ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಭವಿಷ್ಯ ಇಲ್ಲಾರೀ.. ಇಂದಿನದು ಸ್ಪರ್ಧಾತ್ಮಕ ಜಗತ್ತು.. ಇಂಗ್ಲೀಷು ಇಲ್ಲಿ ಬೇಕೇ ಬೇಕು. ಇಂಗ್ಲೀಷು ಬರೋಲ್ವೇ ಹಾಗಿದ್ರೆ ನಿನ್ನ ಜೀವನಾನೇ ಮುಗೀತು.. ಏನೂ ಸಾಧನೆ ಮಾಡೋಕಾಗೋಲ್ಲ.
ಈ ರೀತಿಯ ಬಗೆ ಬಗೆಯ ಹೇಳಿಕೆ ಕೊಡುವ ಜನರೇ ಹೆಚ್ಚು. ಇದು ಸಂಪೂರ್ಣ ಸತ್ಯ ಅಲ್ಲ. ಅಂತ ಎದೆ ತಟ್ಟಿ ಹೇಳಬಲ್ಲೆನಾದರೂ ತಳ್ಳಿ ಹಾಕಬಹುದಾದ ಸುಳ್ಳು ಕೂಡಾ ಅಲ್ಲ. ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಇರುವುದು ಒಂದು ಗುಣಾತ್ಮಕ ಅಂಶ , ಅಷ್ಟೇ ಹೊರತು ಅದೇ ಪ್ರಧಾನ ಅಂಶ ಅಲ್ಲವೇ ಅಲ್ಲ. ಆದರೆ ಜಗತ್ತು ಆ ಭ್ರಮೆಯಲ್ಲೇ ಇದೆ. ಈ ಭ್ರಮೆಯ ವ್ಯತಿರಿಕ್ತ ಪರಿಣಾಮ ಕನ್ನಡ ಮಾಧ್ಯಮ ಶಾಲೆಯ ಮೇಲಾಗುತ್ತದೆ ಎನ್ನುವುದನ್ನು ನಂಬಲೇಬೇಕು.. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಎಲ್ಲೋ ಇದು ಕೀಳರಿಮೆ ಬೆಳೆಸುತ್ತದೆ. ಕನ್ನಡ ಮಾಧ್ಯಮದವರೂ ಕೂಡ ಇಂಗ್ಲೀಷನ್ನು ಒಂದು ವಿಷಯವಾಗಿ ಸ್ವೀಕರಿಸಿ ಅದರಲ್ಲಿ ಪ್ರಭುತ್ವ ಸಾಧಿಸಬಹುದು. ಜಗತ್ತಿನ ಯಾವುದೇ ಭಾಷೆಯನ್ನು ಕಲಿಯಲು ಎಷ್ಟು ಪ್ರಯತ್ನ ಬೇಕಾಗುತ್ತದೆಯೋ ಅಷ್ಟೇ ಪ್ರಯತ್ನ ಆಂಗ್ಲ ಭಾಷೆಯ ಕಲಿಕೆಗೆ ಹಾಕಿದರಾಯಿತು. ಈ ವಿಚಾರವನ್ನು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತಿಳಿಸಿ ಅವರ ಆತ್ಮಸ್ಥೈರ್ಯವನ್ನು ಹೆಚ್ಚು ಮಾಡುವುದು ಇಂದಿನ ಅಗತ್ಯಕಾರ್ಯಗಳಲ್ಲೊಂದು.
ಇಂತಹ ಶುಭ ಕಾರ್ಯಕ್ಕೆ “ಕೇಶವ ಸ್ಮೃತಿ ಸಂವರ್ಧನ ಸಮಿತಿ, ಸಂಘನಿಕೇತನ , ಪ್ರತಾಪನಗರ ಮಂಗಳೂರು” ಕೈ ಹಾಕಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಳಕ್ಕೆ ಅಪರೂಪದ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆಯೋಜಿಸಿದ ಕಾರ್ಯಕ್ರಮಗಳಾದರೂ ಎಷ್ಟೊಂದು ಸೊಗಸಾದದ್ದು, ಮಕ್ಕಳ ಜತೆ, ಶಿಕ್ಷಕರ ಜತೆ, ಪೋಷಕರ ಜತೆ ಗಣ್ಯಾತಿಗಣ್ಯರ ಸಂವಾದ. ಮಕ್ಕಳು ಶಿಕ್ಷಕರು ಪೋಷಕರು ಈ ಮೂವರೂ ಕೂಡ ಕನ್ನಡ ಶಾಲೆಗಳ ಅಭಿವೃದ್ಧಿಯ ಅಡಿಗಲ್ಲುಗಳು. ಅವರ ಆತ್ಮವಿಶ್ವಾಸ ವೃದ್ಧಿಯಾಯಿತೆಂದರೆ ಕನ್ನಡ ಶಾಲೆಗಳು ಉಳಿದು ಬೆಳೆದಂತೆಯೇ ಸರಿ. ಮಕ್ಕಳ ಜತೆ ಸಂವಾದಕ್ಕೆ ಶ್ರೀಮತಿ ನಂದಿನಿ ಕೆ.ಆರ್. ಬರುತ್ತಾರೆ. ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಬಂದವರು. ಅಂತಹವರ ಜತೆ ಮಕ್ಕಳ ಸಂವಾದವಾಯಿತೆಂದರೆ ಮಕ್ಕಳ ಆತ್ಮವಿಶ್ವಾಸ ಅದೆಷ್ಟು ಎತ್ತರಕ್ಕೇರಲಿಕ್ಕಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಾಗಿ ಶಿಕ್ಷಕರ ಜತೆ ಸಂವಾದ ನಡೆಸಲು ರಾಜ್ಯದ ಮಾನ್ಯ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ಬರುತ್ತಾರೆ. ಪೋಷಕರ ಮನಸ್ಸಿಗೆ ಆತ್ಮವಿಶ್ವಾಸ ತುಂಬಲು ಚಿಂತಕರಾದ ರೋಹಿತ್ ಚಕ್ರತೀರ್ಥರು ಬರುತ್ತಾರೆ.
ಇದರ ಹೊರತಾಗಿ ಮೂರು ನಾಲ್ಕು ಅದ್ಭುತ ಉಪಾನ್ಯಾಸಗಳು.. ” ಕನ್ನಡ ಮತ್ತು ರಾಷ್ಟ್ರೀಯತೆ ” ಅನ್ನುವ ವಿಚಾರದ ಕುರಿತಾಗಿ ಶ್ರೀ ರಾಜೇಶ್ ಪದ್ಮಾರ್ ,” ಕನ್ನಡ ಎಂದರೆ ಬರಿ ನುಡಿ ಅಲ್ಲ ” ಅನ್ನುವ ವಿಚಾರದ ಬಗ್ಗೆ ಚಕ್ರವರ್ತಿ ಸೂಲಿಬೆಲೆ, “ಕನ್ನಡ ಶಾಲಾ ಯಶೋಗಾಥೆ” ಇದರ ಬಗ್ಗೆ ಡಾ. ಕಲ್ಲಡ್ಕ ಪ್ರಭಾಕರ ಭಟ್, ಶ್ರೀ ಚಂದ್ರಶೇಖರ ದಾಮ್ಲೆ, “ಜೀವನ ಮೌಲ್ಯ” ದ ಬಗ್ಗೆ ಶ್ರೀ ಮುನಿರಾಜ ರೆಂಜಳ ಇವರುಗಳು ಮಾತನಾಡಲಿದ್ದಾರೆ. ನಿಜಕ್ಕೂ ಜ್ಞಾನಮಯ ವಾತಾವರಣ ಸೃಷ್ಟಿಯಾಗಲಿದೆ.
ಇಲ್ಲಿನ ವೇದಿಕೆಗಳಿಗೆ ಇಟ್ಟ ಹೆಸರಾದರೂ ಎಂತಹವರದ್ದು, ಪಂಜೆ ಮಂಗೇಶ ರಾಯರು, ಶಿವರಾಮ ಕಾರಂತರು, ಕುದ್ಮಲ್ ರಂಗಾರಾವ್ ಅವರದ್ದು. ಇಂತಹ ಮಹಾತ್ಮರ ಹೆಸರಿನ ವೇದಿಕೆಯಲ್ಲಿ ಕನ್ನಡ ಶಾಲಾ ಮಕ್ಕಳ ಹಬ್ಬ ವೈಭವದಿಂದ ನಡೆಯಲಿದೆ. ಇದರ ಜತೆಗೆ ಮಕ್ಕಳಿಗೆ ಆಟಗಳು, ಮಕ್ಕಳ ನಾಟಕ, ಕುಣಿತ, ಪ್ರತಿಭಾ ಪ್ರದರ್ಶನ, ಕನ್ನಡ ಪ್ರದರ್ಶಿನಿಗಳೆಲ್ಲವೂ ಇರಲಿದೆ. ನನ್ನ ಮನಸ್ಸಿಗೆ ಮುದ ನೀಡಿದ ವಿಚಾರ ತಂಡಗಳಿಗಾಗಿ ಸ್ಪರ್ಧೆ ನಡೆಸುವಲ್ಲಿ ಆಯೋಜಕರು ಇಟ್ಟ ವಿಷಯಗಳು. ಸ್ವಚ್ಛ ಭಾರತ, ಹೆಣ್ಣು ಗಂಡು ಸಮಾನತೆ , ನಾನೇ ನನ್ನ ಜೀವನ ಶಿಲ್ಪಿ( ಸ್ಕಿಟ್), ಆತ್ಮ ನಿರ್ಭರ ಭಾರತ( ಬೀದಿ ನಾಟಕ ) ಅಬ್ಬಾ ಒಂದೊಂದು ವಿಷಯವೂ ಕೂಡಾ ವಿದ್ಯಾರ್ಥಿಗಳಲ್ಲಿ ಭಾರತೀಯತೆಯನ್ನು ಬಡಿದೆಬ್ಬಿಸಬಲ್ಲಂತಹವು.
ಬಹುಶಃ ಇದಕ್ಕಿಂತ ಸೊಗಸಾದ ಕರ್ನಾಟಕ ರಾಜ್ಯೋತ್ಸವ ಆಚರಣೆ ಬೇರೊಂದಿರಲಿಕ್ಕಿಲ್ಲ. ಕನ್ನಡವನ್ನ ನಾವೆಷ್ಟು ನೆಚ್ಚಿಕೊಂಡಿದ್ದೇವೋ ಅಷ್ಟೇ ರಾಷ್ಟ್ರೀಯತೆಯನ್ನು ಅಪ್ಪಿಕೊಂಡಿದ್ದೇವೆ. ಮಾತೃ ಭಾಷೆಯ ಮೂಲಕ ನಾವು ನಮ್ಮ ರಾಷ್ಟ್ರೀಯತೆಯ ಚಿಂತನೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಕೇಶವ ಸ್ಮೃತಿ ಸಂವರ್ಧನ ಸಮಿತಿ ಎಲ್ಲಾ ಕಾರ್ಯಕರ್ತರಿಗೂ ನನ್ನ ಮನದಾಳದ ಅಭಿನಂದನೆ. ಈ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಕಾಣಲಿ ಎನ್ನುವುದೇ ನನ್ನ ಹಾರೈಕೆ.
✍️ ಗುರುಪ್ರಸಾದ್ ಆಚಾರ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.