News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಡಿ 2 ಕೋಟಿ ಮತದಾರರ ಸಂಪರ್ಕಿಸುವ ಗುರಿ

ಬೆಂಗಳೂರು: ಬಿಜೆಪಿ ವಿಜಯ ಸಂಕಲ್ಪ ಅಭಿಯಾನವನ್ನು ಇದೇ ಜನವರಿ 21ರಿಂದ 29ರವರೆಗೆ ಹಮ್ಮಿಕೊಳ್ಳಲಾಗುವುದು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದ ಸಿಂಧಗಿಯಲ್ಲಿ ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ ಎಂದು ಅಭಿಯಾನದ ರಾಜ್ಯ ಸಂಚಾಲಕ ಮತ್ತು ರಾಜ್ಯದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ|| ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಸಿಎಂ ಮತ್ತು ಮಾರ್ಗದರ್ಶಕರಾದ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು 21ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.

ಕೇಂದ್ರ- ರಾಜ್ಯ ಸರಕಾರಗಳ ಸಾಧನೆ, ಕೊಡುಗೆ, ಕಾರ್ಯಕ್ರಮಗಳ ಕುರಿತು ಕರಪತ್ರಗಳನ್ನು ಹಂಚಿಕೆ ಮಾಡಲಾಗುವುದು. 2 ಕೋಟಿಗಿಂತ ಹೆಚ್ಚು ಮತದಾರರ ಸಂಪರ್ಕ ಮಾಡಿ, ಅವರ ಮನೆಮನೆಗೆ ತೆರಳಿ ಕರಪತ್ರ ಹಂಚಲಿದ್ದೇವೆ. ಫಲಾನುಭವಿಗಳನ್ನು ಮಾತನಾಡಿಸಿ ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸಲಿದ್ದೇವೆ. ಬಿಜೆಪಿ ಸರಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ಆದುದನ್ನು ತಿಳಿಸಲಿದ್ದೇವೆ. ವಾಹನಗಳ ಮೇಲೆ ಸ್ಟಿಕರ್ ಹಾಕಿಸುವ ಕೆಲಸವೂ ನಡೆಯಲಿದೆ ಎಂದು ವಿವರ ನೀಡಿದರು.

ಇದಕ್ಕಾಗಿ ಪೂರ್ವಭಾವಿ ಸಭೆಗಳನ್ನು ಈಗಾಗಲೇ 10 ವಿಭಾಗ ಮಟ್ಟದಲ್ಲಿ ನಡೆಸಲಾಗಿದೆ. 39 ಸಂಘಟನಾತ್ಮಕ ಜಿಲ್ಲೆಗಳು, 312 ಮಂಡಲಗಳಲ್ಲಿ ಸಭೆಗಳನ್ನು ಏರ್ಪಡಿಸಿ ಸಮಿತಿಗಳನ್ನೂ ರಚಿಸಲಾಗಿದೆ ಎಂದು ತಿಳಿಸಿದರು. ಏಕಕಾಲದಲ್ಲಿ ಎಲ್ಲ ಬೂತ್‍ಗಳಲ್ಲೂ, ಮಂಡಲಗಳಲ್ಲೂ ಅಭಿಯಾನ ಮುಂದುವರಿಯಲಿದೆ ಎಂದು ತಿಳಿಸಿದರು. ಕೇಂದ್ರ- ರಾಜ್ಯಗಳ ಸಚಿವರು, ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ, ವಿಧಾನಪರಿಷತ್ತಿನ ಸದಸ್ಯರು, ಪಕ್ಷದ ಪ್ರಮುಖರು ಈ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು.

ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನವೂ ನಡೆಯಲಿದೆ. ಒಂದು ಕೋಟಿಗೂ ಹೆಚ್ಚು ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದ್ದೇವೆ. ಸಮಾಜದ ಸಮಸ್ತರನ್ನು ಪಕ್ಷದ ಜೊತೆ ಸೇರ್ಪಡೆ ಮಾಡಿ, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರನ್ನೂ ಜೊತೆಗೂಡಿಸಲಾಗುವುದು. ಬಿಜೆಪಿ ನೇತೃತ್ವದ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೂತ್ ವಿಜಯ ಅಭಿಯಾನವನ್ನು ಪಕ್ಷವು ಈಗಾಗಲೇ ಯಶಸ್ವಿಯಾಗಿ- ಅಭೂತಪೂರ್ವವಾಗಿ ಪೂರ್ಣಗೊಳಿಸಿದೆ ಎಂದು ಅವರು ತಿಳಿಸಿದರು. 58 ಸಾವಿರಕ್ಕೂ ಹೆಚ್ಚು ಬೂತ್ ಇದ್ದು, ಆ ಪೈಕಿ 51 ಸಾವಿರಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಲಾಗಿದೆ. ಪೇಜ್ ಪ್ರಮುಖರನ್ನು ನೇಮಿಸಿದ್ದು, 32 ಲಕ್ಷಕ್ಕೂ ಹೆಚ್ಚು ಮನೆಗಳ ಮೇಲೆ ಬಿಜೆಪಿ ಧ್ವಜಗಳನ್ನು ಹಾರಿಸಿದ್ದರ ವಿವರ ನೀಡಿದರು.

ಪಕ್ಷವನ್ನು ಸದೃಢವಾಗಿ ಬೆಳೆಸಲಾಗುವುದು. ಪ್ರತಿ ಬೂತ್‍ನಲ್ಲಿ ಪಕ್ಷವನ್ನು ಸದೃಢ ಪಡಿಸಲಾಗುತ್ತಿದೆ. ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಕನಿಷ್ಠ ಶೇ 90 ಬೂತ್‍ಗಳಲ್ಲಿ ಕೇಳಲಿದ್ದೇವೆ. ಕನಿಷ್ಠ 5 ಲಕ್ಷ ಗೋಡೆ ಬರಹಗಳನ್ನೂ ಮಾಡುತ್ತೇವೆ. ಕಾರು, ಬೈಕ್ ಮತ್ತಿತರ ವಾಹನಗಳ ಮೇಲೆ ಹಚ್ಚಲು ಕನಿಷ್ಠ 3 ಕೋಟಿ ಸ್ಟಿಕರ್ ಹಂಚಲಿದ್ದೇವೆ ಎಂದು ತಿಳಿಸಿದರು.

ಕೆಲವರು ಬಸ್ ಮೂಲಕ ಕೆಲವಷ್ಟು ಜನರನ್ನು ತಲುಪಬಹುದು. ನಾವು ಮನೆಮನೆಗೆ ತೆರಳಲಿದ್ದೇವೆ. ಇದನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನುಡಿದರು. ಕಿಸಾನ್ ಸಮ್ಮಾನ್, ಉಜ್ವಲ, ಮುದ್ರಾ ಸೇರಿದಂತೆ ನಾವು ಜಾರಿಗೊಳಿಸಿದ ಹತ್ತಾರು ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸುತ್ತೇವೆ ಎಂದು ವಿವರಿಸಿದರು.

ಸಮಸ್ಯೆ ಆಗಿರುವುದೇ ಕಾಂಗ್ರೆಸ್. ಅತಿವೃಷ್ಟಿ, ಬರ ಬಂದರೆ ಮಲಗಿಯೇ ಇರುತ್ತೇವೆ. 120 ಸೀಟಿದ್ದುದು ಕಳೆದ ಬಾರಿ 80 ಆದುದೇ ಕಾಂಗ್ರೆಸ್ ಸಾಧನೆ. ಅವರಲ್ಲಿ ಒಗ್ಗಟ್ಟಿಲ್ಲ. ಸೀಟನ್ನು 50ಕ್ಕಿಂತ ಕಡಿಮೆ ಮಾಡಿಕೊಳ್ಳುವುದೇ ಅವರ ಸಾಧನೆ ಆಗಲಿದೆ ಎಂದು ಡಾ|| ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು.

ನಮ್ಮ ಗ್ರಾಫ್ ಪೂರ್ತಿ ಓಡುತ್ತಿದೆ. ದುರ್ಬಲ ಬೂತ್ ಇದ್ದ ಕಡೆ ಅದನ್ನು ಸಶಕ್ತ ಮಾಡಿದ್ದೇವೆ. 51 ಸಾವಿರ ಬೂತ್‍ಗಳಲ್ಲಿ ಬೂತ್ ವಿಜಯ ಅಭಿಯಾನ ಮಾಡಿದ್ದೇವೆ. ಬೇರೆಯವರಂತೆ ಕೆಲಸ ಅರ್ಧದಲ್ಲಿ ನಿಲ್ಲುವುದಿಲ್ಲ. ಜನಸಂಕಲ್ಪ ಯಾತ್ರೆಗಳು ನೂರಾರು ಜಾಗಗಳಲ್ಲಿ ನಡೆದಿದೆ. ವಿವಿಧ ಸಮಾವೇಶಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು. 58 ಸಾವಿರ ಬೂತ್, 312 ಮಂಡಲ, 38 ಸಂಘಟನಾ ಜಿಲ್ಲೆಗಳಲ್ಲಿ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.

ನೆರೆ ಸಂದರ್ಭದಲ್ಲಿ ಪರಿಹಾರ ಹೆಚ್ಚಳ, ಬೆಳೆ ನಷ್ಟಕ್ಕೆ ಗರಿಷ್ಠ ಸಹಾಯಧನ ನೀಡಲಾಗಿದೆ. ಬೆಳೆ ನಷ್ಟವಾದಾಗ ಕೇವಲ ಒಂದು ವಾರದಲ್ಲಿ ಪರಿಹಾರ ಕೊಟ್ಟಿದ್ದೇವೆ. 2 ವರ್ಷಕ್ಕಿಂತ ಹೆಚ್ಚು ಕಾಲ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇವೆ. ಎಲ್ಲ ಸುಧಾರಣೆಗಳನ್ನೂ ಸಮರ್ಪಕವಾಗಿ ತಲುಪಿಸಿದ್ದೇವೆ. ಕಾಂಗ್ರೆಸ್ ಸರಕಾರದ ಕಾಲದಲ್ಲಿ ನೂರು ರೂಪಾಯಿಗೆ 15 ರೂಪಾಯಿ ಫಲಾನುಭವಿಗೆ ತಲುಪುತ್ತಿತ್ತು. ಇದು ಜನರಿಗೆ ತಿಳಿದಿದೆ. ಆದ್ದರಿಂದ, ಜನರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದರು.

ಕರ್ನಾಟಕದಲ್ಲಿ ಅತಿ ಕಡಿಮೆ ನಿರುದ್ಯೋಗ ಪ್ರಮಾಣ ಇದೆ. ಗರಿಷ್ಠ ಎಫ್‍ಡಿಐ, ಇನೊವೇಟಿವ್ ರಾಜ್ಯ, ತಂತ್ರಜ್ಞಾನ, ಕಂದಾಯ ಕಾಯ್ದೆ, ರೈತರ ಸಮಸ್ಯೆ ಪರಿಹಾರ ಮಾಡಿದ್ದೇವೆ. ಜಲ್‍ಜೀವನ್ ಮಿಷನ್‍ನಡಿ ಪ್ರತಿ ಮನೆಗೆ ಕುಡಿಯುವ ನೀರು ಕೊಡುತ್ತಿದ್ದೇವೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಗರಿಷ್ಠ ಅನುದಾನ ಕೊಟ್ಟಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

300 ನಮ್ಮ ಕ್ಲಿನಿಕ್, ತಾಲ್ಲೂಕು- ಜಿಲ್ಲಾ ಆಸ್ಪತ್ರೆಗಳ ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗಿದೆ. ಹಾಸ್ಟೆಲ್‍ಗಳ ನಿರ್ಮಾಣ ಸೇರಿ ಎಲ್ಲ ವರ್ಗದವರಿಗೆ ತಲುಪುತ್ತಿದ್ದೇವೆ. ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದೇವೆ ಎಂದು ವಿವರ ನೀಡಿದರು.

150 ಕ್ಷೇತ್ರಗಳಲ್ಲಿ ಗೆಲುವಿನ ಮಿಷನ್ ಅನ್ನು ಈಡೇರಿಸಲು ಬಿಜೆಪಿ ಸಿದ್ಧಗೊಂಡಿದೆ. ಪವರ್ ಕಟ್ ಮಾಡಿದ, ಕತ್ತಲಲ್ಲಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯರವರು ಎಲ್ಲಿಂದ ಉಚಿತ ವಿದ್ಯುತ್ ಕೊಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಹದಗೆಡಿಸಿದ್ದನ್ನು ನಾವು ಸರಿಪಡಿಸಿದ್ದೇವೆ ಎಂದು ಡಾ|| ಸಿ.ಎನ್.ಅಶ್ವತ್ಥನಾರಾಯಣ ಅವರು ನುಡಿದರು.

ರಾಮಮಂದಿರ ನಿರ್ಮಾಣ, 370ನೇ ವಿಧಿ ರದ್ದತಿ, ತ್ರಿವಳಿ ತಲಾಖ್ ರದ್ದು, ಗೋಹತ್ಯಾ ನಿಷೇಧ ಸೇರಿ ಅನೇಕ ಮಹತ್ವದ ನಿರ್ಧಾರಗಳನ್ನು ನಮ್ಮ ಡಬಲ್ ಎಂಜಿನ್ ಸರಕಾರ ತೆಗೆದುಕೊಂಡಿದೆ. ಮಹದಾಯಿ, ಕಾವೇರಿ, ಕೃಷ್ಣಾ, ಎತ್ತಿನಹೊಳೆ ಸೇರಿ ನೀರಾವರಿಗೆ ಆದ್ಯತೆ ಕೊಟ್ಟಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಗೆ ಗರಿಷ್ಠ ಆದ್ಯತೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಪಕ್ಷದ ವಿರುದ್ಧ ಇದ್ದರೆ ಅದರದೇ ಆದ ಕ್ರಮವನ್ನು ಅವರು ಎದುರಿಸಬೇಕಾಗುತ್ತದೆ. ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ಇರಬೇಕಾಗುತ್ತದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಕಾಂಗ್ರೆಸ್ ಎಲ್ಲ ಕಡೆ ಮುಳುಗುವ ಹಡಗಾಗಿದೆ. ಅಪ್ರಸ್ತುತ ಪಕ್ಷವಾಗಿದೆ. ಆ ಪಕ್ಷದವರಿಗೆ ಸ್ಪಷ್ಟತೆ ಇಲ್ಲ. ಕೋವಿಡ್ ಲಸಿಕೆ ಪಡೆಯಬೇಡಿ ಎಂದ ಪಕ್ಷವದು. ಈ ಮಟ್ಟದಲ್ಲಿ ‘ನಾ ನಾಯಕಿ’ ಕಾರ್ಯಕ್ರಮ ಅದಲ್ಲ. ನಾ ನಾಲಾಯಕ್ ಕಾರ್ಯಕ್ರಮವದು. ಉತ್ತರ ಪ್ರದೇಶದಂತೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಅಭಿಯಾನದ ಸಹ ಸಂಚಾಲಕ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top