ಬೆಂಗಳೂರು: ಆದರಣೀಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಯಶಸ್ವಿ 9 ವರ್ಷಗಳ ಆಡಳಿತ ಮತ್ತು ಸಾಧನೆಗಳ ಕುರಿತು ತಿಳಿಸಲು ಬಿಜೆಪಿ ವತಿಯಿಂದ ಜೂನ್ 30ರವರೆಗೆ ಮಹಾ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಕೇಂದ್ರದ ಬಿಜೆಪಿ ಸರಕಾರವು 9 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ರಾಜ್ಯದ ಆಯ್ದ ಲೋಕಸಭಾ ಸದಸ್ಯರ ಸಭೆ ನಡೆಯಿತು. ಈ ಸಭೆಯ ಬಳಿಕ ಭಗವಂತ ಖೂಬಾ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೇಂದ್ರದಲ್ಲಿ ನರೇಂದ್ರ ಮೋದಿಜಿ ಅವರ ಸರಕಾರವು ಯಶಸ್ವಿಯಾಗಿ ಮತ್ತು ಫಲಪ್ರದವಾಗಿ 9 ವರ್ಷಗಳನ್ನು ಪೂರೈಸಿದೆ. ಇದರ ಅಂಗವಾಗಿ ಇಡೀ ದೇಶಾದ್ಯಂತ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ 9 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಮೂಲಭೂತ ಸೌಕರ್ಯ ಯೋಜನೆಗಳ ಯಶಸ್ವಿ ಅನುಷ್ಠಾನ, ಸಾಮಾಜಿಕ ಸುರಕ್ಷತಾ ಯೋಜನೆಗಳ ಜಾರಿ ಸೇರಿದಂತೆ ಅನೇಕ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಜೂನ್ 30ರವರೆಗೆ ಮಹಾಸಂಪರ್ಕ ಅಭಿಯಾನವನ್ನು ಬಿಜೆಪಿ ಕೈಗೊಂಡಿದೆ ಎಂದರು.
ಈ ಅಭಿಯಾನದಲ್ಲಿ ಲಾಭಾರ್ಥಿಗಳ ಸಮಾವೇಶ ನಡೆಸಲಾಗುವುದು. ಕೇಂದ್ರ ಸರಕಾರದ ಅನುದಾನದಿಂದ ಲೋಕಸಭಾ ಕ್ಷೇತ್ರಗಳಲ್ಲಿ ಕೈಗೊಂಡ ಮೂಲಸೌಕರ್ಯಗಳ ವಿವರ ಕೊಡಲಾಗುವುದು. ಪ್ರಬುದ್ಧರ ಸಭೆ, ವ್ಯಾಪಾರಸ್ಥರ ಸಭೆ, ಯೋಗ ದಿನ ಆಚರಣೆ ಸೇರಿ ಅನೇಕ ಆಯಾಮಗಳಲ್ಲಿ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. 2024ರ ಲೋಕಸಭಾ ಚುನಾವಣಾ ತಯಾರಿ ದೃಷ್ಟಿಕೋನದಿಂದ ಕೆಲಸ ನಿರ್ವಹಿಸಲಾಗುವುದು ಎಂದು ವಿವರಿಸಿದರು.
ಇವತ್ತು ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯ್ದ ಲೋಕಸಭಾ ಸದಸ್ಯರ ಸಭೆ ನಡೆಸಲಾಗಿದೆ. ಈ ವಿಚಾರಗಳ ಚರ್ಚೆ ನಡೆದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಸಂಕಲ್ಪದೊಂದಿಗೆ, ಕಾರ್ಯತಂತ್ರ ಮತ್ತು ಕಾರ್ಯಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
2014ಕ್ಕಿಂತ ಮೊದಲು 10 ವರ್ಷಗಳ ಕಾಲ ಯುಪಿಎ ಆಳ್ವಿಕೆ ಇತ್ತು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಯಾವ ರೀತಿ ಅಭಿವೃದ್ಧಿಗೆ ಹಿನ್ನಡೆ ಆಗಿತ್ತು ಮತ್ತು ಕಳೆದ 9 ವರ್ಷಗಳಲ್ಲಿ ನಾವು ಅಭಿವೃದ್ಧಿಯನ್ನು ಯಾವ ಮಟ್ಟಕ್ಕೆ ಏರಿಸಿದ್ದೇವೆ ಎಂದು ತಿಳಿಸಲಾಗುವುದು. ಭಾರತದ ಜಿಡಿಪಿ 4.8 ಶೇ ಇರುವುದು, ಹಣದುಬ್ಬರವು ಶೇ 6.3 ಇದೆ; ನಿರುದ್ಯೋಗ ಪ್ರಮಾಣ ಶೇ 6.8 ಇದೆ. ಯುಪಿಎ ಕಾಲದಲ್ಲಿ ಜಿಡಿಪಿ- ಹಣದುಬ್ಬರ, ನಿರುದ್ಯೋಗ ಮಟ್ಟವು ಡಬಲ್ ಡಿಜಿಟ್ನಲ್ಲಿತ್ತು. ಈ ಪ್ರಗತಿ ಸಾಧ್ಯವಾಗಲು ನರೇಂದ್ರ ಮೋದಿಜಿ ಅವರ ಸಮರ್ಥ ಆಡಳಿತ, ದಿಟ್ಟ ನಿರ್ಧಾರ ಮತ್ತು ಯೋಜನೆಗಳು ಕಾರಣ ಎಂದು ಜನರಿಗೆ ಮನವರಿಕೆ ಆಗಿದೆ. ಇದನ್ನು ಮತ್ತೊಮ್ಮೆ ಜನರಿಗೆ ತಿಳಿಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ನೂತನ ಸಂಸತ್ ಭವನದ ಉದ್ಘಾಟನೆಗೆ ಹಲವು ವಿರೋಧ ಪಕ್ಷದವರು ಗೈರುಹಾಜರಾಗಿದ್ದರು. ಇದು ಶೋಭೆ ತರುವ ವಿಚಾರವಲ್ಲ. ವಿರೋಧ ಪಕ್ಷದವರು ತಮ್ಮ ವಿರೋಧಕ್ಕೆ ಕಾರಣವನ್ನು ಸಾರ್ವಜನಿಕವಾಗಿ ಹೇಳಲು ಅವರಿಗೆ ವಿಷಯಗಳಿಲ್ಲ ಎಂದು ಟೀಕಿಸಿದರು. ಮೋದಿಯವರ ಉಪಸ್ಥಿತಿಯ ಯಾವುದೇ ಕಾರ್ಯಕ್ರಮ ಇದ್ದರೂ ಅದು ಮೋದಿಮಯ ಆಗುತ್ತಿದೆ. ಇದಕ್ಕೆ ಅವರ ಜನಪ್ರಿಯತೆ ಮತ್ತು ವರ್ಚಸ್ಸೇ ಕಾರಣ ಎಂದು ವಿಶ್ಲೇಷಿಸಿದರು.
ಮೋದಿಜಿ ಅವರ ಜನಪ್ರಿಯತೆ ಮತ್ತು ವರ್ಚಸ್ಸನ್ನು ಸಹಿಸಲು ವಿಪಕ್ಷಗಳಿಗೆ ಆಗುತ್ತಿಲ್ಲ. ಹೀಗಾಗಿ ವಿಪಕ್ಷದವರು ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೈರುಹಾಜರಾಗಿದ್ದರು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕುಸ್ತಿಪಟುಗಳ ವಿಚಾರ ನ್ಯಾಯಾಲಯದಲ್ಲಿದೆ. ಆದರೂ ಅಗತ್ಯ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಂಡಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.