ಬೆಂಗಳೂರು: ಅಮೂಲ್ ಜೊತೆ ನಂದಿನಿ ಉತ್ಪನ್ನಗಳನ್ನು ತಯಾರಿಸುವ ಕೆಎಂಎಫ್ ವಿಲೀನ ಪ್ರಸ್ತಾಪವೇ ಇಲ್ಲ ಎಂದು ರಾಜ್ಯದ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿ ಕೌಂಟರ್ಗಳು ಲಕ್ಷಾಂತರ ಇವೆ. ಆನ್ಲೈನ್ ವ್ಯವಸ್ಥೆ ಈಗಲೂ ಇದೆ. ಕೆಎಂಎಫ್ ಭದ್ರ ಬುನಾದಿ ಕರ್ನಾಟಕದಲ್ಲಿದೆ. ಈಗ ಕೊರೆ ಕಾಲ. ಹಾಲು ಉತ್ಪಾದನೆ ಬೇಸಿಗೆ ಕಾಲದಲ್ಲಿ ಕಡಿಮೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.
ಕರ್ನಾಟಕದಲ್ಲಿ 15 ಮಿಲ್ಕ್ ಯೂನಿಯನ್ಗಳಿವೆ. ಎಲ್ಲವೂ ಲಾಭದಲ್ಲಿವೆ. ಕೋವಿಡ್ ವೇಳೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮಿಗತೆ ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಕೊಡಲು ಏರ್ಪಾಡು ಮಾಡಲಾಗಿತ್ತು. ಅದಕ್ಕೆ ಬೇಕಾದ ಹಣವನ್ನು ಕೆಎಂಎಫ್ಗೆ ಕೊಡಲಾಗಿತ್ತು. ಮಿಗತೆ ಹಾಲು ಉಚಿತವಾಗಿ ಕೊಡಲು ಆದೇಶ ಮಾಡಿದ್ದಾಗಿ ವಿವರಿಸಿದರು.
ಕೆಎಂಎಫ್ನ ನಂದಿನಿ ವಿಶ್ವಾದ್ಯಂತ ವಹಿವಾಟು ಹೊಂದಿದೆ. ಕಳೆದ ವರ್ಷ ಡಿಸೆಂಬರ್ 30ರಂದು ಮಂಡ್ಯ ಜಿಲ್ಲೆ ಮದ್ದೂರಿನ ಗೆಜ್ಜಲಗೆರೆಯಲ್ಲಿ ಕೇಂದ್ರದ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ನಂದಿನಿ ಮಾರುಕಟ್ಟೆ ವಿಸ್ತರಣೆ, ತಂತ್ರಜ್ಞಾನ ನೆರವು ಪಡೆಯಲು ಅಮೂಲ್ ಜೊತೆ ಚರ್ಚಿಸಲು ತಿಳಿಸಿದ್ದಾಗಿ ವಿವರಿಸಿದರು.
ನಂದಿನಿ ಸೊಸೈಟಿಗಳು 25- 26 ಲಕ್ಷ ರೈತರಿಂದ ಹಾಲು ಖರೀದಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ನಂದಿನಿ ಉತ್ಪನ್ನವನ್ನೇ ಖರೀದಿ ಮಾಡುತ್ತಾರೆ. ನಂದಿನಿ ಉತ್ಪನ್ನಗಳು ಕರ್ನಾಟಕದಲ್ಲಿ ಭದ್ರವಾಗಿ ಬೆಳೆದಿವೆ. ಯಾರೇ ಸ್ಪರ್ಧೆ ಮಾಡಿದರೂ ಸಮರ್ಥ ಕೆಎಂಎಫ್ ಫೆಡರೇಷನ್, ಇಲ್ಲಿನ ಮಿಲ್ಕ್ ಯೂನಿಯನ್ಗಳ ಜೊತೆ ಸ್ಪರ್ಧೆ ಮಾಡಿ ಗೆಲ್ಲಲು ಅಸಾಧ್ಯ ಎಂದು ನುಡಿದರು.
ಅಮೂಲ್ ಹಾಲನ್ನು ಆನ್ಲೈನ್ ಮೂಲಕ ಲೀಟರ್ಗೆ 57 ರೂ.ಗೆ ಮಾರಾಟ ಮಾಡಿದರೆ, ನಾವು 39 ರೂಗೆ ಮಾರಾಟ ಮಾಡುತ್ತೇವೆ. ತಮಿಳುನಾಡು ಮತ್ತಿತರ ರಾಜ್ಯಗಳಿಗೆ ನಮ್ಮ ಉತ್ಪನ್ನಗಳನ್ನು ಕಳುಹಿಸುತ್ತಿದ್ದೇವೆ ಎಂದು ವಿವರಿಸಿದರು.
ನಂದಿನಿ ಬ್ರ್ಯಾಂಡ್ ಅಳಿಸಲು ಅಸಾಧ್ಯ. ಸರಕಾರದಿಂದ ಗರಿಷ್ಠ ಸಹಕಾರ ನೀಡಲಾಗುತ್ತಿದೆ. ಗುಜರಾತ್ ಮಾದರಿ ಅನುಸರಿಸಿದರೆ ಇನ್ನಷ್ಟು ಬೆಳೆಸಲು ಸಾಧ್ಯ ಎಂಬ ಚಿಂತನೆ ಇದೆ. ಗುಜರಾತ್, ಕರ್ನಾಟಕ ಎರಡೂ ಕಡೆ ಮಿಲ್ಕ್ ಯೂನಿಯನ್ಗಳು ಬಲಾಢ್ಯವಾಗಿವೆ. ಆಂಧ್ರಕ್ಕೆ ಲಾಡು ತಯಾರಿಸಲು ನಮ್ಮ ತುಪ್ಪ ಸರಬರಾಜು ಮಾಡುತ್ತಿದ್ದೇವೆ ಎಂದರು.
ಕೆಎಂಎಫ್ ಬಗ್ಗೆ ತಿಳಿದವರು ಇದರ ಕುರಿತು ತಪ್ಪಾಗಿ ಮಾತನಾಡಲು ಅಸಾಧ್ಯ. ಕರ್ನಾಟಕದಲ್ಲಿ ಭದ್ರ ಬುನಾದಿ ಆ ಸಂಸ್ಥೆಗೆ ಇದೆ. ಅಮೂಲ್ ಸ್ಪರ್ಧೆ ಎದುರಿಸಲು ನಂದಿನಿ ಉತ್ಪನ್ನಗಳು ಅತ್ಯಂತ ಸಮರ್ಥವಾಗಿವೆ. ಬಳ್ಳಾರಿ, ಹಾವೇರಿ, ಮಂಡ್ಯದಲ್ಲಿ ಮೆಗಾ ಡೈರಿ ಆಗಿದೆ. ಚುನಾವಣಾ ರಾಜಕಾರಣ ಮಾಡುತ್ತಿದ್ದಾರೆ. ಕೆಎಂಎಫ್ ಅಭದ್ರತೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಕೃಷ್ಣಪ್ಪನವರ ಕಾಲದಿಂದ ಇವತ್ತಿನವರೆಗೂ ಹಣಕಾಸು ಭದ್ರವಾಗಿದೆ. ಎಲ್ಲ ಮಿಲ್ಕ್ ಯೂನಿಯನ್ಗಳೂ ಲಾಭದಲ್ಲಿವೆ. ಹಾಲು ಮತ್ತು ಹಾಲಿನ ಉತ್ಪನ್ನದ ವಿಚಾರದಲ್ಲಿ ಕೃತಕ ಅಭಾವ ಸೃಷ್ಟಿಸಿಲ್ಲ. ಇದು ವೃಥಾ ಆರೋಪ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ಮಾತನಾಡಿ, ಕೆ.ಎಂ.ಎಫ್ ಸರಿಸುಮಾರು 20 ರಿಂದ 22 ಸಾವಿರ ಕೋಟಿ ವಹಿವಾಟು ನಡೆಸುತ್ತದೆ. ಸಹಕಾರಿ ಇಲಾಖೆ ಒಪ್ಪಿಗೆ ಇಲ್ಲದೆ, ಮಾತುಕತೆ ಇಲ್ಲದೆ ಇನ್ನೊಂದು ರಾಜ್ಯದ ಸಂಸ್ಥೆ ಜೊತೆ ವಿಲೀನ ಅಸಾಧ್ಯ. ಮಹಾಸಭೆಯ ಒಪ್ಪಿಗೆ, ಕ್ಯಾಬಿನೆಟ್ ಒಪ್ಪಿಗೆ ಬೇಕು ಎಂದರು. ಬೆಳವಣಿಗೆಗಾಗಿ ತಂತ್ರಜ್ಞಾನದ ಸಹಕಾರ ಸ್ವಾಗತಾರ್ಹ ಎಂದು ತಿಳಿಸಿದರು.
ಕೆಎಂಎಫ್ ಉತ್ಪಾದನೆಗಳು ದೇಶದ 12 ರಾಜ್ಯಗಳಲ್ಲಿ ಮಾರಾಟ ಆಗುತ್ತಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸಹಜ. ಕನ್ನಡ- ಮಾರವಾಡಿಗಳು ಎಂದು ಶಬ್ದ ಬಳಸಿ ಮಾಜಿ ಸಿಎಂಗಳಾದ ಕಾಂಗ್ರೆಸ್ಸಿನ ಸಿದ್ದರಾಮಯ್ಯ, ಜೆಡಿಎಸ್ನ ಕುಮಾರಸ್ವಾಮಿ ಅವರು ಜವಾಬ್ದಾರಿರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಡಿಕೆ ಶಿವಕುಮಾರ್ ಅವರು ಬಿಜೆಪಿಯವರು ಬಳೆ ತೊಟ್ಟವರು ಎಂದು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಮೀಸೆ ಇದ್ದವರಿಗೆ ಮಾತ್ರ ಬೆಲೆಯೇ? ಸೀರೆ ಉಟ್ಟ ಮಹಿಳೆಯರಿಗೆ ಬೆಲೆಯೇ ಇಲ್ಲವೇ ಎಂದು ಕೇಳಿದರು. ಅವರು ಬೆಳಿಗ್ಗೆ ಈ ಹೇಳಿಕೆ ಕೊಟ್ಟರೇ ಅಥವಾ ಸಂಜೆ ಈ ಹೇಳಿಕೆ ನೀಡಿದ್ದಾರಾ? ಎಂದು ಅಶ್ವತ್ಥನಾರಾಯಣ ಅವರು ಪ್ರಶ್ನಿಸಿದರು.
ಹಾಸನ ಟಿಕೆಟ್ ಗೊಂದಲ ಮುಚ್ಚಿಹಾಕಲು ಎಚ್ಡಿ ಕುಮಾರಸ್ವಾಮಿಯವರು ಅಮೂಲ್- ನಂದಿನಿ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಸಾಮಾನ್ಯ ಜ್ಞಾನದ ಕೊರತೆ ಇದರಲ್ಲಿದೆ. ತಂತ್ರಜ್ಞಾನ ಹಂಚಿಕೆ, ಮಾರುಕಟ್ಟೆ ವಿಸ್ತರಣೆಗೆ ಸಲಹೆ ಪಡೆಯುವುದು ಸಹಜ ಪ್ರಕ್ರಿಯೆ. ಐಟಿಐ, ಎನ್ಜಿಇಎಫ್ ಸೇರಿದಂತೆ ಹಲವು ಸಂಸ್ಥೆಗಳು ಮುಚ್ಚಿಹೋಗಿವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಇದು ಜವಾಬ್ದಾರಿ ಇಲ್ಲದ ಹೇಳಿಕೆಗಳು ಎಂದು ಆರೋಪಿಸಿದರು.
ಸಂಜೆ ಹೇಳಿಕೆ ಕೊಡದಿರಿ. ಬೆಳಿಗ್ಗೆ ಹೇಳಿಕೆ ಕೊಟ್ಟರೆ ಸರಿ ಇರುತ್ತದೆ. ಸಾಮಾನ್ಯ ಜ್ಞಾನದೊಂದಿಗೆ ಮಾತನಾಡಿ ಎಂದು ಕಿವಿಮಾತು ಹೇಳಿದರು.
ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಮಾತನಾಡಿ, ಹೈನೋದ್ಯಮದಲ್ಲಿ ವಿದೇಶಿ ಹೂಡಿಕೆಗೆ ನಮ್ಮ ಕೇಂದ್ರ ಸರಕಾರ ಅವಕಾಶ ನೀಡಿಲ್ಲ. ಚುನಾವಣಾ ಲಾಭಕ್ಕಾಗಿ ಕಾಂಗ್ರೆಸ್- ಜೆಡಿಎಸ್ ನಾಯಕರು ಈ ರೀತಿ ರೈತರ ದಾರಿ ತಪ್ಪಿಸುವ, ಭಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವೀರಪ್ಪ ಮೊಯಿಲಿ ಮಗನ ಹಾಲು ಉತ್ಪನ್ನ ಇದೆ. ಮದ್ದೂರು ಕೆಎಂಎಫ್ ಒಳಗೆ ಜೆಡಿಎಸ್ನವರು ಹಾಲಿಗೆ ನೀರು ಬೆರೆಸಿದ್ದರು. ಆದರೆ, ಈಗ ನಂದಿನಿ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.