ಯುವ ಜನತೆ ವಿಶ್ವ ಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಶ್ರಮಿಸಬೇಕಿದೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್
ಮೂಡುಬಿದಿರೆ: ವಿದ್ಯಾರ್ಥಿಗಳ ಶಾರೀರಿಕ, ಆಧ್ಯಾತ್ಮಿಕ, ಭೌದ್ಧಿಕ ಅಭಿವೃದ್ಧಿಯು ವಿದ್ಯಾರ್ಥಿಗಳನ್ನು ಹಾಗೂ ದೇಶವನ್ನು ಸಮರ್ಥ ನಿಟ್ಟಿನಲ್ಲಿ ಸಾಗಿಸಲು ಪ್ರೇರೇಪಿಸುತ್ತದೆ ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಹೇಳಿದರು.
ಭಾರತ್ ಸ್ಕೌಟ್ಸ್ ಗೈಡ್ಸ್ ‘ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ-2022’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಭಾರತದ ಮೊದಲ ಸ್ಕೌಟ್ಸ್ ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕರ್ನಾಟಕದ ಮೂಡುಬಿದಿರೆಯ ಆಳ್ವಾಸ್ನಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ. ಸಮಾಜದ ಸವಾಂಗೀಣ ಅಭಿವೃದ್ಧಿಯಲ್ಲಿ ಸ್ಕೌಟ್ಸ್ ಗೈಡ್ಸ್ನ ಸೇವೆ ಅಪಾರ. ಭಾರತ ಯುವ ಜನತೆಯ ದೇಶ, ನಾವೆಲ್ಲರೂ ಕೂಡ ವಿಶ್ವ ಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಶ್ರಮಿಸಬೇಕಿದೆ. ದೇಶದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ದೊಡ್ಡದು. ದೇಶದ ಹಿತರಕ್ಷಣೆ ಮತ್ತು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂದು ಆಲೋಚಿಸಿ ಮುಂದಡಿಯಿಟ್ಟರೆ ಮುಂದಿನ 25 ವರ್ಷಗಳ ಅವಧಿಯಲ್ಲಿ ಭಾರತವನ್ನು ಮತ್ತಷ್ಟು ಪ್ರಭಾವೀ ರಾಷ್ಟ್ರವನ್ನಾಗಿ ರೂಪಿಸಬಹುದು ಎಂದರು.
ಮುಂದುವರೆದು ಮಾತನಾಡಿದ ಇವರು ಶಿಕ್ಷಣ ಹಾಗು ಕ್ರೀಡೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತೊಡಗುವುದರಿಂದ ಶಿಸ್ತು ಪ್ರಾಪ್ತಿಯಾಗುತ್ತದೆ. ಭಾರತೀಯ ಕ್ರೀಡೆಯಾದ ಕಬಡ್ಡಿಗೆ ಮುಂಬರುವ ದಿನದಲ್ಲಿ ವಿಶೇಷ ಪ್ರಾಧಾನ್ಯತೆ ನೀಡಲಾಗುವುದು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯ ಸಭಾ ಸದಸ್ಯರೂ ಆಗಿರುವ ಡಾ .ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಂದಿಗ್ಧ ಸಂದರ್ಭಗಳನ್ನು ಎದುರಿಸುವ ಧೈರ್ಯ ಮತ್ತು ಸ್ಥೈರ್ಯದ ಮನೋಧರ್ಮವನ್ನು ರೂಪಿಸಿಕೊಳ್ಳುವುದರ ಕಡೆಗೆ ಯುವಕರು ಹೆಚ್ಚು ಆದ್ಯತೆ ನೀಡಬೇಕು. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಧೃತಿಗೆಡಬಾರದು. ಸವಾಲಿನ ಸಂದರ್ಭಗಳನ್ನು ಎದುರಿಸುವ ನಿಶ್ಚಿತ ಪ್ರಜ್ಞೆಯಿದ್ದರೆ ಬಿಕಟ್ಟುಗಳುಂಟಾದಾಗ ವಿಚಲಿತರಾಗುವ ಪ್ರಮೇಯ ಬರುವುದಿಲ್ಲ. ಸಂದಿಗ್ಧ ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯವನ್ನು ಜಾಂಬೂರಿಯಂಥ ಸಾಂಸ್ಕೃತಿಕ ಮೇಳಗಳು ರೂಢಿಸುತ್ತವೆ ಎಂದು ಹೇಳಿದರು. ವ್ಯಕ್ತಿತ್ವಕ್ಕೆ ಮೌಲಿಕ ಆಯಾಮ ತಂದುಕೊಳ್ಳುವ ನಿಶ್ಚಿತ ಪ್ರಜ್ಞೆಯೊಂದಿಗೆ ಗಟ್ಟಿಹೆಜ್ಜೆಗಳನ್ನಿರಿಸಿ ಸಾಮಾಜಿಕ ಬದಲಾವಣೆ ನೆಲೆಗೊಳಿಸುವ ಕೊಡುಗೆಗಳನ್ನು ನೀಡುವುದರ ಕಡೆಗೆ ಯುವಕರು ಹೆಚ್ಚು ಗಮನಹರಿಸಬೇಕು ಎಂದರು.
ವರ್ಲ್ಡ್ ಆರ್ಗನೈಸೇಶನ್ ಆಫ್ ದ ಸ್ಕೌಟ್ ಮೂವ್ಮೆಂಟ್ನ ಸೆಕ್ರೆಟರಿ ಜನರಲ್ ಅಹಮದ್ ಅಲ್ಹೆಂದಾವಿ ಮಾತನಾಡಿ, ಭಾರತದ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ವಿವಿಧತೆಯಲ್ಲಿ ಏಕತೆ ಎಂಬ ಪರಿಕಲ್ಪನೆಯಲ್ಲಿರುವವರು ಹಾಗಾಗಿ ಭಾರತದಲ್ಲಿ ಸಾಂಸ್ಕೃತಿಕ ಜಾಂಬೂರಿ ಬರೀ ಕಾರ್ಯಕ್ರಮವಲ್ಲ ಬದಲಾಗಿ ಭಾರತೀಯರು ಪ್ರತಿದಿನ ವಾಸಿಸುವ ಪದ್ದತಿ ಹಾಗಾಗಿಯೇ ಭಾರತವನ್ನು ಇಡೀ ಪ್ರಪಂಚ ಗಮನಿಸುತ್ತಿದೆ ಎಂದರು. ಪ್ರಪಂಚಕ್ಕೆ ಭಾರತದ ಅಗತ್ಯವಿದೆ ಏಕೆಂದರೆ ಭಾರತದಲ್ಲಿ ಯುವ ಸಮೂಹ ಜಾಸ್ತಿಯಿದೆ. ಯಾರಿಂದಲೂ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಬದಲಾಗಿ ಎಲ್ಲರಿಂದ ಏನಾದರೊಂದು ಮಾಡಲು ಸಾಧ್ಯ ಹಾಗಾಗಿ ನಾವೆಲ್ಲರೂ ಸೇರಿ ನಮ್ಮ ಸಮಾಜಕ್ಕೆ ಉಪಯೋಗ ಆಗುವಂತಹ ಕೆಲಸ ಮಾಡಬೇಕು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೊಟ್ಯಾನ್, ಸ್ಕೌಟ್ಸ್ ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ, ಜಿಲ್ಲಾಧಿಕಾರಿ ರವಿಕುಮಾರ್, ಜಿಲ್ಲಾ ಪಂಚಾಯತ ಸಿಇಒ ಡಾ.ಕುಮಾರ್, ಪೊಲೀಸ್ ಆಯುಕ್ತ ಶಶಿಕುಮಾರ್ ಇದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ವಂದಿಸಿದರು.
ವೈಭವದ ಸಾಂಸ್ಕೃತಿಕ ಮೆರವಣಿಗೆ
ಆಳ್ವಾಸ್ ಸಂಸ್ಥೆ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗೆ ಹೆಸರುವಾಸಿ. ಈ ಸ್ಥಳದ ಬಿರುದಿಗೆ ಮತ್ತೊಂದು ಶೋಭೆಯಂತೆ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಆಕರ್ಷಕವಾಗಿ ಜನರ ಕಣ್ಮನ ತಣಿಸಿದ್ದು ಆಳ್ವಾಸ್ ಸಾಂಸ್ಕೃತಿಕ ಮೆರವಣಿಗೆ.
ಹೊರರಾಜ್ಯ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಕಲಾ ತಂಡಗಳಿಂದ ವಿಜೃಂಭಣೆಯಿಂದ ನಡೆದ ಮೆರವಣಿಗೆ ಕಲಾ ಪ್ರಿಯರ ಮಚ್ಚುಗೆಗೆ ಪಾತ್ರವಾಯಿತು. ರಾಜೇಂದ್ರ ದಾಸ ತಂಡದವರಿಂದ ಶಂಖ ವಾದನ, ಮೈಸೂರು ತಂಡದವರಿಂದ ಕಹಳೆ, ಕುಂದಾಪುರ ತಂಡದವರಿಂದ ಕೊರಗರ ಡೋಲು, ಮಂಡ್ಯ ಜಾನಪದ ಕಲಾ ತಂಡದಿಂದ ನಂದೀಧ್ವಜ, ಆಳ್ವಾಸ್ ವಿದ್ಯಾರ್ಥಿಗಳಿಂದ ಯಕ್ಷಗಾನ ವೇಷ ಹಾಗೂ ಆಕರ್ಷಕ ಕೊಡೆಗಳು, ಚೆಂಡೆ, ಕೇರಳದ ದೇವರ ವೇಷಗಳು, ಗೊರವರ ಕುಣಿತ, ವಿಚಿತ್ರ ಮಾನವ, ಕೇರಳ ತಂಡದವರಿಂದ ಕಥಕ್ಕಳಿ ವೇಷಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.