ಬೆಂಗಳೂರು: ಮೊನ್ನೆ 200 ಯೂನಿಟ್ವರೆಗೆ ವಿದ್ಯುತ್ ಉಚಿತ ಎಂದಿದ್ದ ಕರ್ನಾಟಕ ರಾಜ್ಯದ ಸಿದ್ದರಾಮಯ್ಯ ಸರಕಾರ, ಈಗ 80 ಯೂನಿಟ್ವರೆಗೆ ಎಂದು ಆದೇಶ ಹೊರಡಿಸಿ ಜನವಿರೋಧಿ ನೀತಿ ಪ್ರದರ್ಶಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಮೂರು ಜನವಿರೋಧಿ ನಿರ್ಧಾರಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಬಿಜೆಪಿ ವತಿಯಿಂದ ನಾಳೆ ಮತ್ತು ನಾಡಿದ್ದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಮುಂಚೆ ಮನೆಗಳಲ್ಲಿ ಪ್ರತಿ ತಿಂಗಳು 70 ಯೂನಿಟ್ ವಿದ್ಯುತ್ ಬಳಸುತ್ತಿದ್ದರೆ 80 ಯೂನಿಟ್ ಬಳಸಿ. ಆದರೆ, ಯಾವುದೇ ಕಾರಣಕ್ಕೂ 80 ಯೂನಿಟ್ ಮೀರುವಂತಿಲ್ಲ ಎಂದು ಶರ್ತ ಅಥವಾ ನಿರ್ಬಂಧವನ್ನು ಕರ್ನಾಟಕ ಸರಕಾರ ಹಾಕಿದೆ. ಹಾಗಿದ್ದರೆ ಈ ಹಿಂದೆ 200 ಯೂನಿಟ್ ಎಂದಿದ್ದೀರಲ್ಲವೇ? ಆ ಮಾತನ್ನು ನಡೆಸಿಕೊಡದೆ ಮಾತು ತಪ್ಪಿದವರು ಅಥವಾ ವಚನಭ್ರಷ್ಟತೆ ಆದಂತಲ್ಲವೇ? ಎಂದು ಕೇಳಿದರು.
ವಿದ್ಯುತ್ ಶುಲ್ಕವನ್ನೂ ಏರಿಸಿದ್ದೀರಿ. ಒಂದು ಯೂನಿಟ್ಗೆ 70 ಪೈಸೆ ಹೆಚ್ಚಿಸಲಾಗಿದೆ. ಅಂದರೆ 80 ಯೂನಿಟ್ಗೆ 56 ರೂ. ಹೆಚ್ಚಿಸಿದಂತಾಗಿದೆ. ಒಂದು ಸಾವಿರ ಯೂನಿಟ್ ಬಳಸುತ್ತಿದ್ದರೆ, 500, 300 ಯೂನಿಟ್ ಉಪಯೋಗಿಸಿದ್ದರೆ ಆ ಮೊತ್ತ ಉಚಿತ ಕೊಡಲು ಬಂದಂತಾಯಿತು. ಹಾಗಿದ್ದರೆ ಸರಕಾರ ಮಾಡಿದ್ದೇನು? ಸರಕಾರ ಒಂದೆಡೆ ಉಚಿತ ಎನ್ನುತ್ತದೆ; ಅದೇರೀತಿಯಲ್ಲಿ ಶುಲ್ಕ ಹೆಚ್ಚಿಸಿ ಜನರಿಂದಲೇ ಮತ್ತೆ ವಸೂಲಾತಿ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹೆಚ್ಚಿಸಿದ 70 ಪೈಸೆ ದರವನ್ನು ವಾಪಸ್ ಪಡೆಯಲು ಆಗ್ರಹಿಸುತ್ತದೆ ಎಂದು ತಿಳಿಸಿದರು.
ಹಾಲಿನ ಪ್ರೋತ್ಸಾಹಧನವನ್ನು ಪ್ರತಿ ಲೀಟರ್ಗೆ 5 ರೂಪಾಯಿಗೆ ಬಿಜೆಪಿ ಸರಕಾರ ಹೆಚ್ಚಿಸಿತ್ತು. ಅದನ್ನು 1.5 ರೂ. ಕಡಿಮೆ ಮಾಡಿದ್ದೀರಿ. ಇದರಿಂದ ಸರಕಾರಕ್ಕೆ ಹಣ ಉಳಿತಾಯ ಆಗುತ್ತಿದೆ. ಹಾಗಿದ್ದರೆ ನೀವು ಬಡವರಿಗೆ ಏನು ಸಹಾಯ ಮಾಡಿದಂತಾಯಿತು? ಬಡವರಿಗೆ ಹೇಗೆ ನೆರವಾದಂತಾಯಿತು? ಎಂದು ಕೇಳಿದರು. ಹಾಲು ಉತ್ಪಾದನೆಯಿಂದ ಜೀವನ ಮಾಡುವ ಲಕ್ಷಾಂತರ ಕುಟುಂಬಗಳು ಕರ್ನಾಟಕದಲ್ಲಿವೆ. ಅವರಿಗೆ ಸಹಾಯ ಮಾಡಬೇಕೆಂಬ ದೃಷ್ಟಿಯಿಂದ ನಾವು ಪ್ರೋತ್ಸಾಹಧನವನ್ನು 5 ರೂಪಾಯಿಗೆ ಹೆಚ್ಚಿಸಿದ್ದೆವು ಎಂದು ವಿವರಿಸಿದರು. ಹಾಲು ಉತ್ಪಾದಕರಿಗೆ ದೊಡ್ಡ ಹೊಡೆತ ಇದು. ಇದನ್ನು ಬದಲಿಸಿ ಹಿಂದಿನಂತೆ ಪ್ರೋತ್ಸಾಹಧನ ಕೊಡಲು ಆಗ್ರಹಿಸಿದರು.
ನೂತನ ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರು ಒಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಸರಕಾರ ಈ ಹಿಂದೆ ಜಾರಿ ಮಾಡಿದ್ದ ಗೋಹತ್ಯಾ ನಿಷೇಧ ಕಾನೂನು ಕುರಿತು ಚರ್ಚಿಸಿ ಅದನ್ನು ಹಿಂಪಡೆಯುತ್ತೇವೆ; ಮತ್ತೆ ಗೋಹತ್ಯೆಗೆ ಅವಕಾಶ ಕೊಡುತ್ತೇವೆ; ನಮ್ಮ ಮನೆಯಲ್ಲೇ ವಯಸ್ಸಾದ ಹಸುಗಳಿದ್ದವು. ಅವುಗಳನ್ನು ಹೇಗೆ ರಕ್ಷಿಸುವುದು? ಹೇಗೆ ಸಾಕಲು ಸಾಧ್ಯ? ನಮಗೆ ನಷ್ಟ ಆಗುತ್ತದೆ ಎಂದಿದ್ದಾರೆ. ಅವುಗಳು ಸತ್ತಾಗ ಹೂಳಲೂ ಕಷ್ಟವಾಗುತ್ತಿದೆ. ಆದ್ದರಿಂದ ವಯಸ್ಸಾದ ಗೋವುಗಳನ್ನು ವಧೆ ಮಾಡಲು ಅವಕಾಶ ಕೊಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಟೀಕಿಸಿದರು.
ಹಸುಗಳನ್ನು ನಮ್ಮ ದೇಶದಲ್ಲಿ ಪವಿತ್ರ ಭಾವನೆಯಿಂದ ಪೂಜೆ ಮಾಡುತ್ತಾರೆ. ಮಹಾತ್ಮ ಗಾಂಧಿಯವರು ಕೂಡ ಗೋಹತ್ಯೆ ಮಾಡಬಾರದು ಎಂದಿದ್ದರು. 1948 ಮತ್ತು 1964ರಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದಿತ್ತು. ಇದರಲ್ಲಿ ಎಮ್ಮೆ ಮತ್ತು ಕೋಣಗಳನ್ನು ವಧಿಸಬಹುದೆಂದು ಇದೆ. 1978ರ ಕಾನೂನಿನಲ್ಲಿ ಎತ್ತು ಮತ್ತು ಹೋರಿಗಳನ್ನು, 2020ರ ನಮ್ಮ ಸರ್ಕಾರ ತಂದ ಕಾನೂನಿನಲ್ಲಿ ಗೋಹತ್ಯೆ ಮತ್ತು ಎತ್ತು/ಹೋರಿಗಳನ್ನು ಹತ್ಯೆ ಮಾಡಬಾರದು ಎಂದು ಹೇಳಿವೆ. ಆದರೆ, ಸಿದ್ದರಾಮಯ್ಯ ಸರಕಾರವು ಗೋಹತ್ಯೆ ಅವಕಾಶ ಮಾಡಿಕೊಡಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನು ರದ್ದತಿ ಪ್ರಸಾಪ್ತವನ್ನು ಬಿಜೆಪಿ ಖಂಡಿಸುತ್ತದೆ ಗೋಹತ್ಯಾ ನಿಷೇಧ ಕಾನೂನು ಹಿಂಪಡೆದರೆ ದೊಡ್ಡ ಪ್ರಮಾಣದ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.