News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವೀರೇಂದ್ರ ಹೆಗ್ಗಡೆಯವರ ಅನುಭವವ ರಾಷ್ಟ್ರಕ್ಕೆ ಮಾರ್ಗದರ್ಶಿಯಾಗಲಿದೆ

ರಾಜ್ಯಸಭೆಯನ್ನು ಚಿಂತಕರ ಚಾವಡಿ ಎಂದು ಕರೆಯಲಾಗುತ್ತದೆ. ಕೌನ್ಸಿಲ್ ಆಫ್ ಸ್ಟೇಟ್ಸ್ ಅಥವಾ ರಾಜ್ಯಗಳ ಪರಿಷತ್ತು ಎಂದು ರಾಜ್ಯ ಸಭೆಯು ಗುರುತಿಸಲ್ಪಡುತ್ತದೆ. ಲೋಕಸಭಾ ಸದಸ್ಯರು ಜನರಿಂದ ನೇರವಾಗಿ ಚುನಾಯಿಸಲ್ಪಟ್ಟರೆ, 250 ಸಂಖ್ಯೆಯ ರಾಜ್ಯ ಸಭಾ ಸದಸ್ಯರಲ್ಲಿ 238 ಮಂದಿ ರಾಜ್ಯಗಳ ವಿಧಾನ ಸಭೆಗಳ ಸದಸ್ಯರಿಂದ ಚುನಾಯಿಸಲ್ಪಡುತ್ತಾರೆ. ಹೀಗಾಗಿ ರಾಜ್ಯಸಭೆಯು ರಾಜ್ಯಗಳನ್ನು ಪ್ರತಿನಿಧಿಸುತ್ತದೆ. ರಾಜ್ಯಸಭೆಗೆ 12 ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡುವ ಹಕ್ಕು ರಾಷ್ಟ್ರಪತಿಗಳಿಗೆ ಇರುತ್ತದೆ. ಚುನಾವಣಾ ರಾಜಕೀಯದಿಂದ ದೂರ ಇರಲು ಬಯಸುವ ವಿಜ್ಞಾನಿಗಳು, ಚಿಂತಕರು, ಸಾಹಿತಿಗಳು,ಕ್ರೀಡಾಳುಗಳು, ನ್ಯಾಯಾಧೀಶರು ನ್ಯಾಯವಾದಿಗಳು, ಕಲಾವಿದರು, ಸಮಾಜಸೇವಕರು ಮೊದಲಾದ ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗುತ್ತದೆ. ವಿವಿಧ ಕ್ಷೇತ್ರಗಳ ವಿಷಯ ಪರಿಣಿತರ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆಯುವ ದೃಷ್ಟಿಯಿಂದ ಈ ರೀತಿಯಲ್ಲಿ ಸದಸ್ಯರ ನೇಮಕಾತಿ ವ್ಯವಸ್ಥೆಯನ್ನು ಮಾಡಲಾಗಿದೆ. 1952 ರ ನಂತರ ಇದುವರೆಗೂ ಸುಮಾರು 140 ಮಂದಿ ಪರಿಣಿತರನ್ನು ರಾಜ್ಯಸಭೆಗೆ ನಾಮ ನಿರ್ದೇಶನದ ಮೂಲಕ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ವಿಜ್ಞಾನಿ ಸತ್ಯೇಂದ್ರ ನಾಥ್ ಬೋಸ್, ಕವಿ ಹರಿವಂಶ ರಾಯ್ ಬಚ್ಚನ್,ಅಂಕಣಕಾರ ಖುಶ್ವಂತ್ ಸಿಂಗ್ ಸಿನೆಮಾ ನಟರಾದ ಶಿವಾಜಿ ಗಣೇಶನ್, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಒಲಿಂಪಿಕ್ ಪದಕ ವಿಜೇತೆ ಬಾಕ್ಸರ್ ಮೇರಿ ಕೋಮ್, ಹಸಿರು ಕ್ರಾಂತಿಯ ಹರಿಕಾರ ಎಂ ಎಸ್ ಸ್ವಾಮಿನಾಥನ್, ಇಸ್ರೋ ನಿರ್ದೇಶಕ ರಾಗಿದ್ದ ಕಸ್ತೂರಿ ರಂಗನ್, ನಟಿ ರೇಖಾ, ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ಮೊದಲಾದವರನ್ನು ರಾಜ್ಯಸಭೆಗೆ ನಾಮಿನೇಷನ್ ಮೂಲಕ ಆಯ್ಕೆ ಮಾಡಲಾಗಿತ್ತು.

ಇತ್ತೀಚೆಗೆ ಕೇಂದ್ರ ಸರಕಾರವು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ರಾಜ್ಯಸಭಾ ಸದಸ್ಯತ್ವಕ್ಕೆ ನಾಮನಿರ್ದೇಶನ ಮಾಡಿದಾಗ ಕನ್ನಡಿಗರು ಮಾತ್ರವಲ್ಲ ದೇಶಕ್ಕೆ ದೇಶವೇ ಸಂತಸ ಪಟ್ಟಿತು. ಹೆಗ್ಗಡೆಯವರ ಜೊತೆಗೆ ಓಟದ ರಾಣಿ ಪಿ ಟಿ ಉಷಾ, ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಹಾಗೂ ಸುಪ್ರಸಿದ್ಧ ಸಿನೆಮಾ ಸಾಹಿತಿ ವಿ ವಿಜಯೇಂದ್ರ ಪ್ರಸಾದ್ ಕೂಡಾ ರಾಜ್ಯಸಭೆಗೆ ಆರಿಸಲ್ಪಟ್ಟಿದ್ದಾರೆ. ಹೆಗ್ಗಡೆಯವರ ಕೊಡುಗೆಯನ್ನು ಗುರುತಿಸಿದ ಭಾರತ ಸರಕಾರವು ಅತ್ಯುಚ್ಛ ನಾಗರಿಕ ಸಮ್ಮಾನಗಳಾದ ಪದ್ಮವಿಭೂಷಣ ,ಪದ್ಮ ಭೂಷಣ ಹಾಗೂ ಪದ್ಮಶ್ರೀ ಗಳನ್ನು ಕೊಟ್ಟು ಗೌರವಿಸಿದೆ. ಸಮಾಜ ಸೇವೆಯಲ್ಲಿ ಅಪಾರ ಅನುಭವವಿರುವ ಡಾ ಹೆಗ್ಗಡೆಯವರ ಸಲಹೆ, ಮಾರ್ಗದರ್ಶನ ಹಾಗೂ ಸೇವೆಯನ್ನು ಭಾರತ ಸರಕಾರವು ಬಯಸಿದೆ. 2017 ರಲ್ಲಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 50 ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಭೇಟಿಕೊಟ್ಟು ಉಜಿರೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾ “ಹೆಗ್ಗಡೆಯವರ ವ್ರತಪೂರ್ಣ ಜೀವನಕ್ಕೆ ಸಮ್ಮಾನ ಮಾಡಲು ಒಬ್ಬ ವ್ಯಕ್ತಿಯಾಗಿ ನಾನು ಬಹಳ ಸಣ್ಣವನು. ಆದರೆ 125 ಕೋಟಿ ಜನತೆಯ ಪ್ರತಿನಿಧಿಯಾಗಿ ಆ ಕೆಲಸವನ್ನು ಮಾಡಲು ಬಹಳ ಭಾಗ್ಯಶಾಲಿ ಎನಿಸುತ್ತಿದೆ, ಹೆಗ್ಗಡೆಯವರ 50 ವರ್ಷಗಳ ಸಾಧನೆ ನನ್ನಂತಹ ಕೋಟಿ ಕೋಟಿ ಜನರಿಗೆ ಪ್ರೇರಣೆ” ಎಂದಿರುವುದು ಹೆಗ್ಗಡೆಯವರ ವ್ಯಕ್ತಿತ್ವವನ್ನು ಹಾಗೂ ಸಾಧನೆಯನ್ನು ಸಾರುತ್ತದೆ.

ತಮ್ಮ 20 ನೇ ವಯಸ್ಸಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ 21 ನೇ ಧರ್ಮಾಧಿಕಾರಿಯಾಗಿ ಪೀಠವನ್ನೇರಿದ ಬಹುಮುಖ ಅಭಿರುಚಿಯುಳ್ಳ ಹೆಗ್ಗಡೆಯವರು ಧಾರ್ಮಿಕ, ಸಾಮಾಜಿಕ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಯುವ ಜನರಿಗೆ ಸ್ವ ಉದ್ಯೋಗ ರೂಪಿಸುವುದು, ಮಹಿಳೆಯರ ಸಬಲೀಕರಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಧಾರ್ಮಿಕ ಕ್ಷೇತ್ರವನ್ನು ಸಮಾಜಮುಖಿಯನ್ನಾಗಿಸಿದ ಹೆಗ್ಗಳಿಕೆ ಅವರದು. ಧಾರ್ಮಿಕ ಶ್ರದ್ಧಾಕೇಂದ್ರವೊಂದನ್ನು ಹೇಗೆ ಸ್ವಚ್ಛ, ಶಿಸ್ತು ಹಾಗೂ ಅಚ್ಚುಕಟ್ಟಾಗಿಡಬಹುದೆಂಬುದಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಒಂದು ಮಾದರಿ. ದೇಶದ ವಿವಿಧ ಭಾಗಗಳಿಂದ ಪ್ರತಿ ದಿನ ಸಾವಿರಾರು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ವಿಶೇಷ ರಜಾದಿನಗಳು ಹಾಗೂ ವಾರಾಂತ್ಯಗಳಲ್ಲಂತೂ 40-50 ಸಾವಿರಕ್ಕಿಂತಲೂ ಹೆಚ್ಚು ಭಕ್ತಾದಿಗಳು ಭೇಟಿಕೊಡುತ್ತಾರೆ. ಆದರೆ ದೇವಸ್ಥಾನದ ಪರಿಸರ, ಊಟದ ಹಾಲ್, ಅಡುಗೆ ಮನೆ,ಶೌಚಾಲಯ, ರಸ್ತೆ, ಲಾಡ್ಜ್ ಎಲ್ಲವನ್ನೂ ಅತ್ಯಂತ ಶುಚಿಯಾಗಿಡಲಾಗಿದೆ. 2016 ರಲ್ಲಿ ಪ್ರಸಿದ್ಧ ಮಾಧ್ಯಮ ಸಂಸ್ಥೆಯಾದ ಇಂಡಿಯಾ ಟುಡೇ ಸಮೂಹವು ನಡೆಸಿದ್ದ ಸಮೀಕ್ಷೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳವು ದೇಶದ ಅತ್ಯಂತ ಶುಚಿಯಾದ ಧಾರ್ಮಿಕ ಕ್ಷೇತ್ರವೆಂದು ಗುರುತಿಸಲ್ಪಟ್ಟಿತ್ತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ಎಸ್ ಕೆ ಡಿ ಆರ್ ಡಿ ಪಿ) ಯು ಹೆಗ್ಗಡೆಯವರ ಸಮಗ್ರ ಗ್ರಾಮೀಣಾಭಿವೃದ್ಧಿಯ ಕನಸಿನ ಫಲವಾಗಿದೆ. 1982 ರಲ್ಲಿ ಆರಂಭವಾದ ಗ್ರಾಮಾಭಿವೃದ್ಧಿ ಯೋಜನೆಯ ಫಲವನ್ನು ಇಂದು ಬಹುತೇಕ ಕರ್ನಾಟಕದ ಗ್ರಾಮೀಣ ಭಾಗದ ಜನರು ಪಡೆಯುತ್ತಿದ್ದಾರೆ. ಸಮಾಜದ ಬಡ ಹಾಗೂ ನಿರ್ಲಕ್ಷಿತ ಜನರನ್ನು ಬೌದ್ಧಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮೇಲೆತ್ತುವ ಕೆಲಸವು ಈ ಯೋಜನೆಯ ಮೂಲಕ ಆಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕೃಷಿ ಅಭಿವೃದ್ಧಿ ಸಂಬಂಧೀ ಚಟುವಟಿಕೆಗಳು, ಸಮುದಾಯ ಅಭಿವೃದ್ಧಿ ಕೆಲಸಗಳು, ಮಹಿಳಾ ಸಬಲೀಕರಣ, ಆರೋಗ್ಯ ವಿಮೆ ,ಕಿರು ಹಣಕಾಸು ಚಟುವಟಿಕೆ ಹಾಗೂ ದುಶ್ಚಟ ಮುಕ್ತಿ ಮತ್ತು ಪುನರ್ವಸತೀಕರಣ ಕೆಲಸಗಳು ನಡೆಯುತ್ತವೆ. ಎಸ್ ಕೆ ಡಿ ಆರ್ ಡಿ ಪಿ ಅಡಿಯಲ್ಲಿ ಪ್ರಸ್ತುತ ಸುಮಾರು 7 ಲಕ್ಷ ಸ್ವಸಹಾಯ ಗುಂಪುಗಳು ಕಾರ್ಯಾಚರಿಸುತ್ತಿವೆ ಹಾಗೂ 50,05,809 ಸದಸ್ಯರಿದ್ದಾರೆ. ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಪಡೆದ ಲಕ್ಷಾಂತರ ಸದಸ್ಯರು ಹೈನುಗಾರಿಕೆ, ಕೃಷಿ ಅಭಿವೃದ್ಧಿ, ಮಲ್ಲಿಗೆ ಕೃಷಿ, ಬಯೋಗ್ಯಾಸ್, ವ್ಯಾಪಾರ ವಹಿವಾಟು ಗಳನ್ನು ನಡೆಸಿ ಆರ್ಥಿಕ ಅಭಿವೃದ್ಧಿಯನ್ನು ಕಂಡಿದ್ದಾರೆ. ವಿಮುಕ್ತಿ ಕಾರ್ಯಕ್ರಮದಡಿಯಲ್ಲಿ ಇದುವರೆಗೆ 1550 ಕುಡಿತ ನಿವಾರಣಾ ಕ್ಯಾಂಪುಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾವಿರಾರು ಮಂದಿಯನ್ನು ಕುಡಿತದ ದುಶ್ಚಟದಿಂದ ಮುಕ್ತರನ್ನಾಗಿಸಲಾಗಿದೆ ಹಾಗೂ ಅವರಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಅವಕಾಶವನ್ನು ಕಲ್ಪಿಸಲಾಗಿದೆ. ಪರಿಸರ ಹಾಗೂ ನೀರಿನ ಸಂರಕ್ಷಣಾ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕದಾದ್ಯಂತ 300 ಕ್ಕೂ ಹೆಚ್ಚು ಕೆರಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳೆಯರ ಸುಸ್ಥಿರ ಸಬಲೀಕರಣಕ್ಕಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮೂಲಕ ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳಿಂದ ತಯಾರಾದ ಖಾದಿ ಬಟ್ಟೆಯಿಂದ ರಚಿಸಿದ ಸಿದ್ಧ ಉಡುಪುಗಳು, ಉಪ್ಪಿನಕಾಯಿ, ಅಗರ್ ಬತ್ತಿ, ಆರೋಗ್ಯವರ್ಧಕ ಪೇಯಗಳು, ಆಹಾರೋತ್ಪನ್ನಗಳು ಮೊದಲಾದ ವಸ್ತುಗಳಿಗೆ ಮಾರುಕಟ್ಟೆಯನ್ನು ಒದಗಿಸಿ ಗ್ರಾಮೀಣ ಮಹಿಳೆಯರಿಗೆ ಆದಾಯವನ್ನು ಕಲ್ಪಿಸಿಕೊಡಲಾಗುತ್ತಿದೆ. ಸಂಪೂರ್ಣ ಸುರಕ್ಷಾ ವಿಮಾ ಯೋಜನೆಯ ಮೂಲಕ ಸದಸ್ಯರು ಹಾಗೂ ಅವರ ಮನೆಯವರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯನ್ನು ಕೊಡಲಾಗಿದೆ.

ಗ್ರಾಮೀಣ ಭಾಗದ ಯುವಕರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಹೆಗ್ಗಡೆಯವರು ಆರಂಭಿಸಿದ ಇನ್ನೊಂದು ಸಂಸ್ಥೆ ರುಡ್ ಸೆಟ್ ಸಂಸ್ಥೆ (ರೂರಲ್ ಡೆವೆಲಪ್ಮೆಂಟ್ ಆಂಡ್ ಸೆಲ್ಫ್ ಎಂಪ್ಲಾಯ್ಮೆಂಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್). 1982 ರಲ್ಲಿ ಉಜಿರೆಯಲ್ಲಿ ರುಡ್ ಸೆಟ್ ಅನ್ನು ಆರಂಭಿಸುವಾಗ ಹೆಗ್ಗಡೆಯವರು ಹೇಳಿದ “ ಮೂರು ಅಥವಾ ಐದು ವರ್ಷಗಳ ಕಾಲೇಜು ಓದಿ ಬೇರೆಯವರ ಅಕೌಂಟ್ ಅನ್ನು ಬರೆಯುವ ಕೆಲಸ ಮಾಡುವುದರ ಬದಲು ಸ್ವಯಂ ಉದ್ಯೋಗಿಯಾಗಿ ತನ್ನ ಲೆಕ್ಕವನ್ನು ತಾನೇ ಬರೆದುಕೊಳ್ಳುವುದು ಹೆಚ್ಚು ಅರ್ಥವತ್ತಾಗಿದೆ” ಎಂಬ ಮಾತುಗಳನ್ನು ಧ್ಯೇಯವಾಕ್ಯವನ್ನಾಗಿಸಿಕೊಂಡ ರುಡ್ ಸೆಟ್ ಸಂಸ್ಥೆ ಇಂದು ದೇಶಾದ್ಯಂತ ಗ್ರಾಮೀಣ ಭಾಗಗಳ ಲಕ್ಷಾಂತರ ಯುವಕರಿಗೆ ಕಿರು ಅವಧಿಯ ವಿವಿಧ ರೀತಿಯ ಉಚಿತ ಕೌಶಲ್ಯ ತರಬೇತಿಗಳನ್ನು ನೀಡಿ ಅವರು ಸ್ವ ಉದ್ಯೋಗವನ್ನು ಕೈಗೊಳ್ಳುವಂತೆ ಅನುವು ಮಾಡಿಕೊಡುತ್ತಿದೆ. ತರಬೇತಿ ಪಡೆದ ಯುವಕರಿಗೆ ಬ್ಯಾಂಕ್ ಸಾಲವನ್ನು ಒದಗಿಸುವುದರ ಮೂಲಕ ಸ್ವ ಉದ್ಯೋಗವನ್ನು ಕೈಗೊಳ್ಳಲು ಹಣಕಾಸಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮಾರುಕಟ್ಟೆ ನೆರವನ್ನೂ ನೀಡಲಾಗುತ್ತದೆ. 2012 ರಲ್ಲಿ ಹೆಗ್ಗಡೆಯವರನ್ನು ಭೇಟಿ ಮಾಡಿದ್ದ ಅಂದಿನ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಜೈರಾಮ್ ರಮೇಶ್ ಅವರು ರುಡ್ ಸೆಟ್ ನ ಕಾರ್ಯವೈಖರಿಯನ್ನು ಶ್ಲಾಘಿಸಿ ಭಾರತ ಸರಕಾರವು ದೇಶಾದ್ಯಂತ ಸ್ಥಾಪಿಸಿರುವ ಆರ್ ಸೆಟಿ ಸಂಸ್ಥೆಗಳನ್ನು ಧರ್ಮಸ್ಥಳ ಎಜುಕೇಶನ್ ಟ್ರಸ್ಟಿನ ಮೂಲಕ ನಡೆಸಬೇಕೆಂಬ ಮನವಿ ಮಾಡಿದ್ದರು. ಇದೀಗ ದೇಶದ 27 ಭಾಗಗಳಲ್ಲಿ ರುಡ್ ಸೆಟ್ ಇನ್ಸ್ಟಿಟ್ಯೂಶನ್ ಗಳು ಇದ್ದು ಇದುವರೆಗೆ 16,998 ಕೌಶಲ್ಯ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದುವರೆಗೆ 5,18,643 ಯುವಕ ಯುವತಿಯರು ವಿವಿಧ ರೀತಿಯ ತರಬೇತಿಗಳನ್ನು ಪಡೆದಿದ್ದಾರೆ. ತರಬೇತಿಯನ್ನು ಸದುಪಯೋಗಪಡಿಸಿಕೊಂಡು 3,81,413 ಮಂದಿ ಸ್ವ ಉದ್ಯೋಗ ಹಾಗೂ ಉದ್ಯೋಗದ ಮೂಲಕ ಜೀವನದಲ್ಲಿ ನೆಲೆಯನ್ನು ಕಂಡುಕೊಂಡಿದ್ದಾರೆ. ಇವರಲ್ಲಿ 1,74,258 ಮಂದಿ ಸ್ವ ಉದ್ಯೋಗವನ್ನು ನಡೆಸುತ್ತಿದ್ದಾರೆ ಎನ್ನುವುದು ವಿಶೇಷ. ರುಡ್ ಸೆಟ್ ಸಂಸ್ಥೆಗಳ ಮೂಲಕ ತರಬೇತಿ ಪಡೆದಿರುವ ಗ್ರಾಮೀಣ ಯುವಜನರಲ್ಲಿ 70% ಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಪ್ರಸ್ತುತ ಎಸ್ ಡಿ ಎಂ ಎಜುಕೇಶನ್ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಜಾರಿ ಮಾಡುತ್ತಿವೆ. ಕೇಂದ್ರ ಸರಕಾರವು ದೇಶಾದ್ಯಂತ ನಡೆಸುತ್ತಿರುವ 680 ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರಗಳು ಕೂಡಾ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ.

ಶಿಕ್ಷಣ ಕ್ಷೇತ್ರಕ್ಕೂ ಶ್ರೀ ಕ್ಷೇತ್ರ ಧರ್ಮಸ್ಥಳವು ತನ್ನದೇ ಆದ ಕೊಡುಗೆಯನ್ನು ಕೊಟ್ಟಿದೆ. 52 ಶಿಕ್ಷಣ ಸಂಸ್ಥೆಗಳು ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿವೆ. ದೇಶದಲ್ಲೇ ಮೊದಲ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜನ್ನು ಆರಂಭಿಸಿರುವ ಕೀರ್ತಿ ಹೆಗ್ಗಡೆಯವರದ್ದು. ಧಾರವಾಡದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯುನಿವರ್ಸಿಟಿಯನ್ನು ಸ್ಥಾಪಿಸಲಾಗಿದೆ. ಹೆಗ್ಗಡೆಯವರಿಗೆ ಆಯುರ್ವೇದದ ಚಿಕಿತ್ಸಾ ಪದ್ಧತಿಯ ಬಗ್ಗೆ ವಿಶೇಷ ಒಲವು ಇದ್ದು 3 ಆಯುರ್ವೇದಿಕ್ ಮೆಡಿಕಲ್ ಕಾಲೇಜುಗಳು ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ವಿದ್ಯಾದಾನ ಮಾಡುತ್ತಿವೆ. ಶ್ರೀ ಕ್ಷೇತ್ರದಿಂದ ನಡೆಸಲ್ಪಡುತ್ತಿರುವ ಶಾಂತಿವನ ಟ್ರಸ್ಟ್ ನ ಮೂಲಕ ಕರ್ನಾಟಕದ ಶಾಲಾ ವಿದ್ಯಾರ್ಥಿಗಳಿಗೆ ಯೋಗ ಮತ್ತು ನೈತಿಕ ಶಿಕ್ಷಣವನ್ನು ಕೊಡುವ ವಿಶೇಷ ಕಾರ್ಯಕ್ರಮಗಳು ಜರಗುತ್ತಿವೆ. 2013 ರಲ್ಲಿ ಶಾಂತಿವನ ಟ್ರಸ್ಟ್ ಸಂಘಟಿಸಿದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 62,797 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಏಕ ಕಾಲದಲ್ಲಿ ಭಾಗವಹಿಸಿದುದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಭಾಜನವಾಯಿತು ಮಾತ್ರವಲ್ಲದೆ ಯೋಗದ ಪ್ರಾಮುಖ್ಯೆತೆಯ ಬಗ್ಗೆ ಜಗತ್ತಿನ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ವಿಶೇಷ ಮಕ್ಕಳನ್ನು ಸಾಮಾನ್ಯ ಮಕ್ಕಳೊಡನೆ ಸೇರಿಸಿ ವಿದ್ಯಾಭ್ಯಾಸವನ್ನು ಕೊಡುವ ಸಮನ್ವಯ ಶಿಕ್ಷಣ ಸಂಸ್ಥೆಯೂ ಶ್ರೀ ಕ್ಷೇತ್ರದಿಂದ ನಡೆಸಲ್ಪಡುತ್ತಿದೆ. ವೀರೇಂದ್ರ ಹೆಗ್ಗಡೆಯವರು 1972 ರಲ್ಲಿ ಆರಂಭಿಸಿದ ಉಚಿತ ಹಾಗೂ ಸರಳ ಸಾಮೂಹಿಕ ವಿವಾಹದಲ್ಲಿ ಇದುವರೆಗೂ 12,576 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

ಕರ್ನಾಟಕದಲ್ಲಿರುವ ಪ್ರಾಚೀನ ಹಾಗೂ ಐತಿಹಾಸಿಕ ಹಿನ್ನೆಲೆಯಿರುವ ನಿರ್ಲಕ್ಷಿತ ದೇವಾಲಯಗಳು, ಬಸದಿಗಳು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಪುನ:ಸ್ಥಾಪಿಸುವ ಕೆಲಸ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಮುಖಾಂತರ ನಡೆಯುತ್ತಿದೆ. ಕರ್ನಾಟಕ ಸರಕಾರದ ಜೊತೆಗೆ ಸೇರಿ ನಡೆಸಲಾಗುತ್ತಿರುವ ಈ ಧರ್ಮೋತ್ಥಾನ ಕಾರ್ಯಕ್ರಮದಡಿಯಲ್ಲಿ ಇದುವರೆಗೆ 224 ದೇವಾಲಯಗಳನ್ನು ಪುನ:ಸ್ಥಾಪಿಸಲಾಗಿದೆ. ಪುನರುದ್ಧಾರ ನಡೆಸುವ ಸಂದರ್ಭದಲ್ಲಿ ಕಟ್ಟಡದ ಈ ಹಿಂದಿನ ವಾಸ್ತುಶಿಲ್ಪಕ್ಕೆ ಕಿಂಚಿತ್ತೂ ಭಂಗವಾಗದಂತೆ ಎಚ್ಚರವಹಿಸುವುದು ಈ ಕಾರ್ಯಕ್ರಮದ ವಿಶೇಷ.

ಹೆಗ್ಗಡೆಯವರ ಅಭಿರುಚಿ ಹಾಗೂ ಹವ್ಯಾಸಗಳಿಗೆ ಕೊನೆಯೇ ಇಲ್ಲ. ವಿಶ್ವದರ್ಜೆಯ ವಸ್ತುಸಂಗ್ರಹಾಲಯವಾದ ಮಂಜೂಷಾವನ್ನು ರೂಪಿಸಿ ಆಸಕ್ತರಿಗಾಗಿ ಧರ್ಮಸ್ಥಳದಲ್ಲಿ ತೆರೆದಿಡಲಾಗಿದೆ. ದೇಶವಿದೇಶಗಳ ಅಪರೂಪದ ಕಾರುಗಳ ಸಂಗ್ರಹವಿರುವ ಕಾರ್ ಮ್ಯೂಸಿಯಂ ಅಲ್ಲಿದೆ. ಬೇರೆ ಬೇರೆ ದೇವಾಲಯಗಳಲ್ಲಿ ಉಪಯೋಗದಲ್ಲಿದ್ದ ಬೃಹತ್ ಮರದ ರಥಗಳನ್ನೂ ಅಲ್ಲಿ ಕಾಣಬಹುದು. ಪ್ರಾಚೀನ ತಾಳೆಗರಿ ಗ್ರಂಥಗಳನ್ನು ವೈಜ್ಞಾನಿಕವಾಗಿ ಹಾಗೂ ಜೋಪಾನವಾಗಿ ಕಾಪಿಡುವ ವ್ಯವಸ್ಥೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿದೆ. ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಅವರು ತಮ್ಮ ಫೋಟೋಗ್ರಫಿ ಹವ್ಯಾಸವನ್ನು ಜೀವಂತವಾಗಿಟ್ಟಿದ್ದಾರೆ.

ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳಲ್ಲಿ ಸಾವಿರಾರು ಜನರು ಹೆಗ್ಗಡೆಯವರನ್ನು ಮುಖತ ಕಂಡು ತಮ್ಮ ತಮ್ಮ ಸಮಸ್ಯೆ ಹಾಗೂ ದು:ಖಗಳನ್ನು ಹೇಳಿಕೊಳ್ಳುತ್ತಾರೆ. ಹಲವರು ಆಸ್ತಿ ಹಣಕಾಸು ವಿವಾದಗಳನ್ನು ಹೆಗ್ಗಡೆಯವರ ಮುಂದಿಡುತ್ತಾರೆ. ಭಕ್ತಾದಿಗಳ ದು:ಖ ದುಮ್ಮಾನಗಳಿಗೆ ಸಾಂತ್ವನ ಹೇಳುವ ಹೆಗ್ಗಡೆಯವರು ಕೋರ್ಟ್ ಕಚೇರಿಗಳಲ್ಲೂ ಮುಗಿಯದ ವ್ಯಾಜ್ಯಗಳನ್ನು ಕ್ಷೇತ್ರದ ವಿಶಿಷ್ಠ ನ್ಯಾಯದಾನ ಪರಂಪರೆಯ ಅನುಸಾರವಾಗಿ ಮುಗಿಸುತ್ತಾರೆ. ಅವರಿಗೆ ದಿನನಿತ್ಯ ನೂರಾರು ಪತ್ರಗಳು ಮತ್ತು ಮನವಿಗಳು ಬರುತ್ತವೆ. ಅವುಗಳೆಲ್ಲದರ ಮೇಲೂ ಅವರು ಕಣ್ಣಾಡಿಸುತ್ತಾರೆ. ಏಕಸಂಧಿಗ್ರಾಹಿಯಾಗಿರುವ ಅವರು ಪತ್ರಗಳನ್ನು ಕ್ಷಣಮಾತ್ರದಲ್ಲಿ ಓದಿ ಅರ್ಥೈಸಿಕೊಳ್ಳುತ್ತಾರೆ. ಸ್ಪಷ್ಟವಾದ ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ತಮ್ಮೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಬಯಸುವ ಭಕ್ತಾದಿಗಳಿಗೆ ಯಾವ ಹಮ್ಮು ಬಿಮ್ಮುಗಳಿಲ್ಲದೆ ಫೋಸ್ ಕೊಡುವ ಹೆಗ್ಗಡೆಯವರು ಸಮಾಧಾನಿ ಮತ್ತು ಸದಾ ಹಸನ್ಮುಖಿ. ಈ ಎಲ್ಲಾ ಸ್ತರಗಳಲ್ಲಿ ಸೇವೆಯನ್ನು ಹೆಗ್ಗಡೆಯವರು ಸಾಮಾಜಿಕ ಬದ್ಧತೆಯಿಂದ ಹಾಗೂ ಸ್ವಯಂ ಸ್ಫೂರ್ತಿಯಿಂದಲೇ ಮಾಡುತ್ತಾರೆ. ಸದಾ ಹೊಸತರೆಡೆಗೆ ತುಡಿತವಿರುವ ಡಾ ಹೆಗ್ಗಡೆಯವರು ಮಾಡಿದ ಕೆಲಸದಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ಛಲಗಾರ. ಮಾತನಾಡುವ ಮಂಜುನಾಥ ಇನ್ನು ಮುಂದೆ ರಾಜ್ಯಸಭೆಯಲ್ಲಿ ಮಾತನಾಡಲಿದ್ದಾರೆ. ಅವರ ಸೇವೆಯ ವ್ಯಾಪ್ತಿಯು ಇಡೀ ದೇಶಕ್ಕೇ ವಿಸ್ತರಿಸಿಕೊಳ್ಳಲಿದೆ. ಸಮಾಜ ಸೇವೆ, ಗ್ರಾಮೀಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಅವರು ಗಳಿಸಿರುವ ಅನುಭವವು ರಾಷ್ಟ್ರಕ್ಕೆ ಮಾರ್ಗದರ್ಶಿಯಾಗಲಿದೆ.

✍️ಗಣೇಶ್ ಭಟ್ ವಾರಣಾಸಿ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top