News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಮಭಕ್ತಿ – ಭೀಮಶಕ್ತಿ ದೇಶಕ್ಕಿದು ಔಷಧಿ.!

ಪವಿತ್ರ ನಗರಿ ಅಯೋಧ್ಯೆಯಲ್ಲಿ ಗುಲಾಮಗಿರಿಯ ಗುರುತಿನಂತಿದ್ದ ಕಟ್ಟಡ ಹನುಮಶಕ್ತಿ,ರಾಮಭಕ್ತಿಗಳ ಸಾತ್ವಿಕ ಪ್ರವಾಹದ ಮುಂದೆ ಸೋತು ಶರಣಾಗಿ ನೆಲಕ್ಕುರುಳಿ ಇಂದಿಗೆ ಸರಿಯಾಗಿ ಇಪ್ಪತ್ತೆಂಟು ವರುಷಗಳೇ ಉರುಳಿದವು.

ಶತಮಾನಗಳಿಂದ ಅಲ್ಲಿ ತಲೆಯೆತ್ತಿ ನಿಂತು ನಮಗೆ ನಮ್ಮ ಹಿಂದು ಸಮಾಜದ ಜಡತ್ವ,ನಮ್ಮದೇ ಶಕ್ತಿ ಸಾಮರ್ಥ್ಯಗಳ ಬಗ್ಗೆ ಇರುವ ಅರಿವಿನ ಕೊರತೆ, ನಮ್ಮ ಶ್ರೇಷ್ಠ ಪರಂಪರೆ ಬಗ್ಗೆ ದಿವ್ಯ ಮರೆವು, ನಿರ್ಲಕ್ಷ್ಯ,
ಆತ್ಮಹೀನತೆಗಳಿಗೆ ಸಾಕ್ಷಿಯಾಗಿತ್ತು ಆ ವಿವಾದಾತ್ಮಕ ಕಟ್ಟಡ.

ಅದನ್ನವರು ತಾವು ನಂಬಿರುವ ಇಸ್ಲಾಮಿಗೇ ವಿರುದ್ಧವಾಗಿ ಮೆಕ್ಕಾ ಕಡೆ ಮುಖವೇ ಮಾಡದ, ನಮಾಜು ನಡೆಯದ, ವಿರುದ್ಧ ದಿಕ್ಕಿನಲ್ಲಿ ಇನ್ನೂ ಮುಂದೆ ಹೋಗಿ ಒಬ್ಬ ವ್ಯಕ್ತಿಯ ಹೆಸರಿಟ್ಟು ಅದಕ್ಕೆ ಬಾಬರಿ ಮಸೀದಿ ಎಂದು ಕರೆದರು, ಈ ಮಣ್ಣನ್ನು ಜರೆದರು!

ರಾಮಸುತ ಕುಶ ಮಹಾರಾಜ ಕಟ್ಟಿದ್ದ ಭವ್ಯ ರಾಮಮಂದಿರವನ್ನು 1528ರಲ್ಲಿ ಕೆಡವಿ ಅದರ ಅವಶೇಷ ಬಳಸಿಕೊಂಡು ಗುಲಾಮಗಿರಿಯ ಗುಂಬಜ್ ಕಟ್ಟಿದ ಮೀರ್ ಬಾಕಿ. ಆಗಿನಿಂದ ಹಿಡಿದು ಮೊನ್ನೆ ಮೊನ್ನೆ ತನಕ ನಾಲ್ಕುವರೆ ಶತಮಾನಗಳ,ಹತ್ತಾರು ಪೀಳಿಗೆಗಳ ಸಂಘರ್ಷ,ಸಮರ್ಪಣೆ, ತಪಸ್ಸು ನಡೆದದ್ದು ಈಗ ಪ್ರೇರಣದಾಯಿ ಇತಿಹಾಸ.

1992ರ ನಂತರ ಪ್ರತಿವರ್ಷ ಈ ದಿನವನ್ನು ಕಟ್ಟಡ ಕೆಡವಿ ನಿರ್ನಾಮ ಮಾಡಿದ್ದಕ್ಕಾಗಿ ಒಂದಿಷ್ಟು ಹೆಮ್ಮೆ,ಯಾವಾಗ ಮಂದಿರ ನಿರ್ಮಾಣಕ್ಕೆ ಕಾಲ ಕೃಪೆ ಮಾಡಿ ಸುಮೂಹೂರ್ತ ತರುವುದೋ ಎನ್ನುವ ಕಾತರದಿಂದ ರಾಮಭಕ್ತರು ಸ್ಮರಣೆ ಮಾಡುತ್ತಿದ್ದರು.

ಈ ವರ್ಷ ಮಾತ್ರ ಶತಮಾನಗಳ ಕನಸು ನನಸಾಗಲು,ತಪಸ್ಸಿಗೆ ಫಲ ದೊರೆಯಲು,ಸಂಘರ್ಷ ಸಂಪನ್ನಗೊಳ್ಳಲು ಕಾಲ ಸನ್ನಿಹಿತವಾಗಿದೆ.

ಭಾರತದ ಆದರ್ಶದ ಅಭಿವ್ಯಕ್ತಿ,ಸ್ವಾಭಿಮಾನದ ಸಂಕೇತ,ತ್ಯಾಗ ಮತ್ತು ಕರ್ತವ್ಯಗಳ ಪರಮಾವಧಿ,
ಸ್ಥಿತಪ್ರಜ್ಞತೆಯ ಸಾಕಾರ ಮೂರ್ತಿ,ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಮಂದಿರಕ್ಕೆ ರಾಮಭಕ್ತ,ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಭೂಮಿ ತಾಯಿ ಪೂಜೆ ಮಾಡಿಸಿಕೊಂಡಿದ್ದಾಳೆ.

ಈ ಧನ್ಯಭಾವವನ್ನು ನಮಗೆಲ್ಲ ತರಿಸಲು ನಮ್ಮವರು ಅದೆಷ್ಟು ನೆತ್ತರು ಸುರಿಸಿದ್ದರು, ಅನೇಕ
ಮೈನವಿರೇಳಿಸುವ ಘಟನಾವಳಿಗಳು ನಡೆದು ಹೋಗಿದ್ದವು. 1528ರಿಂದ ಇತ್ತೀಚಿನ ತನಕ ಕನಿಷ್ಠ ನೂರು ಬಾರಿ ಸೋಲು ಗೆಲುವಿನ ಕದನಗಳಾದವು. ಮೂರು ಲಕ್ಷಕ್ಕೂ ಅಧಿಕ ಜನ ಮಂದಿರ ನಿರ್ಮಾಣಕ್ಕಾಗಿ ತಮ್ಮ ಪ್ರಾಣ ಕೊಟ್ಟು ತನ್ನ ದೇವನ ಪ್ರತಿಷ್ಠಾಪನೆಗೆ ತರ್ಪಣಗೈದರು. ಅದೆಲ್ಲದರ ಪರಿಣಾಮ ನಾವು ಇವತ್ತು ಇತಿಹಾಸದಲ್ಲಿ ಒಮ್ಮೆ ಮಾತ್ರ ಬರುವ ಅಪೂರ್ವ ಕಾಲಕ್ಕೆ ಸಾಕ್ಷಿಯಾಗಿದ್ದು.

ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ RSS, ಬಿಜೆಪಿ ಸೇರಿದಂತೆ ಹಲವು ಹಿಂದು ಸಂಘಟನೆಗಳ ಅವಿರತ ಭಕ್ತಿಪೂರ್ವಕ ಪ್ರಯತ್ನ ಇಷ್ಟು ಬೆಳವಣಿಗೆಗೆ ಕಾರಣ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ರಥಯಾತ್ರೆಗಳು,ಪಾದುಕೆ ಪೂಜೆ, ಶಿಲಾ ಪೂಜೆಗಳು, ನಿಧಿ ಸಂಗ್ರಹ,ಕೆಲವರಿಗೆ ಮಾತ್ರ ಸಿಕ್ಕ ಪವಿತ್ರ ಕಾರ ಸೇವೆಗಳು,ಇಟ್ಟಿಗೆಗಳನ್ನು ಹಣಸಂದಾಯ ಮಾಡಿ ಪಡೆದು ಪೂಜಿಸಿ ಕಳಿಸುವ ಅಳಿಲು ಸೇವೆಗಳು,ಜನಜಾಗೃತಿ ಜನಾಗ್ರಹದ ಸಭೆಗಳು ಹೀಗೆ ಹಲವು ಮುಖಗಳಲ್ಲಿ ಹೋರಾಟ ಜೀವಂತವಿಡಲು ಹಲವಾರು ಮುಖಗಳಲ್ಲಿ ಯೋಜನೆ ಮಾಡಿ ಇಡೀ ದೇಶದ ಉದ್ದಗಲಕ್ಕೆ ಸಂಚರಿಸಿ ರಾಮಭಕ್ತಿ ಮತ್ತು ಹನುಮಶಕ್ತಿ ಜಾಗೃತ ಮಾಡಿದ್ದು, ಅವರನ್ನು ಆಯೋಧ್ಯಭಿಮುಖವಾಗಿ ಪ್ರವಾಹದ ರೀತಿಯಲ್ಲಿ ಹರಿಯುವಂತೆ ಮಾಡಿದ್ದು ಸಂತರ ಆಶೀರ್ವಾದ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ ಸಂಘ ಪರಿವಾರ.

“ರಾಮ ಲಲ್ಲಾ ಹಮ್ ಆಯೆಂಗೆ, ಮಂದಿರ ವಂಹಿ ಬನಾಯೆಂಗೆ”!

ಎಂದು ರಾಮಭಕ್ತರು ಹೇಳಿ ಭಕ್ತಿ, ವಿಶ್ವಾಸ ಮತ್ತು ಬದ್ಧತೆ ವ್ಯಕ್ತಪಡಿಸಿದಾಗ ಇದು ಅಸಾಧ್ಯವೆಂದು ಗೇಲಿ ಮಾಡಿ ನಕ್ಕವರೂ ಇದ್ದರು,ಭಕ್ತಿ ಇದ್ದರೂ ಇದು ಸಾಧ್ಯವೇ ಎಂದು ತಮ್ಮಲ್ಲೇ ಪ್ರಶ್ನೆ ಮಾಡಿಕೊಂಡವರು ಇದ್ದರು.

ಆದರೆ ಒಂದು ರೀತಿಯ ಜನರು ಮಾತ್ರ ಮಂದಿರ ನಿರ್ಮಾಣ ಮಾಡುವುದನ್ನು ತಮ್ಮ ಜೀವಿತಾವಧಿಯ ತಪಸ್ಸು ಎಂದುಕೊಂಡು ಅವನನ್ನೇ ನಂಬಿಕೊಂಡು ತಮ್ಮನ್ನೇ ತಾವು ಧಾರೆಯೆರೆದರು.ಅದರಲ್ಲೇ ತಮ್ಮ ಬದುಕಿನ ಸಾರ್ಥಕತೆ ಎಂದುಕೊಂಡರು.

ಅದೇನೇ ಇರಲಿ ಎಲ್ಲವನ್ನೂ ಮೀರಿ ಅದ್ಭುತ ಕಾಲವೊಂದು ಕೂಡಿ ಬಂದಿದೆ ಅದಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿರುವುದು ನಮ್ಮ ಸೌಭಾಗ್ಯ ಎಂದೇ ತಿಳಿಯೋಣ.

ಇವತ್ತಿನ ದಿನವೇ ನಮ್ಮ ದೇಶ ಇನ್ನೊಂದು ಘಟನೆ ಸ್ಮರಣೆ ಮಾಡಲೇಬೇಕು. ಮಹಾನಯಕ,ಸಾಮಾಜಿಕ ಕ್ರಾಂತಿಸೂರ್ಯ ಬಾಬಾಸಾಹೇಬ ಅಂಬೇಡ್ಕರರು ದೇಹಬಿಟ್ಟು ನಡೆದದ್ದು ಇದೆ ದಿನ. ಸುಮ್ಮನೆ ಎಲ್ಲರೂ ಹುಟ್ಟಿದಂತೆ ಹುಟ್ಟಿ,ಸತ್ತಿದ್ದರೆ ಸ್ಮರಣೆಯ ಅವಶ್ಯಕತೆ ಇರುತ್ತಿರಲಿಲ್ಲವೆನೋ. ಎಲ್ಲರೂ ಹುಟ್ಟಿದಂತೆ ಹುಟ್ಟಿದರೂ ಅವರ ಸಾವು ಮಾತ್ರ ಇತಿಹಾಸವಾಗಿತ್ತು.

ಬದುಕಿನುದ್ದಕ್ಕೂ ಕಷ್ಟಗಳ ಸರಮಾಲೆ ಧರಿಸಿ,ಹೆಜ್ಜೆ ಹೆಜ್ಜೆಗೂ ಅಪಮಾನಗಳಿಂದ ಸ್ವಾಗತ ಸ್ವೀಕರಿಸಿ,ನಿಂದನೆ ತಿರಸ್ಕಾರ ಸಹಿಸಿ ಬಾಬಾಸಾಹೇಬರು ಬದುಕಿದ್ದರು. ಸಾಕಷ್ಟು ಬಳಲಿದರು ಆದರೆ ಸಮಸ್ಯೆಗಳಿಗೆ ಬೆನ್ನು ತೋರಲಿಲ್ಲ,ಬೆಂಡಾಗಲಿಲ್ಲ ಎನ್ನುವುದು ಅವರ ಸ್ಮರಣೆಗೆ ಮುಖ್ಯ ಕಾರಣ.

ಹಲವು ವಿಷಯಗಳ ಮೇಲೆ ಹಿಡಿತವಿದ್ದ ಅಪರೂಪದ ಜ್ಞಾನಿ. ಶೋಷಿತರ ಪರವಾಗಿ ಅವರಿಗಿದ್ದ ಕಾಳಜಿಗೆ ಮತ್ತೊಂದು ಪರ್ಯಾಯ ವ್ಯಕ್ತಿ ಇರಲು ಸಾಧ್ಯವಿಲ್ಲ. ರಾಷ್ಟ್ರೀಯತೆ ಕುರಿತ ನಿಷ್ಠೆ ಮತ್ತು ಬದ್ಧತೆಗೆ ಪ್ರಾಯಶಃ ಅವರಿಗೆ ಅವರೇ ಸಾಟಿ.

ಸಮಕಾಲೀನರಲ್ಲಿಯೇ ಅತಿ ಹೆಚ್ಚು ಯೋಗ್ಯರು ಮತ್ತು ಜ್ಞಾನಿಗಳು ಆಗಿದ್ದ ಒಬ್ಬ ವ್ಯಕ್ತಿಗೆ ಸಮಾಜ ನಡೆಸಿಕೊಂಡ ರೀತಿ ನೋಡಿದರೆ ಅವರು ವ್ಯವಸ್ಥೆಯ ಮುಖ್ಯ ಹುದ್ದೆಗೆ ಏರಿದಾಗ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ,ಅದಕ್ಕೆ ಅವರು ವಿಶಿಷ್ಟವಾಗಿ ಕಾಣುವುದು.

ಒಮ್ಮೊಮ್ಮೆ ಹಿಂದೂ ಸಮಾಜದಲ್ಲಿನ ಅಸ್ಪ್ರಶ್ಯತೆಯ ತಾಂಡವ ನೋಡಿ ಮರಗಿ ಕೊರಗಿ ರೇಗಿದರು.
ಒಮ್ಮೆಯಂತೂ ನಾನು ಹಿಂದುವಾಗಿ ಹುಟ್ಟಿದ್ದು ನಿಜ ಆದರೆ ಹಿಂದುವಾಗಿ ಸಾಯಲಾರೆ ಎಂದು ಸಾರ್ವಜನಿಕವಾಗಿ ಹೇಳಿದ್ದರು.

ಅದನ್ನು ಕೇಳಿದ್ದ ಮತಾಂಧರು ದುಡ್ಡು, ಸ್ಥಾನ ಮಾನಗಳ ಆಮಿಷ ತೋರಿಸಿ ಮತಾಂತರ ಮಾಡಲು ಹಿಂದೆ ಬೀಳಲಿಲ್ಲ. ಆದರೆ ಬಾಬಾಸಾಹೇಬರು ಮಾತ್ರ ಅವರಿಗೆ ತಮ್ಮನ್ನು, ತಮ್ಮ ತನವನ್ನು ಮಾರಿಕೊಳ್ಳಲಿಲ್ಲಾ.
ಹಾಗೆ ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿ ಬರೋಬ್ಬರಿ ಇಪ್ಪತ್ತೊಂದು ವರ್ಷಗಳ ಕಾಲ ಅವರು ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಇನ್ಯಾವುದೋ ಮತಕ್ಕೆ ಸೇರುವ ತೀರ್ಮಾನ ಮಾಡಲಿಲ್ಲ. ಮನಸ್ಸು ಮಾಡಿದ್ದರೆ ಕ್ಷಣ ಮಾತ್ರದಲ್ಲಿ ತೀರ್ಮಾನ ಮಾಡಿ ಬಿಡಬಹುದಿತ್ತು. ಹಿಂದು ಸಮಾಜಕ್ಕೆ ಕನಿಷ್ಠ ಹಾನಿಯಾಗುವ ಮಾರ್ಗ ಅನುಸರಿಸುವೆ ಎಂದು ತಾವೇ ಹೇಳಿದ ಮಾತಿನಂತೆ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಹಿಂದು ಧರ್ಮದ ಒಂದು ರೂಪವೇ ಆದ ಬೌದ್ಧ ಮತ ಸ್ವೀಕಾರ ಮಾಡಿದರು ಅಂಬೇಡ್ಕರ್.

ಪಾಕಿಸ್ತಾನ ಕುರಿತಂತೆ ಅವರ ದೂರದೃಷ್ಟಿ ಎಂಥದ್ದು ಅನ್ನುವುದು ಈಗ ಅರ್ಥವಾಗುತ್ತಿದೆ.

ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ,ಕಷ್ಟಗಳನ್ನು ಮೆಟ್ಟಿ ನಿಂತು ಅವರು ಬೆಳೆದ ರೀತಿ ಪೀಳಿಗೆಗಳಿಗೆ ಪ್ರೇರಣೆಯ ಶಕ್ತಿ.

ಉಳಿದವರಿಗೆ ಅಸಾಧ್ಯವೆಂದು ಕಂಡ ಮಂದಿರದ ನಿರ್ಮಾಣಕ್ಕೆ ಕಾರಣವಾದ ರಾಮಭಕ್ತಿ ಹಾಗೂ ಸಾಮಾನ್ಯ ಮನುಷ್ಯನೊಬ್ಬ ಅಸಾಮಾನ್ಯನಾಗಿ ಬೆಳೆದು ನಿಲ್ಲಲು,ದೇಹಬಿಟ್ಟ ನಂತರವೂ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಗಳಿಸಲು ಬೇಕಾದ ಕರ್ತುತ್ವದ ಭೀಮ ಶಕ್ತಿ ಮತ್ತಷ್ಟು ಜಾಗೃತವಾಗಲು ಈ ದಿನ ಕಾರಣವಾಗಬೇಕು.
ಭೀಮನ ಶಕ್ತಿ ಈ ಯುಗದ ಅಸ್ಪ್ರಶ್ಯತೆಗೆ, ಆಲಸ್ಯ, ಅಜ್ಞಾನಕ್ಕೆ ರಾಮಬಾಣವಾದರೂ ಸಾಕು.

✍️ ಡಾ.ಮಲ್ಲಿಕಾರ್ಜುನ ಬಾಳಿಕಾಯಿ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top