ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಕ್ಷೇತ್ರದ ಅಂಗ ಸಂಸ್ಥೆಯಾದ ಬಾಜಾಪ ರಾಷ್ಟ್ರೀಯತೆ, ಹಿಂದುತ್ವ,ಸಂಘಟನೆಯ ಆಧಾರದಲ್ಲಿ ಬೆಳೆದು ನಿಂತ ಪಕ್ಷ. ಕೋಟ್ಯಾಂತರ ಕಾರ್ಯಕರ್ತರ ಪಡೆಯನ್ನು ಇಂದು ಸೈದ್ದಾಂತಿಕ ನೆಲೆಗಟ್ಟಿನಲ್ಲಿ, ರಾಷ್ಟ್ರೀಯ ದೃಷ್ಟಿ ಕೋನ, ಸಂಘಟನೆಯ ಆಧಾರದಲ್ಲಿ ಹೊಂದಿರುವ ಬಹುದೊಡ್ಡ ಭಾವನಾತ್ಮಕ ನಂಟಿನ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಪರಿವಾರ ಕ್ಷೇತ್ರ. ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ಮೊದಲು ಎಂಬ ಲಿಖಿತ ನಿಯಮವಿದೆ. ಬಿಜೆಪಿಯಲ್ಲಿ ಅಧಿಕಾರಕ್ಕಿಂತ, ಸ್ವಂತಕ್ಕಿಂತ, ದೇಶಕ್ಕಾಗಿ ದುಡಿಯುವ ದೇವದುರ್ಲಭ ಬಹುದೊಡ್ಡ ಕಾರ್ಯಕರ್ತರ ಪಡೆಯೇ ಇದೆ. ಈ ಕಾರಣಕ್ಕಾಗಿ ಪಕ್ಷಕ್ಕೆ ವ್ಯಕ್ತಿ ಯಾವತ್ತೂ ಶ್ರೇಷ್ಠನಾಗಿ ಕಂಡಿಲ್ಲ. ಪಕ್ಷದಲ್ಲಿ ಅಧಿಕಾರ ಸಿಕ್ಕಿಲ್ಲವೆಂದು ಬೀದಿಯಲ್ಲಿ ಮಾತನಾಡಿದವರಿದ್ದಾರೆ, ಅಧಿಕಾರಕ್ಕಾಗಿ ಪಕ್ಷಕ್ಕೆ ದ್ರೋಹವೆಸಗಿದವರಿದ್ದಾರೆ. ಆದರೆ ಅಪೇಕ್ಷೆ ಇಟ್ಟು ಸಿದ್ದಾಂತಕ್ಕೆ ಎಳ್ಳು ನೀರು ಬಿಟ್ಟ ಕಾರ್ಯಕರ್ತರು ಯಾವತ್ತೂ ಸಾರ್ವಜನಿಕ ಜೀವನದಲ್ಲಿ ತಲೆ ಎತ್ತಿದ ಉದಾಹರಣೆಗಳೇ ಇಲ್ಲ.
2014 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಗದ್ದುಗೆಗೇರಿದ ನರೇಂದ್ರ ಮೋದಿಯವರು ಇಂದು ಜಗತ್ತೇ ಭಾರತದ ಕಡೆ ಮುಖ ಮಾಡುವಂತೆ ಮಾಡಿದ್ದಾರೆ. ಭ್ರಷ್ಟಾಚಾರವನ್ನು ತನ್ನ ಮಂತ್ರಿ ಮಂಡಲದೆಡೆಗೆ ಮುಖ ಮಾಡದಂತೆ ತಡೆದಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ಸಹಬಾಳ್ವೆ ಮೂಡಿಸಿದ್ದಾರೆ. ಹಿಂದೂಗಳ ಅಸ್ಮಿತೆ ಭವ್ಯ ರಾಮಮಂದಿರದ ಕನಸನ್ನು ನನಸು ಮಾಡಿದ್ದಾರೆ. ಎನ್ ಆರ್ ಸಿಯ ಮೂಲಕ ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ಕಡಿವಾಣ ಹಾಕಿ, ದೇಶದ ಸೈನ್ಯದ ವ್ಯವಸ್ಥೆಯನ್ನು ಬಲಪಡಿಸಿರುವುದು, ದೇಶದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ, ಉಗ್ರ ಸಂಘಟನೆಗೆ ಕಡಿವಾಣ, ಬಾಂಬ್ ಸದ್ದುಗಳಿಲ್ಲ, ದೇಶದ್ರೋಹಿ ಸಂಘಟನೆ ಪಿಎಫ್ಐ ನಿಷೇಧ, ಕಾಶಿ ಕಾರಿಡಾರ್ ಯೋಜನೆ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ತಳಮಟ್ಟದಲ್ಲಿ ಶ್ರಮಪಟ್ಟು ಸಾಧನೆಗೈದ ಸಾಧಕರನ್ನು ಪದ್ಮಶ್ರೀ, ಪದ್ಮವಿಭೂಷಣದಂತಹ ಗೌರವ ಸನ್ಮಾನಗಳು ಅರಸಿಕೊಂಡು ಬಂದಿರುವುದು,ದೇಶದ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥ, ಅಷ್ಟಪಥ, ದಶಪಥಗಳಾಗಿ ಮಾರ್ಪಾಡಾಗಿರುವುದು, ಮೂಲಭೂತ ಸೌಕರ್ಯಗಳಿಗೆ ಆಧ್ಯತೆ ಇವೆಲ್ಲವೂ ಬಿಜೆಪಿ ಸರಕಾರದ ಬಹುಮುಖ್ಯ ಸಾಧನೆಗಳು.
ಇನ್ನು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮೇ-10 ರಂದು ನಡೆಯಲಿದೆ. ಕಳೆದ ಬಾರಿಯ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳು, ಹಿಂದುತ್ವ, ರಾಷ್ಟ್ರೀಯತೆ, ಸಂಘಟನೆಯೇ ಈ ಬಾರಿಯ ಚುನಾವಣಾ ವಸ್ತು ವಿಷಯಗಳು.ಡಬ್ಬಲ್ ಇಂಜೀನ್ ಸರ್ಕಾರದ ಹತ್ತು ಹಲವು ಪರಿಣಾಮಕಾರಿ ಯೋಜನೆಗಳನ್ನು ಮುಂದಿಟ್ಟುಕೊಂಡು ಹಾಗೂ ಕೇಂದ್ರದ ನರೇಂದ್ರ ಮೋದಿ ಸರಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಈ ಬಾರಿ ಚುನಾವಣೆ ಎದುರಿಸಲಿದೆ.
ಕಳೆದ ಅವಧಿಯ ಸಿದ್ದರಾಮಯ್ಯ ಸರಕಾರದ ಅಲ್ಪಸಂಖ್ಯಾತರ ತುಷ್ಟಿಕರಣ ನೀತಿ, ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಗಳು, ವಿವಾದಿತ ಟಿಪ್ಪು ಜಯಂತಿ ಬಳಿಕ ನಡೆದ ಗಲಭೆ,ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಕುಮ್ಮಕ್ಕು, ಒಂದು ವರ್ಗದ ಓಲೈಕೆಗಾಗಿ ಹತ್ತಾರು ಭಾಗ್ಯಗಳು, ಕಲ್ಲಡ್ಕ ಶಾಲಾ ಮಕ್ಕಳ ಬಿಸಿಯೂಟಕ್ಕೆ ಕನ್ನ, ಮಂಗಳೂರಿನಲ್ಲಿ ಎನ್ಆರ್ ಸಿ,ಬಿಜೆಪಿ ಯುವಮುಖಂಡ ಪ್ರವೀಣ್ ನೆಟ್ಟಾರ್ ಎಂಬ ಅಮಾಯಕ ಯುವಕನ ಹತ್ಯೆ, ಹಿಂದೂ ಕಾರ್ಯಕರ್ತ ಹರ್ಷ ಶಿವಮೊಗ್ಗ ಹತ್ಯೆ, ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ, ಇವೆಲ್ಲವನ್ನೂ ಬಿಜೆಪಿ ಮನೆ ಮನೆ ಬಾಗಿಲಿಗೆ ತಲುಪಿಸಲು ಈಗಾಗಲೇ ಪ್ಲ್ಯಾನ್ ರೂಪಿಸಿದೆ.
ಪ್ರಮುಖವಾಗಿ ಕರಾವಳಿ ಭಾಗದಲ್ಲಿ ಬಿಜೆಪಿ ಹಿಂದುತ್ವ ಮತ್ತು ಅಭಿವೃದ್ಧಿ, ಸಂಘಟನಾತ್ಮಕ ಆಧಾರದಲ್ಲಿ ಗಟ್ಟಿಯಾಗಿ ತಳವೂರಿದೆ. ಇಲ್ಲಿನ ಮತದಾರರು ಅಭ್ಯರ್ಥಿಗಳ ಬದಲು ಮೊತ್ತ ಮೊದಲು ಪಕ್ಷಕ್ಕೆ, ಸಂಘಟನೆಗೆ ಆದ್ಯತೆ ನೀಡುತ್ತಾ ಬಂದಿರುವುದರಿಂದ ಬಿಜೆಪಿ ಇಲ್ಲಿ ಸತತವಾಗಿ ಗೆಲುವಿನ ನಗೆ ಬೀರುತ್ತಲೇ ಬಂದಿದೆ. ಭವಿಷ್ಯದ ಚಿಂತನೆಯಲ್ಲಿ ಪ್ರವೀಣ್ ನೆಟ್ಟಾರ್, ದೀಪಕ್ ಪೂಜಾರಿ, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳನಂತಹ ಕಾರ್ಯಕರ್ತರ ಹತ್ಯೆ, ಅನ್ಯಾಯ ನೋವು ಇಲ್ಲಿನ ಪ್ರತಿ ಮನೆ ಮನೆಯ ಮತದಾರರ ನೆನಪಿನಂಗಳದಲ್ಲಿದೆ. ಹಾಲು ಮಾರಿ ಜೀವನ ಸವೆಸುವ ಮನೆಮಂದಿಗೇ ತಲುವಾರು ಜಳಪಿಸಿ ಗೋವುಗಳನ್ನು ಹೊತ್ತೊಯ್ದ ನೋವು ಇನ್ನೂ ಕರಾವಳಿಯ ಜನರ ಮನಸ್ಸಿನಲ್ಲಿ ಮಾಸದೇ ಉಳಿದಿದೆ.
✍️ ಸಾಮಾನ್ಯ ಮತದಾರ
ಭರತ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.