ಮೊಗಲರ ಅತ್ಯಾಚಾರಗಳಿಂದ ನಲುಗಿದ್ದ ಭಾರತದ ಹಿಂದೂಗಳನ್ನು ರಕ್ಷಿಸಲು ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದ ಚಕ್ರವರ್ತಿ ಶಿವಾಜಿ ಮಹಾರಾಜರ ಸಾಹಸವನ್ನು ನಾವೆಲ್ಲರೂ ಬಲ್ಲೆವು. ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಎಂಬುದು ಹಾಡೊಂದರ ಸಾಲು, ಈ ಸಾಲಿನಂತೆಯೇ ಹಿಂದವೀ ಸಾಮ್ರಾಜ್ಯ ಸ್ಥಾಪನೆಯ ಪಣವನ್ನು ತೊಟ್ಟಿದ್ದ ಶಿವಾಜಿ ಮಾಹಾರಾಜರ ಜೀವನವನ್ನು ರಕ್ಷಿಸಲು ತನ್ನ ಜೀವನವನ್ನೇ ಬಲಿಕೊಟ್ಟ ಹಲವು ವೀರರು ಮಹಾರಾಜರ ಸೈನ್ಯದಲ್ಲಿದ್ದರು. ಶಿವಾಜಿ ಮಹಾರಾಜರು ಹೇಗೆ ಅಪ್ರತಿಮ ಯೋಧರೊ ಅವರ ಸೈನ್ಯದಲ್ಲೂ ಅನೇಕ ಅಪ್ರತಿಮ ಯೋಧರಿದ್ದರು. ತಮ್ಮ ಕುಟುಂಬವನ್ನೂ ತೊರೆದು ಬಂದು ಅವರುಗಳು ಮಹಾರಾಜರ ಸೇವೆಯಲ್ಲಿ ನಿರತರಾಗಿದ್ದರು. ಹೀಗೆ ಮಹಾರಾಜರ ಪ್ರಾಣವನ್ನು ರಕ್ಷಿಸುವ ಸಲುವಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಮರಾಠ ಯೋಧರಿಬ್ಬರ ಸಾಹಸ ಮತ್ತು ಬಲಿದಾನದ ಕಥೆಯಿದು. ಬಾಜಿ ಎಂಬ ಹೆಸರನ್ನು ಓದುವಷ್ಟರಲ್ಲಿ ನಮ್ಮ ಮನಸ್ಸಲ್ಲಿ ಸೋಲನ್ನರಿಯದ ಸರದಾರನಾದ ಪೇಶ್ವಾ ಬಾಜಿರಾವ್ ಅವರು ಕಾಣಿಸಿಕೊಳ್ಳುತ್ತಾರೆ. ಆದರೆ ಈ ಕಥೆಯ ನಾಯಕ ಪೇಶ್ವಾ ಬಾಜಿರಾವ್ ಅಲ್ಲ, ಬದಲಾಗಿ ಬಾಜಿ ಪ್ರಭು ದೇಶಪಾಂಡೆ ಎನ್ನುವ ವೀರ ಸೈನಿಕ.
ದೇಶವನ್ನು ಮೊಘಲರ ಉಪಟಳದಿಂದ ಸ್ವತಂತ್ರಗೊಳಿಸುವ ಉದ್ದೇಶವನ್ನು ಹೊಂದಿದ್ದ ಮತ್ತು ಸ್ವದೇಶ ಮತ್ತು ಜನರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಬಾಜಿ ಪ್ರಭು ದೇಶಪಾಂಡೆಯ ಬಗ್ಗೆ ಶಿವಾಜಿ ಮಹಾರಾಜರು ಉತ್ತಮವಾದ ಅಭಿಪ್ರಾಯವನ್ನು ಹೊಂದಿದ್ದರು. ಮಾತೃಭೂಮಿಯ ಮೇಲಿನ ಬಾಜಿ ಪ್ರಭುವಿನ ಉತ್ಕಟವಾದ ಅಭಿಮಾನವನ್ನು ಗಮನಿಸಿದ ಶಿವಾಜಿ ಮಹಾರಾಜರು ಕೊಲ್ಹಾಪುರದ ಸುತ್ತುಮುತ್ತಲ ಪ್ರದೇಶದ ಸೈನ್ಯಕ್ಕೆ ಬಾಜಿ ಪ್ರಭುಗಳನ್ನು ಅಧಿಕಾರಿಯನ್ನಾಗಿ ನೇಮಿಸಿದ್ದರು. ಹೇಗಾದರೂ ಸರಿ ಶಿವಾಜಿಮಹಾರಾಜರನ್ನು ಕೊಲ್ಲಬೇಕೆಂಬ ಉದ್ದೇಶದಿಂದ ಆದಿಲಶಾಹ್ ಆಫ್ಜಲ್ ಖಾನನನ್ನು ಕಳುಹಿಸಿದಾಗ ,ರಾಜನ ಬೆಂಗಾವಲಿಗೆ ಬಂದ ಬೆರಳೆಣಿಕೆಯ ಯೋಧರಲ್ಲಿ ಬಾಜಿ ಪ್ರಭು ದೇಶಪಾಂಡೆಗಳೂ ಒಬ್ಬರಾಗಿದ್ದರು.ಆಫ್ಜಲ್ ಖಾನ್ ನನ್ನ ಹತ್ಯೆಗೈದ ಬಳಿಕ ಮೊಗಲರೊಂದಿಗೆ ಹಲವಾರು ಯುದ್ಧಗಳು ನಡೆದವು.ಈ ಸಮಯದಲ್ಲಿ ಶಿವಾಜಿ ಮಹಾರಾಜರು ಪನ್ಹಾಲಾ ಕೋಟೆಯಲ್ಲಿ ನೆಲೆಸಿದ್ದರು.ಇದನ್ನು ಅರಿತ ಆದಿಲಶಾಹ್ ತನ್ನ ಸೈನ್ಯವನ್ನು ಬಳಸಿಕೊಂಡು ಪನ್ಹಾಕ ಕೋಟೆಯ ಸುತ್ತಲೂ ಮುತ್ತಿಗೆಯನ್ನು ಹಾಕಿದರು. ಹಲವಾರು ತಿಂಗಳುಗಳ ಕಾಲ ಈ ಯುದ್ಧವು ಮುಂದುವರೆಯಿತು. ಈ ಮೂಲಕ ಮುಘಲರು ಕೋಟೆಯ ಒಳಗಿರುವವರಿಗೆ ಹೊರಗಿನಿಂದ ಯಾವುದೇ ಸಾಮಗ್ರಿಯು ಸರಬರಾಜಾಗದಂತೆ ನೋಡಿಕೊಂಡರು.ಈ ಮೂಲಕ ಒತ್ತಡವನ್ನು ಸೃಷ್ಟಿಸಿ ಶಿವಾಜಿ ಕೋಟೆಯಿಂದ ಸ್ವತಃ ಹೊರಬರುವಂತೆ ಮಾಡುವ ತಂತ್ರವನ್ನು ಮೊಘಲರು ಹೆಣೆದಿದ್ದರು.
ಮುತ್ತಿಗೆ ಹಾಕಿದ್ದ ಸೈನ್ಯವನ್ನು ಚದುರಿಸುವ ಎಲ್ಲಾ ಪ್ರಯತ್ನಗಳನ್ನೂ ಮರಾಠರು ನಡೆಸುತ್ತಿದ್ದರು. ಶಿವಾಜಿ ಮಹಾರಾಜರ ಸೇನಾಪತಿ ನೇತಾಜಿ ಪಾಲ್ಕರ್ ಸಹ ಹೊರಗಿನಿಂದ ಮುತ್ತಿಗೆಯನ್ನು ಬೇಧಿಸಲು ವಿಫಲರಾದರು.ಈ ತಂತ್ರವನ್ನು ಬೇಧಿಸಲು ಶಿವಾಜಿ ಮಹಾರಾಜರು ಪ್ರತಿತಂತ್ರವೊಂದನ್ನು ರಚಿಸಿದರು. ಅದರಂತೆ ತಮ್ಮ ಮಂತ್ರಿಯೊಬ್ಬರನ್ನು ಮೊಘಲರ ಸೇನಾಧಿಪತಿಯಾದ ಸಿದ್ದಿ ಜಾಉಹಾರ್ ನ ಬಳಿ ಕಳುಹಿಸಿ ಅವರೊಂದಿಗೆ ತಾವು ಒಪ್ಪಂದಕ್ಕೆ ಸಿದ್ಧರಾಗಿರುವುದಾಗಿ ಸಂದೇಶವನ್ನು ಕಳುಹಿಸಿದರು.ಇದರಿಂದ ಸಂತೋಷಗೊಂಡ ಮೊಘಲರ ಸೈನ್ಯವು ಸಣ್ಣದಾದ ವಿಶ್ರಾಂತಿಯನ್ನು ಪಡೆಯಲು ಸಿದ್ದರಾದರು.ಹೀಗೆ ನಡೆಯುತ್ತಿದ್ದಾಗ ಬಿರುಗಾಳಿ ಬೀಸುತ್ತಿದ್ದ ಹುಣ್ಣಿಮೆ ರಾತ್ರಿಯಲ್ಲಿ ಯೋಜನೆಯ ಪ್ರಕಾರ ಅವರು ಸೈನ್ಯವನ್ನು ಎರಡಾಗಿ ವಿಭಾಗಿಸಿದರು ಶಿವಾಜಿ ಮಹಾರಾಜರ ನೇತೃತ್ವದಲ್ಲಿ ಬಾಜಿ ಪ್ರಭು ಮತ್ತಿತರ ೬೦೦ ಸೇನಾನಿಗಳಿದ್ದರೆ ಮತ್ತೊಂದು ವಿಭಾಗದಲ್ಲಿ ಶಿವ ನ್ಹವಿ ಎಂಬ ಸೈನಿಕ ಮತ್ತು ಕೆಲ ಯೋಧರಿದ್ದರು. ರೂಪ, ಎತ್ತರಗಳಲ್ಲಿ ಶಿವನು ಶಿವಾಜಿ ಮಾಹಾರಾಜರನ್ನು ಹೋಲುತ್ತಿದ್ದನು. ಶಿವಾಜಿ ಮಹಾರಾಜರು ತಪ್ಪಿಸಿ ಪರಾರಿಯಾಗುತ್ತಾರೆಂಬ ಸುದ್ದಿಯು ಮೊಘಲರ ಕಿವಿಯನ್ನು ತಲುಪಿದಾಗ ಅವರು ಶಿವ ನ್ಹವಿಯನ್ನು ಶಿವಾಜಿ ಮಹಾರಾಜರೆಂದು ಭಾವಿಸಿ ಸೆರೆಹಿಡಿದರು, ಬಳಿಕ ಅಸಲೀಯತ್ತಿನ ಅರಿವಾಗಿ ತಾವು ಸೆರೆಹಿಡಿದದ್ದು ನಕಲಿ ಶಿವಾಜಿಯನ್ನು ಎಂದು ತಿಳಿದಾಗ ಮೋಸ ಹೋದ ಮೊಘಲರು ಕೋಪದಿಂದ ಕೆಂಡವಾದರು.
ಆದರೆ ಆ ಸಮಯವನ್ನು ಉಪಯೋಗಿಸಿಕೊಂಡ ಶಿವಾಜಿಯು ತನ್ನ 600 ಸೈನಿಕರೊಂದಿಗೆ ಪಲಾಯನವನ್ನು ಮಾಡಿದ್ದರು. ಕೋಪಗೊಂಡಿದ್ದ ಮೊಘಲ ಸೈನಿಕರು ಶಿವಾಜಿಯನ್ನು ಬೆನ್ನಟ್ಟಲು ಪ್ರಾರಂಭಿಸಿದರು. ಭೀಕರವಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ಹಲವಾರು ಮೈಲಿಯನ್ನು ಸಾಗಿದ್ದ ಮರಾಠ ಸೈನ್ಯವು ಘೋಡ್ ಕುಂಡ್ ಪಾಸ್ ನ ಬಳಿ ಕುದುರೆಗಳ ವಿಶ್ರಾಂತಿಗಾಗಿ ನಿಲ್ಲಿಸಲಾಯಿತು.ಈ ಕೋಟೆಯಲ್ಲಿದ್ದ ಕಿರಿದಾದ ದ್ವಾರದಲ್ಲಿ ಒಂದು ಬಾರಿಗೆ ಕೇವಲ ಒಬ್ಬ ಮನುಷ್ಯ ಮಾತ್ರ ಸಾಗಬಹುದಾಗಿತ್ತು. ಎಷ್ಟು ಹೊತ್ತಿಗಾಗಲೇ ಜಿಹಾದಿಗಳ 4000 ಸಾಯಿನಿಕರ ಬೃಹತ್ ಸೈನ್ಯವು ಅವರನ್ನು ಬೆನ್ನಟ್ಟಿ ಬರುತ್ತಿತ್ತು. ಇಂತಹ ಸಮಯದಲ್ಲಿ ಬಾಜಿ ಪ್ರಭು 300 ಜನ ಸೈನಿಕರೊಂದಿಗೆ ಕಿರಿದಾದ ದ್ವಾರದ ಸಹಾಯದೊಂದಿಗೆ ಮೊಘಲರ ವಿರುದ್ಧ ಹೋರಾಡುವುದಾಗಿಯೂ ಶಿವಾಜಿ ಮಹಾರಾಜರು ಇನ್ನುಳಿದ 300 ಜನ ಸೈನಿಕರೊಂದಿಗೆ ವಿಶಾಲಘಡ್ ಕೋಟೆಯತ್ತ ಸುರಕ್ಷಿತವಾಗಿ ಮುಂದುವರೆಯಬೇಕೆಂದು ಆಗ್ರಹಿಸಿದರು. ಮಹಾರಾಜರು ತಮ್ಮ ಸೈನ್ಯದೊಂದಿಗೆ ಸುರಕ್ಷಿತವಾಗಿ ಗುರಿಯನ್ನು ತಲುಪಿದ ಸಂಕೇತವಾಗಿ 3 ಬಾರಿ ಫಿರಂಗಿಯನ್ನು ಹಾರಿಸಬೇಕೆಂದು ಕೇಳಿಕೊಳ್ಳುತ್ತಾರೆ. ಅದರಂತೆಯೇ ಶಿವಾಜಿ ಮಹಾರಾಜರು ಅರ್ಧ ಸೈನ್ಯದೊಂದಿಗೆ ಮುಂದುವರೆಯುತ್ತಾರೆ.
ಇತ್ತ ಘೋಡ್ ಕೊಂಡದಲ್ಲಿ ಭೀಕರವಾದ ಯುದ್ಧವು ನಡೆಯಿತು. ಕೇವಲ 300 ಸಂಖ್ಯೆಯಲ್ಲಿದ್ದ ಮರಾಠ ಸೈನಿಕರು ಜೈ ಶಿವಾಜಿ ಮತ್ತು ಹರಹರ ಮಹಾದೇವ್ ಘೋಷಣೆಯೊಂದಿಗೆ ಮೊಘಲರ ಮೇಲೆ ಮುಗಿಬೀಳುತ್ತಾರೆ. ಸಣ್ಣದಾದ ಸುರಂಗದ ಸಂಪೂರ್ಣ ಲಾಭವನ್ನು ಪಡೆದುಕೊಂಡ ಮರಾಠ ಸೈನಿಕರು ಪ್ರತಿಯೊಬ್ಬ ಸೈನಿಕನು ಕನಿಷ್ಠ 100 ಮೊಘಲರನ್ನು ತರಿದು ಹಾಕುತ್ತಾರೆ. ಅಪ್ರತಿಮ ವೀರನಾದ ಬಾಜಿ ಪ್ರಭು ಅತ್ಯಂತ ಭಾರೀಗಾತ್ರದ ಖಡ್ಗಗಳನ್ನು ಎರಡೂ ಕೈಗಳಲ್ಲಿ ತೆಗೆದುಕೊಂಡು ಸುರಂಗದ ದ್ವಾರದಲ್ಲಿಯೇ ನಿಂತು ಶತ್ರುಗಳಿಗೆ ದುಸ್ವಪ್ನನ್ನಾಗಿದ್ದನು.ಆದರೆ ಹಲವು ಬಾರಿ ಆತನ ಶರೀರವು ಈಟಿ ಮತ್ತು ಕತ್ತಿಯ ದಾಳಿಗೆ ಒಳಗಾಗಿ ಜರ್ಜರಿತವಾಗಿದ್ದರೂ ಸಹ ಆತನು ಹೋರಾಡುತ್ತಲೇ ಇದ್ದನು. ಕೋಟೆಯಿಂದ ಫಿರಂಗಿಯ ಶಬ್ದವು ಕೇಳಿಸುವ ವರೆಗೂ ತಾನು ಶಸ್ತ್ರವನ್ನು ತ್ಯಜಿಸುವುದಿಲ್ಲವೆಂದು ಆತನು ಧೃಢವಾದ ನಿಶ್ಚಯವನ್ನು ಮಾಡಿದ್ದನು.
ಶಿವಾಜಿ ಮಹಾರಾಜರು 300 ಸೈನಿಕರೊಂದಿಗೆ ವಿಶಾಲಘಡ್ ತಲುಪಿದಾಗ ಅಲ್ಲಿ ಸರ್ವೇ ಎಂಬ ಮೊಘಲ್ ಸರದಾರನು ಕೋಟೆಯನ್ನು ವಶಪಡಿಸಿಕೊಂಡಿರುವುದು ತಿಳಿಯುಬಂತು.ಆದರೆ ಶಿವಾಜಿ ಮಹಾರಾಜರುತನ್ನ 300 ಸೈನಿಕರ ಸಹಾಯದಿಂದ ಮೊಘಲ್ ಸರದಾರನನ್ನು ಸೋಲಿಸಿ ಕೋಟೆಯನ್ನು ವಶಪಡಿಸಿಕೊಂಡರು. ಬಹುತೇಕ ಮುಂಜಾವಿನ ಸಮಯವಾಗುವಷ್ಟರಲ್ಲಿ ವಿಶಾಲಘಡ್ ಕೋಟೆಯಿಂದ ೩ ಬಾರಿ ಫಿರಂಗಿ ಸಿಡಿದ ಸದ್ದು ಕೇಳಿಸಿತು. ಆದರೆ ಅಷ್ಟರಲ್ಲಾಗಲೇ ಬಾಜಿ ಪ್ರಭುವು ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಇನ್ನೊಂದು ಹರಹರ ಮಹಾದೇವ್ ಘೋಷಣೆಯೊಂದಿಗೆ ಮರಾಠ ಸೈನಿಕರು ಗಾಯಗೊಂಡ ತಮ್ಮ ನಾಯಕನೊಂದಿಗೆ ಸುರಂಗ ಮಾರ್ಗವನ್ನು ತೆರವುಗೊಳಿಸಿದರು. ಆದರೆ ಮಹಾರಾಜರು ಸುರಕ್ಷಿತವಾಗಿ ಗಮ್ಯವನ್ನು ತಲುಪಿದ ಸುದ್ದಿಯನ್ನು ಅರಿತ ಬಾಜಿ ಪ್ರಭು ಮಂದಹಾಸದೊಂದಿಗೆ ಕೊನೆಯುಸಿರನ್ನು ಎಳೆಯುತ್ತಾರೆ. ಬಾಜಿ ಪ್ರಭುಗಳ ಗೌರವಾರ್ಥವಾಗಿ ಶಿವಾಜಿ ಮಹಾರಾಜರು ಘೋಡ್ ಕುಂಡ್ ಅನ್ನು ಪವನ್ ಕುಂಡ್ ಎಂಬುದಾಗಿ ಮರುನಾಮಕರಣವನ್ನು ಮಾಡುತ್ತಾರೆ. ಅಂದರೆ ಮಹಾನ್ ಮರಾಠ ಹಿಂದೂ ಹುತಾತ್ಮರ ರಕ್ತದಿಂದ ಈ ಸ್ಥಳವು ಪಾವನ ವಾಗಿದೆ ಎಂದು ಅರ್ಥ. ಮುಂದೆ ಶಿವಾಜಿ ಮಹಾರಾಜರು ಬಾಜಿ ಪ್ರಭುಗಳ ಮಕ್ಕಳನ್ನು ತಂದೆಯ ಸ್ಥಾನದಲ್ಲಿ ನಿಂತು ಬೆಳೆಸುತ್ತಾರೆ.
ಹಿಂದೂ ರಾಷ್ಟ್ರದ ಇತಿಹಾಸದಲ್ಲಿ ರಕ್ತಸಿಕ್ತವಾದ ಅಧ್ಯಾಯವಾದ ಈ ಯುದ್ಧದಲ್ಲಿ ಶಿವಾಜಿ ಮಹಾರಾಜರ ಪ್ರಾಣವನ್ನು ರಕ್ಷಿಸುದಕ್ಕಾಗಿ ಶಿವ ಮತ್ತು ಬಾಜಿ ಪ್ರಭುಗಳು ತಮ್ಮ ಪ್ರಾಣವನ್ನೇ ತ್ಯಾಗಮಾಡಿದ್ದರು. ನಮ್ಮೆಲ್ಲರ ಇಂದಿನ ನೆಮ್ಮದಿಗೆ ಅವರ ತ್ಯಾಗವೂ ಕಾರಣ ಎಂಬುದನ್ನು ನಾವು ಇಂದಿಗೂ ಮರೆಯಬಾರದು. ಮಹಾರಾಷ್ಟ್ರದ ಜಾನಪದ ಸಾಹಿತ್ಯದಲ್ಲಿ ಇಂದಿಗೂ ಇವರ ಸಾಹಸವನ್ನು ವರ್ಣಿಸುವ ಹಲವಾರು ಕಥೆ ಕವನಗಳಿವೆ. ಅವುಗಳ ಪ್ರಕಾರ ತಲೆಯನ್ನು ಕತ್ತರಿಸಲಾಗಿದ್ದರೂ ಬಾಜಿ ಪ್ರಭುಗಳ ಕೈಗಳು ಕತ್ತಿಯನ್ನು ಬೀಸಿ ಶತ್ರುಗಳನ್ನು ಸಂಹರಿಸುತ್ತಿದ್ದವು ಎಂದು ಬಾಜಿ ಪ್ರಭುಗಳ ಸಾಹಸವನ್ನು ವರ್ಣಿಸುತ್ತವೆ.
✍️ ದೀಪಶ್ರೀ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.