ದೇವನೂರ ಮಹಾದೇವ ಬಹಳ ಕಡಿಮೆ ಮಾತಾಡುವವರೆಂದು ಖ್ಯಾತರು. ಕಡಿಮೆ ಮಾತಾಡುವವರ ಬಗ್ಗೆ ಸಮಾಜದಲ್ಲಿ ಒಂದು ಸಹಜ ಕುತೂಹಲ, ಭಕ್ತಿ, ಆರಾಧನೆ ಇರುತ್ತದೆ. ಕಡಿಮೆ ಮಾತಾಡುವವರು ಅರ್ಥಪೂರ್ಣವಾಗಿಯೂ ಮಾತಾಡುತ್ತರೆಂಬುದು ಜನರ ಸಾಮಾನ್ಯ ಗ್ರಹಿಕೆ ಮತ್ತು ನಂಬಿಕೆ. ಹಾಗಾಗಿ ಮಹಾದೇವ ಮಾತಾಡುವುದಕ್ಕೆ ನಿಂತಾಗ, ಕರ್ನಾಟಕ ಒಮ್ಮೆ ಅವರ ಮಾತಿಗೆ ಕಿವಿಗೊಡಲಾದರೂ ಮೌನವಾಗುತ್ತದೆ. ಅವರ ಮಾತುಗಳನ್ನು ಆಸ್ಥೆಯಿಂದ ಕೇಳಿಕೊಳ್ಳುತ್ತದೆ.
ಅಂಥ ಎಲ್ಲ ನಂಬಿಕೆ, ಪ್ರೀತಿಗಳನ್ನು ಬುಡಮೇಲು ಮಾಡುವಂತೆ ಅವರ “ಆರ್.ಎಸ್.ಎಸ್. ಆಳ ಅಗಲ” ಪುಸ್ತಕ ಬಂದಿದೆ. ಚಿಕ್ಕ ಪುಟದಲ್ಲಿ ದಪ್ಪಕ್ಷರಗಳಲ್ಲಿ ಮುದ್ರಿಸಿರುವ, ಹೆಚ್ಚೆಂದರೆ ಯಾವುದೇ ಪತ್ರಿಕೆಯ ಒಂದು ದೀರ್ಘ ಲೇಖನವಷ್ಟೇ ಆಗಬಹುದಾದ ಈ ಬರಹವನ್ನು ಮಹಾದೇವರ ಗೆಳೆಯರು ಪುಸ್ತಕರೂಪದಲ್ಲಿ ಮುದ್ರಿಸಿ ಮುಖಬೆಲೆ 40 ರುಪಾಯಿ ಇಟ್ಟು, ಅಂಚೆವೆಚ್ಚ ಎಂದು ಮತ್ತೆ ಮೂವತ್ತೈದು ರುಪಾಯಿ ಸೇರಿಸಿ, ಒಟ್ಟು 70-80 ರುಪಾಯಿ ಪೀಕುತ್ತಿದ್ದಾರೆ. ಸಾಲದ್ದಕ್ಕೆ ಇದು ನ ಭೂತೋ ನ ಭವಿಷ್ಯತಿ ಎಂಬಂಥ ಪುಸ್ತಕ; ಇದರ ಪ್ರತಿಗಳು ಸಿಗುವುದೇ ಅನುಮಾನ; ಬೇಗ ಬೇಗ ಬೇಡಿಕೆ ಸಲ್ಲಿಸಿ ಎಂಬ ಭರಪೂರ ಪ್ರಚಾರವೂ ನಡೆಯುತ್ತಿದೆ. ಇರಲಿ, ಅವರ ಹೊಟ್ಟೆಪಾಡು ಎನ್ನೋಣ. ಆದರೆ ಈ ಪುಸ್ತಕದಲ್ಲಿ ಮಹಾದೇವರು ಅಂಥ ಯಾವ ಬ್ರಹ್ಮರಹಸ್ಯವನ್ನು ಹೇಳಿದ್ದಾರೆಂದು ನೋಡಿದರೆ ಏನೇನೂ ಇಲ್ಲ! ಆನೆ ಅಪಾನವಾಯುವನ್ನು ಬಿಡುವಾಗ ಬಾಂಬಿನಂಥ ಸದ್ದಾಗುತ್ತದೆಂದು ನಂಬಿಸಿ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದಂತೆ, ಈ ಪುಸ್ತಕದ ಪ್ರಚಾರ ನಡೆಸಿ ಒಂದಷ್ಟು ದುಡ್ಡುಮಾಡಿಕೊಳ್ಳುವುದನ್ನು ಬಿಟ್ಟರೆ, ಓದಿದವರಿಗೆ ನಿರಾಶೆಯಂತೂ ಕಟ್ಟಿಟ್ಟ ಬುತ್ತಿ ಎನ್ನಬಹುದು.
ಬಾವಿಯ ಕಪ್ಪೆ ತನ್ನ ಬಾವಿಯನ್ನೇ ಸಮುದ್ರ ಎಂದುಕೊಂಡಂತಿದೆ ದೇವನೂರರ ಪುಸ್ತಕ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡವರು ಆನೆಯನ್ನು ಮುಟ್ಟಿ ಅದನ್ನು ಹಗ್ಗ, ಕಂಬ, ಗೋಡೆ ಎಂದಂತೆ ದೇವನೂರರು ಆರೆಸ್ಸೆಸ್ಸನ್ನು ಹಿಡಿಯಲು ಹೊರಟಿದ್ದಾರೆಂದರೆ ಅತಿಶಯೋಕ್ತಿಯಲ್ಲ. ಆರೆಸ್ಸೆಸ್ ಬಗ್ಗೆ ಅವರ ಗ್ರಹಿಕೆಗಳನ್ನು ಓದಿದರೆ ಮಕ್ಕಳಿಗೂ ನಗು ಬಂದೀತು. ಸುಮಾರು 60-70 ವರ್ಷಗಳ ಹಿಂದೆ ಬುದ್ಧಿಜೀವಿಗಳೆನಿಸಿಕೊಂಡವರು ಹೇಳುತ್ತಿದ್ದ ಸವಕಲು ಮಾತುಗಳನ್ನೇ ಪರಮಜ್ಞಾನವೆಂಬ ಪೋಸು ಕೊಡುತ್ತ ದೇವನೂರ ಬರೆದಿದ್ದಾರೆ. ಇಂಥ ಕಳಪೆ ಪುಸ್ತಕವನ್ನು ವರ್ಷದ ಅತಿ ಶ್ರೇಷ್ಠ ಕೃತಿಯೆಂಬಂತೆ ನಂಬಿಸಿ, ಬಿಂಬಿಸಿ ಜನರಿಗೆ ಮಂಕುಬೂದಿ ಎರಚುವುದಕ್ಕೂ ಅದ್ಭುತವಾದ ಭಂಡ ಧೈರ್ಯವಿರಬೇಕು! ಅವರ ಬರವಣಿಗೆಯ ಒಂದು ಸ್ಯಾಂಪಲ್ ನೋಡಿ: “ಇಷ್ಟೆಲ್ಲಾ ನಡೆಯುತ್ತಿದೆ. ಶಿಕ್ಷಣವನ್ನೆ ಖಾಸಗಿಗೊಳಿಸುತ್ತಾ ಸಾರ್ವಜನಿಕ ಶಿಕ್ಷಣವನ್ನೆ ಕ್ಷೀಣ ಮಾಡುತ್ತಿದ್ದಾರೆ. ಇದರಿಂದ ಇಡೀ ಹಳ್ಳಿಗಾಡು ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣ ಕಣ್ಮರೆಯಾಗುತ್ತಿದೆ. ಹೀಗೆಲ್ಲಾ ನಡೆಯುತ್ತಿದೆ. ಗೊತ್ತಿರುವುದು ಇಷ್ಟು, ಗೊತ್ತಿಲ್ಲದಿರುವುದು ಇನ್ನೆಷ್ಟೊ ಎಂಬಂತಹ ವಾತಾವರಣವಿದೆ. ಏನು ಮಾಡಬೇಕು? ಹೇಗೆ ಮಾಡಬೇಕು? ಇದಕ್ಕೆ ಹೀಗೆ ಎಂದು ಹೇಳಬಹುದಾದ ಉತ್ತರಗಳಿವೆಯೆ? ಊರಿಗೆ ಕಳ್ಳರು ನುಗ್ಗಿದ್ದಾರೆ, ಏನು ಮಾಡಬೇಕು? ಹೇಗೆ ತಡೆಯಬೇಕು? ರಾತ್ರಿ ಯುವಕರು ಮೊಹಲ್ಲ ಮೊಹಲ್ಲಗಳಲ್ಲಿ ಸರದಿ ಕಾವಲು ಕಾಯುತ್ತಾರೆ. ಮಹಿಳೆಯರು ಖಾರದ ಪುಡಿಯನ್ನು ಜೊತೆಯಲ್ಲಿಟ್ಟುಕೊಂಡಿರುತ್ತಾರೆ. ಈಗ ಈ ಎಚ್ಚರವೇ ಮೊದಲು ನಮಗೆಲ್ಲಾ ಬೇಕಾಗಿರುವುದು. ಯಾಕೆಂದರೆ ಕಳ್ಳರು ನಾನಾ ವೇಷದಲ್ಲಿ ಬರಬಹುದು. ದೇವಸ್ಥಾನ, ಗುಡಿ ಜೀರ್ಣೋದ್ಧಾರ ಅಂತ ಬರಬಹುದು. ಸುಳ್ಳು ಸುದ್ದಿ ಹಬ್ಬಿಸಬಹುದು. ಭಜನೆ ಮಾಡಿಸಬಹುದು”
– ಇದು, ನಂಬಿದರೆ ನಂಬಿ, ಮಹಾದೇವರ ಪುಸ್ತಿಕೆಯ ಒಂದು ಪುಟ. ಇರುವ ಅರವತ್ತೆಪ್ಪತ್ತು ಪುಟಗಳೆಲ್ಲವೂ ಹೀಗೆಯೇ ಇವೆ ಎಂದರೆ ಅಚ್ಚರಿಯಾಗಬಹುದು. ಈ ಪುಸ್ತಕಕ್ಕೆ ಒಂದು ಏಕಸೂತ್ರ ಎಂಬುದಿಲ್ಲ. ವಿಷಯಗಳ ಪ್ರಸ್ತುತಿಗೆ ಕ್ರಮಬದ್ಧತೆಯೆಂಬುದಿಲ್ಲ. ಹೇಳಿರುವ ಯಾವ ವಿಷಯಗಳಿಗೂ ಅಂಕಿ-ಅಂಶಗಳ ಬೆಂಬಲವಿಲ್ಲ. ಒಂದು ವಾಕ್ಯಕ್ಕೂ ಅದರ ಮುಂದಿನ ವಾಕ್ಯಕ್ಕೂ ಅಂತರ್ಸಂಬಂಧವಿಲ್ಲ. ಒಟ್ಟಾರೆಯಾಗಿ ಇಡೀ ಹೊತ್ತಗೆ ಸಂಜೆಹೊತ್ತಿಗೆ ಕಲಬೆರಕೆ ಕುಡಿದ ಆಸಾಮಿಯೊಬ್ಬ ಅರಳಿಕಟ್ಟೆಯಲ್ಲಿ ಉರುಳಾಡುತ್ತ ಹುಚ್ಚು ಮತ್ತು ಮತ್ತಿನಿಂದ ಬಡಬಡಿಸಿದ ಹಳಹಳಿಕೆಯಂತೆ ಕಾಣುತ್ತದೆ. ಇದನ್ನು ಪ್ರಾಜ್ಞ, ವಿದ್ವಾಂಸ, ಸಾಕ್ಷಿಪ್ರಜ್ಞೆ, ಬುದ್ಧಿಜೀವಿ ಎಂದೆಲ್ಲ ಕರೆಸಿಕೊಂಡಿರುವ ವ್ಯಕ್ತಿಯೊಬ್ಬರು ಬರೆದಿದ್ದಾರೆಂದರೆ ನಿಜಕ್ಕೂ ಸಂಕಟವಾಗುತ್ತದೆ, ಕರುಳು ಕಿವುಚುತ್ತದೆ. ಒಂದಾನೊಂದು ಕಾಲದ ಪ್ರಗತಿಪರ ಚಿಂತಕ ಇವರೇನಾ ಎಂದು ಯಾರಾದರೂ ಮೂಗಿನ ಮೇಲೆ ಬೆರಳಿಟ್ಟಾರು!
ಕೃತಿಯಲ್ಲಿ ಏನಿದೆ? : ಮೊದಲ ಹದಿನೈದು ಪುಟಗಳಲ್ಲಿ ಗೋಲ್ವಾಲ್ಕರ್ ನಿಂದನೆಯೇ ಮುಖ್ಯಭೂಮಿಕೆ. ಗೋಲ್ವಾಲ್ಕರರು ಯಾವ ಜನ್ಮದಲ್ಲಿ ದೇವನೂರರಿಗೆ ಮೋಸ ಮಾಡಿದ್ದರೋ ತಿಳಿಯುವುದಿಲ್ಲ! ಅವರ ಹೇಳಿಕೆಗಳನ್ನು ತಪ್ಪುತಪ್ಪಾಗಿ ಕೋಟ್ ಮಾಡಿ, ಅವರ ಭಾಷಣಗಳಲ್ಲಿ ಅಲ್ಲಿ ಇಲ್ಲಿ ಒಂದೊಂದು ವಾಕ್ಯವನ್ನು ಕಿತ್ತುತಂದು ಜೋಡಿಸಿ, ಒಟ್ಟಾರೆ ಅಪಾರ್ಥ ಸೃಷ್ಟಿಸಿ ಮಹಾದೇವ ವಿಕೃತ ಮಜಾ ತೆಗೆದುಕೊಂಡಿದ್ದಾರೆ. ಮುಂದಿನ 25-30 ಪುಟಗಳಲ್ಲಿರುವುದು ಮನುವಾದ, ಮನುಸ್ಮೃತಿ, ಪುರೋಹಿತಶಾಹಿ, ಚಾತುರ್ವರ್ಣ್ಯ, ಆರ್ಯಸಿದ್ಧಾಂತ! ಪ್ರಜಾವಾಣಿ ಅಥವಾ ಹೊಸತುನಂಥ ಪತ್ರಿಕೆಗಳ ಯಾವುದೇ ಎರಡು-ಮೂರು ಪುಟಗಳನ್ನು ತೆರೆದರೂ ಕಾಣಸಿಗುವ ವಿಚಾರಗಳನ್ನೇ ಇಲ್ಲಿ 70 ಪುಟಗಳಲ್ಲಿ ವಿಸ್ತರಿಸಿ, ಎಂಬತ್ತು ರುಪಾಯಿಗೆ ಮಾರಲಾಗುತ್ತಿದೆ! ಪುಟ ಪುಟಗಳಲ್ಲಿ ಕಾಣಿಸುವುದು ಅರ್ಧಸತ್ಯ, ಅಪ್ಪಟ ಸುಳ್ಳು, ಅತಿರಂಜಿತ ಸುಳ್ಳು/ಸತ್ಯಗಳಷ್ಟೇ. ಕೆಲವು ಉದಾಹರಣೆಗಳನ್ನು ನೋಡಿ:
(1) ಮನುಸ್ಮೃತಿಯ ಬಗ್ಗೆ ಗೋಲ್ವಾಲ್ಕರ್ ಮತ್ತು ಸಾವರ್ಕರ್ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ ಎಂದು ದೇವನೂರು ಬರೆದಿದ್ದಾರೆ. ಹೌದು, ಅವರು ಮನುಸ್ಮೃತಿಯನ್ನು ಮೆಚ್ಚಿ ಮಾತಾಡಿದ್ದಾರೆ. ಅದರಲ್ಲಿ ಸಮಸ್ಯೆ ಏನಿದೆ? ಎಲ್ಲಿದೆ? ಮೊದಲನೆಯದಾಗಿ ಮನುಸ್ಮೃತಿಯನ್ನು ಕೈಯಲ್ಲಿಟ್ಟುಕೊಂಡು ಈ ದೇಶದಲ್ಲಿ ಯಾವ ಕಾಲಕ್ಕೂ ಯಾರೂ ರಾಜ್ಯಭಾರ ಮಾಡಲಿಲ್ಲ; ನೀತಿ ಹೇಳಿಲಿಲ್ಲ. ಮನುಸ್ಮೃತಿಯೆಂಬುದು ಸಮಾಜದ ಒಟ್ಟಾರೆ ನಡವಳಿಕೆ, ರೀತಿರಿವಾಜುಗಳು ಹೇಗಿರಬೇಕೆಂಬುದನ್ನು ನಿರ್ದೇಶಿಸುವ ಸಂಹಿತೆಯೇ ಹೊರತು ಇಂಡಿಯನ್ ಪೀನಲ್ ಕೋಡ್ ಅಲ್ಲ. ಅಲ್ಲಿ, ಹೆಣ್ಣನ್ನು ಗೌರವದಿಂದ ಕಂಡ ನೂರಾರು ಶ್ಲೋಕಗಳು ಸಿಗುತ್ತವೆ; ಚಾತುರ್ವರ್ಣ್ಯದ ಪ್ರಸ್ತಾಪವಿರುವ ಶ್ಲೋಕಗಳ ಹಿಂದುಮುಂದಿನ ಐದಾರು ಶ್ಲೋಕಗಳನ್ನು ಓದಿಕೊಂಡರೆ, “ಮನುಷ್ಯನಿಗೆ ಹುಟ್ಟಿನಿಂದ ಬರುವ (ಜೆನೆಟಿಕ್) ಪ್ರಕೃತಿ ಹಾಗೂ ಅವನದ್ದೇ ಆದ ಸ್ವಯಂ ಪ್ರವೃತ್ತಿ ಎಂಬ ಎರಡು ಸಂಗತಿಗಳಿವೆ” – ಎಂಬುದನ್ನು ಮನು ಹೇಳುತ್ತಿದ್ದಾನೆಂಬುದು ಸ್ಪಷ್ಟವಾಗುತ್ತದೆ. ಪ್ರಕೃತಿಯನ್ನು ಜಾತಿ ಎಂದೂ ಪ್ರವೃತ್ತಿಯನ್ನು ವರ್ಣ ಎಂದೂ ಮನು ಹೇಳುತ್ತಿರುವುದು ಕೂಡ ಸ್ಪಷ್ಟವಾಗುತ್ತದೆ. ಆದರೆ ಮಹಾದೇವರಿಗೆ ಮನುಸ್ಮೃತಿಯನ್ನು ಪೂರ್ತಿಯಾಗಿ ಓದುವ ವ್ಯವಧಾನವಾಗಲೀ ಜ್ಞಾನವಾಗಲೀ ಇಲ್ಲವೆಂದು ಕಾಣುತ್ತದೆ. ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ಎಂಬ ಶ್ಲೋಕಪಾದವನ್ನಷ್ಟೇ ಹಿಡಿದು ಈ ಎಲ್ಲ ಪ್ರಗತಿಪರರು ನೇತಾಡಿಕೊಂಡಿರುವುದನ್ನು ನೋಡಿದರೆ ಇವರ ಬಗ್ಗೆ ಮರುಕ ಹುಟ್ಟುತ್ತದೆ.
(2) ಗೋಲ್ವಾಲ್ಕರರನ್ನು “ಅಂಬೇಡ್ಕರ್ ವಿರೋಧಿ” ಎಂದು ಬಿಂಬಿಸಲು ಮಹಾದೇವ ಸಾಕಷ್ಟು ಸರ್ಕಸ್ ಮಾಡಿದ್ದಾರೆ. “ನಮ್ಮ ಸಂವಿಧಾನ ಕೆಲವು ಪಾಶ್ಚಾತ್ಯ ರಾಷ್ಟ್ರಗಳ ಕೆಲವು ವಿಧಿಗಳನ್ನು ತೆಗೆದು ಸಾಮರಸ್ಯವಿಲ್ಲದೆ ಒಟ್ಟಿಗೆ ತೊಡಕು ತೊಡಕಾಗಿ ತೇಪೆ ಹಾಕಿದ್ದು” – ಎಂದು ಗೋಲ್ವಾಲ್ಕರ್ ತಮ್ಮ ʼಚಿಂತನಗಂಗಾʼ ಕೃತಿಯಲ್ಲಿ ಹೇಳಿದ್ದಾರೆಂದು ಮಹಾದೇವರ ಆರೋಪ. ಆದರೆ ಆ ಕೃತಿಯಲ್ಲಿ (ಮೂಲ: Bunch of Thoughts) ಗೋಲ್ವಾಲ್ಕರರು ಸುಮಾರು 35 ಕಡೆ ಸಂವಿಧಾನದ ಪ್ರಸ್ತಾಪ ಮಾಡಿದ್ದಾರೆ. ಯಾವೊಂದು ಕಡೆಯಲ್ಲೂ ಸಂವಿಧಾನವನ್ನು ವಿರೋಧಿಸುವ ಮಾತುಗಳು ನಮಗೆ ಕಾಣಿಸಲಾರವು. ಗೋಲ್ವಾಲ್ಕರರು ಹೇಳಿದರೆಂದು ಮಹಾದೇವ ಉಲ್ಲೇಖಿಸುವ ಸೆಲೆಕ್ಟೆಡ್ ವಾಕ್ಯಗಳ ಅಪೂರ್ಣತೆಗೂ, ಅವುಗಳ ಆಚೀಚಿನ ವಾಕ್ಯಗಳನ್ನೂ ಸೇರಿಸಿಕೊಂಡು ಓದಿದಾಗ ಸಿಗುವ ಪೂರ್ಣತೆಗೂ ಇರುವ ವ್ಯತ್ಯಾಸವನ್ನು ನಾವು ಗಮನಿಸಬೇಕು. ಗೋಲ್ವಾಲ್ಕರ್ ಸಂವಿಧಾನವನ್ನು ತೆರೆದ ಮನಸ್ಸಿನಿಂದ ವಿಮರ್ಶಿಸಿದ್ದಾರೆಂಬುದಕ್ಕೆ ಅವರ ಈ ಮುಂದಿನ ಸ್ಪಷ್ಟ ನುಡಿಗಳೇ ಸಾಕ್ಷಿ ಹೇಳುತ್ತವೆ: Our Constitution is just a cumbersome and heterogeneous piecing together of various articles from various Constitutions of Western countries. It has absolutely nothing, which can be called our own. Is there a single word of reference in its guiding principles as to what our national mission is and what our keynote in life is? No! Some lame principles from the United Nations Charter or from the Charter of the now defunct League of Nations and some features from the American and British Constitutions have been just brought together in a mere hotchpotch. Theodore Shay in his The Legacy of the Lokamanya says, “Strangely absent from the Preamble is reference to concepts like Swaraj, Dharmarajya and the integration of the purpose of the state with the purpose of life. In other words, there is no reflection of Indian precepts or political philosophy in the Indian Constitution.” ಇದನ್ನು ಗೋಲ್ವಾಲ್ಕರರೇನೂ ಕದ್ದುಮುಚ್ಚಿ ಹೇಳಿಲ್ಲ. ಹೇಳಿದ್ದನ್ನು ತಮ್ಮ ಕೃತಿಯಲ್ಲಿ ಸ್ಪಷ್ಟವಾಗಿಯೇ ಮುದ್ರಿಸಿಕೊಂಡಿದ್ದಾರೆ. ಈ ಮಾತುಗಳನ್ನು ವಿರೋಧಿಸಲು ಮಹಾದೇವರಿಗಿರುವ ಅತ್ಯಂತ ಗೌರವಯುತ ಮಾರ್ಗವೆಂದರೆ ಗೋಲ್ವಾಲ್ಕರರು ಕೇಳಿರುವ ಭಾರತೀಯ ಮೌಲ್ಯಗಳನ್ನು ಸಂವಿಧಾನದಲ್ಲಿ ತೋರಿಸುವುದೇ ಆಗಿದೆ. ಅದನ್ನು ಬಿಟ್ಟು ಗೋಲ್ವಾಲ್ಕರರನ್ನು ಯದ್ವಾತದ್ವಾ ಬಯ್ಯುವುದೇ ತಾನು ಸಂವಿಧಾನವನ್ನು ರಕ್ಷಿಸಿಕೊಳ್ಳುವ ವಿಧಾನ ಎಂದು ದೇ. ಮಹಾದೇವ ಭಾವಿಸಿರುವುದು ಒದು ರೀತಿಯಲ್ಲಿ ಅವರು ಸಂವಿಧಾನ ಮತ್ತು ಡಾ. ಅಂಬೇಡ್ಕರರಿಗೆ ಮಾಡುತ್ತಿರುವ ಹೀನ ಅವಮಾನವೂ ಹೌದು. (ಮುಂದುವರಿಯುವುದು)
✍️ರೋಹಿತ್ ಚಕ್ರತೀರ್ಥ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.