News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರತಿ ಮಗುವಿನ ಜನನಕ್ಕೆ 100 ಗಿಡ ನೆಡುವ ಉಪಕ್ರಮ ಆರಂಭಿಸಿದ ಸಿಕ್ಕಿಂ

ನವದೆಹಲಿ: ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ತಮ್ಮ ರಾಜ್ಯದಲ್ಲಿ ಜನಿಸಿದ ಪ್ರತಿ ಮಗುವಿಗೆ 100 ಗಿಡಗಳನ್ನು ನೆಡುವ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ.

‘ಮೇರೋ ರುಖ್ ಮೇರೋ ಸಂತತಿ’ (ಮರವನ್ನು ನೆಡಿರಿ, ಪೀಳಿಗೆ ಉಳಿಸಿ) ಎಂಬ ಉಪಕ್ರಮವು ಜನನದ ನೆನಪಿಗಾಗಿ ಗಿಡಗಳನ್ನು ನೆಡುವ ಮೂಲಕ ಪೋಷಕರು, ಮಕ್ಕಳು ಮತ್ತು ಪ್ರಕೃತಿಯ ನಡುವಿನ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

”ಮಗು ಬೆಳೆದಂತೆ ಮರಗಳು ಬೆಳೆಯುವುದನ್ನು ನೋಡುವುದು ನವಜಾತ ಶಿಶುವನ್ನು ಸ್ವಾಗತಿಸುವ ಮತ್ತು ಈ ಭೂಮಿಗೆ ಅವರ ಆಗಮನವನ್ನು ಸ್ಮರಿಸುವ ಸಾಂಕೇತಿಕ ಮಾರ್ಗವಾಗಿದೆ. ಭಾರತದಲ್ಲಿ ಈ ರೀತಿಯ ನವೀನ ಹಸಿರು ಉಪಕ್ರಮ ಇದೇ ಮೊದಲು” ಎಂದು ತಮಾಂಗ್ ಹೇಳಿದ್ದಾರೆ.

ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಕೆಲವು ನವ ಪೋಷಕರಿಗೆ ಸಸಿಗಳನ್ನು ವಿತರಿಸಿದರು.

ಅರಣ್ಯ ಇಲಾಖೆ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ಈ ಉಪಕ್ರಮವು ಪ್ರಕೃತಿಯ ಬಗ್ಗೆ ಜನರ ಮನೋಭಾವವನ್ನು ಪರಿವರ್ತಿಸುತ್ತದೆ ಮತ್ತು ಹೆರಿಗೆಯ ನೆನಪಿಗಾಗಿ ನೆಡುವ ಸಸಿಗಳು ತಲೆಮಾರುಗಳ ನಡುವೆ ಸೇತುವೆಯನ್ನು ನಿರ್ಮಿಸುತ್ತದೆ ಎಂದಿದ್ದಾರೆ.

ಸಿಕ್ಕಿಂ ಸಮಾಜವು ಅನಾದಿ ಕಾಲದಿಂದಲೂ ಪ್ರಕೃತಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎಂದು ತಮಾಂಗ್ ಹೇಳಿದರು.

“ನಾವು ನಮ್ಮ ಪರ್ವತಗಳು, ಸರೋವರಗಳು, ನದಿಗಳು, ಗುಹೆಗಳನ್ನು ಮಾತ್ರ ಗೌರವಿಸುವುದಿಲ್ಲ,  ಇಡೀ ಭೂಮಂಡಲವನ್ನು ಪವಿತ್ರವೆಂದು ಪೂಜಿಸುತ್ತೇವೆ” ಎಂದಿದ್ದಾರೆ.

”ಈ ಉಪಕ್ರಮವು ಪ್ರಕೃತಿಯೊಂದಿಗೆ ನಮ್ಮ ಸಮಾಜದ ಹಳೆಯ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಮರ ಮತ್ತು ಮಗು ಎರಡೂ ಸೂರ್ಯನ ಕಡೆಗೆ ತಲುಪಲು ಸಾಧ್ಯವಾಗುವಂತಹ ಪರಿಸರ ವ್ಯವಸ್ಥೆಯನ್ನು ರಚಿಸುವ ಆಕಾಂಕ್ಷೆಯನ್ನು ಇದು ಹೊಂದಿದೆ, ಇದು ಚೈತನ್ಯ, ಆರೋಗ್ಯ ಮತ್ತು ಸಂತೋಷದ ಭರವಸೆಯನ್ನು ನೀಡುವ ಪ್ರಕಾಶಮಾನವಾದ ನಾಳೆಗಾಗಿನ ಉಪಕ್ರಮವಾಗಿದೆ” ಎಂದು ಅವರು ಹೇಳಿದ್ದಾರೆ.

ಹೊಸ ಪೋಷಕರೊಂದಿಗೆ ಸಂಪರ್ಕ ಸಾಧಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ವಾಟ್ಸಾಪ್, ಇಮೇಲ್ ಮತ್ತು ವೆಬ್ ಪೋರ್ಟಲ್ ಅನ್ನು ಸಕ್ರಿಯಗೊಳಿಸಲಾಗಿದೆ ಎಂದು ಅವರು ಹೇಳಿದರು.

ಸಿಕ್ಕಿಂ ಮಾಹಿತಿ ಆಯೋಗದ ಪ್ರಕಾರ ಸಿಕ್ಕಿಂ ಸುಮಾರು 6.32 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top