ್ಧ ಎಂದೇ ಹೆಸರಿಸಬಹುದು. ಮೂರು ತಿಂಗಳ ಕಾಳ ನಡೆದ ಈ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತವು ವಿಜಯಶಾಲಿಯಾಗಿತ್ತು ಮಾತ್ರವಲ್ಲ ಮುಂದೆ ಕಾಶ್ಮೀರವೆಂಬ ಭೌಗೋಳಿಕ ಪ್ರದೇಶದ ರಕ್ಷಣೆಯಲ್ಲಿ ಹೊಸ ಅವಿಷ್ಕಾರಗಳನ್ನು ಮಾಡಲು ಸಾಧ್ಯವಾಯಿತು. ಇಂದು ಭಾರತೀಯ ಸೈನಿಕರು ಅತಿಯಾದ ಶೀತಗಾಲದಲ್ಲೂ ಸಿಯಾಚಿನ್ ಗ್ಲೇಶಿಯರ್ ಪ್ರದೇಶದಲ್ಲೂ ಪಹರೆ ಕಾರ್ಯವನ್ನು ಮಾಡುತ್ತಾರೆ. ಇಂದು ಕಾಶ್ಮೀರದ ಆಯಕಟ್ಟಿನ ಪ್ರದೇಶಗಳಲ್ಲಿ ಯುದ್ಧ ವಿಮಾನಗಳು ಬಂದಿಳಿಯಲು ರನ್ ವೇ ಗಳು ನಿರ್ಮಿಸಲ್ಪಟ್ಟಿವೆ, ಚಿನೂಕ್ ಹೆಲಿಕಾಪ್ಟರ್ ಗಳ ಸಹಿತ ಎಲ್.ಸಿ.ಎಚ್ ನಂತಹ ಯುದ್ಧ ಹೆಲಿಕಾಪ್ಟರ್ ಹಾರಾಟ ನಡೆಸಲು ಹೆಲಿಪ್ಯಾಡ್ ಗಳ ನಿರ್ಮಾಣವಾಗಿವೆ. ಕಾರ್ಗಿಲ್ ಯುದ್ಧವಾದ ಬಳಿಕದ ಎರಡು ದಶಕಗಳಲ್ಲಿ ಭಾರತೀಯ ಸೇನೆಯು ಮತ್ತಷ್ಟೂ ಬಲಿಷ್ಠವಾಗಿದೆ. ರಫೇಲ್ ನಂತಹ ಯುದ್ಧ ವಿಮಾನಗಳು ಭಾರತದ ಬತ್ತಳಿಕೆಯನ್ನು ಸೇರಿವೆ, ಹತ್ತು ಹಲವು ಜಲಾಂತರ್ಗಾಮಿ ನೌಕೆಗಳೂ ಕೂಡಾ ಭಾರತದ ಎಲ್ಲೆಗಳ ರಕ್ಷಣೆಯನ್ನು ಪ್ರಧಾನ ಪಾತ್ರ ವಹಿಸುತ್ತಿವೆ. ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಯ ಸಹಭಾಗಿತ್ವದಲ್ಲಿ ಹೊಸ ಯುಗದ ಅವಿಷ್ಕಾರಗಳಿಗೆ ನಾಂದಿ ಹಾಕಲಾಗಿದೆ.
ಕಾರ್ಗಿಲ್ ಎಂಬುದು ಜಮ್ಮು ಕಾಶ್ಮೀರದ ದ್ರಾಸ್ ವಲಯದ ಪ್ರಧಾನ ಗುಡ್ಡಪ್ರದೇಶ. ಎಲ್ಲಕ್ಕಿಂತ ಮಿಗಿಲಾಗಿ ಇದು ಪಶ್ಚಿಮದ ಲಡಾಕ್ ಪ್ರದೇಶಕ್ಕೆ ಶ್ರೀನಗರದಿಂದ ಸಂಪರ್ಕ ಕಲ್ಪಿಸುವ ಮಹತ್ವದ ಕೊಂಡಿಯೂ ಹೌದು. ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಕಾಶ್ಮೀರದ ಪಾಲಿಗೆ ಬಹು ಮುಖ್ಯವಾದ ವಾಣಿಜ್ಯಿಕ ಸಂಪರ್ಕದ, ರಕ್ಷಣಾತ್ಮಕ ಮತ್ತು ಭೌಗೋಳಿಕ ಪ್ರದೇಶವಿದು. ಶ್ರೀನಗರದಿಂದ ಕಾರ್ಗಿಲ್ ಪ್ರದೇಶ 205 ಕಿ.ಮೀ ದೂರವಿದ್ದರೆ, ಲೇಹ್ ನಿಂದ ಕಾರ್ಗಿಲ್ 234 ಕಿ.ಮೀ ದೂರವಿದೆ. ಇಂದು ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಕಿನ ಲೇಹ್ ಗೆ ಅಂದು ಅಗತ್ಯ ವಸ್ತುಗಳನ್ನು ಪೂರೈಸಲು ಇದ್ದ ರಸ್ತೆ ಮಾರ್ಗವು ಇದೇ ಕಾರ್ಗಿಲ್ ಸಮೀಪದಿಂದ ಹಾದುಹೋಗುತ್ತಿತ್ತು.
1999 ಭಾರತದ ಪಾಲಿಗೆ ಬಹಳ ಮಹತ್ವಾಕಾಂಕ್ಷಿ ವರ್ಷವಾಗಿತ್ತು. ಇಪ್ಪತ್ತನೇ ಶತಮಾನದ ಕೊನೆಯ ವರ್ಷದಲ್ಲಿ ಭಾರತವು ಪಾಕಿಸ್ಥಾನದೊಂದಿಗೆ ಹೊಸ ರಾಜತಾಂತ್ರಿಕ ಬಾಂಧವ್ಯಕ್ಕೆ ಅಡಿಪಾಯ ಹಾಕುವ ಉತ್ಸುಕತೆಯಲ್ಲಿತ್ತು. ಅಂದು ದೇಶದ ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ಥಾನದೊಂದಿಗೆ ಮೈತ್ರಿ ಬಯಸಿ ಪಾಕಿಸ್ಥಾನದ ಲಾಹೋರಿಗೆ ವಿಶೇಷ ಬಸ್ಸು ಸೇವೆಯನ್ನು ಆರಂಭಿಸಿದ್ದರು. ವಾಘಾ ಗಡಿಯಿಂದ ಖುದ್ದು ಪ್ರಧಾನಿ ವಾಜಪೇಯಿಯವರು ಲಾಹೋರಿಗೆ ತಲುಪಿ ಅಂದಿನ ಪಾಕ್ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ಮೂಲಕ ಹೊಸ ಬಾಂಧವ್ಯಕ್ಕೆ ಭಾಷ್ಯ ಬರೆಯುವ, ಹೊಸ ಅಧ್ಯಾಯವನ್ನು ರಚಿಸುವ ಕರೆ ನೀಡಿದರು. ವಿಶ್ವದ ಪ್ರತಿಷ್ಠಿತ ಮಾಧ್ಯಮಗಳಲ್ಲಿ ವಾಜಪೇಯಿ ಮತ್ತು ನವಾಜ್ ಷರೀಫರ ಹಸ್ತಲಾಘವದ ಫೋಟೊಗಳು ರರಾಜಿಸಿದವು.
ಅಂದು ನಡೆದ ಈ ಕಾರ್ಯಕ್ರಮದಿಂದ ಬಹಳ ದೂರ ಉಳಿದ ಪಾಕಿನ ನೇತಾರೊಬ್ಬರಿದ್ದರು, ಅವರ ಹೆಸರೇ ಪರ್ವೇಜ್ ಮುಷಾರಫ್. ಪಾಕಿಸ್ಥಾನದ ಸೇನಾ ಅಧ್ಯಕ್ಷರಾಗಿದ್ದ ಪರ್ವೇಜ್ ಮುಷಾರಪ್ ತೆರೆಮರೆಯಲ್ಲಿ ಭಾರತ ವಿರೋಧಿ ಷಡ್ಯಂತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 1998 ನವೆಂಬರ್, ಅಂದರೆ ವಾಜಪೇಯಿ- ನವಾಜ್ ಷರೀಫ್ ಭೇಟಿಯ(1999 ಫೆಬ್ರವರಿ) ಮೂರು ತಿಂಗಳ ಮೊದಲು ಇದೇ ಮುಷಾರಫ್ ಅಂದಿನ ತಮ್ಮ ಸೇನಾ ನಾಯಕರೊಂದಿಗೆ ನಿಗೂಢ ಸಭೆ ನಡೆಸಿದ್ದರು. ಅದರಲ್ಲಿ ಮುಷಾರಫ್ ಭಾರತ ವಿರೋಧಿ ನಿಲುವುಳ್ಳ ಮತ್ತು ಬಹಳ ಆಘಾತಕಾರಿ ಎನ್ನುವ ಯೋಜನೆಯನ್ನು ರೂಪಿಸಿದ್ದರು. ನೇರವಾಗಿ ಹೇಳುವುದಾದರೆ ಕಾರ್ಗಿಲ್ ಯುದ್ಧದ ಯೋಜನೆಯನ್ನು ಸಿದ್ಧಪಡಿಸಿದ್ದರು.
ಹಿಮಾಲಯದ ಡ್ರಾಸ್, ಬಟಾಲಿಕ್ ಪ್ರದೇಶಗಳು ವರ್ಷದುದ್ದಕ್ಕೂ ಬಹಳ ವಿಚಿತ್ರ ಎನ್ನುವ ಹವಾಮಾನವನ್ನು ಹೊಂದಿರುತ್ತವೆ. ಬೇಸಗೆಯಲ್ಲಿ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೊಂದಿದ್ದರೆ, ಚಳಿಗಾಲದಲ್ಲಿ ಇಲ್ಲಿ -40 ಡಿಗ್ರಿಯಷ್ಟಿರುವ ಕೊರೆಯುವ ಶೀತಾಂಶವೂ ಇರುತ್ತದೆ. ಜಮ್ಮು ಕಾಶ್ಮೀರದ ಪಶ್ಚಿಮ ಭಾಗದಲ್ಲಿ LOC ಎಂದು ಕರೆಯಲ್ಪಡುವ ಗಡಿ ನಿಯಂತ್ರಣ ರೇಖೆಯಿದೆ. ಈ ಗಡಿ ರೇಖೆಯುದ್ದಕ್ಕೂ ಹಲವೆಡೆಗಳಲ್ಲಿ ಎರಡೂ ದೇಶದ ಸೈನಿಕರು ತಂತಮ್ಮ ಗಡಿಭಾಗಗಳಲ್ಲಿ ಬಂಕರುಗಳನ್ನು ಸ್ಥಾಪಿಸಿ ದೇಶದ ಗಡಿ ರಕ್ಷಣೆಯನ್ನು ಮಾಡುತ್ತಿರುತ್ತಾರೆ. ಸ್ವಾತಂತ್ರ್ಯ ಬಂದ ನಂತರದ ಹಲವು ವರ್ಷಗಳ ಕಾಲ ಎರಡೂ ರಾಷ್ಟ್ರಗಳ ಸೈನಿಕರ ಮಧ್ಯೆ ಒಂದು ಅಘೋಷಿತ ನಿಯಮವೊಂದಿರುತ್ತದೆ. ಆದೇನೆಂದರೆ ಅತಿಯಾಗುತ್ತಿರುವ ಶೀತಕಾಲದಲ್ಲಿ ಸೈನಿಕರು ಎತ್ತರದ ಗುಡ್ಡ ಪ್ರದೇಶದಲ್ಲಿರುವ ಹಿಮಾವೃತ ಬಂಕರುಗಳನ್ನು ಬಿಟ್ಟು ತಮ್ಮ ಬೇಸ್ ಕ್ಯಾಂಪುಗಳಿಗೆ ತೆರಳುತ್ತಾರೆ. ಶೀತಕಾಲ ಮುಗಿಯುವ ತನಕ ಎರಡೂ ದೇಶಗಳ ಗಡಿಯು ಹಿಮಾವೃತಗೊಂಡು ಸ್ವಯಂ ರಕ್ಷಿಸಲ್ಪಡುತ್ತದೆ ಎಂಬುದು ಭಾರತೀಯ ಸೈನಿಕರ ಅಚಲ ನಂಬಿಕೆಯಾಗಿರುತ್ತದೆ. ಹಲವು ವರ್ಷಗಳಿಂದ ಹೀಗೆ ನಡೆದುಕೊಂಡು ಬಂದಿದ್ದ ಅಲಿಖಿತ ನಿಯಮ ಇದಾಗಿರುತ್ತದೆ. ಚಳಿಗಾಲದಲ್ಲಿ ಯಾರೂ ಕೂಡಾ ದೇಶದ ಗಡಿಯನ್ನು ದಾಟಿ ಒಳನುಸುಳುವುದಿಲ್ಲ ಎಂಬುದು ನಮ್ಮ ಸೈನಿಕರ ನಂಬಿಕೆಯಾಗಿರುತ್ತದೆ. 1998 ರಲ್ಲಿ ಈ ಅಲಿಖಿತ ನಿಯಮವನ್ನು ಮೊದಲ ಬಾರಿಗೆ ಪಾಕಿಸ್ಥಾನ ಉಲ್ಲಂಘಿಸುತ್ತದೆ.
1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಬಗ್ಗೆ ಯೋಚಿಸುವಾಗ ನಮಗನಿಸುವ ಮತ್ತು ಕಾಡುವ ಪ್ರಶ್ನೆ ಇದೆ. ಭಾರತ- ಪಾಕಿಸ್ಥಾನದ ಮಧ್ಯೆ ಗುಜರಾತಿನಿಂದ ಹಿಡಿದು ಕಾಶ್ಮೀರದವರೆಗೂ ಸಾವಿರಾರು ಕಿ.ಮೀ ವ್ಯಾಪ್ತಿಯ ಗಡಿಯಿದೆ, ಆದರೆ ಕಾಶ್ಮೀರದ ಡ್ರಾಸ್ ವಲಯವೇ ಯಾಕೆ ಸಂಘರ್ಷಕ್ಕೆ ಕಾರಣವಾಯಿತು ಎಂಬುದು?!
ಕಾರ್ಗಿಲ್ ವಲಯವು ಲೇಹ್ ಲಡಾಕ್ ಭೂಪ್ರದೇಶವನ್ನು ರಾಜಧಾನಿ ಶ್ರೀನಗರದೊಂದಿಗೆ ಸಂಪರ್ಕಿಸುವ, ರಸ್ತೆ ಮಾರ್ಗವಾಗಿ ಜೋಡಿಸಲ್ಪಡುವ ಪ್ರಧಾನ ಕೊಂಡಿಯಾಗಿದೆ. ಈ ರಾಷ್ಟ್ರೀಯ ಹೆದ್ದಾರಿಯ NH-1 ಎಂದು ಹೆಸರಿಸಲ್ಪಡುತ್ತದೆ. ಜಮ್ಮು ಕಾಶ್ಮೀರದ ಲಡಾಕ್ ಭೂಪ್ರದೇಶವನ್ನು ವಾಣಿಜ್ಯಿಕವಾಗಿ ಮತ್ತು ಸಾರಿಗೆ ಸಂಪರ್ಕದಿಂದ ಬೇರ್ಪಡಿಸುವ ದುರುದ್ದೇಶ ಮತ್ತು ಭಾರತದ ಭೂಪ್ರದೇಶದ ಮೇಲೆ ಹಿಡಿತ ಸಾಧಿಸಿ, ವಶಪಡಿಸುವ ಯತ್ನಕ್ಕೆ ಅಂದು ಮುಷಾರಫ್ ಅಂಡ್ ಕೊ ಯೋಜನೆ ರೂಪಿಸಿತ್ತು.
ಒಂದೆಡೆ ಭಾರತ-ಪಾಕಿಸ್ಥಾನದ ಮಧ್ಯೆ ಸ್ನೇಹಾಚಾರ, ಇಷ್ಟಾಚಾರ, ಪರಸ್ಪರ ಸಹಕಾರದ ಧ್ಯೇಯದೃಷ್ಠಿಯಿಟ್ಟು, 21 ನೇ ಶತಮಾನದ ಏಷ್ಯಾದ ರಾಜಕೀಯ ಇತಿಹಾಸಕ್ಕೆ ಹೊಸ ಅಧ್ಯಾಯವನ್ನು ಬರೆಯುವತ್ತ ಮುತ್ಸದ್ದಿ ಎನಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಯಶಸ್ಸಿನತ್ತ ಹೆಜ್ಜೆಯಿರಿಸಿದ್ದರೂ, ಕಾವ್ಯಾತ್ಮಕವಾಗಿ ಭಾರತ-ಪಾಕಿಸ್ಥಾನದ ಅಮನ್ ಕಿ ಆಶಾ ಎಂಬ ಗೆಳೆತನದ ಶಖೆಯ ಮಧ್ಯೆ ಅದೇ ರಾಷ್ಟ್ರದ ಸೇನಾನಾಯಕ ಬೆನ್ನಿಗೆ ಚೂರಿ ಇರಿಯುವ ಕೆಲಸವನ್ನು ಮಾಡಿದ್ದ!
ಲಾಹೋರಿನ ಭೇಟಿ ಮಧ್ಯೆ ಇತ್ತ ಕಡೆ ಪಾಕಿಸ್ಥಾನದ ಸೈನಿಕರು ಹಿಮಾಚ್ಛಾದಿತ ಡ್ರಾಸ್ ಪ್ರದೇಶದಲ್ಲಿ ನಿಧಾನವಾಗಿ ಆಘಾತಕಾರಿ ಶಸ್ತ್ರಾಸ್ತ್ರಗಳನ್ನು ಶೇಖರಿಸುವ, ಎತ್ತರದ ಪ್ರದೇಶಗಳಿಗೆ ಒಯ್ಯುವ ಕಾರ್ಯದಲ್ಲಿ ತಲ್ಲೀನವಾಗಿದ್ದರು. LOC ಬಳಿಯಿಂದ ಭಾರತೀಯ ಸೈನಿಕರು ತಮ್ಮ ಬೇಸ್ ಕ್ಯಾಂಪುಗಳಿದ್ದರೆ, ಅತ್ತ ಪಾಕ್ ಸೈನಿಕರು ಶಸ್ತ್ರಗಳನ್ನು ಶೇಖರಿಸಿ ಭಾರತದ ವಿರುದ್ಧ ದೊಡ್ಡ ದಾಳಿ ಎಸಗಲು ತಯಾರಿ ನಡೆಸುತ್ತಿದ್ದರು. ಇದೇ ಸಂದರ್ಭ ಭಾರತದ ಗಡಿ ಪ್ರದೇಶದಲ್ಲಿ ತಾಶಿ ನಮ್ಗಾಯಾಲ್ ಎಂಬ ಕುರಿಗಾಹಿನೋರ್ವ ಬಟಾಲಿಕ್ಕಿನ ಜೂಬಾರ್ ಪರ್ವತಶ್ರೇಣಿಯಲ್ಲಿ ತನ್ನ ಕುರಿಗಳು ಮತ್ತು ಯಾಕ್ ಗಳನ್ನು ಮೇಯಿಸಲು ತೆರಳಿದ್ದ, ಎರಡು ದಿನಗಳಿಂದ ನಾಪತ್ತೆಯಾಗಿದ್ದ ಒಂದು ಯಾಕ್ ಅನ್ನು ಹುಡುಕಲು ಬೈನಾಕುಲರ್ ಅನ್ನು ತಂದಿದ್ದ ಆತ ಅಂದು ದೂರದ ಹಿಮಾವೃತ ಬೆಟ್ಟ ಪ್ರದೇಶದಲ್ಲಿ ಬುರ್ಕಾ ಧರಿಸಿ ಸಂಚರಿಸುತ್ತಿರುವ ವ್ಯಕ್ತಿಗಳು, ಶಸ್ತ್ರಗಳನ್ನು ತನ್ನ ಸ್ನೇಹಿತರೊಂದಿಗೆ ಗಮನಿಸಿದ್ದ. ತಕ್ಷಣ ಎಚ್ಚೆತ್ತ ಆತ ಭಾರತೀಯ ಸೈನ್ಯಾಧಿಕಾರಿಗಳಿಗೆ ಈ ಮಾಹಿತಿಯನ್ನು ನೀಡಿದ.
ಇತ್ತ ಡ್ರಾಸ್ ವಲಯದ ಹಲವೆಡೆ ಒಳನುಸುಳಿ ತಮ್ಮ ಶಸ್ತ್ರಾಸ್ತ್ರಗಳನ್ನು ಪೇರಿಸುತ್ತಿದ್ದ ಪಾಕಿಸ್ಥಾನಿಯರಲ್ಲಿ ಆ ಸೈನ್ಯದ ಅಧಿಕಾರಿಗಳು ಸಕ್ರಿಯರಾಗಿದ್ದರು. ಕುರಿಗಾಹಿಯ ಮಾಹಿತಿ ಮೇರೆಗೆ LOC ಬಳಿಯ ಆಗುತ್ತಿರುವ ಪಾಕ್ ಸೈನಿಕ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಲು ಕ್ಯಾಪ್ಟನ್ ಓರ್ವನನ್ನು ಅಲ್ಲಿಗೆ ಕಳುಹಿಸಲಾಗುತ್ತದೆ, ಆತ ಹೋದ ನಂತರ ಪಾಕಿಸ್ಥಾನಿ ಸೈನಿಕರ ಕಾರ್ಯಚಟುವಟಿಕೆಗಳು ವಿಸ್ತಾರಗೊಂಡಿರುವುದನ್ನು ಭಾರತದ ಮೇಲೆ ಶಸ್ತ್ರಸಜ್ಜಿತ ಆಕ್ರಮಣಕ್ಕೆ ತಯಾರಿಯಾಗಿರುವುದನ್ನು ಗಮನಿಸುತ್ತಾ ನಂತರದ ಮೂರು ತಿಂಗಳುಗಳ ಕಾಲ ಭಾರತ-ಪಾಕಿಸ್ಥಾನ ಯುದ್ಧ ನಡೆಯುತ್ತದೆ.
ಕಾರ್ಗಿಲ್ ಯುದ್ಧವು ವಿಶಿಷ್ಟವಾದದ್ದು. ಇದು ಎತ್ತರದ ಅತ್ಯಂತ ಕ್ಲಿಷ್ಟಕರ ಪ್ರದೇಶದಲ್ಲಿ ನಡೆದ ಯುದ್ಧವಾಗಿದೆ. ಕೆಲವು ಪ್ರದೇಶಗಳು 18,000 ಅಡಿಗಳಿಗಿಂತಲೂ ಹೆಚ್ಚು ಎತ್ತರದಲ್ಲಿವೆ. ಇದು ಯುದ್ಧಕ್ಕೆ ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಒಂದಾಗಿತ್ತು.
ಈ ಸಂಘರ್ಷವು ಎರಡೂ ಕಡೆಗಳಲ್ಲಿ ಸಾವಿರಾರು ಯೋಧರ ಬಲಿ ತೆಗೆದುಕೊಂಡಿತು, ಸುಮಾರು 500 ಭಾರತೀಯ ಮತ್ತು 700 ಪಾಕಿಸ್ತಾನಿ ಸೈನಿಕರು ಪ್ರಾಣ ಕಳೆದುಕೊಂಡರು. ಯುದ್ಧವು ಫಿರಂಗಿ, ವಾಯು ಶಕ್ತಿ ಮತ್ತು ಪದಾತಿ ದಳದ ಕಾರ್ಯಾಚರಣೆಗಳ ವ್ಯಾಪಕ ಬಳಕೆಯನ್ನು ಒಳಗೊಂಡಿತ್ತು.
ಭಾರತೀಯ ವಾಯುಪಡೆಯು ಸಂಘರ್ಷದ ಸಮಯದಲ್ಲಿ ವೈಮಾನಿಕ ಬೆಂಬಲವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು, ಶತ್ರುಗಳನ್ನು ವ್ಯೂಹಾತ್ಮಕ ಸ್ಥಾನಗಳಿಂದ ಹೊರಹಾಕಲು ನಿರ್ಣಾಯಕ ವಾಯುದಾಳಿಗಳನ್ನು ನಡೆಸಿತು. ಭಾರತೀಯ ಸೇನಾ ಅಧಿಕಾರಿಯಾಗಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಯುದ್ಧದ ಸಮಯದಲ್ಲಿ ಅವರ ಶೌರ್ಯ ಮತ್ತು ಧೈರ್ಯಶಾಲಿ ಕಾರ್ಯಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. “ಯೇ ದಿಲ್ ಮಾಂಗೆ ಮೋರ್” ಎಂಬ ಅವರ ಪ್ರಸಿದ್ಧ ಪದಗಳು ಅಪ್ರತಿಮವಾಗಿವೆ.
ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯು ಟೋಲೋಲಿಂಗ್, ಟೈಗರ್ ಹಿಲ್ ಮತ್ತು ಪಾಯಿಂಟ್ 4875 ರ ಆಯಕಟ್ಟಿನ ಶಿಖರಗಳನ್ನು ಪುನಃ ವಶಪಡಿಸಿಕೊಂಡಿತು. ಕಾರ್ಗಿಲ್ ಯುದ್ಧವು 1971 ರ ಭಾರತ-ಪಾಕಿಸ್ತಾನ ಯುದ್ಧದ ನಂತರ ಮೊದಲ ಬಾರಿಗೆ ಎರಡು ದೇಶಗಳು ನೇರ ಮಿಲಿಟರಿ ಸಂಘರ್ಷದಲ್ಲಿ ತೊಡಗಿದವು.
ಈ ಸಂಘರ್ಷವು ಅಂತಾರಾಷ್ಟ್ರೀಯ ಗಮನವನ್ನು ಸೆಳೆಯಿತು, ಈ ಪ್ರದೇಶದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ವಿವಿಧ ದೇಶಗಳು ಪಾಕಿಸ್ತಾನವನ್ನು ಆಗ ಒತ್ತಾಯಿಸಿದ್ದವು. ಪ್ರತಿ ವರ್ಷ ಜುಲೈ26 ರಂದು ಭಾರತವು ಕಾರ್ಗಿಲ್ ವಿಜಯ ದಿವಸ್ ಅನ್ನು ಆಚರಿಸುತ್ತದೆ. ಮಡಿದ ವೀರ ಯೋಧರ ಸ್ಮರಣೆಯನ್ನು ಮಾಡಿ ಗೌರವ ಸೂಚಿಸುತ್ತದೆ.
✍️ ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.