News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವಕ್ಕೆ ಅನಿವಾಸಿ ಭಾರತೀಯರ ಕೊಡುಗೆಗಳು ಸ್ಮರಣೀಯ ಮತ್ತು ಪ್ರೇರಣೀಯ

ಇಂದು ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳಿದ್ದಾರೆ. ಹೆಚ್ಚಿನವರು ತಮ್ಮ ಪರಿಶ್ರಮ ಸಾಧನೆಗಳ ಮೂಲಕ ಇತರರಿಗೂ ಮಾದರಿಯೆನಿಸಿದ್ದಾರೆ. ಈಗಾಗಲೇ ಅಮೇರಿಕಾದಲ್ಲಿ ಒಟ್ಟು 30 ಲಕ್ಷಕ್ಕೂ ಅಧಿಕ ಮಂದಿ ಅನಿವಾಸಿ ಭಾರತೀಯರಿದ್ದಾರೆ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಅಮೇರಿಕಾ, ಕೆನಡಾ ಸೇರಿದಂತೆ ವಿಶ್ವದ ಬಲಿಷ್ಠ ದೇಶಗಳ ನಾಯಕತ್ವ ಸ್ಥಾನದಲ್ಲಿ ಭಾರತೀಯ ಮೂಲದ ವ್ಯಕ್ತಿಗಳೇ ಇರುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ಆಯ್ಕೆಯಾದುದು ಇದರ ಮುನ್ನಡಿಯೆನ್ನಬಹುದೇನೋ. ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಪ್ರತಿಭಾ ಪಲಾಯನ ನಡೆಯುತ್ತಿದೆ, ಇಲ್ಲಿನ ಪ್ರತಿಭಾವಂತರು ವಿದೇಶಗಳಿಗೆ ತೆರಳಿ ಅಲ್ಲಿ ತಮ್ಮ ಸೇವೆಯನ್ನು ಯಾಕೆ ನೀಡುತ್ತಾರೆ ಎಂಬಂತಹ ಪ್ರಶ್ನೆ ಬಹು ದೊಡ್ಡದಾಗಿ ಮೂಡಿತ್ತು. ಆದರೀಗ ಇದರ ಪ್ರಯೋಜನವನ್ನು ಭಾರತ ದೇಶವೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಡೆಯುತ್ತಿದೆ ಎಂದರೆ ತಪ್ಪಲ್ಲ.

ಜಾಗತಿಕ ಹಳ್ಳಿಯಲ್ಲಿ ಅನಿವಾಸಿ ಭಾರತೀಯರು ಸಹಿತ ಭಾರತೀಯ ಸಂಜಾತರ ಸಾಧನೆಯು ಗಣನೀಯ ಹೆಚ್ಚಾಗುತ್ತಲೇ ಇದೆ. ಬಾಹ್ಯಾಕಾಶ ಕ್ಷೇತ್ರವಾಗಲಿ, ವೈಜ್ಞಾನಿಕ ವಲಯವಾಗಲಿ, ಧರ್ಮ ಆಧ್ಯಾತ್ಮದ ಮಜಲಾಗಲಿ, ವರ್ತಮಾನದ ಕ್ರೀಡಾ ಪ್ರತಿಭೆಗಳಾಗಲಿ, ಚೈಲ್ಡ್ ಪ್ರೊಡಿಜಿಗಳಾಗಲಿ, ಸಾಹಿತಿಗಳಾಗಲಿ, ಆರ್ಥಿಕ ತಜ್ಞರಿಂದ ಹಿಡಿದು ದೊಡ್ಡ ಉದ್ಯಮಿಗಳು… ಹೀಗೆ ಹೆಚ್ಚಿನ ಕ್ಷೇತ್ರಗಳಲ್ಲಿರುವ ಗಣನೀಯ ಸಾಧಕರೆಲ್ಲಾ ಭಾರತೀಯರೆ ಎನ್ನುವಂತಾಗಿದೆ. ಕೆಲ ದಿನಗಳ ಹಿಂದೆ ಸುರಿನಾಮ್ ರಾಷ್ಟ್ರದ ಹಿನ್ನೆಲೆ ಮತ್ತು ಅಲ್ಲಿನ ಭಾರತೀಯ ಸಂಜಾತರ ಚರಿತ್ರೆ ಬಗ್ಗೆ ತಿಳಿಯುವ ಆಸಕ್ತಿ ಮೂಡಿತ್ತು. ಸುರಿನಾಮ್ ಎಂಬ ದಕ್ಷಿಣ ಅಮೇರಿಕಾದ ಪುಟ್ಟ ರಾಷ್ಟ್ರದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಹಿಂದಿ ಭಾಷಿಗ ಮಂದಿಯಿದ್ದಾರೆ. ಅಲ್ಲಿನ ರಾಷ್ಟ್ರಾಧ್ಯಕ್ಷರು ಕೂಡಾ ಭಾರತೀಯ ಮೂಲದವರೆ, ಹೆಸರು ಕಮಲಾ ಪ್ರಸಾದ್ ಸಂತೋಖಿ. ಅವರಿಂದು ಪ್ರವಾಸಿ ಭಾರತೀಯ ದಿವಸ್ ಭಾಗವಾಗಿ ಭಾರತದ ಭೇಟಿಯಲ್ಲಿದ್ದಾರೆ. ಶತಮಾನಗಳ ಹಿಂದೆ ಭಾರತೀಯ ತತ್ವಜ್ಞರು, ವ್ಯಾಪಾರಿಗಳು, ಧರ್ಮ ಬಿಕ್ಷುಗಳ ರೇಶ್ಮೆ ಹಾದಿಯಾಗಿ ದೂರದೂರದ ಪ್ರಾಂತ್ಯಗಳಿಗೆ ಸಾಗಿದ ಉದಾಹರಣೆ ಇತಿಹಾಸದಲ್ಲಿ ಸಿಗುತ್ತದೆ. ಮಲಯಾ, ಕಾಂಬೋಜಾಗಳಲ್ಲಿ ಹಿಂದೂ ರಾಜರು ತಮ್ಮ ರಾಜಪ್ರಭುತ್ವವನ್ನು ಸ್ಥಾಪಿಸಿದ ಉದಾಹರಣೆಯಿದೆ. ರಾಜರಾಜಚೋಳ, ಎಂಟನೇ ಶತಮಾನದ ಕಾಶ್ಮೀರದ ಕಾರ್ಕೋಟ ವಂಶಜ ಲಲಿತಾದಿತ್ಯ ಮುಕ್ತಾಪಿದನು ಟಿಬೆಟ್ ಮತ್ತು ಇರಾನ್ ತನಕ ತನ್ನ ರಾಜ್ಯ ವಿಸ್ತರಿಸಿ ಭಾರತೀಯ ಮೂಲದ ಹಲವರನ್ನು ತತ್ವ ಪ್ರಸರಣದ ಉದ್ದೇಶದಿಂದ ಹೊರದೇಶಗಳಿಗೆ ಕಳುಹಿಸಿದ್ದ ಎಂಬ ಉದಾಹರಣೆಗಳು ಸಿಗುತ್ತವೆ. ಹೀಗೆ ಬಹಳ ಹಿಂದಿನಿಂದಲೂ ಭಾರತೀಯರು ವಿಶ್ವದ ಉದ್ದಗಲಗಳಲ್ಲಿ ತಮ್ಮ ಪಾರಮ್ಯ, ಪ್ರಾಬಲ್ಯ ಸಹಿತ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡವರೇ ಆಗಿದ್ದಾರೆ.

ಪ್ರತಿ ವರ್ಷ ಜನವರಿ 9 ಅನ್ನು ಪ್ರವಾಸಿ ಭಾರತೀಯ ದಿನವೆಂದು ಆಚರಿಸಲಾಗುತ್ತದೆ. ಅನಿವಾಸಿ ಭಾರತೀಯ ಸಮೂಹ, ಭಾರತೀಯ ಸಂಜಾತರ ಗಣನೀಯ ಸಾಧನೆಯನ್ನು ಗುರುತಿಸಿ, ಗೌರವಿಸುವ ಕಾರ್ಯ ಭಾರತ ಸರಕಾರದ ವತಿಯಿಂದ ನಡೆಯುತ್ತಿದೆ. 1915 ಜ.9 ರಂದು ರಾಷ್ಟ್ರಪಿತ ಎಂದೇ ಕರೆಸಿಕೊಂಡ ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತದ ತೀರಕ್ಕೆ ತಲುಪಿದ ವಿಶೇಷ ದಿನವಾಗಿದೆ. 2006 ರಲ್ಲಿ ನಡೆದ ಪ್ರವಾಸಿ ಭಾರತೀಯ ದಿನದಂದು ಒವರಸೀಸ್‌ ಸಿಟಿಜನ್‌ ಆಫ್‌ ಇಂಡಿಯಾ(ಒಸಿಐ) ಅನ್ನು ಆರಂಭಿಸಲಾಗಿತ್ತು. 2014 ರಲ್ಲಿ ನವದೆಹಲಿಯಲ್ಲಿ ನಡೆದ ಪ್ರವಾಸಿ ಭಾರತೀಯ ದಿನದಂದು 51 ರಾಷ್ಟ್ರಗಳಿಂದ 1,500 ಮಂದಿ ಗಣ್ಯರು ಭಾಗವಹಿಸಿದ್ದರು. ಅಂದಿನ ರಾಷ್ಟ್ರಪತಿಯಾಗಿದ್ದ ಪ್ರಣಬ್‌ ಮುಖರ್ಜಿ ಪ್ರವಾಸಿ ಭಾರತೀಯ ಸಮ್ಮಾನ್‌ ಪ್ರಶಸ್ತಿಗಳನ್ನು ಪ್ರದಾನಿಸಿದ್ದರು. 2017 ರಲ್ಲಿ 14 ನೇ ಪ್ರವಾಸಿ ಭಾರತೀಯ(ಪ್ರ.ಭಾ) ದಿನವು ಬೆಂಗಳೂರಿನಲ್ಲಿ ಆಯೋಜಿತಗೊಂಡು ಯಶಸ್ವಿಯಾಗಿತ್ತು. 2019 ರಲ್ಲಿ ವಾರಣಾಸಿಯಲ್ಲಿ ನಡೆದ ಪ್ರ.ಭಾ.ದಿನಂದು ಮಾರಿಷಿಯಸ್‌ ಪ್ರಧಾನಿ ಪ್ರವಿಂದ್‌ ಜುಗನ್ನಾಥ್‌ ಅತಿಥಿಯಾಗಿ ಭಾಗವಹಿಸಿದ್ದರು. ಕಳೆದ ಅಂದರೆ 2021 ರ ಪ್ರ.ಭಾ ದಿನವನ್ನು ವರ್ಚುವಲ್‌ ಮೂಲಕ ಆಚರಿಸಲಾಗಿತ್ತು. ಕೊವಿಡ್‌ ಕಾಲಘಟ್ಟ ಮುಗಿದ ಬಳಿಕ ಮೊದಲ ಬಾರಿಗೆ ಮಧ್ಯಪ್ರದೇಶದ ಇಂದೋರಿನಲ್ಲಿ ಪ್ರ.ಭಾ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ಮತ್ತು ರಾಷ್ಟ್ರಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭೋಧಿಸಿ ಪ್ರಶಸ್ತಿ ಪ್ರದಾನ ನಡೆಸಲಿದ್ದಾರೆ.

ಕಮಲಾ ಹ್ಯಾರಿಸ್, ಕಲ್ಪನಾ ಚಾವ್ಲಾ, ಸುನೀತಾ ವಿಲಿಯನ್ಸ್, ಸತ್ಯಾ ನಡೆಲ್ಲಾ, ಉದ್ಯಮಿಗಳಾದ ಮಿತ್ತಲ್ ಹೀಗೆ ಸಾಕಷ್ಟು ಮಂದಿ ಭಾರತೀಯ ಮೂಲದ ಮಂದಿ ಭಾರತದ ಹಿರಿಮೆ, ಗರಿಮೆಯನ್ನು ಎತ್ತಿ ಹಿಡಿದಿದ್ದಾರೆ.
ಇಂದು ಭಾರತೀಯ ಮೂಲದ ವ್ಯಕ್ತಿಗಳಿಲ್ಲದ ದೇಶವಿಲ್ಲ. ಎಲ್ಲಾ ವಲಯಗಳಲ್ಲೂ ಭಾರತೀಯ ಮೂಲದವರಿದ್ದಾರೆ. ಕೆಲ ದೇಶಗಳಿಗೆ ತೆರಳಿದ ಭಾರತೀಯರು ಆ ದೇಶದ ನಾಗರಿಕತ್ವ ಪಡೆದಿದ್ದಾರೆ. ಬಹಳ ಹಿಂದೆ ಅಂದರೆ ಆಧುನಿಕ ವಸಾಹತುಶಾಹಿ ಇತಿಹಾಸದಿಂದ ಆರಂಭಿಸುವುದಾದರೆ ಭಾರತೀಯರು 18 ನೇ ಶತಮಾನದಲ್ಲೇ ವೆಸ್ಟ್ ಇಂಡಿಯನ್ ದ್ವೀಪಗಳಿಗೆ ತಲುಪಿದ್ದರು. ಅಂದು ಶ್ರಮಿಕರಾಗಿ ಕಬ್ಬಿನ ಗದ್ದೆಗಳು, ಕಾರ್ಖಾನೆಗಳಲ್ಲಿ ದುಡಿಯಲು ತೆರಳಿದ್ದ ಹೆಚ್ಚಿನವರಲ್ಲಿ ತಮಿಳರೇ ಹೆಚ್ಚು. ಅಂದು ಬಹಾಮಾ ದ್ವೀಪವಾಸಿಗಳಲ್ಲಿ ಉತ್ತರ ಭಾರತದಿಂದ ತೆರಳಿದ್ದ ಹಿಂದಿ ಭಾಷಿಗರೂ ಇದ್ದರೆಂಬುದು ವಿಶೇಷ. ಬಹಳ ಹಿಂದೆ ವೆಸ್ಟ್ ಇಂಡೀಸ್ ತಂಡದ ಆಟಗಾರರಾಗಿದ್ದ ರಾಮ್ ಪಾಲ್, ಸರವಣ್ ಇವೆರಲ್ಲಾ ಭಾರತೀಯ ಮೂಲದವರೇ….. ಇಂದಿಗೂ ವೆಸ್ಟ್ ಇಂಡೀಸ್ ಸಹಿತ ಅಮೇರಿಕನ್ ದ್ವೀಪರಾಶಿಗಳಲ್ಲಿ ಚದುರಿರುವ ಅನಿವಾಸಿಗಳು ಶತಮಾನಗಳ ಹಿಂದೆ ವಲಸಿಗರಾದವರು ಇಂದಿಗೂ ಭಾರತೀಯತೆಯನ್ನು ಮೈಗೂಡಿಸಿಕೊಂಡು ಎಲ್ಲರೊಳಗೊಂದಾಗುವ ಗುಣವನ್ನು ಹೊಂದಿದ್ದಾರೆ.

ಶತಮಾನಗಳ ಹಿಂದೆಯೇ ಹಲವು ಕಾರಣಗಳಿಗೆ ಭಾರತೀಯ ಮೂಲದವರು ದೇಶ ವಿದೇಶಗಳಿಗೆ ತೆರಳಿದ್ದಾರೆ. ವ್ಯಕ್ತಿಗತ ಆಸಕ್ತಿ ಅಭಿಲಾಷೆಗಳೊಂದಿಗೆ ವೃತ್ತಿ ಜೀವನ, ಆರ್ಥಿಕ ಉದ್ದಿಶ್ಯಗಳು, ಅವಕಾಶಗಳು, ಸಾಹಸಗಳು, ಹೊಸ ಪ್ರಾಪಂಚಿಕೆಯಲ್ಲಿ ಬದುಕುವ ಆಸೆ ಹೀಗೆ ನಾನಾ ಕಾರಣಗಳಿಂದ ಭಾರತೀಯ ಮೂಲದವರು ಇಂದು ದೊಡ್ಡ ಸಂಖ್ಯೆಯಲ್ಲಿ ವಿದೇಶಗಳಲ್ಲಿದ್ದಾರೆ. ಕೆಲವರಂತೂ ತೆರಳಿ ಹಲವು ಶತಮಾನಗಳೇ ಕಳೆದಿವೆ. ಹೆಚ್ಚಿನವರು 20-21 ನೇ ಶತಮಾನದಲ್ಲಿ ಭಾರತದಿಂದ ತೆರಳಿ ಆಯಾ ದೇಶಗಳ ಪ್ರಜೆಗಳಾಗಿದ್ದಾರೆ ಮತ್ತು ಅಲ್ಲಿನ ನಾಗರಿಕತ್ವವನ್ನು ಪಡೆದಿದ್ದಾರೆ. ಪ್ರತಿ ವರ್ಷ ಭಾರತ ಸರಕಾರ ಅನಿವಾಸಿ ಭಾರತೀಯ ದಿನವನ್ನು ಆಚರಿಸುತ್ತದೆ. ಇದು ಭಾರತೀಯ ಸಂಜಾತರನ್ನು ಸಾಧಕರನ್ನು ಗೌರವಿಸುವ ಅಭಿನಂದಿಸುವ ಹಾಗೆ ಮತ್ತಷ್ಟೂ ಸಾಧನೆಗೆ ಪ್ರೋತ್ಸಾಹಿಸುವ ಅನನ್ಯ ಕಾರ್ಯಕ್ರಮ. ಅತಿ ಹೆಚ್ಚು ಜನಸಂಖ್ಯಾ ದೇಶವಾಗಿರುವ ಭಾರತದಲ್ಲಿ ಈ ಕಾರ್ಯಕ್ರಮವು ಇತರ ಸಾಧಕರಿಗೂ ಪ್ರೇರಣೆಯೂ ಆಗಿದೆ. ದೇಶ ತೊರೆದರೂ ಭಾಷೆ, ಆಚಾರ, ನುಡಿ, ಆಚರಿಸುವ ಹಬ್ಬಗಳು, ಪುತ್ರ ಪೌತ್ರರಿಗೆ ಇಡುವ ಹೆಸರುಗಳು ಭಾರತದ್ದೇ ಆಗಿದೆ.

ಪ್ರವಾಸಿ ಭಾರತೀಯ ದಿನವನ್ನು ಆಚರಿಸಲು ಆರಂಭಿಸಿದ ಮೇಲೆ ಭಾರತ ಮತ್ತು ಸಂಜಾತರ ಮಧ್ಯೆ ಅನನ್ಯ ಬಾಂಧವ್ಯ ಮತ್ತು ಬೆಸುಗೆ ಸೃಷ್ಠಿಯಾಗಿದೆ. ಅದೆಷ್ಟೋ ಅನಿವಾಸಿಗರಿಗೆ ತನ್ನನ್ನು ತನ್ನ ಮೂಲ ನೆಲ ಗುರುತಿಸಿದೆ ಎನ್ನುವುದೊಂದು ಹೆಮ್ಮೆ ಮತ್ತು ಗೌರವದ ವಿಚಾರವೂ ಹೌದು. ಅದೆಷ್ಟೋ ಮಂದಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಗೆ ಭಾಜನರಾದವರು ಆನಂದಭಾಷ್ಪವನ್ನು ಸುರಿಸಿ ಅಷ್ಟೇ ಸಂತಸದಿಂದ ಹರ್ಷ ವ್ಯಕ್ತಪಡಿಸಿ ತಮ್ಮ ಕರ್ಮಭೂಮಿಯತ್ತ ಮರಳಿದ್ದಾರೆ. ಹೀಗೆ ಕೇಂದ್ರ ಸರಕಾರದ ಈ ಕಾರ್ಯಕ್ರಮವು ಭಾರತೀಯತೆಯನ್ನು ಪ್ರಜ್ವಲಿಸುವ ಉತ್ತಮ ನಾಳೆಗಳಿಗೂ ಸ್ಪೂರ್ತಿಯಾಗಿದೆ.

ಭಾರತದಿಂದ ವರ್ಷವೊಂದಕ್ಕೆ ಎಷ್ಟು ಮಂದಿ ಹೊರದೇಶಗಳಿಗೆ ತೆರಳುತ್ತಾರೆ. ಎಷ್ಟು ಮಂದಿ ಯಾವ ದೇಶದ ನಾಗರಿಕತ್ವ ಪಡೆದಿದ್ದಾರೆ. ಬೇರೆ ದೇಶಗಳ ನಾಗರಿಕತ್ವ ಪಡೆದವರು ಯಾರು, ಯಾಕಾಗಿ ಎನ್ನುವ ಕುತುಹಲಕಾರಿ ಅಂಕಿ ಅಂಶವನ್ನು ಇತ್ತೀಚೆಗಷ್ಟೇ ಭಾರತದ ಸಂಸತ್ತಿನಲ್ಲಿ ಪ್ರಸ್ತುತಪಡಿಸಲಾಗಿತ್ತು. ಓರ್ವ ಇಳಿವಯಸ್ಸಿನ ಗ್ರಾಮೀಣರಲ್ಲಿ ಗ್ರಾಮೀಣನಾದ ಶ್ರಮಿಕನಿಗೆ ದೂರದ ಅಮೇರಿಕಾದ ನಗರಕ್ಕೆ ಹೋಗಿ ತನ್ನ ಕೊನೆ ದಿನಗಳಲ್ಲಿ ಅಲ್ಲಿ ಕಳೆಯಬೇಕು ಎಂದೆನಿಸದು. ಆದರೆ ಯಾರು ಹೋಗುತ್ತಾರೆ ಎಂಬುದು ಅಷ್ಟೇ ಮಹತ್ವದ ವಿಚಾರ. ಪರ ಮತ್ತು ವಿರೋಧದ ಚರ್ಚೆಗೂ ಕಾರಣವಾಗಬಲ್ಲ ಟಾಪಿಕ್. ಪಂಜಾಬಿನ ಸಿಖ್ಖ ಸಮುದಾಯದ ಹಲವು ಮಂದಿ ದಶಕದಿಂದ ದೂರದ ಕೆನಡಾದಲ್ಲಿ ಉದ್ಯೋಗ ಮತ್ತು ಉದ್ಯಮದ ಅವಕಾಶವನ್ನು ಬಯಸಿ ತೆರಳಿದ್ದಾರೆ. ಹಲವು ಮಂದಿಗೆ ಅಲ್ಲಿನ ನಾಗರಿಕತ್ವ ಸಿಕ್ಕಿದೆ. ಇಂದಿಗೂ ಇದೇ ಪೈಪೋಟಿ ಮುಂದುವರಿದಿದೆ. ಸಿಖ್ಖರ ಹೆಣ್ಮಕ್ಕಳು ಮತ್ತು ಅವರ ತಂದೆ ತಾಯಂದಿರು ಇಂದು ಕೆನಡಾದ ಸಿಖ್ಖ ವರನನ್ನೇ ಹುಡುಕಿ ಮದುವೆ ಮಾಡೋ ಸಂಪ್ರದಾಯವನ್ನು ಬೆಳೆಸಿದ್ದಾರೆ. ಇದೊಂದು ಕುತೂಹಲ ಕೆರಳಿಸುವ ಮಹತ್ವದ ವಿಚಾರ. ಒಟ್ಟಾರೆಯಾಗಿ ಇಂದು ಭಾರತೀಯರೆಲ್ಲ ವಿಶ್ವಮಾನವರೇ. ಬಹಳ ಹಿಂದಿನ ಒಂದು ಮಾತಿತ್ತು. ವಿಶ್ವದ ಯಾವ ಮೂಲೆಗೂ ತೆರಳಿದರೂ ಅಲ್ಲಿ ಮಲಯಾಳಿಯೊಬ್ಬ ಕಾಣಸಿಗುತ್ತಾನೆ, ಆದರಿಂದು ಅಲ್ಲೊಬ್ಬ ಭಾರತೀಯನಿರುತ್ತಾರೆ ವಿಶ್ವಮಾನವನಾಗಿ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top