ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಗುರುವಾರ ರಾತ್ರಿ ಬಿಜೆಪಿ ನಾಯಕ ಪಿಪಿಜಿ ಶಂಕರ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಣ್ಣಾಮಲೈ, “ವಲರಪುರಂ ಪಂಚಾಯತ್ ಕೌನ್ಸಿಲ್ ಅಧ್ಯಕ್ಷ ಮತ್ತು ಬಿಜೆಪಿಯ ಎಸ್ಸಿ/ಎಸ್ಟಿ ವಿಭಾಗದ ರಾಜ್ಯ ಖಜಾಂಚಿ ಪಿಪಿಜಿ ಶಂಕರ್ ಅವರನ್ನು ಸಮಾಜ ವಿರೋಧಿಗಳು ಕೊಂದಿದ್ದಾರೆ ಎಂಬ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಯಿತು. ಪೊಲೀಸರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿರುವ ಮುಖ್ಯಮಂತ್ರಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಆದರೂ ಇವರು ನಂಬರ್ 1 ಮುಖ್ಯಮಂತ್ರಿ ಎಂದು ಬಿಂಬಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ” ಎಂದಿದ್ದಾರೆ.
ಜನರ ಪ್ರಾಣ, ಆಸ್ತಿ ರಕ್ಷಣೆ ಮಾಡಬೇಕಾದ ಪೊಲೀಸರೇ ಆಡಳಿತ ಪಕ್ಷದ ಪ್ರಚಾರ ವಿಭಾಗವಾಗಿ ಮಾರ್ಪಟ್ಟಿದ್ದಾರೆ. ಡಿಎಂಕೆ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿಲ್ಲ ಎಂಬುದು ದೈನಂದಿನ ಅಪರಾಧ ಘಟನೆಗಳಿಂದ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ತಪ್ಪಿತಸ್ಥರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅಣ್ಣಾಮಲೈ, ಈ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಪ್ರಕಾರ, ಬಿಜೆಪಿಯ ಎಸ್ಸಿ/ಎಸ್ಟಿ ವಿಭಾಗದ ರಾಜ್ಯ ಖಜಾಂಚಿ ಮತ್ತು ವಲರ್ಪುರಂ ಪಂಚಾಯತ್ ಅಧ್ಯಕ್ಷ ಪಿಪಿಜಿ ಶಂಕರ್ ಅವರನ್ನು ಗುರುವಾರ ರಾತ್ರಿ ಚೆನ್ನೈನ ಹೊರವಲಯದಲ್ಲಿ ದುಷ್ಕರ್ಮಿಗಳ ಗುಂಪು ಹತ್ಯೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.