ಒಂದು ದೊಡ್ಡ ಅವಿಭಕ್ತ ಕುಟುಂಬ, ಮನೆಯ ಯಜಮಾನ ಎಲ್ಲ ಸಂಕಷ್ಟಗಳ ಸರಮಾಲೆ, ಪ್ರತಿಕೂಲ ಪರಿಸ್ಥಿತಿಗಳ ಮಧ್ಯವೂ, ಮನೆಯ ಮಕ್ಕಳ ಅಭಿಪ್ರಾಯ ಭೇದಗಳ ಹೊರತಾಗಿಯು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನೆಯನ್ನು ಚೆನ್ನಾಗಿ ನಡೆಸುತ್ತಿದ್ದಾನೆ. ಒಂದು ಕಾಲದಲ್ಲಿ ಊರಿನಲ್ಲಿ ಲೆಕ್ಕಕ್ಕೆ ಇಲ್ಲದ ಆ ಮನೆಗೆ ಇಂದು ಆ ಯಜಮಾನನ ಪರಿಶ್ರಮ, ತ್ಯಾಗ, ಎಲ್ಲರನ್ನೂ ಸಮಾನವಾಗಿ ಕಂಡು,ಜೊತೆಗೆ ತೆಗೆದುಕೊಂಡು ಹೋಗುವ ಎಲ್ಲರಿಗೂ ಒಳಿತು ಬಯಸುವ ನಾಯಕತ್ವದ ಕಾರಣಕ್ಕೆ ಊರಿನಲ್ಲಿ ಸಾಕಷ್ಟು ಗೌರವ ಪ್ರಶಂಸೆ ಸಿಗುತ್ತಿದೆ.
ತಮ್ಮತಮ್ಮಲ್ಲೇ ಅದೆಷ್ಟೋ ವ್ಯತ್ಯಾಸಗಳು ಭಿನ್ನಮತಗಳು ಇದ್ದರೂ ಮನೆಯ ವಿಷಯ ಬಂದಾಗ ಅವರು ಒಗ್ಗಟ್ಟು ತೋರಿದರೆ ಆ ಮನೆಯವರ ತಂಟೆಗೆ ಹೋಗಲು ಉಳಿದವರು, ಆ ಮನೆಯ ಶತ್ರುಗಳು ಎನಿಸಿಕೊಂಡವರು ಹೆದರುತ್ತಾರೆ. ಅದನ್ನು ಮೀರಿಯೂ ಮನೆಯ ಯಜಮಾನನಿಗೆ ಬೇರೆಯವರು ಆರೋಪ ಮಾಡಿದಾಗ, ತೇಜೋವಧೆಗೆ ಪ್ರಯತ್ನ ಮಾಡಿದಾಗ, ಅಪಪ್ರಚಾರ ಮಾಡಿ ತೆಗಳಿದಾಗ,ಕಾಲು ಕೆರೆದು ಜಗಳಕ್ಕೆ ನಿಂತಾಗ ಮನೆಯವರು ಯಜಮಾನನ ಸಮರ್ಥನೆಗೆ ಟೊಂಕ ಕಟ್ಟಿ ನಿಲ್ಲಬೇಕು, ಇಲ್ಲಸಲ್ಲದ್ದನ್ನು ಬೊಗಳಿದವರಿಗೆ ಬಿಸಿ ಮುಟ್ಟಿಸಬೇಕು,ಇಲ್ಲವಾದರೆ ಕನಿಷ್ಠ ಪಕ್ಷ ವಿರೋಧವನ್ನಾದರು ಮಾಡಬೇಕು. ಇದ್ಯಾವುದನ್ನೂ ಮಾಡದೆ ಆ ಮನೆಯ ಸದಸ್ಯರು ಸುಮ್ಮನಿದ್ದರೆ ಅದು ಆರೋಗ್ಯವಂತ ಲಕ್ಷಣವಲ್ಲ. ಮನೆಯ ಏಳಿಗೆ ಕುರಿತು ಕೆಲ ಸದಸ್ಯರ ಬದ್ಧತೆ, ಕಾಳಜಿ-ಕಳಕಳಿಯ ಬಗ್ಗೆ ಅನುಮಾನ ಬರುವುದು ಸಹಜ.
ಈಗ ನಮ್ಮ ದೇಶದಲ್ಲಿ ಆಗುತ್ತಿರುವುದು ಅದೇ. ಹಿಂದಿನದೆಲ್ಲ ಬಿಟ್ಟು ಬರೀ ಕಳೆದ ಒಂದು ವಾರದ್ದೆ ಬೆಳವಣಿಗೆಗಳನ್ನು ಗಮನಿಸಿದರು ಸಾಕು ಅಂತಹ ಹಲವಾರು ಅನುಮಾನ ಸಂಶಯಗಳಿಗೆ ಪುಷ್ಠಿ ನೀಡುವಂತೆ ನಮ್ಮಲ್ಲಿನವರು ನಡೆದುಕೊಳ್ಳುತ್ತಿದ್ದಾರೆ.
ಮೊದಲನೆಯದ್ದು, ಮೊನ್ನೆ ಪಾಕಿಸ್ತಾನದ ವಿದೇಶಾಂಗ ಮಂತ್ರಿ ಬಿಲಾವಲ್ ಭುಟ್ಟೋ ಜರ್ದಾರಿ ಹೀಗೊಂದು ಹೇಳಿಕೆಯನ್ನು ವಿಶ್ವಸಂಸ್ಥೆಯ ತನ್ನ ಭಾಷಣದಲ್ಲಿ ಕೊಟ್ಟ.
“ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ, ಗುಜರಾತಿನ ಕಟುಕ(ಹಂತಕ) ಇನ್ನೂ ಬದುಕಿದ್ದಾನೆ,ಆತ ಈಗ ಭಾರತದ ಪ್ರಧಾನ ಮಂತ್ರಿ” ಈ ಮಾತುಗಳನ್ನು ಕೇಳಿದ ತಕ್ಷಣ ಭಾರತದ ಯಾವುದೇ ವ್ಯಕ್ತಿಗೆ ಆದರೂ ಸಾತ್ವಿಕ ಸಿಟ್ಟು-ಆಕ್ರೋಶ ಬರಬೇಕು,ಅದು ಜಾಗತಿಕವಾಗಿ ಗೋಚರಿಸುವಷ್ಟು ಅಭಿವ್ಯಕ್ತವಾಗಬೇಕು. ಪಕ್ಷಾತೀತವಾಗಿ ದೇಶವೇ ಒಂದಾಗಿ ಅದನ್ನು ವಿರೋಧಿಸಲೇಬೇಕು ಇಲ್ಲದಿದ್ದರೆ ನಾವು ಎಡವುತ್ತಿದ್ದೇವೆ ಎಂದಲೇ ಅರ್ಥೈಸಬೇಕಾಗುತ್ತದೆ.
ಇಂಥ ಹೇಳಿಕೆ ಕೊಟ್ಟ ಪಾಕಿಸ್ತಾನಕ್ಕೆ ಜಗತ್ತಿನಲ್ಲಿ ಈಗಿರುವ ಸ್ಥಾನ (ಅನು)ಮಾನ.ಅಲ್ಲಿನ ಜನಸಾಮಾನ್ಯರ ಪರದಾಟ, ಸರ್ಕಾರ-ಸೇನೆಗಳ ನಡುವಿನ ಬಹಿರಂಗ ಗುದ್ದಾಟ,ಸೈನ್ಯದ ಕೈಯಲ್ಲಿ ಸಿಕ್ಕು ನಲುಗುವ ಸರ್ಕಾರದ ಒದ್ದಾಟ. ದಿನೇದಿನೇ ಹೆಚ್ಚುತ್ತಿರುವ ಗಲಭೆ ದಂಗೆಗಳು.ಕುಸಿಯುತ್ತಿರುವ ಆರ್ಥಿಕತೆ,ಅಧಃಪತನಕ್ಕೆ ಇಳಿದ ನೈತಿಕತೆ. ಅವರನ್ನು ಸಾಕಿ, ಸಾಲ ಸುರಿದು ಸಲುಹಿದ ದೊಡ್ಡ ದೇಶಗಳು ಒಂದೊಂದಾಗಿ ಈಗ ಅವರನ್ನು ಕೈಬಿಡುತ್ತಿರುವದು. ಅವರ ಜೊತೆಗೆ ಗುರುತಿಸಿಕೊಳ್ಳಲು ಅನೇಕ ಮುಸಲ್ಮಾನ ದೇಶಗಳೇ ಮುಂದೆ ಬಾರದೆ ಇರುವ ವಾತಾವರಣ ಸೃಷ್ಟಿ ಆಗುತ್ತಿರುವುದು. ಅವರದ್ದೇ ದೇಶದ ವಿರೋಧ ಪಕ್ಷದ ನಾಯಕ ಇಮ್ರಾನ್ ಖಾನ್ ಸಾರ್ವಜನಿಕ ಸಭೆಗಳಲ್ಲಿ ಭಾರತದ ವಿದೇಶಾಂಗ ಸಚಿವ ಶ್ರೀ ಜೈ ಶಂಕರ್ ಅವರ ಮಾತಿನ ವಿಡಿಯೋ ತುಣುಕು ತೋರಿಸಿ ಪಾಕಿಸ್ತಾನ ಸರ್ಕಾರಕ್ಕೆ ಛೀಮಾರಿ ಹಾಕಿ ಮಾನ ಕಳೆಯುತ್ತಿರುವುದು.
ಇದೆಲ್ಲ ನೋಡಿದಾಗ ಅಂತ ಹೇಳಿಕೆ ಕೊಟ್ಟ ಪಾಕಿಸ್ತಾನ ಮತ್ತು ವ್ಯಕ್ತಿ ಬಿಲಾವಲ್ ಭುಟ್ಟೋ ನಮ್ಮ ಭಾರತ ಮತ್ತು ನಾಯಕ ಶ್ರೀ ನರೇಂದ್ರ ಮೋದಿ ಅವರಿಗೆ ಯಾವ ದೃಷ್ಟಿಯಲ್ಲಿಯು ಸಹ ಸಮನಲ್ಲ,ಹತ್ತಿರವೂ ಸುಳಿಯಲು ಸಾಧ್ಯವಿಲ್ಲ.
ಅವನ ಹತಾಶೆಯ ಹೇಳಿಕೆಯನ್ನು ಯಾವ ದೇಶಗಳು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಇಲ್ಲ, ನರೇಂದ್ರ ಮೋದಿ ಮತ್ತು ಭಾರತದ ಕುರಿತ ಅವರ ಗೌರವ ಆದರಗಳಿಗೆ ಕಿಂಚಿತ್ತೂ ಕಡಿಮೆ ಆಗುವುದಿಲ್ಲ ಎನ್ನುವುದು ಸತ್ಯ.
“ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ” ಎನ್ನುವ ದೊಡ್ಡವರ ಮಾತಿನಂತೆಯೇ ಪಾಕಿ ಬಿಲಾವಲ್ ಭುಟ್ಟೋನ ಹೇಳಿಕೆಯ ಕಥೆಯೂ ಅಷ್ಟೇ. ಅದರ ಹಿಂದೆ ಅವರಿಗೆ ಆತಂಕವಿದೆ, ಭಯ-ಹತಾಶೆಗಳಿವೆ, ಕೆಲ ವಿಷಯಗಳಲ್ಲಿ ಅರ್ಥವಾಗದ ಭಾರತದ ದಿವ್ಯ ಮೌನ ಅವರ ತಲೆಕೆಡಿಸಿದೆ,ನಮ್ಮ ಬೆಳವಣಿಗೆಯ ಬಗ್ಗೆ ಅಸೂಯೆಯಂತು ವಿಪರೀತವಿದೆ. ಹೇಗಾದರೂ ಮಾಡಿ ಭಾರತವನ್ನು ಕೆರಳಿಸಿ ಗಮನ ಸೆಳೆಯುವ ಕುತಂತ್ರವೂ ಇದೆ.
ಇತ್ತೀಚೆಗೆ ಭಾರತ ಪಾಕಿಸ್ತಾನದ ಕುರಿತು ಎಲ್ಲಿಯೂ ಮಾತನಾಡದೆ ಅದಕ್ಕೆ ಶಿಕ್ಷೆ ನೀಡುತ್ತಿದೆ, ರಾಜತಾಂತ್ರಿಕವಾಗಿ ಹಣಿಯುತ್ತಿದೆ. ಭಾರತದ ಬಾಯಲ್ಲಿ ಪಾಕಿಸ್ತಾನದ ಜಪ ನಿಂತೆ ಹೋಗಿದೆ, ಅದು ನಮ್ಮ ಶತ್ರುವಾಗಲೂ ಸಹ ಅರ್ಹವಲ್ಲ ಎಂಬ ಸಂದೇಶವನ್ನು ನಮ್ಮ ಸರ್ಕಾರ ಅವಕಾಶ ಸಿಕ್ಕಾಗಲೆಲ್ಲ ಸಾರುತ್ತಿದೆ. ಜಾಗತಿಕವಾಗಿ ಅದನ್ನು ಒಂಟಿಯಾಗಿಸುವ ಕಾರ್ಯದಲ್ಲಿ ಯಶಸ್ವಿಯು ಆಗಿದೆ.
ಪಾಕ್ ವಿಶ್ವಸಂಸ್ಥೆಯಲ್ಲಿ ತನ್ನ ಭಾಷಣದ ತುಂಬಾ ಭಾರತದ, ಆರೆಸೆಸ್ಸಿನ, ನರೇಂದ್ರ ಮೋದಿ ಅವರ ಜಪ ಮಾಡಿದರೆ ನಮ್ಮ ದೇಶ ಮಾತ್ರ ಅಪ್ಪಿತಪ್ಪಿಯೂ ಪಾಕಿಸ್ತಾನದ ಹೆಸರು ಉಲ್ಲೇಖ ಮಾಡುವುದಿಲ್ಲ. ಇತ್ತೀಚೆಗೆ ಪಾಕ್ ಮಂತ್ರಿ ಮಾಡಿದ ಭಾಷಣ ಒಂದರಲ್ಲಿ ಹತ್ತು ಬಾರಿ ಭಾರತ, ಹಲವು ಬಾರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS), ಅಪಘಾನಿಸ್ಥಾನ, ಅಮೆರಿಕ, ರಷ್ಯಾ, ಉಕ್ರೇನ್ಗಳ ಪ್ರಸ್ತಾಪ ಮಾಡಿದರೆ ನಮ್ಮ ವಿದೇಶಾಂಗ ಮಂತ್ರಿ ತಮ್ಮ ಭಾಷಣದಲ್ಲಿ 23 ಸಲ ಭಾರತದ ಹೆಸರು ಪ್ರಸ್ತಾಪ ಮಾಡಿ ಪಾಕಿಸ್ತಾನದ ಹೆಸರನ್ನೂ ಒಮ್ಮೆಯೂ ಸಹ ಹೇಳಲಿಲ್ಲ.
ಇದು ಪಾಕಿಸ್ತಾನಕ್ಕೆ ಎಂಥ ಹೊಡೆತ ಎಂದರೆ, ಹಿಂದೆಲ್ಲ ಅವರ ಹೆಸರು ಹೇಳದೇ, ಕಾಶ್ಮೀರ ಇನ್ನಿತರ ಸಮಸ್ಯೆಗಳ ಪ್ರಸ್ತಾಪ ಮಾಡದೆ ನಮ್ಮ ದೇಶದವರ ಭಾಷಣ ಮುಗಿಯುತ್ತಿರಲಿಲ್ಲ. ಭಾರತದ ಭಾಷಣದ ಕೇಂದ್ರ ಬಿಂದು ಪಾಕಿಸ್ತಾನವೇ ಆಗಿರುತ್ತಿದ್ದ ಕಾಲವಿತ್ತು. ಆದರೆ ಈಗ ಕಾಲ ಬದಲಾಗಿದೆ,ನಾವು ಬೇರೆಯವರ ಬಗ್ಗೆ ಮಾತನಾಡಿ ಅವರನ್ನು ಹೀರೋ ಮಾಡಲು ಹೊರಟಿಲ್ಲ, ಕಾಲಹರಣವನ್ನು ಸಹ ಮಾಡುವುದಿಲ್ಲ. ಬದಲಾಗಿ ನಮ್ಮ ಬಲವರ್ಧನೆ, ಸುಧಾರಣೆಗಳ ಮೇಲೆಯೇ ನಾವು ಹೆಚ್ಚು ಗಮನ ನೀಡುತ್ತಿದ್ದೇವೆ ಮತ್ತು ಅವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಡುತ್ತಿದ್ದೇವೆ.
ಇದೆಲ್ಲದರ ಮಧ್ಯೆ ಪಾಕಿನ ಲೆವೆಲ್ ಇವತ್ತು ಎಷ್ಟೇ ಕೆಳಮಟ್ಟದಲ್ಲಿ ಇದ್ದರೂ ದೇಶದ ಪ್ರಧಾನ ಮಂತ್ರಿಗಳನ್ನು ನಮ್ಮ ಹಿತೈಷಿಯೆ ಅಲ್ಲದ ಅವರು ಈ ರೀತಿ ಅಪಮಾನ ಮಾಡಿದಾಗ ನಾವೆಲ್ಲ ಅಭಿಪ್ರಾಯ, ಜಾತಿ ಮತ, ಪಕ್ಷಬೇಧ ಮರೆತು ದೇಶದ ಐಕ್ಯತೆ ಮೇರೆಯಬೇಕಾಗಿತ್ತು.
ಒಸಾಮಾ ಬಿನ್ ಲಾಡೆನ್ಗೆ ನರೇಂದ್ರ ಮೋದಿ ಅವರನ್ನು ಹೋಲಿಸಿದಾಗ, ಅವರನ್ನು ಕಟುಕ ಅಂತೆಲ್ಲ ಕರೆದಾಗ ಪ್ರತಿ ಭಾರತೀಯನಿಗೂ ನೋವಿನ ಅನುಭವವಾಗಿ, ಆಕ್ರೋಶ ವ್ಯಕ್ತವಾಗಬೇಕಿತ್ತು.
ನರೇಂದ್ರ ಮೋದಿ ಬರೀ ಬಿಜೆಪಿಗೆ ಪ್ರಧಾನ ಮಂತ್ರಿಗಳಲ್ಲ,ಇಡೀ ಭಾರತದ ಪ್ರಧಾನ ಮಂತ್ರಿ. ಅವರು ಒಂದೇ ಒಂದು ರಜೆಯನ್ನು ಪಡೆಯದೆ 20 ವರ್ಷಗಳಿಂದ ಸೇವೆ ಮಾಡುತ್ತಿರುವುದು ಇದೆ ಭಾರತದ್ದು.
ಅಂಥ ಭಾರತದಲ್ಲಿ ಬರೀ ಬಿಜೆಪಿ ಮಾತ್ರವಲ್ಲ ಎಲ್ಲ ಪಕ್ಷಗಳೂ ಸಹ ಪಾಕಿಸ್ತಾನದ ಹೇಳಿಕೆ ಖಂಡಿಸಬೇಕಾಗಿತ್ತು.
ಇಷ್ಟು ದೊಡ್ಡ ಇತಿಹಾಸ ಇರುವ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳಿಗೆ ಮುಂದೆ ಬಂದು ಪಾಕಿಸ್ತಾನದ ನೀಚತನದ ಹೇಳಿಕೆಯ ಬಗ್ಗೆ ವಿರೋಧ ಮಾಡಬೇಕು ಅಂತ ಅನ್ನಿಸದೇ ಇರುವುದು ವಿಪರ್ಯಾಸ ಮತ್ತು ದುರ್ದೈವಕರ. ಹಾಗೇನಾದರೂ ಬೇರೆ ಪಕ್ಷದ ನಾಯಕರು ಪಾಕಿಸ್ತಾನದ ಇಂಥ ನಡುವಳಿಕೆಯನ್ನಿ ಖಂಡನೆ ಮಾಡಿದ್ದರೆ ನಮ್ಮ ದೇಶದ ಒಗ್ಗಟ್ಟು, ಐಕ್ಯತೆ,ಸಮಗ್ರತೆಗಳು ಜಗತ್ತಿಗೆ ಮೇಲ್ಪಂಕ್ತಿ ಆಗುತ್ತಿದ್ದವು ಅಲ್ಲವೇ?
ಇದೇ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ನಡುವಳಿಕೆ ಇವರಿಗೆಲ್ಲ ಮಾದರಿ ಆಗಬೇಕಾಗಿತ್ತು.
ಅದು 2013ರ ಸಮಯ ಅಂದಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಅಂದಿನ ನಮ್ಮ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರನ್ನು “ದೇಹಾತಿ ಔರತ್” ಎಂದು ಎಂದಿದ್ದರು.ಹಳ್ಳಿಯ ಹೆಂಗಿಸಿನಂತೆ ಒಬಾಮ ಬಳಿ ಕಂಪ್ಲೇಂಟ್ ಹೇಳುತ್ತಾರೆ ಎಂದು ಅಪಮಾನ ಮಾಡಿದ್ದ. ಆಗಲೂ ಸಹ ದೇಶದ ಯಾವುದೇ ಕಾಂಗ್ರೆಸ್ಸಿನ ನಾಯಕ ತುಟಿ ಬಿಚ್ಚಲಿಲ್ಲ,ನವಾಜ್ ಷರೀಫನಿಗೆ ಬೈಯ್ಯಲಿಲ್ಲ,ಬಿಸಿ ಮುಟ್ಟಿಸಲಿಲ್ಲ, ಕನಿಷ್ಠ ವಿರೋಧವನ್ನೂ ಮಾಡಲಿಲ್ಲ.
ಆದರೆ ತಾವು ವಿರೋಧ ಪಕ್ಷದಲ್ಲಿದ್ದರು ಸಹ ಗುಜರಾತಿನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ನಾವಜ್ ಷರೀಫನಿಗೆ ಎಚ್ಚರಿಕೆ ನೀಡಿದ್ದರು. ನನ್ನ ದೇಶದ ಪ್ರಧಾನ ಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸಹಿಸುವುದಿಲ್ಲ ಎಂದು ಖಡಕ್ ಸಂದೇಶ ಕೊಟ್ಟಿದ್ದರು.
ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಅವರಿಗೆ ಬೈಯ್ದಾಗಲೂ ಕಾಂಗ್ರೆಸ್ ಪಾಕಿಸ್ತಾನದ ವಿರುದ್ಧ ಮಾತನಾಡಲಿಲ್ಲ. ಆಗಲು ಸಹ ಪಾಕಿಸ್ಥಾನಕ್ಕೆ ಎಚ್ಚರಿಕೆ ಕೊಟ್ಟಿದ್ದು, ಅವರ ಹೇಳಿಕೆ ಖಂಡಿಸಿದ್ದು ಬಿಜೆಪಿಯ ನರೇಂದ್ರ ಮೋದಿ ಅವರೇ. ಇದು ದೇಶದ ಕುರಿತ ನಮ್ಮ ನೀತಿ-ನಿಯತ್ತನ್ನು, ಆದ್ಯತೆ-ಬದ್ಧತೆಗಳನ್ನು,ಕಾಳಜಿ – ಕಳಕಳಿ ಎತ್ತಿ ತೋರುತ್ತದೆ ಅಲ್ಲವೇ?
ಎರಡನೆಯದ್ದು, ತವಾಂಗ್ ಪ್ರದೇಶದಲ್ಲಿ ಕಾಲು ಕೆರೆದು ಅತಿಕ್ರಮಣ ಮಾಡಲು ಮುಂದೆ ಬಂದ 300ಕ್ಕೂ ಹೆಚ್ಚು ಚೀನಾದ ಸೈನಿಕರನ್ನು ಬರೀ 80-90 ರಷ್ಟಿದ್ದ ಭಾರತದ ಸೈನಿಕರು ಅಟ್ಟಾಡಿಸಿ ಹೊಡೆದು ಹಿಂದೆ ಕಳಿಸಿದ್ದರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಟ್ಟಿದೆ. ಸೇನೆಗೆ ಜಯಕಾರ ಹಾಕಿದೆ,ಬೆನ್ನಿಗೆ ನಿಂತು ಬಲತುಂಬಿದ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಸದಾ ಸೈನ್ಯದ ಪರಾಕ್ರಮ, ಸಾಮರ್ಥ್ಯ, ಶೌರ್ಯ, ತಾಕತ್ತುಗಳ ಮೇಲೆ ಸಂಶಯ ಪಡುವ ಕಾಂಗ್ರೆಸ್ ಮತ್ತದೇ ಚಾಳಿಯನ್ನು ಮುಂದುವರೆಸಿದೆ. ನಮ್ಮ ಸೈನಿಕರೇ ದೊಡ್ಡ ಸಂಖ್ಯೆಯಲ್ಲಿ ಸತ್ತಿದ್ದಾರೆ ಚೀನಾದ್ದೆ ಮೇಲುಗೈ ಆಗಿದೆ ಎನ್ನುವ ಹಾಗೆ ಬಿಂಬಿಸಲು ಹೊರಟಿದ್ದ ಕಾಂಗ್ರೆಸ್ಸಿನದು ಬೇಜವಾಬ್ದಾರಿತನ ಮತ್ತು ದೇಶದ್ರೋಹ ಅಲ್ಲದೆ ಮತ್ತೇನು?
ಸೇನೆಗೆ ಅಪಮಾನ ಮಾಡುವುದು, ಸೈನಿಕನ ಕೆನ್ನೆಗೆ ಬಾರಿಸುವುದು, ಅವನ ಸಾಹಸವನ್ನು ಸಂಶಯದಿಂದ ನೋಡುವುದು ಕಾಂಗ್ರೆಸ್ಸಿನ ಹುಟ್ಟುಗುಣ ಬಿಡಿ. ಇಲ್ಲಿ ನಮಗಿಂತ ಚೀನಾವನ್ನೇ ಕಾಂಗ್ರೆಸ್ ಮೇಲುಗಟ್ಟಿದಂತೆ ಭಾಸವಾಗುತ್ತದೆ.
ಮೂರನೆಯದು,ಕಳೆದ ತಿಂಗಳು ಮಂಗಳೂರಿನಲ್ಲಿ ಬಾಂಬ್ ಸ್ಫೋಟಕ್ಕೆ ಯೋಜನೆ ರೂಪಿಸಿ ಅದರ ಪ್ರಯೋಗದ ಹಂತದಲ್ಲಿ ಇದ್ದಾಗ ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿ ಸಿಕ್ಕಿಬಿದ್ದ ಶಾರಿಕ್ ಕಥೆ ನಮಗೆಲ್ಲ ಗೊತ್ತಿದೆ. ಪೊಲೀಸರೇ ಅದನ್ನು ಭಯೋತ್ಪಾದಕ ಚಟುವಟಿಕೆ ಎಂದು ಹೇಳಿದ್ದು ಆಗಿದೆ.ಅದೆಲ್ಲ ಆಗಿ ವಾರಗಳೇ ಕಳೆದ ಮೇಲೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಪ್ರೆಸ್ ಮೀಟ್ ಮಾಡಿ ಭಯೋತ್ಪಾದಕ ಶಾರೀಕ (ಬ್ರದರ್)ನ ಬೆಂಬಲಕ್ಕೆ ನಿಲ್ಲುತ್ತಾರೆ. ಅವನನ್ನು ಅಮಾಯಕನ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ಪೊಲೀಸ್ ಇಲಾಖೆಯೇ ಭಯೋತ್ಪಾದಕ ಸಂಘಟನೆಗಳ ಜೊತೆಗಿನ ಅವನ ಸಂಪರ್ಕದ ಬಗ್ಗೆ,ಮುಂದಿನ ಯೋಜನೆ ಚಟುವಟಿಕೆಗಳ ಬಗ್ಗೆ ಸ್ಪಷ್ಟ ಮಾಹಿತಿ ಕಲೆಹಾಕಿದೆ.ಅಂತದ್ರಲ್ಲಿ ಕಾಂಗ್ರೆಸ್ಸಿನ ಡಿಕೆಶಿ ಅವರ ಕಣ್ಣಿಗೆ ಮಾತ್ರ ಅವನೊಬ್ಬ ಅಮಾಯಕ.
ಹೀಗೆ ಬಿಲಾವಲ್ ಭುಟ್ಟೋನ ಹೇಳಿಕೆ ವಿರುದ್ಧ ಕನಿಷ್ಠ ಸಾಂಕೇತಿಕ ವಿರೋಧವನ್ನಾದರೂ ಮಾಡಲಿಲ್ಲ,ಚೀನಾ ಗಡಿಯಲ್ಲಿ ನಮ್ಮ ಸೈನಿಕರ ಸಾಹಸವನ್ನು ಸಂಶಯ ಮಾಡಿದರು, ಉಗ್ರ ಶಾರಿಕನನ್ನು ಅಮಾಯಕ ಎಂದು ಬಿಂಬಿಸಿದ್ದು ಕಾಂಗ್ರೆಸ್ ಪಾರ್ಟಿ. ಹೀಗಾಗಿ ಹೊರಗಿನಿಂದ ಭಾರತಕ್ಕೆ ಹಾನಿಮಾಡಲು ಹವಣಿಸುತ್ತಿರುವ ಪಾಕಿಸ್ತಾನ ಚೀನಾಗಳಷ್ಟೇ ಭಾರತಕ್ಕೆ ಅಪಾಯಕಾರಿ ಒಳಗಿನಿಂದ ದೇಶವನ್ನು ದುರ್ಬಲ ಮಾಡಲು ಹೊರಟಿರುವ ಕಾಂಗ್ರೆಸ್.
✍️ ಡಾ. ಮಲ್ಲಿಕಾರ್ಜುನ ಬಾಳಿಕಾಯಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.