News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಜೆಪಿ ಸಾಧನೆ, ಕಾಂಗ್ರೆಸ್ ವಿಫಲತೆಯನ್ನು ಜನರಿಗೆ ತಿಳಿಸುವಂತೆ ಕರೆ

ಬೆಂಗಳೂರು: ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿದ್ದ ಕಾಂಗ್ರೆಸ್ ಪಕ್ಷವು ಆಂತರಿಕ ಒಳಜಗಳದಿಂದ ಬೀದಿಗೆ ಬಂದು ನಿಂತಿದೆ. ನೂರು ಸುಳ್ಳು ಹೇಳಿ ಅದನ್ನೇ ಸತ್ಯವೆಂದು ಬಿಂಬಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಅದಕ್ಕೆ ಅಷ್ಟೇ ತೀವ್ರತೆಯಿಂದ ನಾವೆಲ್ಲರೂ ಉತ್ತರ ಕೊಡಬೇಕಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಈರಣ್ಣ ಕಡಾಡಿ ಅವರು ತಿಳಿಸಿದರು.

ದಾವಣಗೆರೆಯಲ್ಲಿ ಇಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ವತಿಯಿಂದ ನಡೆದ ರಾಜ್ಯ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತ್ ಜೋಡೋ ಯಾತ್ರೆ ನಕಾಶೆ ಗಮನಿಸಿದರೆ ಕರ್ನಾಟಕಕ್ಕೆ ಹೆಚ್ಚು ದಿನಗಳನ್ನು ನೀಡಲಾಗಿದೆ. ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಪ್ರಾದೇಶಿಕ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾದ ದಯನೀಯ ಸ್ಥಿತಿಗೆ ಅದು ತಲುಪಿದೆ ಎಂದು ವಿವರಿಸಿದರು.

ಜನಪರ ಪ್ರಧಾನಿ ನರೇಂದ್ರ ಮೋದಿಜಿ, ಜೆ.ಪಿ. ನಡ್ಡಾಜಿ, ಅಮಿತ್ ಶಾ ಅವರಂಥ ಸಮರ್ಥ ನಾಯಕರ ತಂಡವೇ ನಮ್ಮ ಪಕ್ಷಕ್ಕಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲಗಳಿವೆ. ಗಾಂಧಿ ಪರಿವಾರದಿಂದ ಹೊರತಾದ ಅಧ್ಯಕ್ಷರ ಆಯ್ಕೆಯ ಸಂದೇಶ ಕೊಡಲು ಆ ಪಕ್ಷ ಮುಂದಾಗಿದೆ. ಪಕ್ಷದ ಅಧ್ಯಕ್ಷತೆ ಬೇಡ ಎನ್ನುವ ರಾಹುಲ್ ಗಾಂಧಿಯವರು ಯಾತ್ರೆಗೆ ಮುಂದಾಗಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡರು ಭಾರತವನ್ನು ಒಡೆದಷ್ಟು ಬೇರೆ ಯಾರೂ ದೇಶ ಒಡೆದಿಲ್ಲ. ದೇಶ ಒಡೆದು ಮೂರು ತುಂಡು ಮಾಡಿದ ಕೀರ್ತಿ ರಾಹುಲ್ ಅವರ ಮುತ್ತಾತ ನೆಹರೂ ಅವರಿಗೆ ಸಲ್ಲುತ್ತದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದ ನೈತಿಕತೆಯನ್ನು ನಾವು ಪ್ರಶ್ನಿಸಬೇಕು ಎಂದು ತಿಳಿಸಿದರು.

ಸ್ವಾತಂತ್ರ್ಯ ಕೊಡಿಸಿದ ಪಾರ್ಟಿ ಎಂಬ ಸೋಗಿನಲ್ಲಿರುವ ಕಾಂಗ್ರೆಸ್ ಪಕ್ಷವು ದೇಶ ವಿಭಜನೆಗೆ ಕಾರಣವಾಯಿತು. ತುಷ್ಟೀಕರಣ ನೀತಿಯಿಂದ ಶಾಂತಿ ಕದಡಿತು. ಜಾತಿ ಸಂಘರ್ಷಕ್ಕೆ ಕಾರಣವಾಯಿತು ಎಂದು ವಿವರ ನೀಡಿದರು.

ಜೆಡಿಎಸ್ ದಕ್ಷಿಣ ಕರ್ನಾಟಕದ ಕೆಲವೇ ಜಿಲ್ಲೆಗಳಿಗೆ ಸೀಮಿತವಾದ ಪಕ್ಷ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಅಡ್ರೆಸ್ಸೇ ಇಲ್ಲ. ಆದರೂ ಅವರು ಮುಖ್ಯಮಂತ್ರಿ ಆಗುವುದಾಗಿ ಹೇಳುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಮಧ್ಯೆ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿ ಪೈಪೋಟಿ- ಒಳಜಗಳ ನಡೆದಿದೆ. ಆದರೆ, ನಮ್ಮಲ್ಲಿ ಗೊಂದಲಗಳಿಲ್ಲ; ಸ್ಪಷ್ಟತೆ ಇದೆ. ನಾವು ಸ್ಪಷ್ಟ ಗುರಿಯೊಂದಿಗೆ ಕೆಲಸ ಮಾಡಬೇಕೆಂದು ತಿಳಿಸಿದರು.

ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಜಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಿಂದಿನ ಸಿಎಂ ಯಡಿಯೂರಪ್ಪ ಅವರು ಅನೇಕ ರೈತಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮೋರ್ಚಾವು ಸರಕಾರ ಮತ್ತು ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

2023ರ ಅಸೆಂಬ್ಲಿ ಚುನಾವಣೆಯ ಸವಾಲು ನಮ್ಮ ಮುಂದಿದೆ. ವಿಧಾನಸಭಾ ಚುನಾವಣೆಯಲ್ಲಿ ರೈತ ಮೋರ್ಚಾ ಸಹಕಾರದಿಂದ ಗೆಲ್ಲುವಂತಾಗಿದೆ ಎಂದು ನೂತನ ಬಿಜೆಪಿ ಶಾಸಕರು ಹೇಳುವಂತೆ ನಮ್ಮ ಕೆಲಸವನ್ನು ವಿಸ್ತರಿಸಬೇಕು ಎಂದು ತಿಳಿಸಿದರು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕಾರ್ಯತಂತ್ರ ನಮ್ಮದಾಗಲಿ ಎಂದರು.

ರಾಜ್ಯ ಕಾರ್ಯಕಾರಿಣಿ ನಿನ್ನೆ ನಡೆದಿದೆ. ಅದರ ನಿರ್ಣಯಗಳ ಕುರಿತು ಚರ್ಚಿಸಲಾಗುತ್ತಿದೆ ಎಂದ ಅವರು, ಸೇವಾ ಪಾಕ್ಷಿಕದಡಿ ದೇಶೀಯ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಏರ್ಪಡಿಸಿದ್ದಕ್ಕಾಗಿ ಮತ್ತು ಜಲಮೂಲಗಳ ಸ್ವಚ್ಛತೆಗಾಗಿ ರೈತ ಮೋರ್ಚಾದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ರೈತ ಮೋರ್ಚಾವು ಸಮಾಜದ ಎಲ್ಲರಿಗೂ ಅವಕಾಶ ನೀಡುತ್ತದೆ. ಮೋರ್ಚಾದ ಶಕ್ತಿ ಪ್ರದರ್ಶನಕ್ಕೆ ಚುನಾವಣೆಯನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಹುಬ್ಬಳ್ಳಿ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳೋಣ ಎಂದು ಕರೆನೀಡಿದರು. ಹುಬ್ಬಳ್ಳಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವಂತಾಗಬೇಕು ಎಂದರು.

ರೈತ ಮೋರ್ಚಾ ದಾವಣಗೆರೆ ಜಿಲ್ಲಾ ಅಧ್ಯಕ್ಷ ನಾಗರಾಜ್ ಕಿಕ್ಕೇರಿ ಅವರು ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮತ್ತು ಮೋರ್ಚಾದ ಮುಖಂಡರು ಭಾಗವಹಿಸಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top