ಮಂಗಳೂರು : ಕಾಶೀ ಮಠಾಧೀಶರ ಚಾತುರ್ಮಾಸ ಮಂಗಳೂರಿನಲ್ಲಿ ವ್ರತಾರಂಭ ಶ್ರೀ ಕಾಶೀ ಮಠಾಧೀಶರಾದ ಶ್ರೀಸಂಯಮಿಂದ್ರ ತೀರ್ಥ ಸ್ವಾಮೀಜಿಯವರಿಂದ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಾತುರ್ಮಾಸ ವ್ರತಾರಂಭ.
ಶ್ರೀ ವೆಂಕಟರಮಣ ದೇವರ ಪುನಃ ಪ್ರತಿಷ್ಠೆಯಾಗಿ ಈ ಬಾರಿ 10 ನೇ ವರ್ಷ (ದಶಮಾನೋತ್ಸವ ಸಂಭ್ರಮ ) .ತಮ್ಮ ಊರಿಗೆ ದೇವತಾ ಉಪಾಸನೆ,ಭಜನೆ ಹಾಗೂ ದೇವರ ಮೇಲಿನ ಭಕ್ತಿ ಶ್ರದ್ಧೆಗಳನ್ನು ವ್ಯಕ್ತಪಡಿಸಲು ಅನುಕೂಲವಾದ ಒಂದು ದೇವರ ಮಂದಿರ ಬೇಕು ಎಂಬ ಗೌಡಸಾರಸ್ವತ ಬ್ರಾಹ್ಮಣ ಸಮಾಜದವರ ಆರಾಧ್ಯದೇವರಾದ ಶ್ರೀ ವೆಂಕಟರಮಣ ದೇವಸ್ಥಾನ ಯತಿವರೇಣ್ಯ ಶ್ರೀಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಪಟ್ಟ ಶಿಷ್ಯ ಪ್ರಸ್ತುತ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಗಳವರ ಕರಕಮಲಗಳಿಂದ ಪುನಃ ಪ್ರತಿಷ್ಠಾಪಿತಗೊಂಡ ಶ್ರೀ ವೀರ ವೆಂಕಟೇಶ ದೇವರು. ದೇವಾಲಯಗಳ ಘಂಟಾನಾದ, ಭಜನೆ, ಕೀರ್ತನೆ, ಮಂತ್ರೋಚ್ಚಾರಗಳ ದಿವ್ಯನಿನಾದದಿಂದ ಊರ ಪರಿಸರವಿಡೀ ಅಲೌಕಿಕ ಕಾಂತಿಯಿಂದ ತುಂಬಿಹೋಯಿತು.
ಶ್ರೀಕಾಶೀಮಠಾದ ವಿದ್ಯಮಾನ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಮಂಗಳೂರಿನ ಸಮಾಜಬಾಂಧವರಿಗೆ ನೀಡಿದ ಅಪೂರ್ವ ಕೊಡುಗೆ. ಸ್ವಾಮೀಜಿಯವರ ಚಾತುರ್ಮಾಸ ವೃತಾಚರಣೆಯನ್ನು ಮಂಗಳೂರಿನ ವೆಂಕಟರಮಣ ದೇವಸ್ಥಾನದಲ್ಲಿ ಕೈಗೊಳ್ಳುವುದಾಗಿ ನಿರ್ಧರಿಸಿ ಸಮಾಜಬಾಂಧವರಿಗೆ ಅಮಿತ ಆನಂದವನ್ನು ದಯಪಾಲಿಸಿರುತ್ತಾರೆ. ಪರಮ ಪೂಜ್ಯರು ಶ್ರೀ ಕಾಶೀಮಠದ ಗುರುಪರಂಪರೆಯ 21ನೇ ಯತಿವರ್ಯರಾಗಿ 2016 ರ ಜನವರಿ 28 ರಂದು ಪಟ್ಟಭಿಷಿಕ್ತರಾದ ಬಳಿಕ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ಚಾತುರ್ಮಾಸವೂ ಇದಾಗಿರುವುದರಿಂದ ಸಮಾಜ ಭಾಂದವರ ಸಂಭ್ರಮಕ್ಕೆ ಮೇರೆಯೇ ಇಲ್ಲವಾಗಿದೆ.
ದಿನಾಂಕ 18-07-2022 ರ ಸೋಮವಾರ ಆಷಾಢ ಬಹುಳ ಪಂಚಮಿಯಂದು ಶ್ರೀ ಸಂಸ್ಥಾನದ ದೇವರುಗಳಿಗೆ ಪಂಚಾಮೃತ ಅಭಿಷೇಕ, ಊಧ್ವರ್ಜನ, ಶತಕಲಶಾಭಿಷೇಕ, ಪವಮಾನಾಭಿಷೇಕ, ಕನಕಾಭಿಷೇಕ, ಮೃತಿಕಾನಯನ, ತಪ್ತ ಮುದ್ರಾಪ್ರಧಾನ, ಮಹಾಪೂಜೆ, ಮೃತಿಕಾ ಪೂಜೆಗಳ ಬಳಿಕ ಪರಮಪೂಜ್ಯ ಶ್ರೀ ಸಂಯಮಿಂದ್ರ ತೀರ್ಥ ಶ್ರೀ ಪಾದರು ಚಾತುರ್ಮಾಸ ವೃತ ಸ್ವೀಕಾರ ಮಾಡಿದರು. ಬಳಿಕ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿದರು.
ಪರಮಪೂಜ್ಯರ ಚಾತುರ್ಮಾಸ ವೃತಾಚರಣೆಯ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಸಾವಿರಾರು ಭಜಕರು ಆಗಮಿಸಿದರು.
ಶ್ರೀ ಮಠದಲ್ಲಿ ಈ ಚಾತುರ್ಮಾಸ ವೃತಾಚರಣೆಯ ಕಾಲಾವಧಿಯ ಉದ್ದಕ್ಕೂ ಬರುವ ವಿವಿಧ ಹಬ್ಬ,ಹರಿದಿನ,ವಿಶೇಷ ಪರ್ವಾದಿಗಳ ಸಂದರ್ಭದ ವಿವಿಧ ಧಾರ್ಮಿಕ ವಿಧಿ,ಹೋಮ ಹವನಾದಿಗಳಲ್ಲದೆ ಭಜನಾ ಸಪ್ತಾಹ ನಡೆಯಲಿದೆ. ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಂಜೆಯಿಂದ ರಾತ್ರಿ ವರೆಗೆ ಗೌಡಸಾರಸ್ವತ ಸಮಾಜದ ಉದಯೋನ್ಮುಖ ಹಾಗೂ ಖ್ಯಾತ ಸಂಗೀತ ಕಲಾವಿದರಿಂದ ಭಕ್ತಿ ಸಂಗೀತ,ನಾಟಕ,ಭರತನಾಟ್ಯಾದಿ ಕಾರ್ಯಕ್ರಮಗಳಿರುತ್ತವೆ. ಅಷ್ಠಮಿಯ ಸಂದರ್ಭದಲ್ಲಿ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆಯನ್ನು ಆಯೋಜಿಸಲಾಗುವುದು ಮಾತ್ರವಲ್ಲ ಸ್ವಚ್ಚತಾ ಅಭಿಯಾನ,ಉದ್ಯೋಗ ಮಾಹಿತಿ ವೈದ್ಯಕೀಯ ಶಿಭಿರ, ಯುವ ಜನರಿಗೆ ಸಾಂಪ್ರದಾಯಿಕ ಕ್ರೀಡಾ ಸ್ಪರ್ಧೆ, ಭಜನೆ, ಸ್ತೋತ್ರ ಹಾಗೂ ಚಿತ್ರ ರಚನಾ ಸ್ಪರ್ಧೆ, ರಂಗವಲ್ಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ಉದ್ಯೋಗ ಮೇಳ, ಗೋಸಂರಕ್ಷಣೆ, ಸಂಧ್ಯಾ ವಂದನ ಶಿಬಿರ, ಭಾಗವತ ಸಪ್ತಾಹ, ನಗರ ಭಜನೆ ಕಾರ್ಯಕ್ರಮ ಇವೆಲ್ಲವನ್ನು ಪರಮ ಪೂಜ್ಯ ಗುರುವರ್ಯರ ಆದೇಶಾನುಸಾರ ಅವರ ಮಾರ್ಗದರ್ಶನದಲ್ಲಿ ಕಾಲಕಾಲಕ್ಕೆ ಸರಿಯಾಗಿ ಆಯೋಜಿಸಲಾಗುವುದು.
ಶ್ರೀ ದೇವಳದಲ್ಲಿ ಈ ಬಾರಿ ನಡೆಯುತ್ತಿರುವ ಪರಮ ಪೂಜ್ಯ ಶ್ರೀ ಸಂಯಮಿಂದ್ರ ಸ್ವಾಮೀಜಿಯವರ ಈ ಐತಿಹಾಸಿಕ ಚಾತುರ್ಮಾಸವು ಭಕ್ತಿ, ಜ್ಞಾನ, ವೈರಾಗ್ಯಗಳು ಮುಪ್ಪುರಿಗೊಂಡ ಅದ್ವಿತೀಯ ಚಾತುರ್ಮಾಸವಾಗಿ ಪರಿಣಮಿಸಲಿದ್ದು ಗುರುವರ್ಯರ ಚಿತ್ತ ಪ್ರಬೋಧಕ ಮಾರ್ಗದರ್ಶನ, ಪ್ರವಚನ ಹಾಗೂ ಆಶೀರ್ವಾದಗಳಿಗಾಗಿ ಸಮಸ್ತ ಸಮಾಜವು ನತಮಸ್ತಕವಾಗಿ ಕಾದಿದೆ, ತಮ್ಮ ಸೇವಾಕೈಂಕರ್ಯವನ್ನು ಪದತಲದಲ್ಲಿ ಸಲ್ಲಿಸಲು ಅಣಿಯಾಗಿದೆ.
ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಎಂ ಕಿರಣ್ ಪೈ ,ಎಂ ಸತೀಶ್ ಪ್ರಭು,ಕೆ ಗಣೇಶ್ ಕಾಮತ್, ಎಂ ಜಗನ್ನಾಥ್ ಕಾಮತ್ ಚಾತುರ್ಮಾಸ ಸಮಿತಿ ಗೌರವಾಧ್ಯಕ್ಷರಾದ ಮುಂಡ್ಕುರ್ ರಾಮದಾಸ್ ಕಾಮತ್, ಅಧ್ಯಕ್ಷರಾದ ಶ್ರೀ ಎಂ . ಪದ್ಮನಾಭ ಪೈ ಮುಖ್ಯ ಸಂಯೋಜಕ ಜಿ ಸುರೇಶ ವಿ ಕಾಮತ್ ಕಾರ್ಯದರ್ಶಿ ತೋನ್ಸೆ ಗಣಪತಿ ಪೈ ಯು ಸುದರ್ಶನ್ ಮಲ್ಯ ಕೆ. ಗುರುದತ್ ಕಾಮತ್ ಕೋಶಾಧಿಕಾರಿ ಬಿ ಆರ್ ಭಟ್ ಮಾ ಮಾರೂರ್ ಶಶಿಧರ್ ಪೈ, ಕೊಚ್ಚಿನ್ದ ತಿರುಮಲ ದೇವಳದ ಮೊಕ್ತೇಸರರು, ಮುಂಬೈ ಜಿಎಸ್ಸಿ ಸೇವಾಮಂಡಳದ ಪದಾಧಿಕಾರಿಗಳು, ದೆಹಲಿ ಸಾರಸ್ವತ ಸಮಾಜದ ಪದಾಧಿಕಾರಿಗಳು, ದಕ್ಷಿಣ ಕನ್ನಡದ ನೂರಾರು ದೇವಳಗಳ ಮೊಕ್ತೇಸರರು, ಶಾಖಾ ಮಠದ ಪದಾಧಿಕಾರಿಗಳು, ಹಾಗೂ ಸಾವಿರಾರು ಭಜಕರು ಉಪಸ್ಥಿತರಿದ್ದರು.
ಚಿತ್ರ :ಮಂಜು ನೀರೇಶ್ವಾಲ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.