ಬೆಂಗಳೂರು: ಮಾರ್ಚ್ 1ರಿಂದ ಬಿಜೆಪಿ ರಥಯಾತ್ರೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ನಗರದ ದಿ ಕ್ಯಾಪಿಟಲ್ ಹೋಟೆಲ್ನಲ್ಲಿ ಇಂದು ಮಂಡಲ ಪ್ರಭಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ನಂತರದಲ್ಲಿ ರಾಜ್ಯವು ಅತಿ ಹೆಚ್ಚು ಜಿಎಸ್ಟಿ ಸಂಗ್ರಹಿಸುತ್ತಿದ್ದು, ಗುರಿ ಮೀರಿ ಶೇ 23ರಷ್ಟು ಹೆಚ್ಚು ಕಂದಾಯ ಸಂಗ್ರಹವಾಗಿದೆ. ಬಡವರ ಪರವಾಗಿ ನಮ್ಮ ನಿಲುವಿದೆ ಎಂದು ವಿವರಿಸಿದರು. ಕಮಲ ಅರಳಿಸಿ, ಅಧಿಕಾರ ಗಳಿಸುವ ಸಂಕಲ್ಪ ನಮ್ಮದಾಗಬೇಕು ಎಂದು ತಿಳಿಸಿದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸಿದ್ದೇವೆ. ಪ್ರವಾಹ ಸಂತ್ರಸ್ತರಿಗೆ ಹೆಚ್ಚು ಹಣ ಅನುದಾನ ಕೊಟ್ಟಿದ್ದೇವೆ. ಸ್ಪಂದನಾಶೀಲ, ಜನಪರ ಬಿಜೆಪಿ ಸರಕಾರ ರಾಜ್ಯದಲ್ಲಿದೆ ಎಂದು ವಿವರಿಸಿದರು. ಕ್ಷೇತ್ರದಲ್ಲಿ ಫಲಾನುಭವಿಗಳ ಸಮ್ಮೇಳನ ನಡೆಸಲು ಅವರು ತಿಳಿಸಿದರು.
ಮಂಡಲ ಪ್ರಭಾರಿಗಳ ಮೇಲೆ ಗುರುತರವಾದ ಜವಾಬ್ದಾರಿ ಇದೆ. ಕೇಂದ್ರದ ನರೇಂದ್ರ ಮೋದಿಜಿ ಸರಕಾರದ ಹತ್ತು ಹಲವು ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಕರ್ನಾಟಕದಲ್ಲಿ 2019ರಲ್ಲಿ ಯಡಿಯೂರಪ್ಪ ಅವರ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಲ್ಲದೆ, ಕೋವಿಡ್ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ನಾನು ಪ್ರವಾಹವನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ಅಲ್ಲದೆ ನಮ್ಮ ರಾಜ್ಯ ಸರಕಾರ ಅನೇಕ ಜನೋಪಯೋಗಿ ಕಾರ್ಯಕ್ರಮ ಜಾರಿಗೊಳಿಸಿದೆ. ಇವೆಲ್ಲವನ್ನೂ ಜನರಿಗೆ ತಿಳಿಸಬೇಕಿದೆ ಎಂದರು.
ನಕಾರಾತ್ಮಕವಾಗಿ ಮತ ಪಡೆಯಲು ಕಾಂಗ್ರೆಸ್- ಜೆಡಿಎಸ್ ಪ್ರಯತ್ನ ಮಾಡುತ್ತಿದೆ. ನಾವು ಧನಾತ್ಮಕ ರೀತಿಯಲ್ಲಿ ಜನಮತ ಪಡೆಯಲು ಮುಂದಾಗುತ್ತೇವೆ. ಜನರ ಮುಂದೆ ರಿಪೋರ್ಟ್ ಕಾರ್ಡ್ ಇಟ್ಟು ಪಕ್ಷಕ್ಕೆ ಗೆಲುವು ತಂದು ಕೊಡಬೇಕಿದೆ ಎಂದು ತಿಳಿಸಿದರು.
ಸ್ವಾರ್ಥ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷವು ಇನ್ನೊಬ್ಬರ ಅವಹೇಳನ ಮಾಡಿ ಮತ ಪಡೆಯಲು ಮುಂದಾಗಿದೆ. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡಿದ್ದಾರೆ. ಕೇಂದ್ರದ ಅನುದಾನ ಬಳಸಿ ಪಡಿತರ ಅಕ್ಕಿ ಕೊಟ್ಟರೂ ಅನ್ನ ಭಾಗ್ಯ ತಾವೇ ಕೊಟ್ಟಿದ್ದಾಗಿ ಬಿಂಬಿಸಿದ್ದರು ಎಂದು ಟೀಕಿಸಿದರು.
ಜನರ ಕಣ್ಣಲ್ಲಿ ಮಣ್ಣೆರಚುವ ಕಾರ್ಯವನ್ನು ಸದಾ ಕಾಲ ಕಾಂಗ್ರೆಸ್ ಮಾಡಿತ್ತು. ಅವರ ಅವಧಿಯಲ್ಲಿ ರಾಜ್ಯವು ಎಲ್ಲ ರಂಗಗಳಲ್ಲಿ ಹಿಂದುಳಿದಿತ್ತು. ಅವರ ಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿತ್ತು ಎಂದು ದೂರಿದರು. ಅಕ್ಕಿ, ಎಸ್ಸಿ, ಎಸ್ಟಿ ಹಾಸ್ಟೆಲ್ನಲ್ಲೂ ಹಾಸಿಗೆ, ದಿಂಬಿನಲ್ಲಿ ಭ್ರಷ್ಟಾಚಾರ ಆಗಿತ್ತು. ನೀರಾವರಿ, ನೇಮಕಾತಿಯಲ್ಲೂ ಭ್ರಷ್ಟಾಚಾರ, ಬಿಡಿಎದಲ್ಲಿ ರೀಡೂ ಭ್ರಷ್ಟಾಚಾರ, ಸೋಲಾರ್ ವಿದ್ಯುತ್ ವಿಚಾರದಲ್ಲೂ ಭ್ರಷ್ಟಾಚಾರ ಮಾಡಿದ್ದರು ಎಂದು ಆರೋಪಿಸಿದರು.
ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನೇ ಮುಗಿಸಿಬಿಟ್ಟರು. ಎಸಿಬಿ ಮುಂದೆ ಸಿದ್ದರಾಮಯ್ಯರದೂ ಸೇರಿದಂತೆ ಸುಮಾರು 60 ಕೇಸುಗಳಿದ್ದು, ಎಲ್ಲದಕ್ಕೂ ಬಿ ರಿಪೋರ್ಟ್ ಕೊಟ್ಟಿದ್ದರು. ಕಾಂಗ್ರೆಸ್ ತಮ್ಮ ಮೇಲಿನ ಆರೋಪಗಳಿಗೆ ಮೊದಲು ಉತ್ತರಿಸಬೇಕು. ಬಣ್ಣ ಬಯಲಾಗುವ ಭೀತಿ ಕಾಂಗ್ರೆಸ್ಸಿಗರದು. ಆರೋಪಗಳ ಮೇಲೆ ಕೌದಿ ಹಾಕಿ ಮುಚ್ಚಿ ಹಾಕುವ ಪ್ರಯತ್ನ ಸಿದ್ದರಾಮಯ್ಯರದು ಎಂದು ಟೀಕಿಸಿದರು.
ನಮ್ಮ ಮೇಲಿನ ಆರೋಪದ ದಾಖಲೆ ಕೊಟ್ಟರೆ ಅದನ್ನು ತನಿಖೆ ಮಾಡಿಸಲು ಸಿದ್ಧ ಎಂದು ಸವಾಲು ಹಾಕಿದರು. ನೀರಾವರಿ ನಿಗಮದಲ್ಲಿ 2 ಸಮಿತಿ ಇತ್ತು. ಇವೆರಡನ್ನೂ ಮುಚ್ಚಿ ಹಾಕಿದವರು ಕಾಂಗ್ರೆಸ್ಸಿಗರು. ಆ ಮೂಲಕ ಭ್ರಷ್ಟಾಚಾರಕ್ಕೆ ರಹದಾರಿ ಮಾಡಿದ್ದರು ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ವೈಫಲ್ಯ, ಬಿಜೆಪಿಯ ಮನೆಮನೆಗೆ ನಳ್ಳಿನೀರು ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆಗಳ ವಿವರವನ್ನು ಜನರಿಗೆ ತಿಳಿಸಬೇಕು. ಮನೆ, ಕರೆಂಟ್, ಶೌಚಾಲಯ, ಉಚಿತ ಪಡಿತರ- ಹೀಗೆ ಕುಟುಂಬಗಳ ಸಶಕ್ತೀಕರಣ ನಡೆದಿದೆ. ಕಿಸಾನ್ ಸಮ್ಮಾನ್ ಯೋಜನೆ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮಕ್ಕಳಿಗೆ ಸೈಕಲ್, ವಿದ್ಯಾನಿಧಿಯಂಥ ಯೋಜನೆಗಳನ್ನು ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು.
ದುಡಿಯುವ ವರ್ಗಕ್ಕೆ ಬಲ ತುಂಬಲು ಕಾಯಕ ಯೋಜನೆ ಜಾರಿಗೊಳಿಸಿದ್ದೇವೆ. ಇಂಥ ಫಲಾನುಭವಿಗಳನ್ನು ಭೇಟಿ ಮಾಡಿ ನಮ್ಮ ಅಭಿಮಾನಿಗಳನ್ನು ಹೆಚ್ಚಿಸಿ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳವನ್ನೂ ಜನರಿಗೆ ತಿಳಿಸಬೇಕು ಎಂದು ವಿನಂತಿಸಿದರು. ಲಂಬಾಣಿ ತಾಂಡಾದ ಜನರಿಗೆ ನ್ಯಾಯ ಕೊಟ್ಟದ್ದನ್ನು ತಿಳಿಸಿಕೊಡಿ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.