ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ರಾಜ್ಯದಾದ್ಯಂತ ಹೋಗಿ ಬಂದಿದ್ದೇನೆ. ಪ್ರಥಮ ಬಾರಿ ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿ ಅತ್ಯಂತ ಪ್ರಬಲವಾಗಿ 140ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ. ಮಿಕ್ಕಿದ ಕ್ಷೇತ್ರಗಳಲ್ಲೂ ಗರಿಷ್ಠ ಪೈಪೋಟಿ ನೀಡಲಿದೆ ಎಂದು ನುಡಿದರು.
ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಇದ್ದು, ಕಾಂಗ್ರೆಸ್ನವರು ಹತಾಶರಾಗಿ ಅವರ ವಿಫಲತೆ ಮುಚ್ಚಿಕೊಳ್ಳಲು ಸುಳ್ಳು ಭರವಸೆ ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಜೊತೆಗೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ದೇವನಹಳ್ಳಿ ಪ್ರಮುಖ ಕ್ಷೇತ್ರ. ವಿಮಾನನಿಲ್ದಾಣ ಆದ ಬಳಿಕ ಅದರ ಪ್ರಾಮುಖ್ಯತೆ ಹೆಚ್ಚಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಅಲ್ಲಿ ಗೆಲ್ಲಲು ಬಯಸುತ್ತಿವೆ ಎಂದು ಅವರು ತಿಳಿಸಿದರು. ಹೊಸ ಶಕ್ತಿ ಜೋಡಣೆಯಿಂದ ದೇವನಹಳ್ಳಿ ಚುನಾವಣೆ ಪೈಪೋಟಿಯಿಂದ ಕೂಡಿರಲಿದೆ. ದೇವನಹಳ್ಳಿಯಲ್ಲಿ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.
ನಿಮ್ಮೆಲ್ಲರ ಸೇರ್ಪಡೆ ಯೋಗ್ಯ ನಿರ್ಣಯ. ಇದು ಬದಲಾವಣೆಯ ಗಾಳಿಯ ದಿಕ್ಸೂಚಿ. ಕಾಂಗ್ರೆಸ್- ಜೆಡಿಎಸ್ ಆಡಳಿತದಿಂದ ಜನರು ಬೇಸತ್ತಿದ್ದರು. ನಮ್ಮ ಪಕ್ಷ ಬಂದ ಬಳಿಕ ಅಭಿವೃದ್ಧಿಗೆ ಗರಿಷ್ಠ ಆದ್ಯತೆ ನೀಡಿದೆ. ಎಸ್ಸಿ, ಎಸ್ಟಿ ಸಮಾಜದ ಅಭ್ಯುದಯಕ್ಕಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ರೈತರು, ಯುವಕರು, ಮಹಿಳೆಯರ ವಿಶೇಷ ಯೋಜನೆಗಳನ್ನು ನಮ್ಮ ಪಕ್ಷ ಅನುಷ್ಠಾನಕ್ಕೆ ತಂದಿದೆ. ಇವುಗಳ ಬಗ್ಗೆ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ಜನರ ಭಾವನೆಗಳಿಗೆ ಕಾರ್ಯಕರ್ತರು ಧ್ವನಿಯಾಗಿ ಮತ್ತೊಮ್ಮೆ ಬಿಜೆಪಿ ಸ್ಪಷ್ಟ ಬಹುಮತದಿಂದ ಆರಿಸಿ ಬಂದು ಅಭಿವೃದ್ಧಿ ಯೋಜನೆ ಜಾರಿಗೊಳಿಸಲು ನೆರವಾಗಬೇಕು ಎಂದು ಮನವಿ ಮಾಡಿದರು.
ಕಳೆದ ಬಾರಿ ಪಿಳ್ಳಮುನಿಶಾಮಪ್ಪ ಅವರ ನೇತೃತ್ವದಲ್ಲಿ ದೊಡ್ಡ ತಂಡ ಬಿಜೆಪಿ ಸೇರಿತ್ತು. ಈ ಬಾರಿ ಮತ್ತಷ್ಟು ಕಾಂಗ್ರೆಸ್- ಜೆಡಿಎಸ್ ಪ್ರಮುಖರು ಸೇರಿದ್ದಾರೆ. ಇದನ್ನು ನೋಡಿದಾಗ ದೇವನಹಳ್ಳಿಯಲ್ಲಿ ಇವೆರಡು ಪಕ್ಷಗಳಲ್ಲಿ ಯಾರೂ ಪ್ರಮುಖರು ಉಳಿದಿಲ್ಲ ಎಂದು ಅನಿಸುತ್ತಿದೆ ಎಂದು ನುಡಿದರು. ದೇವನಹಳ್ಳಿ ಗೆಲುವಿಗೆ ಪಕ್ಷ ಶಕ್ತಿ ತುಂಬಲಿದೆ. ಮತ್ತು ಹೆಚ್ಚಿನ ಶ್ರಮ ಹಾಕಲಿದೆ. ನಾನೇ ದೇವನಹಳ್ಳಿಗೆ ಭೇಟಿ ಕೊಡಲಿದ್ದೇನೆ. ಅಲ್ಲೊಂದು ಬೃಹತ್ ರ್ಯಾಲಿ ಮಾಡೋಣ ಎಂದರು.
ನಾಡಿನ ಸಮಗ್ರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಮುಂದುವರಿಸಲಿದ್ದೇವೆ ಎಂದು ತಿಳಿಸಿದರು. ದೇವನಹಳ್ಳಿಯಲ್ಲಿ ವಿಜಯ ಪತಾಕೆ ಹಾರಿಸೋಣ; ಅಲ್ಲಿ ಗೆಲ್ಲಿಸಿಕೊಡಿ. ಕರ್ನಾಟಕದಲ್ಲಿ ಗೆಲ್ಲಿಸುವುದು ನನಗೆ ಗೊತ್ತಿದೆ ಎಂದು ತಿಳಿಸಿದರು.
ರಾಜ್ಯದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ|| ಕೆ. ಸುಧಾಕರ್, ಸಂಸದ ಎಸ್.ಮುನಿಸ್ವಾಮಿ, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.