ಸುಂದರ ಪರ್ವತದಿಂದ ಆವೃತ್ತವಾಗಿರುವ ಲಡಾಖ್ ಪ್ರವಾಸಿಗರ ಪಾಲಿಗೆ ಸ್ವರ್ಗವೇ ಇರಬಹುದು, ಆದರೆ ಅಲ್ಲಿನ ಸ್ಥಳೀಯರು ನೀರಿಗಾಗಿ ಪರದಾಟ ನಡೆಸಬೇಕಾದ ಸ್ಥಿತಿಯಿದೆ. ಅಲ್ಲಿನ ಜನರ ನೀರಿನ ಬವಣೆಯನ್ನು ನೋಡಲಾಗದ ಎಂಜಿನಿಯರ್ವೊಬ್ಬರು ತಮ್ಮೆಲ್ಲಾ ಕೌಶಲಗಳನ್ನು ಬಳಸಿ ಲಡಾಖ್ ಜನತೆಯನ್ನು ನೀರಿನ ಸಮಸ್ಯೆಯಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
79 ವರ್ಷದ ಚೆವಾಂಗ್ ನೋರ್ಫೆಲ್ ನಿವೃತ್ತ ಸಿವಿಲ್ ಎಂಜಿನಿಯರ್, ಎಲ್ಲಾ ಸಮಸ್ಯೆಗೂ ಪರಿಹಾರ ನೀಡುವ ಚತುರ. ಕೊರೆಯುವ ಹಿಮಪರ್ವತದ ಲಡಾಖ್ನಲ್ಲಿ ಒಟ್ಟು 10 ಕೃತಕ ಹಿಮನದಿಗಳನ್ನು ಸೃಷ್ಟಿಸಿ ಗ್ರಾಮಸ್ಥರಿಗೆ ನೀರು ನೀಡಿದ ಸಾಧಕ, ಪರೋಪಕಾರಿ. ಇದಕ್ಕಾಗಿ ಅವರನ್ನು ‘ಐಸ್ ಮ್ಯಾನ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ.
1966ರಲ್ಲಿ ಲಡಾಖ್ನ ಅತ್ಯಂತ ಕುಗ್ರಾಮ ಝಂಸ್ಕರ್ನಲ್ಲಿ ಇವರನ್ನು ಕಾಯಕಕ್ಕಾಗಿ ನಿಯೋಜನೆಗೊಳಿಸಲಾಗಿತ್ತು, ಈ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲಿರಲಿಲ್ಲ. ಇದನ್ನು ಮನಗಂಡ ಅವರು ಮತ್ತು ಅವರ ತಂಡ ಮೊದಲು ಅಲ್ಲಿ ಶಾಲಾ ಕಟ್ಟಡ, ಬ್ರಿಡ್ಜ್, ಸುರಂಗ, ರಸ್ತೆಗಳನ್ನು ನಿರ್ಮಿಸಿದರು. ಕೌಶಲ್ಯ ಹೊಂದಿದ ಕಾರ್ಮಿಕರ ಕೊರತೆಯಿದ್ದುದರಿಂದ ಈ ಕಾರ್ಯ ಅತೀ ಕಷ್ಟಕರವಾಗಿತ್ತು.
ಹೀಗಾಗಿ ಅವರು ಕೆಲ ಗ್ರಾಮಸ್ಥರನ್ನು ಒಟ್ಟು ಸೇರಿಸಿ ಅವರಿಗೆ ತರಬೇತಿ ನೀಡುವ ಕಾರ್ಯವನ್ನೂ ಮಾಡಿದರು. ಕೆಲ ವರ್ಷದ ಬಳಿಕ ಅಲ್ಲಿನ ಗ್ರಾಮಸ್ಥರು ವೃತ್ತಿಪರ ಮೇಸ್ತ್ರಿ, ಕಾರ್ಮಿಕರಾಗಿ ಕೈತುಂಬಾ ಸಂಬಳ ಪಡೆಯುವ ಹಂತಕ್ಕೆ ತಲುಪಿದರು.
ಕೃಷಿಕ ಕುಟುಂಬದಿಂದ ಬಂದ ಚೆವಾಂಗ್ 36 ವರ್ಷ ಸರ್ಕಾರಿ ಸೇವೆಯಲ್ಲಿದ್ದವರು, ಆರೋಗ್ಯ ಕೈಕೊಟ್ಟ ಹಿನ್ನಲೆಯಲ್ಲಿ ಸಮಯಕ್ಕಿಂತ ಮೊದಲೇ ನಿವೃತ್ತಿ ಪಡೆಯಬೇಕಾದ ಅನಿವಾರ್ಯತೆ ಇವರಿಗೆ ಎದುರಾಯಿತು. ಆದರೆ ಲಡಾಖ್ನ ಪರಿಸ್ಥಿತಿ ಸದಾ ಅವರನ್ನು ಕಾಡುತ್ತಿತ್ತು, ಹೀಗಾಗಿ ನಿವೃತ್ತಿಯ ಬಳಿಕವೂ ಅವರು ತಮ್ಮ ಎಂಜಿನಿಯರಿಂಗ್ ಕೌಶಲ್ಯವನ್ನು ಬಳಸಿ ಸುಂದರ ಲಡಾಖ್ನ ಜನಜೀವನ ಸುಧಾರಣೆಗೆ ಮುಂದಾದರು.
ಇವರ ಈ ಕಾರ್ಯದಿಂದಾಗಿ ಇಂದು ಲಡಾಖ್ನಲ್ಲಿ ರಸ್ತೆಯಿದೆ, ಬ್ರಿಡ್ಜ್ ಇದೆ, ಸುರಂಗವಿದೆ, ನೀರಾವರಿ ಇದೆ. ಎಲ್ಲದಕ್ಕಿಂತಲೂ ಮಿಗಿಲಾಗಿ ಇವರು 10 ಹಿಮನದಿಗಳನ್ನು ಸ್ಥಾಪಿಸಿ ಜನತೆಯ ನೀರಿನ ಬವಣೆಯನ್ನು ಹೋಗಲಾಡಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಹಿಮ ಕರಗಿ ಸೃಷ್ಟಿಯಾಗುವ ನೀರನ್ನು ಸಂಗ್ರಹಿಸಿ ಈ ಕೃತಕ ಹಿಮನದಿಗಳಲ್ಲಿ ಶೇಖರಿಸಿ ಇಡಲಾಗುತ್ತದೆ.
ಚಳಿಯಿಂದ ಕೂಡಿದ ಪರ್ವತ ಮರಳುಗಾಡಾಗಿರುವ ಲಡಾಖ್ನಲ್ಲಿ ವರ್ಷಕ್ಕೆ ಕೇವಲ 55ಎಂಎಂ ಮಾತ್ರ ಮಳೆಯಾಗುತ್ತದೆ. ಹೀಗಾಗಿ ಅಲ್ಲಿನ ಜನ ಹಿಮನದಿಗಳನ್ನೇ ನೀರಿಗಾಗಿ ಆಶ್ರಯಿಸಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.