“ಬೆಳೆಯುತ್ತಿರುವ ಯುವ ದೇಶ” ಭಾರತ ಎಂಬುದು ನಮಗೆಲ್ಲ ತುಂಬಾ ಹೆಮ್ಮೆ ಇದೆ. ಅತಿ ವೇಗವಾಗವಾಗಿ ಬೆಳೆಯುತ್ತಿರುವ ,ಅಭಿವೃದ್ಧಿ ಹೊಂದುತ್ತಿರುವ ದೇಶ ನಮ್ಮದು. ಇದಕ್ಕೆ ಪೂರಕವಾಗಿ ಕಾರ್ಖಾನೆಗಳು, ಮೂಲಸೌಕರ್ಯ, ಯೋಜನೆಗಳು, ಮಾಹಿತಿ ತಂತ್ರಜ್ಞಾನ , ಆರೋಗ್ಯ ವ್ಯವಸ್ಥೆ ಹಾಗೂ ಇತರೆ ಕಾರ್ಯಗತವಾಗುತ್ತಿವೆ. ದೇಶದ ಸುಮಾರು 60 ಕೋಟಿಗಿಂತ ಹೆಚ್ಚು ಜನಸಂಖ್ಯೆ 25 ರಿಂದ 45 ವರ್ಷದ ಒಳಗಿನವರಾಗಿದ್ದು, ಮೇಲೆ ತಿಳಿಸಿದ ಎಲ್ಲ ಯೋಜನೆಗಳಲ್ಲಿ ಹೆಗಲು ನೀಡಿ, ದೇಶದ ಆರ್ಥಿಕತೆಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ತಯಾರಾಗಿ ನಿಂತಿದ್ದಾರೆ .ಆದರೆ ದೇಶಕ್ಕಾಗಿ ಬೆಳೆಯುವವರು ಯಾರು ಅಂದರೆ ಕೃಷಿಕರು.
ಈಗೇಕೆ ಈ ಪ್ರಶ್ನೆ?
ಹೆಚ್ಚು ಇಳುವರಿ, ಹೆಚ್ಚು ಲಾಭ ಅಂದುಕೊಂಡು ಕೃಷಿಕರು ಆಧುನಿಕ ರಾಸಾಯನಿಕ ಕೃಷಿಯನ್ನು ಅವಲಂಬಿಸಿದರಲ್ಲಿ ತಪ್ಪೇನು ಇಲ್ಲ. ಮೊದ- ಮೊದಲ ಎಲ್ಲಾ ಸರಿಯಾಗಿತ್ತು ಆದರೆ ದಿನ ಕಳೆದಂತೆ ನಿರಂತರ ರಾಸಾಯನಿಕ ಗೊಬ್ಬರಗಳ ಉಪಯೋಗದಿಂದ, ಭೂಮಿಯು ಕ್ಷಾರವಾಗಿ ಬೆಳೆಯ ಇಳುವರಿ ಕುಂಠಿತವಾಗುತ್ತಿದೆ. ರಸಗೊಬ್ಬರ, ಬೀಜ, ಕೀಟನಾಶಕ , ಕಳೆನಾಶಕ, ಯಂತ್ರೋಪಕರಣಗಳ ಬಾಡಿಗೆ, ಆಳುಗಳ ಕೂಲಿ ಎಲ್ಲಾನು ಹೆಚ್ಚಾಗಿದ್ದು, ಹಾಕಿದ ಬಂಡವಾಳವು ಸಿಗದೆ, ಗಾಯದ ಮೇಲೆ ಬರೆ ಎಳೆದಂತೆ ಜಾಗತಿಕ ತಾಪಮಾನದಿಂದ ಆಗುತ್ತಿರುವ ವಾತಾವರಣದ ಏರುಪೇರುಗಳಿಂದ(ಅತಿವೃಷ್ಟಿ ಅನಾವೃಷ್ಟಿ) ಕೆಲವೊಮ್ಮೆ ಸಂಪೂರ್ಣ ಬೆಳೆ ನಾಶವಾಗುತ್ತಿವೆ. ಇದರಿಂದ ರೈತನು ಅತಿ ಸಂಕಷ್ಟದಲ್ಲಿ ಇದ್ದಾನೆ. ದಿನೇ ದಿನೇ ಸಾಲದ ಬಾಧೆ ಹೆಚ್ಚಾಗುತ್ತಿದ್ದು ರೈತ ಹೈರಾಣ ಆಗಿದ್ದಾನೆ. ಇದನ್ನು ಕಂಡು ಗ್ರಾಮೀಣ ಪ್ರದೇಶದ ಯುವಕರು ದೂರ ದೂರದ ಊರುಗಳಿಗೆ ಜೀವನೋಪಾಯ ಮಾರ್ಗವನ್ನು ಅರಸುತ್ತಾ ವಲಸೆ ಹೋಗುತ್ತಿದ್ದಾರೆ. ಗ್ರಾಮಗಳಲ್ಲಿ ಮೇಲ್ಮದ್ಯಮ ವಯಸ್ಸಿನವರು ಹಾಗೂ ವೃದ್ಧರು ಮಾತ್ರ ಈಗ ಕಾಣಸಿಗುತ್ತಾರೆ. ಹೀಗೆ ಮುಂದುವರೆದರೆ ಇನ್ನೂ ಕೆಲವೇ ವರ್ಷಗಳಲ್ಲಿ ಕೃಷಿ ಮಾಡುವವರು ಇಲ್ಲದಂತಾಗುತ್ತದೆ. ದೇಶದ ಆಹಾರ ಸುಭದ್ರತೆಯ ಗತಿಯೇನು?. ಕಾಪಾಡುವವರು ಯಾರು?.
ಅನ್ಯ ಮಾರ್ಗವಿದೆಯೆ?
ಖಂಡಿತವಾಗಿ!
ಒಂದು ನಾಟಿ ಹಸುವಿನ ಸಗಣಿ, ಗಂಜಲದಿಂದ 30 ಎಕರೆ ಸಮೃದ್ಧ, ಲಾಭದಾಯಕ ಕೃಷಿಯನ್ನು ಮಾಡಬಹುದು. ಇದು ಸ್ವಯಂ ಘೋಷಿ, ಸ್ವಯಂ ಅಭಿವೃದ್ಧಿ, ಸ್ವಾವಲಂಬಿ ಕೃಷಿ ಪದ್ಧತಿಯಾಗಿದ್ದು, ವಿಷಮುಕ್ತ ಬೆಳೆ ಬೆಳೆದು, ರೈತನು ಋಣಮುಕ್ತನಾಗಿ , ಹೆಚ್ಚು ಲಾಭವನ್ನು ಪಡೆದು, ಸಮಾಜದಲ್ಲಿ ಎಲ್ಲರಂತೆ ಸ್ವಾಭಿಮಾನದಿಂದ ಬದುಕ ಬಹುದು. ನೈಸರ್ಗಿಕ ಕೃಷಿಯ ಪದ್ಧತಿಯ ನಾಲ್ಕು ಚಕ್ರಗಳು– ಬೀಜಾಮೃತ, ಜೀವಾಮೃತ, ಹೊದಿಕೆ ಹಾಗೂ ಆರ್ದ್ರತೆ ಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಚಾಚು ತಪ್ಪದೆ ತಮ್ಮ ಕೃಷಿ ಭೂಮಿಗಳಲ್ಲಿ ಅಳವಡಿಸಿ, ಸಮೃದ್ಧ ಬೆಳೆ ಬೆಳೆದು, ಹೆಚ್ಚು ಲಾಭವನ್ನು ಪಡೆಯಬಹುದು . ಈ ಕೃಷಿ ಪದ್ಧತಿಯನ್ನು ಕರ್ನಾಟಕದಾದ್ಯಂತ ಹಾಗೂ ದೇಶದ ಇತರ ಭಾಗಗಳಲ್ಲಿ ರೈತರು ಅಳವಡಿಸಿ ಯಶಸ್ವಿಯಾಗಿದ್ದಾರೆ.
ಎಲ್ಲಾ ಹಾಕಿ ಏನು ಇಲ್ಲ! ಅಂತದ್ರಲ್ಲಿ ಏನು ಹಾಕದೆ ಎಲ್ಲಾ ಬೆಳೆಯಲು ಸಾಧ್ಯವೇ? ಈ ಪ್ರಶ್ನೆ ಹಾಗೂ ಸಂಶಯ ರೈತರನ್ನು ಕಾಡುವುದು ಸಹಜ. ಕೃಷಿ ರೈತರ ಜೀವನದ ಪ್ರಶ್ನೆ. ಹಾಗಾಗಿ ಈ ಸಂಶಯ ಹಾಗೂ ಭಯವನ್ನು ದೂರ ಮಾಡಲು ಕೂಡಿ ಕೃಷಿ ಎಂಬ ಯೋಜನೆಯನ್ನು ರೂಪಿಸಿದ್ದು , ಈ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರೈತರು ಅತಿ ಪ್ರೀತಿಯಿಂದ ಗೋವುಗಳ ರಕ್ಷಣೆಗಾಗಿ ದಾನ ನೀಡಿದ ನಾಟಿ ಹಸು ಹಾಗೂ ಹೋರಿರಗಳನ್ನು,ಗೋ ಸೇವಾ ಗತಿವಿಧಿ, ಬಿಜೆಪಿ ರೈತ ಮೋರ್ಚಾ ಹಾಗೂ ಶೀ ಫಾರ್ ಸೊಸೈಟಿ, ಬೆಂಗಳೂರು ಇವರ ಸಹಯೋಗದಲ್ಲಿ ಕೂನುಬೇವು, ಚಿತ್ರದುರ್ಗದ 4 ರೈತರಿಗೆ ತಲಾ ಒಂದು ನಾಟಿ ಹಸು ಹಾಗೂ ಒಂದು ಹೋರಿಯನ್ನು ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಉಚಿತವಾಗಿ ನೀಡಲಾಗಿದೆ.
ಈ ಯೋಜನೆಯಲ್ಲಿ ಆಕಳನ್ನು ಪಡೆದ ರೈತನ ಜೊತೆಗೆ ಇತರೆ 20 ಆಸಕ್ತ ರೈತರ ಗುಂಪನ್ನು ಮಾಡಿ, ಅವರುಗಳಿಗೆ ನೈಸರ್ಗಿಕ ಕೃಷಿ ಬಗ್ಗೆ ಸಂಪೂರ್ಣ ತಂತ್ರಜ್ಞಾನ , ಮಾಹಿತಿ ಹಾಗೂ ಮಾರ್ಗದರ್ಶನ ನೀಡಿ, ಪ್ರತಿ ರೈತನು ಅವರವರ ಜಮೀನು/ತೋಟದಲ್ಲಿ ಕನಿಷ್ಠ ಅರ್ಧ ಎಕರೆಯಲ್ಲಿ ನೈಸರ್ಗಿಕ ಕೃಷಿ ಅಳವಡಿಸ ಬೇಕು. ಇದರಿಂದ ಈ ಕೃಷಿ ಪದ್ಧತಿಯ ಬಗ್ಗೆ ಸಂಪೂರ್ಣ ಅನುಭವ ದೊರೆತು, ಸರಿ ತಪ್ಪುಗಳನ್ನು ಅರಿತು, ಭಯದಿಂದ ಹೊರ ಬಂದು, ಮುಂದಿನ ದಿನಗಳಲ್ಲಿ ಅವರ ಇಡೀ ಬೆಳೆಗಳಿಗೆ ಅಳವಡಿಸ ಬಹುದು.
ಈ ರೀತಿ ಒಬ್ಬ ರೈತ ಒಂದು ನಾಟಿ ಹಸು ಸಾಕಣೆ ಮಾಡಿ, ಇತರೆ 5-10 ರೈತರಿಗೆ ನೈಸರ್ಗಿಕ ಕೃಷಿಯ ಪರಿಕರಗಳನ್ನು ಮಾಡಿ ನಿಗದಿತ ಬೆಲೆಯಲ್ಲಿ ನೀಡಬಹುದು. ರೈತರಿಂದ ರೈತರಿಗೆ ಗೋದಾನ ನೀಡುವ ಈ ಕಾರ್ಯಕ್ರಮವು, ಜೂನ್ 11 2023ರ ಭಾನುವಾರದಂದು ನಡೆಯಿತು. ಇದರಿಂದ ಆ ರೈತನಿಗೆ ಒಂದು ಉದ್ಯಮವು ಆಗುತ್ತದೆ ಹಾಗೂ ಇತರೆ ರೈತರಿಗೆ ಕೃಷಿ ಸುಲಭವಾಗುತ್ತದೆ. ಇದುವೇ ಕೂಡಿ ಕೃಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.