News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತನ್ನನ್ನೇ ನುಂಗುತ್ತಿರುವ ಪಾಕಿಸ್ಥಾನದ ಸ್ವಯಂಕೃತ ಅಪರಾಧಗಳು!

ವರ್ತಮಾನದ ಪಾಕಿಸ್ಥಾನದಲ್ಲಿ ಆರ್ಥಿಕತೆ ಧರಾಶಾಯಿಯಾಗುತ್ತಲಿದೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆ ಸಹಿತ ಸಾರಿಗೆ ಸಂಪರ್ಕಕ್ಕೆ ಅಗತ್ಯವಿರುವ ಪೆಟ್ರೋಲ್‌, ಡಿಸೆಲ್‌ ಬೆಲೆಗಳು ಗಗನಕ್ಕೇರಿವೆ. ರೇಷನ್‌ ಅಂಗಡಿಗಳು ಮುಂದೆ ಜನರು ಸಾಲುಗಟ್ಟಿ ನಿಂತಿದ್ದಾರೆ. ಹಲವು ದಶಕಗಳಿಂದ ಆ ದೇಶದ ಆರ್ಥಿಕ ಸುಸ್ಥಿರತೆಗೆ ನೆರವು ನೀಡಿ, ಹತ್ತು ಹಲವು ಮೂಲಭೂತ ಸೌಕರ್ಯಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಐ.ಎಂ.ಎಫ್‌ ಮತ್ತು ವರ್ಲ್ಡ್‌ ಬ್ಯಾಂಕ್‌ ಪಾಕಿಸ್ಥಾನದ ಸದ್ಯದ ಪರಿಸ್ಥಿತಿಯ ಬಗ್ಗೆ ಸೊಲ್ಲೆತ್ತಿಲ್ಲ. ಪಾಕಿಸ್ಥಾನದ ಸಾಲ ಮರುಪಾವತಿಯು ಕಷ್ಟಸಾಧ್ಯವಾದ ಬಗ್ಗೆ ಈಗಾಗಲೇ ಹಲವು ವರದಿಗಳು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಪಾಕಿಸ್ಥಾನದ ಸಮಸ್ಯೆ ಕೇವಲ ಆರ್ಥಿಕತೆಯೊಂದೇ ಇದ್ದಿದ್ದರೆ ಒಂದೆರಡು ವರ್ಷಗಳಲ್ಲಿ ಬಗೆಹರಿಯುತ್ತಿತ್ತೇನೋ. ಇದರ ಜೊತೆ ಜೊತೆಯಲ್ಲಿ ಇನ್ನೂ ಹಲವು ಆಂತರಿಕ ಸಮಸ್ಯೆಗಳಿಂದ ಆ ದೇಶ ಬಳಲುತ್ತಿದೆ ಎಂಬುದಂತು ಅಕ್ಷರಶಃ ಸತ್ಯ. ಇದರಲ್ಲಿ ಒಂದು ಬಲೂಚಿಸ್ಥಾನದ ಕೂಗು, ಇನ್ನೊಂದು ಪಶ್ತೂನಿಸ್ಥಾನ ಪ್ರತ್ಯೇಕತೆಯ ದನಿ, ಮಗದೊಂದು ಪಾಕಿಸ್ಥಾನದ ಮಿಲಿಟರಿಯಿಂದ ಬಲಿತ ಪಾಕಿಸ್ಥಾನೀ ತಾಲಿಬಾನಿಗಳ ಉಪಟಳ. ಇವೆಲ್ಲದರ ಜೊತೆಜೊತೆಯಲ್ಲಿ ಪಿಒಕೆ ಎಂಬ ಪಾಕ್‌ ಆಕ್ರಮಿತ ಕಾಶ್ಮೀರದಲ್ಲೂ ಪಾಕಿಸ್ಥಾನೀ ಆಡಳಿತದ ವಿರುದ್ಧ ಅಪಸ್ವರ ಮೂಡಿದೆ. ಅದು ಮೂಡಬೇಕಾದ್ದೇ!!
ಇಷ್ಟೆಲ್ಲಾ ಆಂತರಿಕ ಸಮಸ್ಯೆಗಳಿದ್ದರೂ ಪಾಕಿಸ್ಥಾನವು ಐ.ಎಸ್.ಐ ಪ್ರಚೋದನೆಯಿಂದ ಭಾರತದೊಳಗೆ ಅಕ್ರಮ ದ್ರೋಣ್‌ ಗಳನ್ನು ಎಗ್ಗಿಲ್ಲದೆ ರವಾನಿಸುತ್ತಿದೆ. ಇದು ಆ ದೇಶದ ಮತ್ತೊಂದು ಪ್ರಾಕ್ಸಿ ವಾರ್ ಮುಂದುವರಿಕೆ. ಅದರಲ್ಲೂ ಪಂಜಾಬ್‌ ರಾಜ್ಯವೊಂದರಲ್ಲೇ ಕಳೆದ ವರ್ಷ 300 ರಷ್ಟು ಅಕ್ರಮ ಶಸ್ತ್ರಗಳು‌ ಮತ್ತು ಮಾದಕ ಪದಾರ್ಥಗಳು ಡ್ರೋಣ್‌ ಮೂಲಕ ಭಾರತದೊಳಗೆ ನುಗ್ಗಿದ್ದವು, ಭಾರತೀಯ ಗಡಿ ರಕ್ಷಣಾ ಪಡೆ(ಬಿ.ಎಸ್.ಎಫ್‌)ಯು ಹೆಚ್ಚಿನ ಡ್ರೋಣ್ ಗಳನ್ನು ಹೊಡೆದುರುಳಿಸಿದೆ.

ವರ್ಷಗಳಿಂದ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿ ಭಾರತೀಯ ಸೈನಿಕರನ್ನು ಸಹಿತ ನಾಗರಿಕರನ್ನು ಗುರಿ ಮಾಡುತ್ತಿದ್ದ ಪಾಕಿಸ್ಥಾನಕ್ಕೆ ಬಾಲಾಕೋಟ್‌ ದಾಳಿಯ ಮೂಲಕ ತಕ್ಕ ಉತ್ತರ ನೀಡಲಾಗಿತ್ತು. ಭಾರತದೊಂದಿಗೆ ಎರಡು ಮೂರು ಯುದ್ಧಗಳನ್ನು ಸೋತರೂ ಪಾಪಿಸ್ಥಾನಕ್ಕೆ ಬುದ್ಧಿ ಬರಲಿಲ್ಲ. ಅದು ಬಿಡಿ ಇಂದು ತನ್ನ ನಾಗರಿಕರನ್ನೇ ತನಗೆ ಸಲಹಲು ಕಷ್ಟಕರ ಎನ್ನುವ ಪರಿಸ್ಥಿತಿಯಲ್ಲಿದೆ ಪಾಕ್. ಇದೆಲ್ಲದರ ಹೊರತಾಗಿಯೂ ತನ್ನ ಬುದ್ಧಿ ಬಿಡೆನೆಂಬ ಪಾಕಿಸ್ಥಾನಕ್ಕೆ ಆಂತರಿಕ ಸಮಸ್ಯೆಗಳೇ ಮುಳ್ಳಾಗಿ ಪರಿಣಮಿಸುತ್ತಿವೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರದ ಸ್ವಾಯತ್ತತೆ, ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದ ಪಾಕಿಸ್ಥಾನದಲ್ಲಿ ಇಂದು ಮೂಲಭೂತವಾದವು ತನ್ನ ಜನರನ್ನೇ ಬಲಿಪಶು ಪಡೆಯುವ ಮಟ್ಟಿಗೆ ಬೆಳೆದಿದೆ. ಪಾಕಿಸ್ಥಾನದ ರಾಜಕೀಯದಲ್ಲೂ ಪಂಜಾಬಿಗಳೇ ತಮ್ಮ ಪಾರಮ್ಯವನ್ನು ಬೆಳೆಸಿರುವ ಕಾರಣ ಉಳಿದ ಪ್ರದೇಶದ ಜನರು ತಮ್ಮ ರಾಜಕೀಯ ಅಸ್ತಿತ್ವದ ಬಗ್ಗೆ ಪ್ರಶ್ನೆಯನ್ನು ಎತ್ತಲಾರಂಭಿಸಿದ್ದಾರೆ. ವರ್ತಮಾನದಲ್ಲಿ ಪಾಕಿಸ್ಥಾನದ ರಾಜಕೀಯ, ಸಾಮಾಜಿಕ, ಇಸ್ಲಾಂ ಮೂಲಭೂತವಾದ ಸಹಿತ ಭೌಗೋಳಿಕ ಸಮಸ್ಯೆಗಳು ರಕ್ತ ಬೀಜಾಸುರನಂತೆ ಬೆಳೆಯುತ್ತಲೇ ಸಾಗಿದೆ.

ಇಲ್ಲಿ ಮೊತ್ತಮೊದಲಿಗೆ ನೋಡಬೇಕಾಗಿರುವುದು ಪಾಕಿಸ್ಥಾನದ ಪಶ್ಚಿಮ ಭಾಗದಲ್ಲಿರುವ ಆ ದೇಶದ ಅತಿ ದೊಡ್ಡ ಪ್ರಾಂತ್ಯ ಬಲೂಚಿಸ್ಥಾನವನ್ನು. 1947 ರ ಮೊದಲೇ ಈ ಪ್ರಾಂತ್ಯದ ಜನರು ತಮಗೆ ಪಾಕಿಸ್ಥಾನದ ಜೊತೆ ಸೇರಲು ಇಷ್ಟವಿಲ್ಲವೆಂದು ತಮ್ಮ ಅಸಹನೆ ತೋರಿದ್ದರು. ಅಂದೇ ತಮ್ಮ ಪ್ರಾಂತ್ಯವು ಪ್ರತ್ಯೇಕ ರಾಷ್ಟ್ರವಾದರೇ ಚೆನ್ನ ಎಂಬ ಕನಸನ್ನೂ ಹೊತ್ತಿದ್ದರು, ಪಾಕಿಸ್ಥಾನದ ಜೊತೆ ವಿಲೀನಗೊಂಡರೆ ಮುಂದೆ ತಮಗೆ, ತಮ್ಮ ತನಕ್ಕೆ ಆಪತ್ತು ಎಂಬುದು ಅವರಿಗೆ ತಿಳಿದಿತ್ತು. ಆದರೆ ವಿಧಿ ಎಂಬಂತೆ ಅತಿ ದೊಡ್ಡ ಭೂಪ್ರದೇಶವಾದ ಬಲೂಚಿಸ್ಥಾನ ಪಾಕಿಸ್ಥಾನದ ಭಾಗವಾಯಿತು. ಶ್ರೀಮಂತ ಸಂಸ್ಕೃತಿ, ವೈವಿಧ್ಯತೆ ಇರುವ ಈ ಪ್ರದೇಶವು ಅತಿ ದೊಡ್ಡ ಕರಾವಳಿ ತೀರವನ್ನು ಹೊಂದಿದೆ. ಈ ಪ್ರದೇಶವು ಅತಿ ಹೆಚ್ಚು ಕಲ್ಲಿದ್ದಲು ಸಹಿತ ಇತರೇ ಖನಿಜ ಸಂಪತ್ತುಗಳ ಆಗರವಾಗಿರುವ ಕಾರಣ ಪಾಕಿಸ್ಥಾನದ ಆರ್ಥಿಕ ಪುಷ್ಠಿಗೆ ಇದು ಒಂದು ಕಾರಣವೂ ಹೌದು. ಕರಾಚಿ ಬಿಟ್ಟರೆ ಇಲ್ಲಿನ ಗ್ವಾದರ್‌ ಬಂದರು ಅತಿ ದೊಡ್ಡ ಬಂದರೆನಿಸಿದೆ. ಸೀಪೆಕ್‌ ಯೋಜನೆಯ ಮೂಲಕ ಚೀನಾದೊಂದಿಗೆ ಕೈಜೋಡಿಸಿದ ಪಾಕಿಸ್ಥಾನ ದಿನಗಳೆದಂತೆ ತನ್ನನ್ನೇ ಸಾಲದ ಕೂಪಕ್ಕೆ ತಬ್ಬಿಕೊಂಡಿದೆ. ಶ್ರೀಲಂಕಾದಲ್ಲಿ ಹಂಬಂದೋಟ ಬಂದರನ್ನು ಹೇಗೆ ಚೀನಾಗೆ ಎರವಲಾಗಿ ಅಲ್ಲಿನ ರಾಜಕೀಯ ನಾಯಕರು ನೀಡಿದ್ದರೋ ಹಾಗೆ ಪಾಕಿಸ್ಥಾನದ ಈ ಆಯಕಟ್ಟಿನ ಬಂದರಿನ ಸಂಪೂರ್ಣ ಹಿಡಿತ ಇಂದು ಚೀನಾದ ಕೈಯ್ಯಲ್ಲಿದೆ. ಸೀಪೆಕ್‌ ಎಂಬ ಬೃಹತ್‌ ಯೋಜನೆಯ ಮೂಲಕ ಪಾಕಿಸ್ಥಾನದಲ್ಲಿ ಆರ್ಥಿಕತೆಯ ಸುವರ್ಣ ಯುಗ ಆರಂಭವಾಗಲಿದೆ ಎಂಬಂತಹ ಕನಸನ್ನು ಹುಟ್ಟು ಹಾಕಿದ ಚೀನಾ ತನ್ನ ಬೇಳೆ ಬೇಯಿಸಿಕೊಳ್ಳಲು ಉತ್ತರದ ಕಾರಕೋರಂ ಕಣಿವೆಯ ಮೂಲಕ ಪಿಒಕೆ, ಪಂಜಾಬ್‌ ಸಹಿತ ಗ್ವಾದರ್‌ ತನಕ ದೊಡ್ಡ ಹೆದ್ದಾರಿಯನ್ನು ನಿರ್ಮಿಸಿದೆ. ಇಂದು ಈ ಅಂತಾರಾಷ್ಟ್ರೀಯ ಹೆದ್ದಾರಿಯ ಸಂಪೂರ್ಣ ಹಿಡಿತ ಚೀನಾದ್ದೆ, ದೂರದ ಆಫ್ರಿಕಾ ರಾಷ್ಟ್ರಗಳಿಗೆ ಚೀನಾದ ಉತ್ಪನ್ನಗಳು ಸುಲಭವಾಗಿ ತಲುಪಿಸುವ ಉದ್ದೇಶ ಈ ಸೀಪೆಕ್‌ ಯೋಜನೆಯದ್ದು. ಇದರ ಲಾಭ ಪಾಕಿಸ್ಥಾನಕ್ಕೂ ಆಗಲಿದೆ ಎಂಬ ಭರವಸೆಯೊಂದಷ್ಟೇ ಇಂದು ಉಳಿದಿದೆ. ಆದರೆ ವಾಸ್ತವದಲ್ಲಿ ಗ್ವಾದರ್‌, ಕ್ವೆಟ್ಟಾ ಸಹಿತ ಹಲವು ಬಲೂಚಿ ಪ್ರದೇಶಗಳಲ್ಲಿ ಚೀನಾದ ಕಾಲನಿಗಳು ಈಗಾಗಲೇ ಆರಂಭಗೊಂಡಿವೆ. ಸೀಪೆಕ್‌ ಯೋಜನೆಯ ಕೊನೆಯ ಕೊಂಡಿಯಾಗಿರುವ ಗ್ವಾದರ್‌ ಬಲೂಚಿಸ್ಥಾನದಲ್ಲಿರುವ ಕಾರಣ ಮಾತ್ರವಲ್ಲದೇ ಚೀನಾದ ಆಗಮನದಿಂದ ಬಲೂಚಿಗಳಿಗೆ ಏನು ದೊಡ್ಡ ಪ್ರಯೋಜನ, ಸಹಾಯಹಸ್ತ ಇರದ/ಸಿಗದ ಕಾರಣ, ಮಾತ್ರವಲ್ಲದೇ ತಮ್ಮ ಪ್ರಾಂತ್ಯದಲ್ಲಿ ಅನ್ಯರಲ್ಲಿ ಅನ್ಯರೆನಿಸಿದ ಚೀನೀಯರು ಹತೋಟಿ ಸಾಧಿಸುತ್ತಿರುವ ಕಾರಣ. ಬಲೂಚಿಯರ ಎರಡನೇ ಆಕ್ರಂದನ ಶುರುವಾಗಿದೆ. ಆರಂಭದಲ್ಲಿ ಪಾಕಿಸ್ಥಾನದ ಮಲತಾಯಿ ಧೋರಣೆ, ಬಲೂಚಿಸ್ಥಾನದ ಪ್ರಗತಿಗೆ ಪಾಕಿಸ್ಥಾನದ ಸತತ ಸರಕಾರಗಳು ಯಾವುದೇ ಗಮನಾರ್ಹ ಕೊಡುಗೆ ನೀಡದೆ ಇರುವುದು ಸ್ವಾಭಿಮಾನಿ ಬಲೂಚಿ ಭಾವನೆಗಳನ್ನು ಕೆರಳಿಸಿದೆ. ಪಾಕಿಸ್ಥಾನೀ ಸೈನಿಕರ ಜೊತೆ ಹಲವು ಗುಂಡಿನ ಸಮರಗಳು ನಿರಂತರ ಎಂಬಂತೆ ನಡೆಯುತ್ತಿವೆ. ಬಲೂಚಿ ಪ್ರತ್ಯೇಕವಾದವೂ ದಿನಕಳೆದಂತೆ ಗಟ್ಟಿಯಾಗುತ್ತಿದೆ. ಕಳೆದ ಏಳೂವರೆ ದಶಕಗಳಿಂದ ಇದ್ದ ಬಲೂಚಿಗಳ ಮನದ ಬೇಗುದಿಯ ಇಂದು ಕಟ್ಟೆ ಒಡೆದಿದೆ. ಹಲವು ಮಂದಿ ಬಲೂಚಿಗಳು ತಮ್ಮ ಪ್ರಾಂತ್ಯವು ಪಾಕಿಸ್ಥಾನದ ಕಪಿ ಮುಷ್ಠಿಯಿಂದ ಪ್ರತ್ಯೇಕವಾಗಿ, ಸ್ವತಂತ್ರ್ಯವಾಗಬೇಕೆಂಬ ಹಂಬಲದಿಂದ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಬಲೂಚಿ ಹೋರಾಟಗಾರರ ಮೇಲೆ ಪಾಕಿಸ್ಥಾನೀ ಮಿಲಿಟರಿಯ ಸತತ ದೌರ್ಜನ್ಯದ ಫಲವಾಗಿ ಬಲೂಚಿ ಮಕ್ಕಳ ಕೂಗು ದಿನಗಳೆದಂತೆ ದೊಡ್ಡದಾಗುತ್ತಲೇ ಇದೆ ವಿನಾ ಕಡಿಮೆಯಾಗುತ್ತಿಲ್ಲ. ಕ್ವೆಟ್ಟಾ ಸಹಿತ ಇತರೆ ಪ್ರದೇಶಗಳಲ್ಲಿನ ಕೆಲ ಬಲೂಚಿ ನಾಯಕರು, ಹೋರಾಟಗಾರರನ್ನು ಪಾಕಿಸ್ಥಾನೀ ಸೈನ್ಯ ಮತ್ತು ಆಡಳಿತವು ಹೇಯವಾಗಿ ನಡೆಸಿಕೊಂಡ ಬಗ್ಗೆ ಮಾನವ ಹಕ್ಕು ವರದಿಗಳು ತಿಳಿಸುತ್ತವೆ. ಭಾರತವು ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘಿಸಿದೆ ಎಂದು ಬೊಬ್ಬಿರಿಯುವ ಪಾಕಿಸ್ಥಾನವು ಬಲೂಚಿಸ್ಥಾನದಲ್ಲಿ ಏನು ಮಾಡಿದೆ, ಮಾಡುತ್ತಿದೆ ಎಂಬುದಕ್ಕೆ ತಕ್ಕ ಉತ್ತರವು ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳ ಅಧ್ಯಯನದಿಂದ ತಿಳಿದುಕೊಳ್ಳಬಹುದಾಗಿದೆ. ಇಂದು ಬಲೂಚಿನ ಹಲವು ಹೋರಾಟಗಾರರು ಜೀವಭಯದಿಂದ ಕೆನಡಾ ಮತ್ತು ಅಮೇರಿಕಾಗಳಲ್ಲಿ ನೆಲೆಸಿದ್ದು, ಪಾಕಿಸ್ಥಾನ ಎಸಗಿದ ದೌರ್ಜನ್ಯಗಳನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡುತ್ತಿದ್ದಾರೆ.

ಬಲೂಚಿಸ್ಥಾನ ಅತಿ ದೊಡ್ಡ ಕಲ್ಲಿದ್ದಲ್ಲು ಗಣಿಯನು ಹೊಂದಿದೆ, ಪ್ರಾಕೃತಿಕ ಅನಿಲದ ನಿಕ್ಷೇಪದಲ್ಲೂ ಶ್ರೀಮಂತಿಕೆಯನ್ನು ಹೊಂದಿದೆ. ಆದರೆ ಈ ಬುಲೂಚ್‌ ಪ್ರಾಂತ್ಯದ ಅರ್ಧದಷ್ಟು ಭೂಭಾಗಕ್ಕೆ ವಿದ್ಯಚ್ಛಕ್ತಿ ಮರೀಚಿಕೆಯಾಗಿದೆ. ಸೂಯಿ ಗ್ಯಾಸ್‌ ಬಯಲುಗಳನ್ನು 1950 ರಲ್ಲೇ ಪತ್ತೆಹಚ್ಚಲಾಗಿತ್ತು. ಈ ಭೂ ಪ್ರದೇಶ ಪ್ರಾಚೀನ ಪರ್ಶಿಯಾ ಮತ್ತು ಭಾರತದ ಭೂಭಾಗವಾಗಿತ್ತು ಎಂಬುದು ಇತಿಹಾಸದಿಂದ ವ್ಯಕ್ತವಾಗುತ್ತದೆ. ಪ್ರಸ್ತುತ ಕ್ವೆಟ್ಟಾ ಬಲೂಚಿಸ್ಥಾನದ ರಾಜಧಾನಿ. ಪಾಕಿಸ್ಥಾನದ ಒಟಾರೆ 44% ಭೂಭಾಗ ಇದಾಗಿದೆ. ಆದರೆ ಜನಸಂಖ್ಯೆ ವಿರಳವಾಗಿದ್ದು ಪಾಕಿಸ್ಥಾನದ ಒಟಾರೆ ಜನಸಂಖ್ಯೆಯ ಕೇವಲ 6 ಪ್ರತಿಶತ ಮಾತ್ರವಷ್ಟರನ್ನೆ ಹೊಂದಿದೆ. 75 ವರ್ಷಗಳ ಸತತ ಅನಾದರದ ಮತ್ತು ಅವಹೇಳನದ ನಡುವೆಯೂ ಪಾಕಿಸ್ಥಾನದ ಆರ್ಥಿಕತೆಗೆ ಮತ್ತದರ ಬೊಕ್ಕಸಕ್ಕೆ ಬಹುಮುಖ್ಯ ಕೇಂದ್ರವಾಗಿದೆ ಬಲೂಚಿಸ್ಥಾನ.

ಬಲೂಚಿಸ್ಥಾನದಲ್ಲಿ ಕಾಲನಿಗಳನ್ನು ನಿರ್ಮಿಸಿರುವ ಚೀನಿಯರು ಈ ಪ್ರದೇಶದ ಹಲವೆಡೆಗಳಲ್ಲಿ ಈಗಾಗಲೇ ಬೇಲಿಗಳನ್ನು ನಿರ್ಮಾಣ ಮಾಡಿದ್ದಾರೆ. ಖನಿಜ ನಿಕ್ಷೇಪಗಳನ್ನು ಕೊಳ್ಳೆ ಹೊಡೆಯಲಾರಂಭಿಸಿದ್ದಾರೆ. ಬಲೂಚಿ ಮೀನುಗಾರಿಕೆಯ ದೋಣಿಗಳು ಆಳಸಮುದ್ರಕ್ಕೆ ಇಳಿಯದಂತೆ ನೋಡಿಕೊಳ್ಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗ್ವಾದರ್ ಬಂದರಿನಲ್ಲಿ ನಡೆಸಲ್ಪಟ್ಟ ಡ್ರೆಜ್ಜಿಂಗ್ ಮತ್ತು ಅಭಿವೃದ್ಧಿ ಕಾರ್ಯಗಳಿಂದ ನೀರು ಕಲುಷಿತಗೊಂಡಿದ್ದು, ಮೀನುಗಳು ಅಲಭ್ಯವಾಗಿವೆ. ಪಾಕಿಸ್ಥಾನ ಸರಕಾರವು ಈಗಾಗಲೇ ಬಲೂಚಿಸ್ಥಾನದ ಹಲವು ಗಣಿಗಳನ್ನು ಚೀನಾಗೆ ಮಾರಾಟ ಮಾಡಿದೆ. ಹಿಂದುಳಿದ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲ, ಶುದ್ಧ ಕುಡಿಯುವ ನೀರು ಇಲ್ಲದೆ ಸಾಕಷ್ಟು ಬಲೂಚಿ ಮಂದಿ ಪರಿತಪಿಸುತ್ತಿದ್ದಾರೆ. ವಾಸ್ತವದಲ್ಲಿ ಪಾಕಿಸ್ಥಾನವು ಚೀನಾದ ಕ್ರೈಮ್ ಪಾಟ್ನರ್ ಎಂಬಂತಿದ್ದು, ಬಲೂಚಿಗಳ ನರಮೇಧಕ್ಕೂ ಕಾರಣವಾಗಿದೆ. ಅಮಾನುಷ ಹತ್ಯೆಗಳು, ಬಲೂಚಿ ಹೋರಾಟಗಾರರ ನಾಪತ್ತೆ ಪ್ರಕರಣಗಳು, ಮಕ್ಕಳು ಮತ್ತು ಹೆಣ್ಮಕ್ಕಳ ಮೇಲಿನ ಬಲತ್ಕಾರದ ಪ್ರಕರಣಗಳು ಹಲವಿವೆ. ಇಲ್ಲಿನ ಸಾಹಿತಿಗಳು, ಕವಿಗಳು ಸಹಿತ ವಿಶ್ವವಿದ್ಯಾನಿಲಯಗಳ ಪ್ರಾಚಾರ್ಯರಿಗೆ ಬಲೂಚಿ ದನಿ ಎತ್ತಬಾರದು ಎಂಬ ಸಂದೇಶ ನೀಡಲಾಗಿದೆಯಂತೆ. ಬಲೂಚಿಸ್ಥಾನದಲ್ಲಿ ಚೀನಾದ ಪಾರಮ್ಯವು 60 ರ ದಶಕದಲ್ಲೇ ಆರಂಬವಾಗಿತ್ತು, ಬಲೂಚಿ ಹೋರಾಟದಲ್ಲಿ ಕರಿಮಾ ಬಲೂಚ್, ಖಾದ್ರಿ ಸಹಿತ ನೂರಾರು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ದಿನಕಳೆದಂತೆ ಬಲೂಚಿ ಹೋರಾಟಗಾರರು, ಪ್ರತ್ಯೇಕವಾದಿಗಳು ಪಾಕಿಸ್ಥಾನದ ಆಡಳಿತ ಮತ್ತು ಮಿಲಿಟರಿ ವಿರುದ್ಧ ಸಂಘಟಿತ ಹೋರಾಟಕ್ಕೂ ಸಾಕ್ಷಿಯಾಗಿದ್ದಾರೆ.

ಇದರ ಹೊರತಾಗಿ ಸುನ್ನಿ ಬಾಹುಳ್ಯದ ಪಾಕಿಸ್ಥಾನದಲ್ಲಿ ಧರ್ಮಾಂಧತೆ ಮತ್ತು ಮೂಲಭೂತವಾದವು ಶಿಯಾ ಮತ್ತು ಅಹಮದೀಯ ಸಮುದಾಯಗಳನ್ನು ಗುರಿಯಾಗಿಸುತ್ತಿದೆ. ಇತ್ತೀಚೆಗಷ್ಟೇ ಕರಾಚಿಯ ಅಹಮದೀಯ ಮಸೀದಿಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು.

ಉತ್ತರದಲ್ಲಿ ಪಶ್ತೂನಿಸ್ಥಾನದ ಕೂಗು, ಪಾಕಿನ ಪಂಜಾಬಿ ಮತ್ತು ಸಿಂಧಿ ಮುಸಲ್ಮಾನರ ರಾಜಕೀಯ ಮೇಲಾಟವು ಪಾಕಿಸ್ಥಾನದ ವಿವಿಧ ಭಾಗಗಳಲ್ಲಿರುವ ರಾಜಕೀಯ ನೇತಾರರನ್ನು ಹಿಂದಿನಿಂದಲೂ ಕೆರಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ಆಡಳಿತದ ವಿರೋಧೀ ದನಿ ಮೊಳಗಿದೆ. ಪಾಕಿನ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದ್ದರೂ ನೆರೆಯ ಚೀನಾ ಮಾತ್ರ ಯಾವುದೇ ಧನಾತ್ಮಕ ಪ್ರತಿಕ್ರಿಯೆ ತೋರುತ್ತಿಲ್ಲ. ಒಟ್ಟಿನಲ್ಲಿ ದಶಕಗಳ ರಾಜಕೀಯ, ಭೌಗೋಳಿಕ, ಧಾರ್ಮಿಕವಾದ ಸ್ವಯಂಕೃತ ಅಪರಾಧಗಳೇ ವರ್ತಮಾನದ ಪಾಕಿಸ್ಥಾನಕ್ಕೆ ನುಂಗಲಾರದ ತುತ್ತಾಗುತ್ತಿವೆ. ರಾಜಕೀಯ ಅಸ್ಥಿರತೆಯ ಮಧ್ಯೆ ನಾಗರಿಕ ದಂಗೆ ಆರಂಭವಾದಲ್ಲಿ ಪಾಕ್ ಮೂರು ಭಾಗವಾದರೂ ಅಚ್ಚರಿಯಿಲ್ಲ!

✍️ವಿವೇಕಾದಿತ್ಯ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top