News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ದಶಪಥ ಹೆದ್ದಾರಿ ಮೂಲಕ ಬೆಂಗಳೂರು, ಮೈಸೂರಿನ ಸಮಗ್ರ ಅಭಿವೃದ್ಧಿ

ಬೆಂಗಳೂರು: ನಮ್ಮ ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಇದೆ. ನಿರೀಕ್ಷೆಗೂ ಮೀರಿದ ಬೆಂಬಲ ರಥಯಾತ್ರೆಗೆ ಸಿಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್‍ನವರೂ ಯಾತ್ರೆ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯು ನಡ್ಡಾ, ರಾಜನಾಥ ಸಿಂಗ್, ಅಮಿತ್ ಶಾ ಅವರು ಉದ್ಘಾಟಿಸಿದ ರಥಯಾತ್ರೆಗೆ ಅದ್ಭುತ ಜನಬೆಂಬಲ ಸಿಗುತ್ತಿದೆ ಎಂದು ತಿಳಿಸಿದರು.

ನಾಳೆ ನರೇಂದ್ರ ಮೋದಿಯವರು ಆರ್ಥಿಕ ರಾಜಧಾನಿ ಬೆಂಗಳೂರು- ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅಭಿವೃದ್ಧಿಯ ಕನಸು ನನಸಿಗೆ 10 ಪಥಗಳ ಹೈವೇ ಉದ್ಘಾಟಿಸಲಿದ್ದಾರೆ. 9,500 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದರು. ಪೂರಕವಾದ ಟ್ರಾಫಿಕ್ ಸಮಸ್ಯೆ ಅಲ್ಲಿತ್ತು. ಅದನ್ನು ನಿವಾರಿಸಲು ಹೈಸ್ಪೀಡ್ ರೈಲು ಸಂಚಾರ ಆರಂಭ, ರೈಲ್ವೆ ಲೈನ್, ಸ್ಟೇಷನ್‍ಗಳ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು- ಮೈಸೂರು ಹೈವೇ ದಶಕಗಳ ಕನಸು. ಹಿಂದೆ ಪ್ರಧಾನಿಯಾಗಿದ್ದ ದೇವೇಗೌಡರು ಇಂಥ ಕನಸು ಕಂಡಿದ್ದರು. ಆದರೆ, ನೈಸ್ ರಸ್ತೆಯು ಯಶವಂತಪುರ, ಬಿಡದಿಯಿಂದ ಮುಂದೆ ಹೋಗಲೇ ಇಲ್ಲ. ಆಗಲೇ ರಸ್ತೆ ನಿರ್ಮಾಣ ಆಗಿದ್ದರೆ ಮೈಸೂರು ಮತ್ತು ರಸ್ತೆ ಹಾದುಹೋಗುವ ಪ್ರದೇಶಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿದ್ದವು. ಪ್ರಧಾನಿಯವರು 2018ರಲ್ಲಿ ಮೈಸೂರಿಗೆ ಬಂದಾಗ ದಶಪಥ ರಸ್ತೆ ಘೋಷಿಸಿದ್ದರು. ಮರುದಿನವೇ ಕ್ಯಾಬಿನೆಟ್ ಸಬ್ ಕಮಿಟಿಯೂ ಇದಕ್ಕೆ ಅನುಮೋದನೆ ಕೊಟ್ಟಿತು ಎಂದು ತಿಳಿಸಿದರು.

2018 ಮಾರ್ಚ್‍ನಲ್ಲಿ ಇದಕ್ಕೆ ಶಿಲಾನ್ಯಾಸ ನೆರವೇರಿತು. ಡಿ.ವಿ.ಸದಾನಂದಗೌಡರು ಇದರಲ್ಲಿ ಭಾಗವಹಿಸಿದ್ದರು. ಇವತ್ತು ಅದೇ ಪ್ರಧಾನಿಯವರು ಈ ಐತಿಹಾಸಿಕ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಹಿಂದೆ ಕಲ್ಲು ಹಾಕುವುದು, ಶಿಲಾನ್ಯಾಸ ಮಾಡಿದ ಶಿಲೆಗಳೇ ಮಾಯ ಆಗುತ್ತಿದ್ದವು ಎಂದು ತಿಳಿಸಿದರು.

4,428 ಕೋಟಿ ಮೊತ್ತದಲ್ಲಿ ಮೊದಲ ಹಂತ ನಿರ್ಮಾಣವಾಗಿದೆ. 4,500 ಕೋಟಿಯಲ್ಲಿ ಎರಡನೇ ಹಂತ ನಿರ್ಮಾಣಗೊಂಡಿದೆ. ಮೊದಲಿಗೆ ದ್ವಿಪಥ ರಸ್ತೆ ಇತ್ತು. ಸಂಚಾರದ ಸಮಸ್ಯೆ ತೀವ್ರವಿತ್ತು. ಈಗ ಒಂದೂವರೆ ಗಂಟೆಯಲ್ಲಿ ಶ್ರೀರಂಗಪಟ್ಟಣ, ಮೈಸೂರಿಗೆ ತಲುಪಲು ಸಾಧ್ಯವಿದೆ ಎಂದು ವಿವರ ನೀಡಿದರು.

ನರೇಂದ್ರ ಮೋದಿಯವರು ಜನಪ್ರತಿನಿಧಿಯನ್ನು ಗಮನಿಸಿ ಯೋಜನೆ ನೀಡಿಲ್ಲ. ಬೆಂಗಳೂರು- ಮೈಸೂರು ನಡುವೆ ನಮ್ಮ ಶಾಸಕರು ಇಲ್ಲದೇ ಇರಬಹುದು. ಆದರೆ, ಮೋದಿಯವರು ಒಂದೇ ಒಂದು ನಮ್ಮ ಸಂಸದರಿಲ್ಲದ ಕೇರಳಕ್ಕೆ ಯೋಜನೆ ಕೊಟ್ಟ ಮಾದರಿಯಲ್ಲೇ ಅದೇ ಮಾದರಿಯ ಯೋಜನೆಯನ್ನು ಕರ್ನಾಟಕ, ಉತ್ತರ ಪ್ರದೇಶಕ್ಕೆ ಕೊಟ್ಟಿದ್ದಾರೆ. ದೇಶದ ಜೊತೆಗಿರುವ ಎಲ್ಲ ಕೊಂಡಿಗಳಾದ ರಾಜ್ಯಗಳು ಸಶಕ್ತಿಯುತ- ಅಭಿವೃದ್ಧಿಯಿಂದ ಕೂಡಿರಲಿ ಎಂಬ ಆಶಯ ಪ್ರಧಾನಿಯವರದು ಎಂದು ವಿಶ್ಲೇಷಿಸಿದರು.

ಸುಮಾರು 6,500 ಜನರಿಗೆ ಈ ರಸ್ತೆ ಉದ್ಯೋಗ ಕೊಟ್ಟಿದೆ. ಈ ಹೈವೇಯ ಎರಡೂ ಬದಿಗಳಲ್ಲಿ ಕೈಗಾರಿಕಾ ಕಾರಿಡಾರ್ ಅಥವಾ ಮಳಿಗೆಗಳು, ಹೋಟೆಲ್‍ಗಳ ಮೂಲಕ ಉದ್ಯೋಗ ಲಭಿಸುತ್ತವೆ ಎಂದು ಆಶಯ ವ್ಯಕ್ತಪಡಿಸಿದರು. ಪ್ರವಾಸೋದ್ಯಮದಲ್ಲಿ ಉತ್ತುಂಗ ಸ್ಥಿತಿಗೆ ಮೈಸೂರನ್ನು ಒಯ್ಯಲು ಸಾಧ್ಯವಿದೆ ಎಂದರು. ದಸರಾ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ ಎಂದು ನುಡಿದರು. ಪ್ರಧಾನಿಯವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ರಾಜ್ಯದ ಹೈವೇಗಳು, ರೈಲ್ವೆ ನಿಲ್ದಾಣಗಳಿಗೆ ಹಣ ಕೊಡುತ್ತಿದ್ದಾರೆ. ವಿಮಾನನಿಲ್ದಾಣಗಳ ನಿರ್ಮಾಣ ಆಗುತ್ತಿದೆ. ಕುಡಿಯುವ ನೀರು, ವಿದ್ಯುತ್ ಸೇರಿ ಎಲ್ಲ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡುತ್ತಿದ್ದಾರೆ ಎಂದು ಸಂತಸ ಸೂಚಿಸಿದರು.

ದೇಶದಲ್ಲಿ ನಂಬಬಹುದಾದ ನೇತೃತ್ವ ನರೇಂದ್ರ ಮೋದಿಯವರಲ್ಲಿ ಇದೆ. ಯಾರೂ ಪಕ್ಷ ಬಿಡುವುದಿಲ್ಲ. ಕೇಂದ್ರ- ಹಲವಾರು ರಾಜ್ಯಗಳಲ್ಲಿ ಅಸ್ತಿತ್ವವೇ ಇಲ್ಲದ ಇನ್ನೊಂದು ಪಕ್ಷಕ್ಕೆ ಯಾರೂ ಹೋಗುವುದಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಪುಟ್ಟಣ್ಣ ಪಕ್ಷ ತೊರೆಯುತ್ತಿರುವ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಕೈಗೆಟುಕದ ದ್ರಾಕ್ಷಿ ಹುಳಿ ಎಂಬ ಮಾತನ್ನು ನೆನಪಿಸಿದರು. ಅವರೇನೋ ನಿರೀಕ್ಷೆ ಇಟ್ಟು ಬಂದಿರುತ್ತಾರೆ. ಬಿಜೆಪಿಯಲ್ಲಿ ಅವರು ಎಂಎಲ್‍ಸಿಯೂ ಆಗಿದ್ದಾರೆ. ಅದನ್ನು ಅವರು ಮರೆಯಬಾರದು. ಅವರು ಇನ್ಯಾವುದೋ ಲಾಭಕ್ಕಾಗಿ ಪಕ್ಷ ಬಿಟ್ಟಿರಬಹುದು ಎಂದರು.

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ದೇಶದಲ್ಲಿ ಒಂದಾದ ನಂತರ ಒಂದು ರಾಜ್ಯದಲ್ಲಿ ಗೆಲುವು ಸಾಧಿಸುತ್ತಿದೆ. ಒಂದು ಅಭೂತಪೂರ್ವ ವಿಜಯ ಕಳೆದ ವರ್ಷ ಇದೇವೇಳೆಗೆ ಸಿಕ್ಕಿತ್ತು. ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ 2ನೇ ಬಾರಿ ಸರಕಾರ ರಚನೆ ಅವಕಾಶ ಯೋಗಿಯವರಿಗೆ ಸಿಕ್ಕಿತ್ತು. ಮೊನ್ನೆ ಗುಜರಾತ್ ನಲ್ಲಿ ನಡೆದ ಚುನಾವಣೆಯಲ್ಲಿ ಹಿಂದೆ ಮೋದಿಯವರೇ ಸಿಎಂ ಆಗಿದ್ದಾಗ ಸಿಗದ ದೊಡ್ಡ ಯಶಸ್ಸು ಅವರು ಪ್ರಧಾನಿ ಆದಾಗ ಗುಜರಾತಿನ ಜನರು ಮೊನ್ನೆ ಕೊಟ್ಟರು ಎಂದರು.

ಗುಜರಾತ್‍ನಲ್ಲಿ ಮೋದಿಯವರೇ ನಾಯಕ. 3 ಈಶಾನ್ಯ ರಾಜ್ಯಗಳಲ್ಲಿ ಹಿಂದೆ ಕೇಂದ್ರ ನಾಯಕರು ತೆರಳಿದರೆ ಭಾರತದ ವಿರುದ್ಧ ಘೋಷಣೆ ಕೂಗುತ್ತಿದ್ದರು. 2014ರ ಮೊದಲು ಈ ರಾಜ್ಯಗಳ ಸ್ಥಿತಿ ಅತ್ಯಂತ ಕೆಟ್ಟದಾಗಿತ್ತು. ಭಯೋತ್ಪಾದಕತೆ, ಒಳ ನುಸುಳುವಿಕೆ, ಬಡತನ ಅಲ್ಲಿತ್ತು. ಅಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ ಸೇರಿ ಮೂಲಸೌಕರ್ಯದ ಕಡೆ ಗಮನ ಕೊಟ್ಟಿರಲಿಲ್ಲ. ಈಗ ಈಶಾನ್ಯ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಅವು ಹೈವೇಗಳು, ರೈಲು ಸಾಕಾರವಾದ ರಾಜ್ಯವಾಗಿವೆ. ವಿಮಾನನಿಲ್ದಾಣಗಳೂ ನಿರ್ಮಾಣವಾಗುತ್ತಿದೆ. ಮೊನ್ನೆ ನಡೆದ ಚುನಾವಣೆಯಲ್ಲಿ 3 ರಾಜ್ಯಗಳಲ್ಲೂ ಜನತೆ ನಮ್ಮನ್ನು ಗೆಲ್ಲಿಸಿದ್ದಾರೆ ಎಂದು ವಿವರಿಸಿದರು.
ನಾಗಾಲ್ಯಾಂಡ್, ತ್ರಿಪುರ, ಮೇಘಾಲಯದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವತ್ತು ಅಲ್ಲಿನ ಜನ ಬಿಜೆಪಿ ಮತ್ತು ಭಾರತದ ಜೊತೆ ಜೋಡಣೆ ಆಗಿದ್ದಾರೆ. ಇದಕ್ಕೆ ಮೋದಿಯವರು ಮತ್ತವರ ಅಭಿವೃದ್ಧಿ ಕಾರ್ಯಗಳು ಕಾರಣ ಎಂದು ತಿಳಿಸಿದರು.

ಚುನಾವಣಾ ನಿರ್ವಹಣಾ ಸಮಿತಿ ಮತ್ತು ಚುನಾವಣಾ ಪ್ರಚಾರ ಸಮಿತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ..ಪಿ.ನಡ್ಡಾ ಅವರ ನೇತೃತ್ವದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾರವರ ಮಾರ್ಗದರ್ಶನದಡಿ ನಿನ್ನೆ ಪ್ರಕಟಿಸಲಾಗಿದೆ. ಮುಖ್ಯಮಂತ್ರಿಯವರ ನೇತೃತ್ವದ ತಂಡ ಕರ್ನಾಟಕದ ಚುನಾವಣಾ ಪ್ರಚಾರ ಕಾರ್ಯವನ್ನು ನಿರ್ವಹಿಸಲಿದೆ ಎಂದರು.

ಚುನಾವಣಾ ನಿರ್ವಹಣಾ ಸಮಿತಿಯು ಅತ್ಯಂತ ಪ್ರಮುಖವಾಗಿ ಮಾಧ್ಯಮ, ಸಾಮಾಜಿಕ ಜಾಲತಾಣ, ಪ್ರಚಾರ, ಪ್ರಸಾರ, ಪ್ರವಾಸ, ಅತಿಥಿ ಕಾರ್ಯಕರ್ತರು, ಕೇಂದ್ರದ ನಾಯಕರ ಪ್ರವಾಸ ಸೇರಿ ಚುನಾವಣೆಯ ಸುಮಾರು 32 ವಿಭಾಗಗಳ ನಿರ್ವಹಣೆ ಮಾಡಲಿದೆ. ಕೇವಲ ಎರಡರಿಂದ ಎರಡೂವರೆ ತಿಂಗಳಲ್ಲಿ ಚುನಾವಣೆ ಮುಗಿಸಲಿದೆ. ಈ ಜವಾಬ್ದಾರಿ ಕೊಟ್ಟ ಕೇಂದ್ರ ನಾಯಕರು ಮತ್ತು ರಾಜ್ಯಾಧ್ಯಕ್ಷರಿಗೆ ಧನ್ಯವಾದಗಳು ಎಂದು ಅವರು ತಿಳಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top