ಕೋಲಾರ ಜಿಲ್ಲೆಯ ಮಾಲೂರಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಪಲ್ಲಕ್ಕಿಯ ಗುಜ್ಜುಕೋಲನ್ನು ದಲಿತ ಬಾಲಕನೊಬ್ಬ ಮುಟ್ಟಿದ ‘ಅಪರಾಧ’ಕ್ಕೆ ಗ್ರಾಮಸ್ಥರೇ ನ್ಯಾಯ ಪಂಚಾಯತಿ ನಡೆಸಿ ಬಾಲಕನ ಕುಟುಂಬಕ್ಕೆ ದಂಡವಿಧಿಸಿ , ದಂಡ ಪಾವತಿಸದಿದ್ದರೆ ಊರಿನಿಂದ ಬಹಿಷ್ಕರಿಸುವ ಬೆದರಿಕೆ ಹಾಕಿದ್ದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂಥ ಘಟನೆಯಾಗಿದೆ. ದಲಿತ ಸಮುದಾಯದ ಬಾಲಕನೊಬ್ಬನ ಸ್ಪರ್ಶದಿಂದ ದೇವರಿಗೆ ಮೈಲಿಗೆಯಾಯಿತು ಎಂದು ಆ ಬಾಲಕನ ಕುಟುಂಬವನ್ನು ದಂಡಿಸಲು ನ್ಯಾಯಪಂಚಾಯಿತಿ ನಡೆಸಿದ ಊರಿನ ಮುಖಂಡರು ಮನುಕುಲದ ಕಳಂಕಕ್ಕೆ ನ್ಯಾಯದ ಸಮ್ಮತಿ ನೀಡಿದ್ದು ಸಂವಿಧಾನಕ್ಕೆ ಎಸಗಿದ ಘೋರ ಅಪಚಾರವಾಗಿದೆ. ನ್ಯಾಯ ಪಂಚಾಯತಿಯನ್ನು ಮಾಡಲು ಮುಂದಾದ ಸಮುದಾಯಗಳ ಜನರು ಈ ದಂಡನೆಯನ್ನು, ಬಹಿಷ್ಕಾರವನ್ನು ತಮ್ಮ ಜಾತಿ ಪರಂಪರೆ, ಊರು ಪರಂಪರೆಯನ್ನು ಉಳಿಸಲು ಮಾಡಿದ ನ್ಯಾಯಸಮ್ಮತ ಕ್ರಿಯೆಯಾಗಿ ಕಂಡಿದ್ದಾರೆ ಎಂದರೆ ಅವರುಗಳ ಮಿದುಳು- ಮನಸುಗಳು ಎಷ್ಟೊಂದು ಕಲುಷಿತವಾಗಿದೆ ಎನ್ನುವುದನ್ನು ನಾವು ಊಹಿಸಬಹುದು. ಬಹಿಷ್ಕಾರವನ್ನು ಬೆಂಬಲಿಸಿದ ಸವರ್ಣಿಯ ಮನಸ್ಸುಗಳಿಗೆ ಇದೊಂದು ಸಣ್ಣ ಘಟನೆ ಅಷ್ಟೇ. ಆ ಬಾಲಕನ ಕುಟುಂಬಸ್ಥರು ಹಾಗೂ ಮಾಧ್ಯಮಗಳು ಸೇರಿ ಘಟನೆಯನ್ನು ದೊಡ್ಡದು ಮಾಡಿದ್ದಾರೆ ಎಂಬಂತೆ ಕೆಲವರು ಮಾತನಾಡುವುದನ್ನು ಕಂಡರೆ, ಊರಿನ ಈ ಜಡ ಮನಸ್ಸುಗಳಿಗೆ ಸಾಮರಸ್ಯದ ಅರಿವಿನ ಚಿಕಿತ್ಸೆಯ ಅವಶ್ಯಕತೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.
ಈ ಘಟನೆ ಕೇವಲ ಯಾವುದೋ ಒಂದು ಊರಿನ ಘಟನೆ ಎಂದು ಸುಮ್ಮನಿರಬಹುದೇ ? ಖಂಡಿತವಾಗಿಯೂ ಇಲ್ಲ. ಯಾಕೆಂದರೆ ಈ ಘಟನೆ ಬಾಲಕನ ಕುಟುಂಬದ ಸದಸ್ಯರು ತೋರಿದ ಧೈರ್ಯದ ಕಾರಣದಿಂದ ಹೊರಜಗತ್ತಿಗೆ ತಿಳಿಯುವಂತಾಯಿತು. ಆದರೆ ಮಾಧ್ಯಮಗಳ ಕಣ್ಣಿಗೇ ಬೀಳದ, ಊರ ಗಡಿಯಿಂದಾಚೆ ಒಂದು ಸಣ್ಣ ಸುದ್ದಿಯೂ ಹೋರ ಹೋಗದಂತೆ ತಡೆಯಬಲ್ಲಷ್ಟು ಬಲಿಷ್ಠವಾಗಿರುವ ಜಾತಿ ಪ್ರಬಲರ ಭಯದಿಂದ ಮುಚ್ಚಿ ಹೋಗಿರುವ ಘಟನೆಗಳು ಇನ್ನೆಷ್ಟೋ? ಯಥಾಪ್ರಕಾರ ಇಂತಹ ಘಟನೆಗಳು ವರದಿಯಾದಾಗ ಒಮ್ಮೆ ಜಿಲ್ಲಾಡಳಿತವು, ಕೆಲವು ರಾಜಕಾರಣಿಗಳು ನಾಮಕಾವಸ್ಥೆ ಶಾಂತಿ ಸಭೆಗಳನ್ನು ನಡೆಸಿ, ಎಚ್ಚರಿಕೆಯನ್ನು ನೀಡಿ ಹೋದರೆ ಮತ್ತೆಂದೂ ಆ ಕಡೆಗೆ ತಿರುಗಿಯೂ ನೋಡುವುದಿಲ್ಲ.ಹೀಗಾಗಿ ಕೆಲವು ದಿನಗಳ ನಂತರ ಘಟನೆ ಜನರ ನೆನಪಿನಿಂದ ಮರೆಯಾಗುತ್ತದೆ. ಅಸ್ಪೃಶ್ಯತೆ, ಬಹಿಷ್ಕಾರ, ದಂಡ ಹಾಕುವುದೂ ಸೇರಿದಂತೆ ಸಂವಿಧಾನ ವಿರೋಧಿ ನಡವಳಿಕೆಗಳು ಮುಂದುವರಿಯುತ್ತದೆ. ಕೆಲವೆಡೆ ಸಾಮಾಜಿಕ ಸಂಘಟನೆಗಳು , ಧಾರ್ಮಿಕ ಮುಖಂಡರು ಮುಂದೆ ನಿಂತು ಊರ ಜನರ ಮನ ಒಲಿಸಿ ಇಂತಹ ಕಾಲಬಾಹಿರ ಪದ್ಧತಿಗಳ ಕುರಿತು ಜಾಗೃತಿ ಮೂಡಿಸಿ ಊರೆಲ್ಲಾ ಜತೆಗೂಡಿ ಬಾಳುವಂತೆ ಮಾಡಿದ ಉದಾಹರಣೆಗಳೂ ಇದೆ. ಆದರೆ ಹುಟ್ಟಿದ ಜಾತಿಯನ್ನು ಆಧಾರವಾಗಿಟ್ಟುಕೊಂಡು ದಲಿತ ಸಮುದಾಯದ ಜನರಿಗೆ ನಿರಾಕರಿಸಿದ ದೇಗುಲ ಪ್ರವೇಶ, ಊರ ಬಾವಿಯ ನೀರಿನ ಬಳಕೆ, ಸಾರ್ವಜನಿಕ ಸ್ಮಶಾನದ ಬಳಕೆಯ ಹಕ್ಕಿನ ಆಗ್ರಹಗಳನ್ನು ಇನ್ನೆಷ್ಟು ಕಾಲ ಮಾಡಿಕೊಂಡು, ಬೇಡಿಕೊಂಡು ಬರಬೇಕು? ಈ ಪ್ರಶ್ನೆಯನ್ನಿಂದು ಪ್ರಾಮಾಣಿಕವಾಗಿ ನಮಗೆ ನಾವೇ ಕೇಳಿಕೊಳ್ಳಬೇಕು. ಹಾಗಾದರೆ ಶತಮಾನಗಳ ಹಿಂದೆಯೇ ಬ್ರಹ್ಮಶ್ರೀ ನಾರಾಯಣಗುರುಗಳು ದೇವಾಲಯದ ಪ್ರವೇಶ ಸಿಗದೇ ಹೋದಾಗ ಪರ್ಯಾಯವಾಗಿ ತಾವೇ ದೇವಾಲಯಗಳ ಸ್ಥಾಪನೆಮಾಡುವ ಚಳುವಳಿಗೆ ನಾಂದಿ ಹಾಡಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಕಾಳಾರಾಮ್ ದೇವಾಲಯದ ಪ್ರವೇಶಕ್ಕಾಗಿ ಮತ್ತು ಚೌದಾಲಾ ಕೆರೆಯ ನೀರಿನ ಸ್ಪರ್ಶಕ್ಕಾಗಿ ನಡೆಸಿದ ಚಳವಳಿಗಳು ಈ ಸಮಾಜದ ಅಂತಃಕರಣವನ್ನು ಇನ್ನೂ ತಟ್ಟಿಲ್ಲವೇ? ಧರ್ಮದ ಹೆಸರಿನ ಈ ಆಚರಣೆಯನ್ನು ಒಪ್ಪಿಕೊಂಡ ಈ ಹೃದಯಗಳು ಪರಿವರ್ತನೆಗೆ ತೆರೆದುಕೊಳ್ಳಲಾರದಷ್ಟು ಕಲ್ಲಾಗಿವೆಯೇಕೆ? ಶೋಷಣೆಗೆ ಒಳಗಾಗುತ್ತಾ ಬಂದ ಜನಗಳು ಇನ್ನೆಷ್ಟು ಕಾಲ ಈ ಅವಮಾನಗಳನ್ನು ಸಹಿಸಿಕೊಳ್ಳಬೇಕು? ಇನ್ನೆಷ್ಟು ಕಾಲ ನೋವು ನುಂಗಿಕೊಂಡು ಬದುಕಬೇಕು? ದಲಿತರ ಆತ್ಮಗೌರವ, ಸ್ವಾಭಿಮಾನದ ಬದುಕು ಸವರ್ಣಿಯರು ನೀಡುವ ಭಿಕ್ಷೆಯಲ್ಲ, ಅದು ಹಕ್ಕು. ಅಸ್ಪೃಶ್ಯತೆಯ ಆಚರಣೆಗೆ ಮೇಲ್ಜಾತಿಗಳ ಹೃದಯದ ಕೊಳೆಯೇ ಕಾರಣ ಹೊರತು ದಲಿತರ ದೇಹವಲ್ಲ. ಜಾತ್ಯಾಂದರ ಶ್ರೇಷ್ಠತೆಯ ವ್ಯಸನ ಕಳೆಯದೆ ಇದಕ್ಕೆ ಪರಿಹಾರವಿಲ್ಲ. ಎಲ್ಲವೂ ಚೆನ್ನಾಗಿದೆ, ಸರಿಯಾಗಿದೆ ಎಂಬ ಬೂಟಾಟಿಕೆ ಕೊನೆಗೊಂಡು ಸಮಾಜದ ಈ ವಾಸ್ತವವನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆಯ ಜತೆಗೆ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.
ಊರಿನಿಂದ ಬಹಿಷ್ಕಾರ ಹಾಕುವ, ದೇಗುಲ ಪ್ರವೇಶ ನಿರಾಕರಿಸುವ, ಸಹ ಪಂಕ್ತಿಯ ಬೋಜನವನ್ನು ನಿರಾಕರಿಸುವ ಜಾತಿ ಆಧಾರಿತ ತಾರತಮ್ಯದ ಘಟನೆಗಳು ಕೊನೆಯಾಗುವುದು ಯಾವಾಗ? ಸ್ವಾತಂತ್ರ್ಯದ ಅಮೃತಮಹೋತ್ಸವವನ್ನೂ ಆಚರಿಸಿ ಮುಗಿಸಿಸಿದೆವು. ಸಂವಿಧಾನವನ್ನು ಸ್ವೀಕರಿಸಿ, ಅಸ್ಪೃಶ್ಯತೆಯನು ಕಾನೂನು ಪ್ರಕಾರ ಅಪರಾಧವೆಂದು ಘೋಷಿಸಿ ಏಳು ದಶಕಗಳೇ ಕಳೆಯಿತು. ಹೀಗಿದ್ದರೂ ನಮ್ಮ ಜನರೇಕೆ ಹೀಗಿದ್ದಾರೆ? ಇನ್ನೂ ಕೂಡ ಇಂತಹ ಮೌಢ್ಯಕ್ಕೇಕೆ ಧರ್ಮದ ಮುಖವಾಡವನ್ನು ತೊಡಿಸುತ್ತಿದ್ದಾರೆ? ಹಾಗಾದರೆ ಧರ್ಮ ಎಂದರೆ ತಾರತಮ್ಯವೇ ? ನಮ್ಮ ದೇವರು ಅಸ್ಪೃಶ್ಯರ ಸ್ಪರ್ಶ ಮಾತ್ರದಿಂದ ಮೈಲಿಗೆಯಾಗುವಷ್ಟು ದುರ್ಬಲರೇ? ನಾವೇಕೆ ಧರ್ಮವನ್ನು, ದೇವರನ್ನು ಇಷ್ಟೊಂದು ಕುಬ್ಜಗೊಳಿಸುತ್ತಿದ್ದೇವೆ? ನಮ್ಮ ನಡವಳಿಕೆ ನಮ್ಮ ಧರ್ಮಕ್ಕೆ ಅವಮಾನವೆಂದೇಕೆ ನಮಗನ್ನಿಸುತ್ತಿಲ್ಲ? ಈ ಅರಿವನ್ನು ಮೂಡಿಸಬೇಕಾದವರು ಯಾರು? ಹೇಗೆ? ಈ ಎಲ್ಲಾ ವಿಷಯಗಳನ್ನು ಮತ್ತೆ ಮತ್ತೆ ಚಿಂತನೆ ಮಾಡಬೇಕಾಗಿದೆ. ಪರಿಷ್ಕರಣವಾದಿ ಧಾರ್ಮಿಕ ಪರಂಪರೆಯಾಗಿರುವ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆಯ ವಿಷಯಕ್ಕೆ ಬಂದಾಗ ಶತಮಾನಗಳ ಕಾಲದ ಪ್ರಯತ್ನಕ್ಕೇಕೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಫಲಸಿಗುತ್ತಿಲ್ಲ? ಈ ಕುರಿತು ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಾಗಿದೆ.
ಸಾಮಾನ್ಯವಾಗಿ ಅಸ್ಪೃಶ್ಯತೆಯ ಆಚರಣೆಯ ಪ್ರಕರಣಗಳು ದಾಖಲಾದಾಗ, ಮಾಧ್ಯಮಗಳಲ್ಲಿ ಪ್ರಕಟವಾದಾಗ ನಮ್ಮ ಜನರು ಇನ್ನೂ ಮನುವಾದ ಆಚರಣೆಯಲ್ಲಿದೆ ಎಂದೋ, ಇಲ್ಲವೇ ಬ್ರಾಹ್ಮಣರಿಂದಾಗಿ ಅಸ್ಪೃಶ್ಯತೆ ಇದೆ, ಇದು ಬ್ರಾಹ್ಮಣ್ಯ ಎಂದೋ ಪ್ರತಿಕ್ರಿಯಿಸುತ್ತಾರೆ. ಆದರೆ ಇಲ್ಲಿನ ಚರ್ಚೆ ಪೂರ್ಣ ಪ್ರಾಮಾಣಿಕ ಕಾಳಜಿಯದ್ದಾಗಿಲ್ಲ. ಉದಾಹರಣೆಗೆ ಸವರ್ಣಿಯರಿಂದ ಬಹಿಷ್ಕಾರ ಎಂದ ಕೂಡಲೇ ಆ ನಿರ್ದಿಷ್ಟ ಊರಿನಲ್ಲಿ ಯಾರು ಸವರ್ಣಿಯರು? ಎನ್ನುವುದನ್ನೂ ಯೋಚಿಸದೆ ಸಾಮಾನ್ಯವಾಗಿ ಬ್ರಾಹ್ಮಣರನ್ನು ದೂಷಿಸಲಾಗುತ್ತದೆ. ಆದರೆ ಮಾಲೂರಿನ ಘಟನೆಯೂ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ವರದಿಯಾಗುತ್ತಿರುವ ಇಂತಹ ಘಟನೆಗಳಲ್ಲಿ ಸ್ಥಳೀಯ ಪ್ರಬಲ ಜಾತಿಗಳಾದ ಒಕ್ಕಲಿಗರು, ಲಿಂಗಾಯತರೂ ಸೇರಿದಂತೆ ಬೇರೆ ಬೇರೆ ಜಾತಿಗಳ ಜನರು ಭಾಗಿಗಳಗಿರುವುದನ್ನು ಗಮನಿಸಬಹುದು. ಬ್ರಾಹ್ಮಣರು ಪುರೋಹಿತರೇ ಅಲ್ಲದ ದೇವಾಲಯಗಳಲ್ಲಿ, ಬ್ರಾಹ್ಮಣ ಕುಟುಂಬಗಳೇ ವಾಸವಿಲ್ಲದ ಊರುಗಳಲ್ಲಿಯೂ ಅಸೃಶ್ಯತೆಯನ್ನು ಆಚರಿಸಲಾಗುತ್ತದೆಯಲ್ಲಾ? ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಯನ್ನು ನಾವಿಂದು ಕೇಳಿಕೊಳ್ಳಬೇಕಾಗಿದೆ. ಅಂದರೆ ಈ ಜಾತಿ ಶ್ರೆಷ್ಟತೆಯ ವ್ಯಸನ ಕೇವಲ ಒಂದು ಜಾತಿಯಲ್ಲಿಲ್ಲ. ಪ್ರತಿಯೊಂದು ಜಾತಿಯೂ ತನ್ನದೇ ಆದ ಶ್ರೇಣೀಕರಣವನ್ನು ಹೊಂದಿದ್ದು ಅವರೊಳಗೆ ಕೆಲವರು ಮೇಲು, ಕೆಲವರು ಕೀಳು ಎನ್ನುವ ಮನಸ್ಥಿತಿ ಇರುವುದನ್ನು ಮರೆಯಬಾರದು. ನಾವು ಎಲ್ಲಿಯವರೆಗೆ ಈ ಚರ್ಚೆಯನ್ನು ಮಾಡುವುದಿಲ್ಲವೋ, ಇಂತಹ ಘಟನೆಗಳಾದಾಗ ನಿರ್ದಿಷ್ಟ ಸವರ್ಣಿಯ ಜಾತಿಯನ್ನು ಗುರುತಿಸುವುದಿಲ್ಲವೋ ಅಲ್ಲಿಯವರೆಗೆ ಅಸ್ಪೃಶ್ಯತೆ ನಿವಾರಣೆಯ ಚರ್ಚೆಗಳು ಗಾಳಿಯಲ್ಲಿ ಗುದ್ದಾಡುವ ಕ್ರಿಯೆಯಷ್ಟೇ. ಸಮಸ್ಯೆಯ ನಿವಾರಣೆಯ ತಾತ್ವಿಕ ಚರ್ಚೆಯನ್ನು ನಿರ್ಧಿಷ್ಟಗೊಳಿಸಬೇಕು.
ಅಸ್ಪೃಶ್ಯತೆ ಒಂದು ಕಳಂಕ ಎನ್ನುವುದನ್ನು ಅನೇಕ ಧರ್ಮಾಚಾರ್ಯರು ಘೋಷಿಸಿದ ಬಳಿಕವೂ, ಕಾನೂನಿಗೆ ವಿರುದ್ಧ ಆಚರಣೆ ಎಂದು ಗುರುತಿಸಿದರೂ ಯಾಕೆ ನಿವಾರಣೆ ಮಾಡಲಾಗುತ್ತಿಲ್ಲ ಎಂದರೆ ಒಂದು ಮುಖ್ಯ ಕಾರಣ ದಂಡನೆಯ ಭಯವಿಲ್ಲದಿರುವುದೇ ಆಗಿದೆ. ಯಾರಾದರೂ ಜಾತಿ ತಾರತಮ್ಯ, ಅಸ್ಪೃಶ್ಯತೆಯನ್ನು ಆಚರಿಸಿದಾಗ ಧಾರ್ಮಿಕ ನೆಲೆಯಲ್ಲಿ ಶಿಕ್ಷೆ ಇದೆಯೇ? ಖಂಡಿತಾ ಇಲ್ಲ. ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆಯೇ? ಅದೂ ಇಲ್ಲ. ಬಹುತೇಕ ಪ್ರಕರಣಗಳು ಪೋಲಿಸ್ ಠಾಣೆಯಲ್ಲಿ ದಾಖಲಾಗುವುದೇ ಇಲ್ಲ. ಇನ್ನಷ್ಟು ಪ್ರಕರಣಗಳು ರಾಜಿ ಸಂಧಾನದಲ್ಲಿ ಮುಕ್ತಾಯವಾಗುತ್ತದೆ. ಊರಿನ ವಾತಾವರಣ ಹದಗೆಡುವುದು ಬೇಡ ಎಂಬ ಭಾವನಾತ್ಮಕ ಕಾರಣಕೊಟ್ಟು ನೊಂದವರನ್ನು ಕಾನೂನು ಪ್ರಕಾರ ನ್ಯಾಯಾಲಯದ ಮೆಟ್ಟಿಲು ಹತ್ತದಂತೆ ತಡೆಯಲಾಗುತ್ತದೆ. ಈ ಮೂಲಕ ಊರ ಹಿತದ ಹೊರೆಯನ್ನೂ ನೊಂದ ದಲಿತರ ಹೆಗಲ ಮೇಲೆ ಹೊರಿಸಿಬಿಡುತ್ತೇವೆ. ದೇವರ ಸ್ಪರ್ಶ, ದೇವಾಲಯದ ಪ್ರವೇಶಗಳನ್ನು ಕೇಳುವವರನ್ನು ದೇವರು – ಧರ್ಮದ ಹೆಸರಿನಲ್ಲೇ ಭಯಹುಟ್ಟಿಸಿ ಮೌನಗೊಳಿಸಲಾಗುತ್ತದೆ. 21ನೇ ಶತಮಾನದಲ್ಲಿ ಬದುಕುತ್ತಿರುವ ನಮಗೆ ದೇಗುಲದ ಪ್ರವೇಶ ಕೇಳುವುದಕ್ಕಿಂತಲೂ ಮಹತ್ವದ ಕೆಲಸಗಳಿವೆ. ಆದರೆ ಮನುಷ್ಯನೆಂಬ ತನ್ನ ಅಸ್ತಿತ್ವವನ್ನೂ ಒಪ್ಪದ ಮೂಢ ಮನಸ್ಸುಗಳಿಗೆ, ನಾವೂ ನಿಮ್ಮ ಜತೆಗೆ ಬದುಕುವ ಸಹಮಾನವನೆಂಬ ಅರಿವನ್ನು ಎಚ್ಚರಗೊಳಿಸಲು ಈ ಒತ್ತಾಯ ಮಾಡಬೇಕಿದೆ. ದೇಗುಲಗಳು ಊರಿನ ಎಲ್ಲಾ ಜಾತಿ ಸಮುದಾಯಗಳನ್ನು ಬೆಸೆಯುವ ಕೇಂದ್ರಗಳಾಗಬೇಕೆ ಹೊರತು ಸಮುದಾಯಗಳ ನಡುವೆ ಒಡಕುಂಟುಮಾಡುವ ಕೇಂದ್ರಗಳಾಗಬಾರದು. ಆದರೆ ಬಹುತೇಕ ಅಸ್ಪೃತೆಯ ಆಚರಣೆಯ ಪ್ರಕರಣಗಳಿಗೆ ಊರ ದೇವಾಲಯಗಳೇ ಕೇಂದ್ರಗಳಾಗುತ್ತಿದೆ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ. ಊರ ಜನರೇ ದೇಗುಲದ ಬಾಗಿಲು ತೆರದು ದೇವರ ದರ್ಶನಕ್ಕೆ ಅವಕಾಶ ನೀಡುತ್ತಾರೋ ಅಥವಾ ಪೋಲಿಸ್ ಕಾವಲಿನೊಂದಿಗೆ ದೇಗುಲದ ಬೀಗ ಮುರಿದು ದರ್ಶನವನ್ನು ಪಡೆದುಕೊಳ್ಳಬೇಕೇ ಎನ್ನುವುದನ್ನು ಸವರ್ಣಿಯರೇ ತೀರ್ಮಾನಿಸಲಿ. ಸವರ್ಣಿಯ ಮನಸ್ಸುಗಳು ಇಷ್ಟು ಕಾಲದ ತಮ್ಮ ನಡವಳಿಕೆಗಾಗಿ ಇನ್ನಾದರೂ ಪಶ್ಚಾತಾಪ ಪಡುವರೇ? ಎಲ್ಲರೂ ತೆರೆದ ಮನಸ್ಸಿನಿಂದ ಪರಸ್ಪರರನ್ನು ಸ್ವೀಕರಿಸಿ ಜತೆಗೂಡಿ ಬದುಕುವ ಹಾಗಾಗಲಿ. ಬಹಿಷ್ಕರಿಸುವ ಜಡ ಮನಸ್ಸುಗಳ ಶುದ್ಧೀಕರಣವನ್ನು ಎಲ್ಲರೂ ಸೇರಿ ಮಾಡೋಣ. ಮಾನವೀಯತೆ ಮೀರಿ ನಡೆಯುವ ಕ್ಷುದ್ರ ಮನಸ್ಸುಗಳಿಗೆ ಕಾನೂನು ಪ್ರಕಾರ ಕಠಿಣ ದಂಡನೆಯೂ ಆಗಲಿ.
ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.