ಸೆಪ್ಟೆಂಬರ್ 14 ಇಂದಿನ ದಿನ ದೇಶದ ಉಳಿದೆಲ್ಲಾ ಭಾಗದ ಜನರಿಗೆ ಹತ್ತರೊಂದಿಗೆ ಹನ್ನೊಂದರಂತೆ ಮಾಮೂಲಿನ ದಿನ. ಆದರೆ ತಮ್ಮದೇ ದೇಶದಲ್ಲಿ ನಿರಾಶ್ರಿತರಂತೆ ಜೀವನವನ್ನು ಸವೆಸುತ್ತಿರುವ ಕಾಶ್ಮೀರಿ ಪಂಡಿತರಿಗೆ ಮಾತ್ರ ಇಂದು ಬಲಿದಾನ ದಿನ. 1989 ರಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರದ ಕಣಿವೆಯಲ್ಲಿ ಇಸ್ಲಾಮೀ ಮೂಲಭೂತವಾದಿಗಳು ಮೂಲಭೂತವಾದವನ್ನು ಬಿತ್ತಲು ಪ್ರಬಲ ಒತ್ತಾಸೆಯಾದ ದಿನ. ಕಾಶ್ಮೀರಿ ಪಂಡಿತರು ಸಹನೆ ತಾಳ್ಮೆ, ವಿವೇಕ ಮತ್ತು ಸಹಬಾಳ್ವೆಯಲ್ಲಿ ನಂಬಿಕೆಯನ್ನು ಹೊಂದಿದ್ದು ಕಾಶ್ಮೀರದ ಮುಸಲ್ಮಾನರೊಂದಿಗೆ ಹೊಂದಿಕೊಂಡು ಜೀವನವನ್ನು ನಡೆಸುತ್ತಿದ್ದರು. ಪಾಕಿಸ್ತಾನಕ್ಕೆ ಕಾಶ್ಮೀರವನ್ನು ತನ್ನ ತೆಕ್ಕೆಯಲ್ಲಿ ಹಾಕಿಕೊಳ್ಳುವ ಹಳೆಯ ಕನಸಿಗಾಗಿ ಹಿಂದೂಗಳಲ್ಲಿ ಭಯವನ್ನು ಮೂಡಿಸುವ ಮೂಲಕ ಕನಸನ್ನು ನನಸಾಗಿಸುವ ತವಕ. ಹೀಗೆ ಪಾಕಿಸ್ತಾನ ಪ್ರೇರಿತ ಜಮ್ಮು ಕಾಶ್ಮೀರ ಲಿಬರಲ್ ಫ್ರಾಂಟ್ ಎನ್ನುವ ಭಯೋತ್ಪಾದಕ ಸಂಘಟನೆಯೊಂದು ಒಂದು ದಿನ ಇದಕ್ಕೆ ತಕ್ಕ ಅವಕಾಶವನ್ನು ಪಡೆದುಕೊಂಡಿತು.
ಕಣಿವೆ ರಾಜ್ಯವಾದ ಕಾಶ್ಮೀರದಲ್ಲಿ, ಕಾಶ್ಮೀರಿ ಹಿಂದೂಗಳ ನಾಯಕರಾದ ಟೀಕಾಲಾಲ್ ಟಾಪ್ಲೂ ಅವರನ್ನು ನೂರಾರು ಜನರ ಸಮ್ಮುಖದಲ್ಲೆಯೇ ಭೀಕರವಾಗಿ ಹತ್ಯೆಗಯ್ಯಲಾಯಿತು. ಕಾಶ್ಮೀರದ ಹಿಂದೂಗಳಿಂದ ಪ್ರೀತಿಯಿಂದ ‘ ಲಾಲಾ’ ಎಂದು ಕರೆಸಿಕೊಳ್ಳುತ್ತಿದ್ದ ನಿರ್ಭೀತ ನಾಯಕ ಮತ್ತು ವಕೀಲರಾಗಿದ್ದ ಟಿಪ್ಲೂ ಅವರನ್ನು ಹಾಡುಹಗಳಲ್ಲೇ ಹತ್ಯೆಗಯ್ಯಲಾಗಿತ್ತು. ಪರಿಣಾಮವಾಗಿ ಪಾಕಿಸ್ತಾನದಿಂದ ಪ್ರೇರೇಪಿತರಾದ ಭಯೋತ್ಪಾದಕರು ತಮ್ಮನ್ನು ಉಳಿಸುವುದಿಲ್ಲ ಎಂದು ಕಾಶ್ಮೀರಿ ಪಂಡಿತರು ಭಯಭೀತರಾದರು. ಅಲ್ಲೆಲ್ಲೋ ಪಾಕಿಸ್ತಾನದಲ್ಲಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ ಎಂದು ನಾವು ಭಾವಿಸುತ್ತಿದ್ದ ಭಯೋತ್ಪಾದನೆ ನಮ್ಮ ಮನೆಯ ಬಾಗಿಲಿಗೆ ಬಂದಿದೆ ಎಂದು ನಿಜವಾದ ಪಂಡಿತರಿಗೆ ಅರಿವಾದದ್ದು ಸೆಪ್ಟೆಂಬರ್ 14 ರಂದು ಟಿಪ್ಲು ಹತ್ಯೆಯಾದ ದಿನ ಎಬುದಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ಕಾಶ್ಮೀರಿ ಪಂಡಿತ ಸಮುದಾಯದ ದಿಲೀಪ್ ಕಾಚರೂ ದುಃಖದಿಂದ ಹೇಳುತ್ತಾರೆ.
ಅಲ್ಲಿಂದ ನಂತರ ನಡೆದದ್ದು ಇತಿಹಾಸದಲ್ಲಿ ರಕ್ತದಿಂದ ದಾಖಲಿಸಬೇಕಾದ ರಕ್ತಸಿಕ್ತ ನರಮೇಧ. 1990 ರ ಜನವರಿ 19 ರಂದು, ಟಿಪ್ಲೂ ಹತ್ಯೆಯಿಂದ ಜನರಲ್ಲಿ ಆವರಿಸಿರುವ ಭಯವನ್ನು ಅರಿತಿದ್ದ ಭಯೋತ್ಪಾದಕ ಸಂಘಟನೆಗಳು ವ್ಯವಸ್ಥಿತ ಯೋಜನೆಯೊಂದಿಗೆ ಕಣಿವೆಯಿಂದ ಪಂಡಿತರನ್ನು ಹೊರದಬ್ಬಲು ಮುಂದಾದವು. ಜನವರಿ 4 ರಂದು ಮುಜಾಹಿದ್ದೀನ್ ಸಂಘಟನೆಯು ಜಾಹೀರಾತು ನೀಡಿ ಕಣಿವೆಯಲ್ಲಿ ಇರುವವರೆಲ್ಲರೂ ಇಸ್ಲಾಂ ಪಾಲಿಸಬೇಕು, ಇಸ್ಲಾಂ ದಿರಿಸು ತೊಡಬೇಕು ಎಂಬುದಾಗಿ ತಾಕೀತು ಮಾಡಲಾಗಿತ್ತು. ಜನವರಿ 19ರಂದು ಮಸೀದಿಯೊಂದರಿಂದ ಕಾಫಿರರನ್ನು ಹೊರಗಟ್ಟಿ, ಇಸ್ಲಾಂ ರಾಜ್ಯ ಸ್ಥಾಪನೆ ಮಾಡೋಣ ಎಂಬ ಘೋಷಣೆಯೊಂದು ಹೊರಬಿತ್ತು. ಅಂದಿನಿಂದ ಆರಂಭವಾದ ಹಿಂದೂಗಳ ಹತ್ಯೆ ಸರಣಿಯಲ್ಲಿ ಕಾಶ್ಮೀರಿ ಕವಿ ಸರ್ವಾನಂದ ಕೌಲ್ ಪ್ರೇಮಿ, ಯುವ ಸಾಮಾಜಿಕ ಕಾರ್ಯಕರ್ತ ಸತೀಶ್ ತಿಕೂ, ಶ್ರೀನಗರ ದೂರದರ್ಶನದ ಸ್ಟೇಷನ್ ಡೈರೆಕ್ಟರ್ ಲಾಸ ಕೌಲ್, ಕಾರ್ಮಿಕ ನಾಯಕ ಹೃದಯನಾಥ ವಾಂಛೂ ಸೇರಿ ಹಲವರನ್ನು ನಿರ್ದಯವಾಗಿ ಹತ್ಯೆ ಮಾಡಲಾಯಿತು.
1930 ರಲ್ಲಿ ಜನಿಸಿದ್ದ ಟೀಕಾ ಲಾಲ್ ಟಾಪ್ಲೂ 1945 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಮೆಟ್ರಿಕುಲೇಷನ್ ತೇರ್ಗಡೆಯಾದರು. 1958 ರಲ್ಲಿ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಿಂದ ಎಂಎ, ಎಲ್ಎಲ್ಬಿ ಪಡೆದರು. ಇತರ ಕಾಶ್ಮೀರಿ ವಿದ್ಯಾರ್ಥಿಗಳ ಜೊತೆಗೆ ಪ್ರವೇಶಾತಿ ನಿರಾಕರಿಸಲ್ಪಟ್ಟ ಲಾಲ್, ಅಲಿಘಡ ವಿಶ್ವವಿದ್ಯಾನಿಲಯದ ಪ್ರವೇಶದ್ವಾರದಲ್ಲೇ ಪ್ರತಿಭಟನೆ ನಡೆಸಿ ದಾಖಲಾತಿಯನ್ನು ಪಡೆದಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ಟಾಪ್ಲೂ ಅವರು ಕಾಶ್ಮೀರದ ವಕೀಲರ ಹಾಗೂ ಸಾಮಾಜಿಕ ವಲಯದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದರು. ಅಂತಃಕರಣ ಹಾಗೂ ಉದಾರ ವ್ಯಕ್ತಿತ್ವ ಹೊಂದಿದ್ದ ಲಾಲಾ ಬಡವರ ಪ್ರಕರಣವನ್ನು ಉಚಿತವಾಗಿ ನಡೆಸಿಕೊಟ್ಟು ಮುಸ್ಲಿಂ ಸಮುದಾಯದವರ ಗೌರವವನ್ನೂ ಪಡೆದಿದ್ದರು. 1984 ರಲ್ಲಿ ಭಯೋತ್ಪಾದಕ ಮಕ್ಬೂಲ್ ಭಟ್ಗೆ ಮರಣದಂಡನೆ ವಿಧಿಸಿದ ಬಳಿಕ ಹಿಂದೂಗಳ ಜೊತೆಗೆ ಸಂಘರ್ಷ ಏರ್ಪಡಿಸುವ ಹುನ್ನಾರ ನಡೆಯುತ್ತಿತ್ತು. 1989 ರ ಜನವರಿಯ ಮೊದಲವಾರದಲ್ಲೇ ಒಮ್ಮೆ ಲಾಲಾರ ಮೇಲೆ ಹತ್ಯೆಯ ಪ್ರಯತ್ನ ನಡೆದಿತ್ತು. ಅಪಾಯದ ಅರಿವಿದ್ದ ಲಾಲಾ ತನ್ನ ಕುಟುಂಬವನ್ನು ದೆಹಲಿಯಲ್ಲಿ ಬಿಟ್ಟು ತಾವು ಮಾತ್ರ ಕಣಿವೆಗೆ ಹಿಂತಿರುಗಿದ್ದರು. ಧೈರ್ಯವಿದ್ದರೆ ಸಿಂಹದ ಗುಹೆಗೆ ಬನ್ನಿ ಎಂದು ಸವಾಲೊಡ್ಡಿದ್ದ ಲಾಲಾ ಅವರನ್ನು ಸೆಪ್ಟೆಂಬರ್ 14 ರಂದು ಅವರ ಮನೆಯೆದುರೇ ಬರ್ಬರ ಹತ್ಯೆ ನಡೆಸಿದಾಗ ಇಡೀ ಕಾಶ್ಮೀರವೇ ಕಂಪಿಸಿತ್ತು.
ಅವರ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಹಿರಿಯ ನಾಯಕರಾದ ಕೇದಾರನಾಥ ಸಾಹ್ನಿ, ಲಾಲಕೃಷ್ಣ ಅಡ್ವಾಣಿ ಅವರೂ ಭಾಗವಹಿಸಿದ್ದರು. ಅಂತಿಮ ಸಂಸ್ಕಾರದ ಯಾತ್ರೆಯ ಮೇಲೂ ಕಲ್ಲು ತೂರಿ ಭಯಹುಟ್ಟಿಸುವ ಪ್ರಯತ್ನ ನಡೆದರೂ ಭದ್ರತೆಯ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಅವರ ಮೇಲೆ ಗೌರವ ಹೊಂದಿದ್ದ ಹಲವು ಮುಸಲ್ಮಾನರು ಇದರಿಂದ ಬೇಸರಗೊಂಡಿದ್ದರೂ, ಇದನ್ನು ಬಹಿರಂಗವಾಗಿ ವ್ಯಕ್ತಪಡಿಸಿದರೆ ತಾವೂ ದಾಳಿಗೊಳಗಾಗುವ ಭಯದಿಂದ ಸುಮ್ಮನಾಗಿದ್ದರು. 1990 ರಿಂದ ಪ್ರತಿ ವರ್ಷ ಸೆಪ್ಟೆಂಬರ್ 14 ಅನ್ನು ಕಾಶ್ಮೀರಿ ಪಂಡಿತರು ಬಲಿದಾನ ದಿನವನ್ನಾಗಿ ಆಚರಿಸುತ್ತಾರೆ. ಕುಟುಂಬದೊಂದಿಗೆ ತಾವೂ ದೆಹಲಿಯಲ್ಲಿ ಸುಖವಾಗಿರುವ ಅವಕಾಶವಿದ್ದರೂ, ಅದನ್ನು ನಿರಾಕರಿಸಿ ತಮ್ಮವರಿಗೋಸ್ಕರ ಲಾಲಾ ಅವರು ಪ್ರಾಣಾರ್ಪಣೆಗೈದರು. ಸಂವಿಧಾನದ 370 ಹಾಗು 35ಎ ವಿಧಿಯಿಂದಾಗಿ ವಾಪಸ್ ಹೋಗಲು ತೊಂದರೆಯನ್ನು ಅನುಭವಿಸುತ್ತಿದ್ದ ಪಂಡಿತರು ಆ ವಿಧಿಯನ್ನು ರದ್ದುಗೊಳಿಸುವಂತೆ ಕಳೆದ 29 ವರ್ಷಗಳಿಂದ ಬೇಡುತ್ತಿದ್ದರು. ಕೊನೆಗೂ ಆ ವಿಧಿ ರದ್ದಾಗಿದೆ ಇದರಿಂದ ಲಾಲಾರ ಆತ್ಮಕ್ಕೆ ಶಾಂತಿ ಲಭಿಸಿರಬಹುದು ಎಂದು ಪಂಡಿತರು ಭಾವಿಸುತ್ತಿದ್ದಾರೆ. ತಮ್ಮದೇ ದೇಶದಲ್ಲಿ ಅನಾಥರಾಗಿ ನಿರಾಶ್ರಿತ ಶಿಬಿರದಲ್ಲಿ, ತಮ್ಮ ಭೂಮಿಗೆ ವಾಪಾಸ್ ಹೋಗಬಹುದೆಂಬ ನಿರೀಕ್ಷೆಯೊಂದಿಗೆ ದಿನಕಳೆಯುತ್ತಿರುವ ಸಾವಿರಾರು ಪಂಡಿತರಿಗೆ ಕಾಶ್ಮೀರದಲ್ಲಿ ಪುನರ್ವಸತಿಯನ್ನು ಕಲ್ಪಿಸುವುದರ ಮೂಲಕ ಸರ್ಕಾರವು ಲಾಲಾರ ಬಲಿದಾನವನ್ನು ಸಾರ್ಥಕಪಡಿಸಬಹುದಾಗಿದೆ.
ಇಂದು ಕಾಶ್ಮೀರದಲ್ಲಿ ಕರ್ಫ್ಯೂ ವಿಧಿಸಿರುವುದರಿಂದ ಅವರಿಗೆ ದುಡಿಯಲು ಸಾಧ್ಯವಾಗುತ್ತಿಲ್ಲ, ತಿನ್ನಲು ಹಣವಿಲ್ಲ, ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಎದೆ ಬಡಿದುಕೊಂಡು ಅಳುತ್ತಿರುವವರಿಗೆ ಲಾಲಾರ ಕ್ರೂರ ಹತ್ಯೆಯ ಬಗ್ಗೆ ಒಂದು ಮಾತನ್ನಾಡಲೂ ಧೈರ್ಯವಿಲ್ಲ. ಕಾಶ್ಮೀರಿ ಪಂಡಿತರ ಬಗ್ಗೆ ಇವರದ್ದು ಗಾಂಧೀಜಿಯ ಕೋತಿಗಳ ಪ್ರತಿಕ್ರಿಯೆ ಕಾಣಲಾರೆ, ಕೇಳಲಾರೆ ಮತ್ತು ಪ್ರತಿಕ್ರಿಯಿಯಿಸಲಾರೆ. ಇಂದಿನ ಕಾಶ್ಮೀರದ ಸಮಸ್ಯೆಗೆ ಸಣ್ಣ ಮಟ್ಟಿಗೆ ಅವರೇ ಕಾರಣಕರ್ತರೂ ಹೌದು. ಅಂದು ತಪ್ಪು ನಡೆಯುವಾಗ ಎಲ್ಲರೂ ಸೇರಿ ಎದುರಿಸುತ್ತಿದ್ದಲ್ಲಿ ಪರಿಸ್ಥಿತಿ ಬಹುಷಃ ಇಲ್ಲಿಯವರೆಗೂ ಬರುತ್ತಿರಲಿಲ್ಲವೇನೋ. ಪಕ್ಕದ ಮನೆಗೆ ಬೆಂಕಿ ಬಿದ್ದಿದೆ ಎಂದು ಸುಮ್ಮನೆ ಕುಳಿತರೆ ಅದು ನಮ್ಮ ಮನೆಗೂ ವ್ಯಾಪಿಸಲು ಹೆಚ್ಚು ಸಮಯ ಬೇಕಾಗದು ಅಲ್ಲವೇ?? ಕಾಶ್ಮೀರದವರೆಲ್ಲ ಖಂಡಿತಾ ಕೆಟ್ಟವರಲ್ಲ. ಆದರೆ ಅಂದು ಕೆಟ್ಟವರು ಕೆಟ್ಟದ್ದನ್ನು ನಡೆಸುವಾಗ ನೋಡಿಯೂ ಖಂಡಿತಾ ಸುಮ್ಮನಿದ್ದದ್ದು ಹೌದಲ್ಲವೇ?? ನಮ್ಮದೇ ಭಾಗವಾದ ಕಣಿವೆ ರಾಜ್ಯ ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಲಿ, ನಮ್ಮವರೇ ಆದ ಪಂಡಿತರು ಪುನಃ ತಮ್ಮ ಜನ್ಮಸ್ಥಳಕ್ಕೆ ಮರಳುವಂತಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
✍️ದೀಪಾಶ್ರೀ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.