ಸೃಷ್ಟಿಯ ಸರ್ವ ಅಂಗಗಳಲ್ಲೂ ಚೇತನವನ್ನು ಕಾಣುವ ರಾಷ್ಟ್ರ ಭಾರತ. ಇಲ್ಲಿನ ಕಲ್ಲು, ಮಣ್ಣು, ಗಾಳಿ, ನೀರು ಹೀಗೆ ಪ್ರತಿಯೊಂದು ವಸ್ತುವಿನಲ್ಲೂ ಚೈತನ್ಯವಿದೆ. ಹೌದು ಭಾರತದ ಕಲ್ಪನೆ ಹಾಗೆ… ಸಂಪೂರ್ಣ ಜಗತ್ತಿಗೆ ಪ್ರಾಣಿಯಾಗಿ ಗೋಚರಿಸಿದ ಗೋವು ನಮಗೆ ತಾಯಿ ಸಮಾನ. ಕೇವಲ ನಮಗಷ್ಟೇ ತಾಯಿ ಎಂದರೆ ಸಾಕೆ..? ಅವಳು ವಿಶ್ವದ ತಾಯಿ ‘ಗಾವೋ ವಿಶ್ವಸ್ಯ ಮಾತರಃ’.
ಆಧ್ಯಾತ್ಮಿಕವಾಗಿ ಮಾತ್ರವಲ್ಲ ವೈಜ್ಞಾನಿಕವಾಗಿಯು ಗೋವಿಗೆ ಮಹತ್ತರವಾದ ಮೌಲ್ಯವಿದೆ. ಕೆಚ್ಚಲಿನಲ್ಲಿ ಅಮೃತದಂತಹ ಹಾಲು, ಔಷಧಿಯುಕ್ತ ಗೋಮೂತ್ರ, ಮಣ್ಣಿಗೆ ಸತ್ವವನ್ನು ಕೊಡುವ ಗೋಮಯ ಇವೆಲ್ಲವನ್ನು ತನ್ನೊಳಗೆ ತುಂಬಿಕೊಂಡಿರುವವಳು ಗೋವು. ತಾಯಿಯ ಹಾಲನ್ನು ಕಳೆದುಕೊಂಡ ಮಗುವಿಗೆ ಅಮೃತದ ಸುಧೆಯನ್ನಿತ್ತವಳು, ಸಸ್ಯಶ್ಯಾಮಲಾ ಭಾರತಕ್ಕೆ ಬಲವನ್ನಿತ್ತವಳು, ಸೃಷ್ಟಿಯಲ್ಲಿ ಸರ್ವರನ್ನು ಪೊರೆವ ತಾಯಿಯವಳು.
ಚರಿತ್ರೆಯ ಪುಟಗಳನ್ನೊಮ್ಮೆ ಅವಲೋಕಿಸಿ ನೋಡಿದಾಗ ಹಿಂದೆ ರಾಜ ಮಹಾರಾಜರುಗಳ ಸಂಪತ್ತನ್ನು ಗೋವಿನಿಂದ ಅಳೆಯುತ್ತಿದ್ದರು ಎಂಬುವುದು ಇತಿಹಾಸಕಾರರಿಂದ ಸಾಬೀತಾದ ಸತ್ಯ. ಆದರೆ ಪ್ರಸ್ತುತ ಸಮಾಜಕ್ಕೆ ಗೋವಿನ ಬಗ್ಗಿರುವ ತಾತ್ಸಾರದ ಭಾವ ಅದು ಸಮಂಜಸವಲ್ಲ.
ಭಾರತಕ್ಕೂ ಗೋವಿಗೂ ಅವಿನಾಬಾವ ಸಂಬಂಧ. ಅದು ಆಧ್ಯಾತ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯು ಹೌದು, ಆರ್ಥಿಕವಾಗಿಯು ಹೌದು. ತಾಯಿ ಭಾರತಿ ಬ್ರಿಟಿಷರ ಸಂಕೋಲೆಗಳಿಂದ ಮುಕ್ತವಾದ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿದ್ದ ಗೋವುಗಳ ಸಂಖ್ಯೆ ಬರೋಬ್ಬರಿ 41 ಕೋಟಿ. ಆದರೆ ಇಂದು..? ಜಗತ್ತಿಗೆ ಅಂದಿನಿಂದ ಇಂದಿನವರೆಗೂ ಹಾಲಿನ ಅಮೃತ ಸುಧೆಯನ್ನು ಹರಿಸುತ್ತಿರುವ ರಾಷ್ಟ್ರ ನಮ್ಮ ಭಾರತ. ವಿಶ್ವದ 23% ಹಾಲು ಉತ್ಪತ್ತಿಯಾಗುತ್ತಿರುವುದು ತಾಯಿ ಭಾರತೀಯ ಮಡಿಲಲ್ಲಿ. ಸುಮಾರು ಎಂಟು ಕೋಟಿಗೂ ಅಧಿಕ ರೈತರು ಹೈನುಗಾರಿಕೆಗೆ ಅವಲಂಬಿತವಾಗಿದ್ದಾರೆ. ರಾಷ್ಟ್ರದ ಆರ್ಥಿಕತೆಗೆ 5% ಬಲವನ್ನು ಕೊಡುತ್ತಿರುವುದು ಇದೇ ಇಲಾಖೆ.
ಇಷ್ಟೆಲ್ಲಾ ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವಿದೆ. ಅದು ಈ ಬಾರಿ ಕರ್ನಾಟಕ ಸರಕಾರ ಮಂಡಿಸಿರುವ ಬಜೆಟ್. ಸರಕಾರ ಪಶುಸಂಗೋಪನ ಇಲಾಖೆಗೆ 3024 ಕೋಟಿ ಇಟ್ಟಿರುವುದು ಸಂತಸದ ವಿಷಯ. ಆದರೆ ಜಾನುವಾರುಗಳ ರಕ್ಷಣೆಗೆ, ರೈತರ ಬೆಂಬಲಕ್ಕೆ ಈ ಬಜೆಟ್ ಅಸಮರ್ಪಕವಾಗಿದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿದ್ದಾಗ ರೈತರಿಗೆ ಸಹಾಯವಾಗುವಂತೆ ಅನೇಕ ಯೋಜನೆಗಳನ್ನು ಘೋಷಿಸಿತ್ತು ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿ ಭಾರತೀಯರಿಗೆ ಗೋವಿನೊಂದಿಗೆ ಇರುವ ಸಂಬಂಧವನ್ನು ಪರಿಗಣಿಸಿ prevention of slaughter and preservation of cattle act 2020 ಎಂಬ ಕಾನೂನನ್ನು ಜಾರಿಗೆ ತರುವುದರೊಂದಿಗೆ ಗೋ ಸಂರಕ್ಷಣೆಗೆ ಬದ್ಧವಾಗಿತ್ತು. ಇದಲ್ಲದೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಗೋ ಸಂರಕ್ಷಣೆಗಾಗಿ ಪುಣ್ಯಕೋಟಿ ದತ್ತು ಯೋಜನೆ, ಜಿಲ್ಲೆಗೊಂದು ಗೋಶಾಲೆಗಳ ನಿರ್ಮಾಣ,ಗೋ ಉತ್ಪನ್ನಗಳ ತಯಾರಿಗೆ ಸಹಕಾರ,ಭಾರತೀಯ ಗೋತಳಿಗಳ ಸಂರಕ್ಷಣೆ ಹೀಗೆ ಹತ್ತು ಹಲವು ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿತ್ತು. ರೈತರಿಗೆ ಸಹಕಾರ ವಾಗುವಂತೆ 290 ಮೊಬೈಲ್ ವೆಟರ್ನರಿ ಆಸ್ಪತ್ರೆಗಳು, ಕ್ಷೇತ್ರ ಸಮೃದ್ಧಿ ಸಹಕಾರಿ ಬ್ಯಾಂಕ್, 90 ಕೋಟಿ ವೆಚ್ಚದಲ್ಲಿ ಹಾವೇರಿಯಲ್ಲಿ 1 ಲಕ್ಷ ಲೀಟರಿನ ಹಾಲಿನ ಸಂಸ್ಕರಣಾ ಘಟಕದ ನಿರ್ಮಾಣ, ಚರ್ಮ ಗಂಟು ರೋಗದಿಂದ ಬಳಲುತ್ತಿದ್ದ ಗೋವುಗಳಿಗೆ ಒಂದು ಕೋಟಿಗೂ ಅಧಿಕ ವ್ಯಾಕ್ಸಿನೇಷನ್ಗಳ ಪೂರೈಕೆ, ಚರ್ಮಗಂಟು ರೋಗದಿಂದ ಬಲಿಯಾದ ಗೋವುಗಳ ಮಾಲೀಕರಿಗೆ ಪರಿಹಾರ ನೀಡಲು 55 ಕೋಟಿ ರೂಪಾಯಿ ಸಹಾಯಧನ ಇಂತಹ ಹಲವಾರು ಯೋಜನೆಗಳು ಘೋಷಣೆಯಾಗಿದ್ದವು. ಆದರೆ ಇಂದಿನ ಸರಕಾರ ಹೈನುಗಾರಿಕೆಗೆ ಪ್ರಾಶಸ್ತ್ಯವನ್ನು ನೀಡಲೇ ಇಲ್ಲ.
ಸರಕಾರ ಘೋಷಿಸಿರುವ ಅನುಗ್ರಹ ಯೋಜನೆ, ಚರ್ಮಗಂಟು ರೋಗಕ್ಕೆ 12 ಕೋಟಿಯ ಸಹಾಯಧನ ಸ್ವಾಗತಾರ್ಹ ವಿಷಯ. ಆದರೆ ಭಾರತೀಯ ಜನತಾ ಪಾರ್ಟಿ ಜಾರಿಗೆ ತಂದ ಜಿಲ್ಲೆಗೊಂದು ಗೋಶಾಲೆ, ಆಸ್ಪತ್ರೆಗಳ ನಿರ್ಮಾಣ ಹೀಗೆ ಹಲವು ಯೋಜನೆಗಳನ್ನು ಕೈ ಬಿಟ್ಟಿದೆ. ಪಶು ವೈದ್ಯರ ನೇಮಕಾತಿಯು ನಿಧಾನವಾಗುತ್ತಿದೆ. ಇದಲ್ಲದೆ ಹೈನುಗಾರಿಕೆಗೆ ಸಂಬಂಧಿಸಿದಂತೆ ದೊಡ್ಡಮಟ್ಟಿನ ನವೀನ ಕಲ್ಪನೆಯ ಯೋಜನೆಗಳೇನು ಘೋಷಣೆಯಾಗದಿರುವುದು ಬೇಸರದ ಸಂಗತಿ. ಕಾಂಗ್ರೆಸ್ ಸರಕಾರ ತಮ್ಮ ಪ್ರಣಾಳಿಕೆಯಲ್ಲಿ ಈಗಾಗಲೇ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಭರವಸೆ ನೀಡಿದೆ. ಇದಕ್ಕೆ ಬಲವೆಂಬಂತೆ ಪಶುಸಂಗೋಪನಾ ಇಲಾಖೆಯ ಮಂತ್ರಿಗಳಾದ ವೆಂಕಟೇಶ್ ಅವರ ಮಾತುಗಳನ್ನು ನಾವು ಮೊನ್ನೆ ಕೇಳಿದ್ದೇವೆ. ಓಲೈಕೆ ರಾಜಕಾರಣದ ಹಿಂದೆ ಹೋದ ಸರಕಾರ ಹೈನುಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡದೆ ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ಒಂದು ವೇಳೆ ಗೋ ಹತ್ಯೆ ಕಾಯ್ದೆಯನ್ನು ಹಿಂಪಡೆದದ್ದೇ ಆದರೆ ಗೋಕಳ್ಳತನದ ಪ್ರಕರಣಗಳು ಹೆಚ್ಚಾಗಿ ರೈತರ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಕೃಷಿ ಪ್ರಧಾನವಾಗಿರುವ ನಮ್ಮ ರಾಷ್ಟ್ರಕ್ಕೆ ಹೈನುಗಾರಿಕೆಯು ಆಧಾರ ಸ್ತಂಭದಂತೆ.. ಇದಕ್ಕೆ ಪೂರಕವಾದ ಸಹಕಾರವು ಸರಕಾರದಿಂದ ದೊರೆತರೆ ಹಲವಾರು ರೈತರಿಗೆ ಸಹಾಯವಾಗುತ್ತದೆ. ಗ್ಯಾರೆಂಟಿಗಳ ಆಧಾರದಲ್ಲಿ ಅಧಿಕಾರಕ್ಕೆ ಏರಿದ ಸರಕಾರ ರೈತರ ನಂಬಿಕೆಗೆ ಚ್ಯುತಿ ತರದಿರಲಿ.
✍️ ಗುರುರಾಜ್ ಗಂಟಿಹೊಳೆ, ಶಾಸಕರು ಬೈಂದೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.