News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕುರ್ಚಿಗಾಗಿ ಕಾಂಗ್ರೆಸ್ ಕನಸು ಕಾಣುತ್ತಿದೆ: ಜೆಪಿ ನಡ್ಡಾ

ಬೆಂಗಳೂರು: ರಾಜ್ಯ ಕಾಂಗ್ರೆಸ್ಸನ್ನು ಮತ್ತೆ ಮನೆಯಲ್ಲೇ ಕೂರಿಸಲು ಕರ್ನಾಟಕದ ಜನರು ನಿರ್ಧರಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ರಾಜ್ಯದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿ, ಜನಪರ, ಭ್ರಷ್ಟಾಚಾರರಹಿತ ಪಕ್ಷ ಬಿಜೆಪಿ. ಭ್ರಷ್ಟಾಚಾರ, ಕುಟುಂಬ ವಾದ ಮತ್ತು ಜಾತಿವಾದ ಎಂದರೆ ಕಾಂಗ್ರೆಸ್. ಕುರ್ಚಿಗಾಗಿ ಕಾಂಗ್ರೆಸ್ ಕನಸು ಕಾಣುತ್ತಿದೆ. ಕಾಂಗ್ರೆಸ್ಸಿಗರು ಜಗಳ ಮಾಡುತ್ತಿರಲಿ. ಆಡಳಿತ ಮಾಡುವ ಕೆಲಸವನ್ನು ಬಿಜೆಪಿಗೆ ವಹಿಸಿ ಎಂದು ಮನವಿ ಮಾಡಿದರು.

ದೇಶದ ಮತ್ತು ಕರ್ನಾಟಕದ ಅಭಿವೃದ್ಧಿಗೆ ಗರಿಷ್ಠ ಯೋಜನೆಗಳನ್ನು ಬಿಜೆಪಿ ಸರಕಾರಗಳು ನೀಡಿವೆ. ಕಾಂಗ್ರೆಸ್ಸಿಗರು ಕರ್ನಾಟಕಕ್ಕಾಗಿ ಏನಾದರೂ ಅಭಿವೃದ್ಧಿ ಯೋಜನೆ ಜಾರಿಗೊಳಿಸಿದ್ದಾರಾ? ಒಂದಾದರೂ ಯೋಜನೆಯನ್ನು ಅವರಿಂದ ಹೆಸರಿಸಲು ಸಾಧ್ಯವೇ ಎಂದು ಸವಾಲು ಹಾಕಿದರು.

ಪ್ರಧಾನಿಯವರು ಕಲ್ಬುರ್ಗಿಗೆ ಭೇಟಿ ನೀಡಿದ್ದು, ಲಂಬಾಣಿ ಜನಾಂಗದವರಿಗೆ ಹಕ್ಕುಪತ್ರ ನೀಡಿದ್ದನ್ನು ವಿವರಿಸಿದ ಅವರು, ವಂದೇ ಭಾರತ್ ರೈಲಿನ ಮೂಲಕ ಭಾರತದ ನಕ್ಷೆ ಸಂಪೂರ್ಣ ಬದಲಾಗಲಿದೆ ಎಂದು ನುಡಿದರು. ನಾಡಪ್ರಭು ಕೆಂಪೇಗೌಡರಿಗೆ ಗೌರವ ನೀಡಿದ್ದನ್ನು ವಿವರಿಸಿದ ಅವರು, ಮಂಗಳೂರು ರಿಫೈನರೀಸ್‍ಗೆ, ಹೆದ್ದಾರಿಗಳ ನಿರ್ಮಾಣಕ್ಕೆ ಗರಿಷ್ಠ ಬಂಡವಾಳ ಹೂಡಿದ್ದನ್ನು ಮತ್ತು ಇದರಿಂದ ಸಮಗ್ರ ವಿಕಾಸದ ಕುರಿತು ತಿಳಿಸಿದರು.

ಬೆಂಗಳೂರು ಸುತ್ತಮುತ್ತ ಗರಿಷ್ಠ ಬಂಡವಾಳ ಹೂಡಿಕೆ ಆಗುತ್ತಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿಯಿಂದ ರೈತರು, ನೇಕಾರರು ಸೇರಿ ಹಲವು ಸಮುದಾಯದವರಿಗೆ ಲಾಭ ಸಿಗುತ್ತಿದೆ ಎಂದರಲ್ಲದೆ, ಮೀಸಲಾತಿ ಹೆಚ್ಚಿಸಿದ್ದರಿಂದ ಆಗಿರುವ ಲಾಭವನ್ನೂ ವಿವರಿಸಿದರು.

ನಮ್ಮ ದೇಶದ ಅರ್ಥವ್ಯವಸ್ಥೆ ಜಗತ್ತಿನಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದೆ. ಕರ್ನಾಟಕದ ಅರ್ಥವ್ಯವಸ್ಥೆಯೂ ಅತ್ಯಂತ ಸದೃಢವಾಗಿದೆ ಎಂದು ವಿವರಿಸಿದರು. ನಿನ್ನೆ 70 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡಲಾಗಿದೆ ಎಂದು ತಿಳಿಸಿದರು.

ಮತದಾನ ಮಾಡುವ ಬೆರಳು ಅತ್ಯಂತ ಮಹತ್ವವನ್ನು ಹೊಂದಿದೆ. ಅದನ್ನು ಜವಾಬ್ದಾರಿಯಿಂದ ಬಳಸಲು ಮನವಿ ಮಾಡಿದರು. ಭಾರತದಲ್ಲಿ ಕೋವಿಡ್ ವಿರುದ್ಧ ಶೇ 100 ಲಸಿಕೆ ನೀಡಲಾಗಿದೆ. ಬೂಸ್ಟರ್ ಡೋಸ್ ಕೊಡಲಾಗಿದೆ. ಅಮೇರಿಕಾ, ಯುರೋಪ್‍ನಲ್ಲಿ ಲಸಿಕೆ ವಿಚಾರದಲ್ಲಿ ಸಮಸ್ಯೆ ಇದೆ. ಚೀನಾ ಈ ವಿಚಾರದಲ್ಲಿ ಅತ್ಯಂತ ಹಿಂದುಳಿದಿದೆ. ಮೋದಿಜಿ ನಮಗೆಲ್ಲರಿಗೆ ಸುರಕ್ಷಾ ಚಕ್ರ ನೀಡಿದ್ದಾರೆ ಎಂದರು.

ಭಾರತವೀಗ ನೆರವು ಕೇಳುವ ರಾಷ್ಟ್ರವಾಗಿ ಉಳಿದಿಲ್ಲ. ಕೋವಿಡ್ ಲಸಿಕೆ ಸೇರಿ ವಿವಿಧ ಸೌಲಭ್ಯಗಳನ್ನು ಇತರ ದೇಶಗಳಿಗೆ ಕೊಡುವ ದೇಶವಾಗಿ ಹೊರಹೊಮ್ಮಿದೆ ಎಂದರಲ್ಲದೆ, ರಷ್ಯಾ- ಉಕ್ರೇನ್ ಯುದ್ಧದ ವೇಳೆ ಭಾರತದ ವಿದ್ಯಾರ್ಥಿಗಳನ್ನು ತಕ್ಷಣ ಕರೆತರಲು ಜವಾಬ್ದಾರಿಯಿಂದ ನಮ್ಮ ಪ್ರಧಾನಿಯವರು ಕಾರ್ಯ ನಿರ್ವಹಿಸಿದ್ದನ್ನು ಉಲ್ಲೇಖಿಸಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ ಮೂಲಕ 80 ಕೋಟಿ ಬಡಜನರ ರಕ್ಷಣೆ ಸಾಧ್ಯವಾಯಿತು. ದೇಶದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣವಾಗಿದೆ. ದೇಶದ ಮಹಿಳೆಯರ ಘನತೆ ಕಾಪಾಡಲು ಇದರಿಂದ ಸಾಧ್ಯವಾಗಿದೆ. ಇದು ಮಹಿಳಾ ನೈಜ ಸಶಕ್ತೀಕರಣ. ಕಾಂಗ್ರೆಸ್ ಸರಕಾರ ಇದ್ದಾಗ ಮನೆಗಳ ನಿರ್ಮಾಣ ಸಂಖ್ಯೆ ಒಂದೋ ಎರಡೋ ಇರುತ್ತಿತ್ತು. ಈಗ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿಗೂ ಹೆಚ್ಚು ಮನೆ ನಿರ್ಮಾಣವಾಗಿದೆ. ಕರ್ನಾಟಕದಲ್ಲೂ ಲಕ್ಷಗಟ್ಟಲೆ ಮನೆಗಳ ನಿರ್ಮಾಣ ಆಗಿದೆ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ್ ಯೋಜನೆಯಡಿ ಸಂಕಷ್ಟದಲ್ಲಿರುವ ಬಡವರಿಗೆ ನೆರವಾಗುತ್ತಿದ್ದೇವೆ. 50 ಕೋಟಿ ಜನರಿಗೆ 5 ಲಕ್ಷದ ವಿಮೆ ನೀಡಲಾಗಿದೆ. ಯಡಿಯೂರಪ್ಪ ಅವರು ಮತ್ತು ನಂತರ ಬೊಮ್ಮಾಯಿಯವರು ಇಲ್ಲಿ ಆಡಳಿತ ನಡೆಸಿದ್ದಾರೆ. ಉತ್ತಮ ಆಡಳಿತ ಕೊಟ್ಟಿದ್ದಾರೆ. ಭಾರತದ ವಿಕಾಸ, ಸಮಗ್ರ ಅಭಿವೃದ್ಧಿಗೆ ನಾವು ಶ್ರಮಿಸಿದ್ದೇವೆ ಎಂದ ಅವರು ಕುಟುಂಬವಾದ, ಜಾತಿವಾದದ ಮಂತ್ರ ಕಾಂಗ್ರೆಸ್ ಪಕ್ಷದ್ದು ಎಂದು ಟೀಕಿಸಿದರು. ಕರ್ನಾಟಕದ ಸಂಸ್ಕೃತಿ, ವಿಚಾರ, ಧಾರ್ಮಿಕ ಕ್ಷೇತ್ರಗಳಿಗೆ ಗೌರವ ಕೊಡುವ ನಾಯಕ ನಮ್ಮ ಆದರಣೀಯ ನರೇಂದ್ರ ಮೋದಿಜಿ ಎಂದು ವಿವರಿಸಿದರು.

ರಾಹುಲ್ ಗಾಂಧಿ ಅವರ ಹಿರಿಯರು ಭಾರತ್ ಥೋಡೋ ಮಾಡಿದವರು. ಅವರು ಭಾರತ ಜೋಡಿಸುವ ಯಾತ್ರೆ ಮಾಡುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಕರ್ನಾಟಕವು ಮಹತ್ವದ ಕೊಡುಗೆ ನೀಡಿದೆ ಎಂದು ಮೆಚ್ಚುಗೆ ಸೂಚಿಸಿದರು. ಡಿಬಿಟಿ ಮಾಧ್ಯಮದ ಮೂಲಕ ಸಾವಿರಾರು ಕೋಟಿ ಮೊತ್ತವನ್ನು ಮೋದಿಜಿ ಅವರು ಜನರಿಗೆ ತಲುಪಿಸಿದ್ದಾರೆ ಎಂದು ತಿಳಿಸಿದರು.

ಆಪ್ಟಿಕಲ್ ಫೈಬರ್ ಪ್ರಮಾಣ 2 ಲಕ್ಷಕ್ಕೂ ಹೆಚ್ಚು ಕಿಮೀಗೆ ಏರಿದೆ. ಹಿಂದೆ ಶೇ 92ರಷ್ಟು ಮೊಬೈಲ್ ವಿದೇಶದಿಂದ ಬರುತ್ತಿತ್ತು. ಭಾರತವು ಈಗ 97 ಶೇಕಡಾದಷ್ಟು ಮೊಬೈಲ್‍ಗಳನ್ನು ಇಲ್ಲಿಯೇ ಉತ್ಪಾದಿಸಿ ಮಾರಾಟ ಮಾಡುತ್ತಿದೆ ಎಂದು ವಿವರಿಸಿದರು. ದೇಶೀಯ ಇಲೆಕ್ಟ್ರಾನಿಕ್ ಸಾಮಗ್ರಿ ಉತ್ಪಾದನೆ-ಮಾರಾಟ ತೀವ್ರವಾಗಿ ಹೆಚ್ಚಾಗಿದೆ. ಸ್ಟೀಲ್ ಉದ್ಯಮದಲ್ಲಿ ಭಾರತವು 4ನೇ ಸ್ಥಾನದಿಂದ ಒಂದನೇ ಸ್ಥಾನಕ್ಕೆ ಬಂದಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತವು ಜಪಾನನ್ನು ಹಿಂದಿಕ್ಕಿದೆ ಹಾಗೂ ತೃತೀಯ ಸ್ಥಾನಕ್ಕೆ ಏರಿದೆ ಎಂದರು.

ಹಣಬಲ, ತೋಳ ಬಲ ತೋರುವ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರೇ ಇಲ್ಲ. ಜನರಲ್ಲಿ ಗಲಭೆ ಎಬ್ಬಿಸುವ ಪಕ್ಷ ಅದು. ಬಿಜೆಪಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲಮಂತ್ರದೊಂದಿಗೆ ಮುನ್ನಡೆದಿದೆ ಎಂದು ಅವರು ವಿಶ್ಲೇಷಿಸಿದರು. ವಿಜಯಪುರದ ಜ್ಞಾನಯೋಗಾಶ್ರಮದ ಮಠಕ್ಕೆ ಭೇಟಿ ಕೊಡುವ ಸದವಕಾಶ ನನಗೆ ಸಿಕ್ಕಿದೆ. ಇಲ್ಲಿನ ಜನರ ಉತ್ಸಾಹ, ದೊಡ್ಡ ಸಂಖ್ಯೆಯ ಸೇರ್ಪಡೆಯು ಬಿಜೆಪಿ ಗೆಲುವಿನ ಸಂಕೇತ ಎಂದು ಅವರು ತಿಳಿಸಿದರು.

ಪಕ್ಷದ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಪಕ್ಷ ಶ್ರಮಿಸಿದೆ. ಬಿಜೆಪಿಯ ಗೆಲುವಿಗೆ ಪಕ್ಷ ಮಾಡಿದ ಕಾರ್ಯಗಳು ನೆರವಾಗಲಿದೆ ಎಂದು ತಿಳಿಸಿದರು.

ಮನೆಮನೆಗೆ ಹೋಗಿ ಮತದಾರರ ಮನ ಒಲಿಸಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್‍ನಲ್ಲಿ ಸಮರ್ಥ ನಾಯಕರೇ ಇಲ್ಲ ಎಂದು ಟೀಕಿಸಿದ ಅವರು, ಕಾಂಗ್ರೆಸ್ಸಿಗರು ಕೇವಲ ನಾಟಕ ಮಾಡುವವರು. ದೇಶ, ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ. ಆ ಪಕ್ಷದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಬ್ಬರು ಜಗತ್ತೇ ಮೆಚ್ಚಿದ ಪ್ರಧಾನಿಯವರನ್ನು ಟೀಕಿಸುತ್ತಾರೆ. ಅದಕ್ಕೆ ಜನರು ತಕ್ಕ ಉತ್ತರ ಕೊಡಬೇಕು ಎಂದು ವಿನಂತಿಸಿದರು.

ಈ ಬಾರಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಬೇಕಿದೆ. ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷವು 140ಕ್ಕೂ ಹೆಚ್ಚು ಸ್ಥಾನ ಪಡೆಯಲು ನಾವೆಲ್ಲರೂ ಪ್ರಯತ್ನ ಮಾಡಬೇಕೆಂದು ವಿನಂತಿಸಿದರು. ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಮಾಡುತ್ತಿದ್ದೇವೆ. ನೀರಾವರಿಗೆ ಆದ್ಯತೆ ಕೊಟ್ಟಿದ್ದೇವೆ. ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಬಿಜೆಪಿಯ ಕಮಲ ಚಿಹ್ನೆಯನ್ನು ಅರಳಿಸಬೇಕೆಂದು ಕೋರಿದರು.

ರಾಜ್ಯದ ಸಚಿವ ಡಾ. ಅಶ್ವತ್ಥನಾರಾಯಣ ಅವರು ಮಾತನಾಡಿ, ಕಾರ್ಯಕರ್ತರು ವಿಜಯ ಸಂಕಲ್ಪ ಅಭಿಯಾನದಲ್ಲಿ ಸಕ್ರಿಯರಾಗಿ ಭಾಗವಹಿಸಲು ಮನವಿ ಮಾಡಿದರು. ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಕೋರಿದರು. ಪಕ್ಷವು ಈ ಬಾರಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಪಡೆಯುವಂತಾಗಬೇಕಿದೆ. ಸಮೃದ್ಧ, ಭವ್ಯ ಕರ್ನಾಟಕ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಂಸದರು, ಶಾಸಕರು, ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top