ಮುಂದಿನ ಐದು ವರ್ಷಗಳಲ್ಲಿ ನಾವು ಬದುಕುವ ರೀತಿಯೇ ಬದಲಾಗಿ ಬಿಡುತ್ತದೆ. ಇವತ್ತು ನಾವು ಮಾಡುತ್ತಿರುವ ಕೆಲಸವನ್ನ ಮಾಡುವ ವಿಧಾನ ಬದಲಾಗಿ ಹೋಗುತ್ತದೆ. ಆಶ್ಚರ್ಯ ಅನ್ನಿಸುತ್ತೆ ಅಲ್ವಾ ? ಆದರೆ ಇದು ನಿಜ. ನಾವೆಲ್ಲಾ ನಮ್ಮದೆ ಪ್ರಪಂಚದಲ್ಲಿ ನಮ್ಮದೇ ಆದ ಕೆಲಸದಲ್ಲಿ ಮಗ್ನರಾಗಿದ್ದೇವೆ . ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಭಕ್ಕೆ ಜಿಗಿಯಲು ಆಗಲೇ ಸ್ಪರ್ಧೆ ಶುರುವಾಗಿದೆ. ತಂತ್ರಜ್ಞಾನವನ್ನ ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಉಪಗ್ರಹಗಳನ್ನ ಬಾನಿನಂಗಳಕ್ಕೆ ಬಿಡುವುದು ನಮಗೆಲ್ಲ ತಿಳಿದಿರುವ ವಿಷಯವಾಗಿದೆ . ಭಾರತ ಈ ಓಟದಲ್ಲಿ ಮುಂಚೂಣಿಯಲ್ಲಿದೆ. 2018 ಭಾರತದ ಪಾಲಿಗೆ ಮರೆಯಲಾಗದ ವರ್ಷ ಅದಕ್ಕೆ ಕಾರಣ ಭಾರತ ಹೀಗೆ ನಭಕ್ಕೆ ಸೇರಿಸಿದ ಉಪಗ್ರಹಗಳ ಸಂಖ್ಯೆ ನೂರರ ಗಡಿ ದಾಟಿದೆ. ಎಂದಿನಂತೆ ಯಾವುದು ಸುದ್ದಿಯಾಗಿ ಪ್ರಚಾರ ಪಡೆಯಬೇಕಿತ್ತು ಅದು ಆಗಿಲ್ಲ. ಇರಲಿ ಭಾರತ ಇಂದು ಕೇವಲ ತನ್ನ ಉಪಗ್ರಹಗಳನ್ನ ಮಾತ್ರ ಆಕಾಶಕ್ಕೆ ಚಿಮ್ಮಿ ಬಿಡುತ್ತಿಲ್ಲ. ಜಗತ್ತಿನ ಅತ್ಯಂತ ಮುಂದುವರಿದ ದೇಶಗಳು ಎಂದು ಹೆಸರು ಮಾಡಿರುವ ದೇಶಗಳು ಕೂಡ ಭಾರತದ ಮುಂದೆ ಬಂದು ತನ್ನ ಉಪಗ್ರಹವನ್ನ ಉಡಾವಣೆ ಮಾಡಿ ಎಂದು ಕೇಳಿಕೊಳ್ಳುತ್ತಿವೆ. ಹೀಗೆ 2018 ಸೆಪ್ಟೆಂಬರ್ನಲ್ಲಿ ಇಂಗ್ಲೆಂಡ್ನ ಎರಡು ಉಪಗ್ರಹಗಳನ್ನ ಕೂಡ ಭಾರತ ಕಕ್ಷೆಗೆ ಸೇರಿಸಿದೆ . ಇದೊಂದು ಅತ್ಯಂತ ನಿಪುಣತೆ ಬೇಡುವ ವಿಷಯ . ಗಮನಿಸಿ ಬಾಹ್ಯಾಕಾಶಕ್ಕೆ ಉಪಗ್ರಹ ಉಡಾವಣೆ ಮಾಡುವ ವ್ಯಾಪಾರ 335 ಬಿಲಿಯನ್ ಡಾಲರ್ ಮುಟ್ಟಿದೆ . ಅಂದರೆ ಹತ್ತಿರತ್ತಿರ 25 ಲಕ್ಷ ಕೋಟಿ ವ್ಯಾಪಾರ ಎಂದರೆ ಇದೆಷ್ಟು ದೊಡ್ಡದು ಎನ್ನುವುದರ ಅರಿವಾದೀತು. ಇಷ್ಟೊಂದು ದೊಡ್ಡ ವ್ಯಾಪಾರ ಅಂದ ಮೇಲೆ ಹಿರಿಯಣ್ಣ ಅಮೇರಿಕಾ, ಹಿರಿಯಣ್ಣನಾಗಲು ಹೆಬ್ಬಯಕೆ ಹೊಂದಿ ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಚೀನಾ ಸುಮ್ಮನೆ ಕೂರುತ್ತಾರೆಯೇ ? ಅದರಲ್ಲೂ ಭಾರತವನ್ನ ತನ್ನ ತೀವ್ರ ಪ್ರತಿಸ್ಪರ್ಧಿ ಎಂದು ಭಾವಿಸಿರುವ ಚೀನಾ ಇಷ್ಟೊಂದು ದೊಡ್ಡ ವ್ಯಾಪಾರವನ್ನ ನೋಡುತ್ತಾ ಭಾರತ ಆಗಲೇ ಈ ಸ್ಪರ್ಧೆಯಲ್ಲಿ ದಾಪುಗಾಲು ಇಡುತ್ತಿರುವುದನ್ನ ಸಹಿಸಿತೇ ?
ಮೂರು ವರ್ಷದ ಹಿಂದೆ ಚೀನಾ ಲ್ಯಾಂಡ್ ಸ್ಪೇಸ್ ಎನ್ನುವ ಖಾಸಗಿ ಸಂಸ್ಥೆಯನ್ನ ಹುಟ್ಟು ಹಾಕುತ್ತದೆ. ಈ ಸಂಸ್ಥೆಯ ಉದ್ದೇಶ ನಮ್ಮ ಇಸ್ರೋ ಸಂಸ್ಥೆಯಂತೆ ತನ್ನ ಮತ್ತು ಇತರ ದೇಶದ ಉಪಗ್ರಹಗಳ ಕಕ್ಷೆಗೆ ಸೇರಿಸುವುದು ಆ ಮೂಲಕ ತನ್ನ ದೇಶಕ್ಕೆ ಆದಾಯದ ಜೊತೆಗೆ ಕೀರ್ತಿಯನ್ನ ಕೂಡ ತಂದು ಕೊಡುವುದು . ಹೀಗೆ ಕಳೆದ ಮೂರು ವರ್ಷಗಳಿಂದ ಸತತವಾಗಿ ಶ್ರಮಿಸುತ್ತಾ ಬಂದ ಲ್ಯಾಂಡ್ ಸ್ಪೇಸ್ ಕಳೆದ ಶನಿವಾರ ಅಂದರೆ 27-10-2018 ರಂದು ತನ್ನ ಪ್ರಥಮ ಉಡಾವಣೆಯಲ್ಲಿ ಸೋತಿದೆ . “Zhuque-1” ಎನ್ನುವ ಹೆಸರಿನ ಈ ವಾಹನವನ್ನ ಚೀನಾದ ವಾಂಗ್ಸೂ ಎನ್ನುವ ಪ್ರದೇಶದಲ್ಲಿರುವ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾಯಿಸುವಲ್ಲಿ ವಿಫಲವಾಗಿದೆ. ಚೀನಾದಲ್ಲಿ ಈ ರೀತಿಯ ಮತ್ತೊಂದೆರಡು ಸಂಸ್ಥೆಗಳಿವೆ ಆದರೆ ಅವಕ್ಕೂ ಕೂಡ ಇಲ್ಲಿಯ ತನಕ ಗೆಲುವಿನ ರುಚಿ ಮಾತ್ರ ಸಿಕ್ಕಿಲ್ಲ.
ಗಮನಿಸಿ ನೋಡಿ ಒಮ್ಮೆ ಇಂತಹ ಪ್ರಯತ್ನದಲ್ಲಿ ಸೋತರೆ ಪೋಲಾಗುವುದು ಕೋಟ್ಯಂತರ ಹಣವಷ್ಟೇ ಅಲ್ಲ, ವರ್ಷಗಟ್ಟಲೆ ಶ್ರಮ ವಹಿಸಿ ದುಡಿದ ವಿಜ್ಞಾನಿಗಳ ಮನೋಬಲ ಕೂಡ ಒಂದಷ್ಟು ಮಟ್ಟಿಗೆ ಕುಸಿಯುತ್ತದೆ. ಚೀನಾ ಜಗತ್ತಿನ ಎಲ್ಲಾ ರಾಷ್ಟ್ರಗಳನ್ನ ಕಬಳಿಸಲು ತನ್ನದೇ ಅದ ಹೊಸ ಸಮರವನ್ನ ಸಾರಿದೆ. ಅಂತರರಾಷ್ಟ್ರೀಯ ರಾಜಕೀಯದಲ್ಲಿ ಅದು ಸಿದ್ದ ಹಸ್ತವೆನಿಸಿದೆ. ಮದ್ದು ಗುಂಡು ಸಿಡಿಸದೆ ಜಗತ್ತಿನ ದೇಶಗಳನ್ನ ತನ್ನ ಸಾಮಂತ ದೇಶಗಳನ್ನಾಗಿ ಮಾಡಿಕೊಳ್ಳುವುದು ಆ ಮೂಲಕ ಜಗತ್ತಿನ ಹಿರಿಯಣ್ಣನಾಗುವುದು ಚೀನಾದ ಉದ್ದೇಶ. ಇದಕ್ಕಾಗಿ ಅದು ಹಣೆದಿರುವುದು ಸಾಲದ ಬಲೆ. ಚೀನಾದ ಹಣಿದಿರುವ ಈ ಬಲೆಯಲ್ಲಿ ಆಗಲೇ ಜಗತ್ತಿನ ಐವತ್ತಕ್ಕೂ ಹೆಚ್ಚು ದೇಶಗಳು ಸಿಕ್ಕಿವೆ. ಭಾರತ ದೇಶದ ಸುತ್ತಮುತ್ತಲಿನ ದೇಶಗಳನ್ನೂ ಹೀಗೆ ತನ್ನ ಹಿಡಿತಕ್ಕೆ ತೆಗೆದುಕೊಂಡು ಭಾರತವನ್ನ ತನ್ನಿಚ್ಚೆಗೆ ತಕ್ಕಂತೆ ಕುಣಿಸುವುದು ಚೀನಾದ ಇನ್ನೊಂದು ಮಹೋದ್ದೇಶ. ಶ್ರೀಲಂಕಾ ದೇಶದಲ್ಲಿ ಎರಡು ದಿನಗಳ ಹಿಂದಷ್ಟೇ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಇದರ ಹಿಂದಿನ ಶಕ್ತಿ ಡ್ರಾಗನ್ ಎನ್ನವುದನ್ನ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲವಷ್ಟೆ ?
ಭಾರತವನ್ನ ಮಣಿಸುವುದು ಅದೂ ನೇರ ಹೋರಾಟದಲ್ಲಿ ಅಷ್ಟು ಸುಲಭವಲ್ಲ ಎನ್ನುವುದು ಚೀನಾಗೆ ತಿಳಿದ ವಿಷಯ . ಹೀಗಾಗಿ ಅದು ಬೇರೆಯ ದಾರಿಯನ್ನ ಹುಡಕುತ್ತದೆ. ಗಮನಿಸಿ ನೋಡಿ ಭಾರತದ ಪ್ರಧಾನ ಮಂತ್ರಿಗಳು 2014 ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೆ ಅಂದರೆ ಜಪಾನ್ ಭೇಟಿಯವರೆಗೆ ನಲವತ್ತು ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ ಇಂತಹ ಪ್ರಯಾಣದಲ್ಲಿ ೫೮ ದೇಶಗಳ ಭೇಟಿ ನೀಡಿದ್ದಾರೆ. 28-10-2018 ರ ಜಪಾನ್ ಭೇಟಿಯಂತೂ ಚೀನಾ ದೇಶವನ್ನ ಒಂದಷ್ಟು ಹಂತಕ್ಕೆ ತಹಬದಿಗೆ ತರಲು ಅತ್ಯಂತ ಅವಶ್ಯಕ. ಚೀನಾ ಜಗತ್ತಿನ ಸಣ್ಣ ಪುಟ್ಟ ದೇಶಗಳನ್ನ ತನ್ನ ಸಾಲದ ಖೆಡ್ಡಾದಲ್ಲಿ ಕೆಡವಿ ಅವುಗಳನ್ನ ತನ್ನ ಇಚ್ಚೆಯಂತೆ ಕುಣಿಸುತ್ತಿರುವ ಈ ಸಮಯದಲ್ಲಿ ಪ್ರಧಾನ ಮಂತ್ರಿಯವರ ಈ ರೀತಿಯ ರಾಜಕೀಯ ನೆಡೆ ಅತ್ಯಂತ ಶ್ಲಾಘನೀಯ. ಅದರಲ್ಲೂ ಜಪಾನ್ ನೊಂದಿಗೆ ಆಪ್ತ ಮಿತ್ರ ಎನ್ನುವ ಪಟ್ಟ ಪಡೆಯಲು ಪಟ್ಟ ಶ್ರಮ ಸಾರ್ಥಕ. ಜಪಾನ್ ಭೂಪಟದಲ್ಲಿ ಅತ್ಯಂತ ಸಣ್ಣ ದೇಶ ಆದರೆ ಅದು ಚೀನಾ ದೇಶದ ಪಕ್ಕೆಯಲ್ಲಿ ನಡುಕ ಹುಟ್ಟುವಷ್ಟು ಬಲಶಾಲಿ ಎನ್ನುವುದನ್ನ ಮರೆಯಬಾರದು. ಇನ್ನು ಅಮೇರಿಕಾ ದೇಶಕ್ಕೂ ಚೀನಾ ಈ ರೀತಿಯಲ್ಲಿ ಪ್ರಭಲ ಶಕ್ತಿಯಾಗಿ ಹೊರಹೊಮ್ಮುವುದು ಬೇಕಿಲ್ಲ. ಸಮಯಸಾಧಕ ಅಮೇರಿಕಾ ಭಾರತಕ್ಕೆ ಬೇಕಾದ ಸಹಾಯವನ್ನ ಖಂಡಿತ ಮಾಡುತ್ತದೆ.
ಒಟ್ಟಿನಲ್ಲಿ 2018 ಅಕ್ಟೋಬರ್ ಭಾರತದ ಪಾಲಿಗೆ ಖುಷಿಯ ತಿಂಗಳು. ರಾಜತಾಂತ್ರಿಕ ಗೆಲುವನ್ನ ಪ್ರಧಾನ ಮಂತ್ರಿಯವರು ಹೋದಲ್ಲೆಲ್ಲ ದಾಖಲಿಸುತ್ತ ಬರುತ್ತಿದ್ದಾರೆ. ಅಸಲಿ ಪದಾರ್ಥಗಳ ನಕಲಿ ಮಾಡುವುದರಲ್ಲಿ ಸಿದ್ಧಹಸ್ತ ಚೀನಾ ಉಪಗ್ರಹ ಉಡಾವಣೆಯಲ್ಲಿ ಸೋತಿದೆ. ಎಲ್ಲಕ್ಕೂ ಹೆಚ್ಚು ಅದನ್ನ ಭಾದಿಸುತ್ತಿರುವ ವಿಷಯ ವೈಫಲ್ಯಕ್ಕೆ ಕಾರಣವನ್ನ ಅವರ ವಿಜ್ಞಾನಿಗಳು ಇನ್ನು ಪತ್ತೆ ಹಚ್ಚಿಲ್ಲ. ನಮ್ಮ ಇಸ್ರೋ ಕೂಡ ವೈಫಲ್ಯದ ನಂತರವೇ ಜಯದ ಹಾದಿ ಹಿಡಿದಿದೆ. ಆದರೆ ನಮ್ಮ ವಿಜ್ಞಾನಿಗಳಿಗೆ ವೈಫಲ್ಯಕ್ಕೆ ಕಾರಣ, ಅಥವಾ ಇದು ವಿಫಲವಾಗಬಹದು ಎನ್ನವುದರ ನಿಖರತೆ ಇತ್ತು.
ಜಗತ್ತಿನ ಮುಂದೆ ಚೀನಾ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ನೆಡೆದುಕೊಳ್ಳಬಹದು ಆದರೆ ಚೀನಾದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿರುವುದಂತೂ ನಿಜ. ಮುಂದಿನ ಐದು ವರ್ಷದಲ್ಲಿ ಜಗತ್ತು ಬದುಕುವ ರೀತಿ ಬದಲಿಸುವ ನಭಕ್ಕೆ ಜಿಗಿಯುವ ಆಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರತದ ಇಂದಿನ ಸರಕಾರ ಇಸ್ರೋ ವಿಜ್ಞಾನಿಗಳ ಪಾಲಿಗೆ ಅಭಯ ಹಸ್ತ ನೀಡಿ ನಿಂತಿದೆ . ಚೀನಾ ‘ಪ್ರಥಮ ಚುಂಬನಂ ದಂತ ಭಗ್ನಂ’ ಎನ್ನುವಂತೆ ನಿರಾಸೆಯನ್ನ ಅನುಭವಿಸಿದೆ.
ಎರಡು ವರ್ಷದ ಹಿಂದೆ ಜಗತ್ತಿನ ಹೊಂಕರಿಸುತಿದ್ದ ಡ್ರಾಗನ್ ಆರ್ಭಟ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿವೆ . ಆದರೆ ಡ್ರಾಗನ್ ಅಷ್ಟು ಸಲುಭವಾಗಿ ಸೋಲೊಪ್ಪುತ್ತದೆಯೇ ? ನಭಕ್ಕೆ ಚಿಮ್ಮುವ ಹೊಸ ಹಣಕಾಸಿನ ಆಟದಲ್ಲಿ ರಷ್ಯಾ, ಅಮೇರಿಕಾ, ಚೀನಾ ದೇಶಗಳು ಭಾರತವನ್ನ ನಾಯಕನೆಂದು ಸುಲಭವಾಗಿ ಒಪ್ಪಿಕೊಳ್ಳುತ್ತವೆಯೇ ? ಎನ್ನುವುದು ಪ್ರಶ್ನೆ. ಆದರೆ ಸದ್ಯದ ಮಟ್ಟಿಗಂತೂ ಭಾರತ ಈ ಎಲ್ಲಾ ದೇಶಗಳಿಗಿಂತ ಒಂದು ಹೆಜ್ಜೆ ಮುಂದಿರುವುದು ಸ್ಪಷ್ಟ. ನಾಯಕನಾದವನಲ್ಲಿ ನಿಖರತೆ, ಸ್ಪಷ್ಟತೆ ಇದ್ದರೆ ಉಳಿದದ್ದು ಸಾಧಿಸುವುದು ಅಸಾಧ್ಯವೇನಲ್ಲ.
✍️ ರಂಗಸ್ವಾಮಿ ಮೂಕನಹಳ್ಳಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.