ಇತ್ತೀಚೆಗಷ್ಟೇ ಇರಾನ್ ರಾಷ್ಟ್ರದ ಹಡಗು ಕಂಪೆನಿಯೊಂದು ರಷ್ಯಾದಿಂದ ಭಾರತಕ್ಕೆ ಆಮದಾಗುತ್ತಿದ್ದ ಮರದ ಉತ್ಪನ್ನಗಳನ್ನು ಹೊತ್ತ ಸರಕನ್ನು ತನ್ನ ಉತ್ತರದಲ್ಲಿರುವ ಕ್ಯಾಸ್ಪಿಯನ್ ಸಮುದ್ರದ ಅಸ್ಟ್ರಾಖಾನ್ ಬಂದರಿಗೆ ಬರಮಾಡಿಕೊಂಡಿತು. ಪ್ರಸ್ತುತ ಈ ಸರಕುಗಳು ಇರಾನಿನ ದಕ್ಷಿಣದಲ್ಲಿ ಭಾರತ ನವ ನಿರ್ಮಾಣಗೊಳಿಸಿರುವ ಚಬಹಾರ್ ಬಂದರಿಗೆ ರಸ್ತೆ ಮಾರ್ಗವಾಗಿ ತಲುಪಲಿವೆ. ಇದೊಂದು ಪ್ರಾಯೋಗಿಕ ಮತ್ತು ಮಹತ್ವದ ಹೆಜ್ಜೆಯಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಅಭಿವೃದ್ಧಿಯ ದಿಶೆಯಲ್ಲಿ ಭಾರತವು ಇರಾನಿನ ದಕ್ಷಿಣದಲ್ಲಿರುವ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸಿದ್ದು ಮುಂದಿನ ದಿನಗಳಲ್ಲಿ ಇದು ಏಷ್ಯಾ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಪ್ರಧಾನ ಭೂಮಿಕೆ ವಹಿಸಲಿದೆ. ಭಾರತಕ್ಕೆ ಸಾಕಷ್ಟು ಅನಿಲವನ್ನು ಪೂರೈಸುವ ಮತ್ತು ಎರಡನೇ ಅತಿದೊಡ್ಡ ಕಚ್ಚಾ ಪೆಟ್ರೋಲಿಯಂ ಪೂರೈಸುತ್ತಿರುವ ಇರಾನ್, ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುವಲ್ಲೂ ಪ್ರಧಾನ ಭೂಮಿಕೆ ವಹಿಸಲಿದೆ. ದ್ವಿರಾಷ್ಟ್ರ ಮತ್ತು ಭಾರತ-ಇರಾನ್- ರಷ್ಯಾ ಒಳಗೊಂಡ ತ್ರಿರಾಷ್ಟ್ರ ಒಪ್ಪಂದಗಳು ಮಧ್ಯ ಏಷ್ಯಾ ಜೊತೆಗಿನ ಸಂಬಂಧಗಳನ್ನು ಗಟ್ಟಿಗೊಳಿಸುವುದು ಮಾತ್ರವಲ್ಲದೆ ಯುರೋಪಿನಲ್ಲಿ ಚೀನಾದ ಪ್ರಭಾವವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡುವುದರಲ್ಲಿಯೂ ಸಂಶಯವಿಲ್ಲ.
ಇರಾನ್ ಮತ್ತು ಭಾರತೀಯ ವ್ಯಾಪಾರ ಸಂಬಂಧಗಳು ವರ್ತಮಾನದಲ್ಲಿ ಹೊಸ ಶಖೆಯತ್ತ ಹೆಜ್ಜೆಯಿಟ್ಟಿವೆ. ಚಬಹಾರ್ ಬಂದರು ನಿರ್ಮಾಣ, ಬಂದರಿಗೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ರಸ್ತೆಗಳ ನಿರ್ಮಾಣ, ಅಪಘಾನಿಸ್ಥಾನ, ತಜಕಿಸ್ಥಾನ ಸೇರಿದಂತೆ ಮಧ್ಯ ಏಷ್ಯಾಕ್ಕೆ ಸಂಪರ್ಕ ಕಲ್ಪಿಸುವ ಬೃಹತ್ ಯೋಜನೆಯ ಪೂರ್ಣತೆಯಲ್ಲಿಯೂ ಭಾರತ ಉತ್ಸುಕತೆ ತೋರಿದೆ. ಪ್ರಮುಖವಾಗಿ ಇರಾನಿನ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತಿಗೂ ಚಬಹಾರ್ ಬಂದರು ಯೋಜನೆ ಸಹಕಾರಿಯಾಗಲಿದೆ. ಈ ಮಧ್ಯೆ ಚೀನಾ ಪಾಕಿಸ್ಥಾನ ಸಹಯೋಗದಲ್ಲಿ ಪುನರ್ ನಿರ್ಮಾಣ ಹೊಂದುತ್ತಿದ್ದ ಗ್ವಾದರ್ ಪೋರ್ಟ್ ಯೋಜನೆಗೆ ಚಬಹಾರ್ ಯೋಜನೆ ಪರೋಕ್ಷವಾಗಿ ಸೆಡ್ಡು ಹೊಡೆದಿದೆ. ಕೊರೊನೋತ್ತರ ಚೀನಾದಲ್ಲಿ ಆರ್ಥಿಕ ಮುಗ್ಗಟ್ಟು ಆವರಿಸಿದ್ದರ ಪರಿಣಾಮ ಅಲ್ಲಿನ ಬೃಹತ್ ಅಂತಾರಾಷ್ಟ್ರೀಯ ಯೋಜನೆಗಳು ಕಳೆಗುಂದಿವೆ. ಪ್ರಾಚೀನ ರೇಶ್ಮೇ ಹಾದಿಯನ್ನು ಅನುಸರಿಸಿ ಆರಂಭಗೊಂಡಿದ್ದ ಬೃಹತ್ ಅಂತಾರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯವೂ ಸದ್ಯಕ್ಕೆ ಸ್ಥಗಿತಗೊಂಡಿದೆ. ರಷ್ಯಾ-ಉಕ್ರೇನ್ ಯುದ್ಧ, ಕೊರೊನಾ ಸಾಂಕ್ರಾಮಿಕ, ತೈವಾನ್ ಸಮಸ್ಯೆ, ಸೌತ್ ಚೈನಾ ವಿವಾದಗಳಿಂದ ಚೈನಾದ ಪಶ್ಚಿಮಾಭಿಮುಖ ಪಯಣ ಮತ್ತು ಆ ನಿಟ್ಟಿನ ವ್ಯಾಪಾರಿ ಲಕ್ಷ್ಯಕ್ಕೆ ತಕ್ಕ ಮಟ್ಟಿನ ಬ್ರೇಕ್ ಬಿದ್ದಿದೆ.
ಸಿಸ್ತಾನ್ ಮತ್ತು ಬಲೂಚಿಸ್ಥಾನ ಪ್ರದೇಶಗಳಲ್ಲಿರುವ ಚಬಹಾರ್ ಬಂದರು, ಭಾರತ ಕೈಗೆತ್ತಿಕೊಂಡ ಬೃಹತ್ ಯೋಜನೆಗಳಲ್ಲೊಂದು. ಚಬಹಾರ್ ಬಂದರು ಇರಾನಿನ ಆಗ್ನೇಯ ಭಾಗದಲ್ಲಿದ್ದು, ಒಮಾನ್ ಜಲಸಂಧಿಯ ಸಮೀಪವಿದೆ. 2018 ಡಿಸೆಂಬರ್ ತಿಂಗಳಲ್ಲಿ ಚಬಹಾರ್ ಬಂದರಿನ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಪ್ರೈವೇಟ್ ಲಿ. ಕಂಪೆನಿ ಬಂದರಿನ ನಿರ್ಮಾಣದಲ್ಲಿ ಪ್ರಧಾನ ಭೂಮಿಕೆ ವಹಿಸಿದೆ. ಇತ್ತೀಚೆಗೆ ಭಾರತದಿಂದ ಅಪಘಾನಿಸ್ಥಾನಕ್ಕೆ ನೀಡಲಾದ ಗೋಧಿ ಸರಕನ್ನು ಇದೇ ಬಂದರಿನ ಮೂಲಕ ಅಪಘಾನಿಸ್ಥಾನದ ಒಳನಾಡಿಗೆ ಕಳುಹಿಸಿ ಕೊಡಲಾಗಿತ್ತು. ಭಾರತವು ಚಬಹಾರಿನಿಂದ ಜಹೆದಾನ್ ಪ್ರಾಂತ್ಯಕ್ಕೆ ಸರಕು ಸಾಗಿಸುವ ರೈಲ್ವೇ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು ಕೂಡಾ ಕೈಗೆತ್ತಿಕೊಂಡಿತ್ತು! ಚೀನಾ ಸಹಾಯದಿಂದ ಪಾಕಿಸ್ಥಾನದಲ್ಲಿ ನಿರ್ಮಾಣವಾಗಿರುವ ಗ್ವಾದರ್ ಪೋರ್ಟ್ ಚಬಹಾರ್ ಬಂದರಿನಿಂದ ಸುಮಾರು 170 ಕಿ.ಮಿ ದೂರದಲ್ಲಿದೆ. ಚಬಹಾರ್ ಎಂದರೆ ನಾಲ್ಕು ಖುತುಗಳಲ್ಲೂ ಅಚ್ಚ ಹಸಿರಿರುವ ಪ್ರದೇಶ ಎಂಬರ್ಥ. ಮೀನುಗಾರಿಕೆಗೆ ಹೆಸರುವಾಸಿಯಾಗಿರುವ ಈ ಪ್ರದೇಶದ ಬಂದರು ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ, ಮಧ್ಯ ಪ್ರಾಚ್ಯಕ್ಕೆ ವ್ಯಾಪಾರ ಸಂಪರ್ಕ ಕಲ್ಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಜಾಗತಿಕ ಹಳ್ಳಿಯಲ್ಲಿ ರಾಷ್ಟ್ರ-ರಾಷ್ಟ್ರಗಳ ನಡುವಣ ವ್ಯಾಪಾರ ಸಂಬಂಧ, ಮಾನವೀಯ ಸಂಪರ್ಕ ಸಹಿತ ಅಂತಾರಾಷ್ಟ್ರೀಯ ಮಟ್ಟದ ಇಷ್ಟಾಚಾರ ಮತ್ತು ಶಿಷ್ಟಾಚಾರದ ಫಲವಾಗಿ ಚಬಹಾರ್ ಬಂದರು ಗರಿಗೆದರಿದೆ. ಅಪಘಾನಿಸ್ಥಾನದ ಖನಿಜಭರಿತ ಹಜಿಜಾಕ್ ಪ್ರದೇಶಕ್ಕೆ ರೈಲ್ವೇ ಸಂಪರ್ಕವೀಯುವ ಯೋಜನೆಯ ಬಗ್ಗೆಯೂ ಭಾರತ ಈ ಹಿಂದೆ ಪರಾಮರ್ಶಿಸಿತ್ತು.
ಇರಾನ್, ಅಪಘಾನಿಸ್ಥಾನ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧಗಳು ಮಾತ್ರವಲ್ಲದೆ ಚಬಹಾರ್ ಬಂದರು ಭಾರತಕ್ಕೆ ಭೌಗೋಳಿಕ-ರಾಜಕೀಯ ನೆಲೆಗಟ್ಟಿನಲ್ಲಿಯೂ ಬಹಳ ಮಹತ್ವದ್ದಾಗಿದೆ. ವ್ಯಾಪಾರ ಸಂಬಂಧಗಳನ್ನು ಗಟ್ಟಿಗೊಳಿಸುವುದು. ಸುಲಭವಾಗಿ ಪೆಟ್ರೋಲಿಯಂ ಹಾಗೂ ಅನಿಲವನ್ನು ಸಮುದ್ರ ಮಾರ್ಗವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳುವುದು. ದ್ವಿಪಕ್ಷೀಯ ಸಂಬಂಧ ವೃದ್ಧಿ, ಎರಡೂ ರಾಷ್ಟ್ರಗಳ ಮಿಲಿಟರಿ ಸಂಬಂಧಗಳನ್ನು ಬಲಪಡಿಸಲು ಈ ಬಂದರು ಯೋಜನೆಯ ಪ್ರಮುಖ ಉದ್ದೇಶ. ಭೂಮಾರ್ಗದ ಬದಲಿಯಾಗಿ ಅಪಘಾನಿಸ್ಥಾನದ ಸಂಪರ್ಕ ಸಾಧಿಸಲು ಭಾರತಕ್ಕೆ ಚಬಹಾರ್ ಬಹಳ ಸಹಕಾರಿ. ಪಾಕಿಸ್ಥಾನದ ಮೇಲಣ ಅವಲಂಬನೆಯನ್ನು ಕಡಿಮೆ ಮಾಡಿಕೊಂಡು ಅಪಘಾನಿಸ್ಥಾನದ ಜೊತೆಯಲ್ಲಿ ರಾಜತಾಂತ್ರಿಕ ಮತ್ತು ವ್ಯಾಪಾರ ವಹಿವಾಟಿಗೆ ಚಬಹಾರ್ ನೆರವಾಗಲಿದೆ. ಅಂತಾರಾಷ್ಟ್ರೀಯ ನೆಲೆಯಲ್ಲಿ ಉತ್ತರ ದಕ್ಷಿಣ ಸರಕು ಕಾರಿಡಾರಿಗೆ ಚಬಹಾರ್ ಬಂದರು ಕೊಂಡಿಯಂತೆ ಕಾರ್ಯಪ್ರವೃತ್ತಿಸಲಿದೆ. ಹೀಗೆ ರಸ್ತೆ, ರೈಲು, ಸಮುದ್ರ ಮಾರ್ಗವಾಗಿ ರಷ್ಯಾ, ಯುರೋಪ್, ಮಧ್ಯ ಏಷ್ಯಾಕ್ಕೆ ಸಂಪರ್ಕ ನೀಡಬಲ್ಲ ಪ್ರಮುಖ ವ್ಯಾಪಾರ, ಸಾಂಸ್ಕೃತಿಕ ವಿನಿಮಯದ ಹೆಬ್ಬಾಗಿಲು ಚಬಹಾರ್. ಚೀನಾ ಈ ಹಿಂದೆ ಕೈಗೆತ್ತಿಕೊಂಡಿದ್ದ ಅಂತಾರಾಷ್ಟ್ರೀಯ ಸಿಲ್ಕ್ ಅಂಡ್ ಬೆಲ್ಟ್ ರೋಡ್ ಯೋಜನೆಗೆ ಚಬಹಾರ್ ಯೋಜನೆ ಸೆಡ್ಡು ಹೊಡೆಯಲಿದೆ. ಅಗತ್ಯ ಬಿದ್ದಲ್ಲಿ ವಿವಿಧ ರಾಷ್ಟ್ರಗಳಿಗೆ ಮಾನವೀಯ ನೆರವನ್ನು ನೀಡುವಲ್ಲಿಯೂ ಭಾರತಕ್ಕೆ ಸಹಕಾರಿಯಾಗಿರಲಿದೆ ಈ ಬೃಹತ್ ಬಂದರು ಯೋಜನೆ. ಭಾರತದ ನೌಕಾಸೇನೆ ಮತ್ತು ಮಿಲಿಟರಿ ಪ್ರಾಬಲ್ಯಕ್ಕೆ ಪ್ರಮುಖ ಸಾಕ್ಷಿಯೂ ಆಗಿರಲಿದೆ ಇದು. ಹಲವು ಹಂತಗಳಲ್ಲಿ ಅಭಿವೃದ್ಧಿ ಹೊಂದಲಿರುವ ಭಾರತ-ಇರಾನ್ ಸಹಭಾಗಿತ್ವದ ಯೋಜನೆಯು ಒಂದು ದಶಕದ ಅವಧಿಯನ್ನು ಹೊಂದಿದೆ. ಈಗಾಗಲೇ ಭಾರತದ ಸಹಕಾರದಿಂದ 215 ಕಿ.ಮೀ ರಸ್ತೆ ನಿರ್ಮಾಣ ಹೊಂದಿದ್ದು ಅಪಘಾನಿಸ್ಥಾನದ ಜರಂಜ-ದೇರಾಲಂ’ಗೆ ಸಂಪರ್ಕವೀಯುತ್ತಿದೆ. ಭಾರತದ ಸರಕುಗಳು ಪಶ್ಚಿಮದ ನವೀ ಮುಂಬೈ, ನವ ಮಂಗಳೂರು ಬಂದರು, ಕೊಚ್ಚಿನ್ ಬಂದರುಗಳಿಂದ ಚಬಹಾರಿಗೂ, ಚಬಹಾರಿನಿಂದ ಸರಕುಗಳು ನವೀ ಮುಂಬೈಗೂ ತಲುಪಲಿವೆ. ಪ್ರಸ್ತುತ ರಷ್ಯಾದಿಂದ ಆಮದಾಗುತ್ತಿರುವ ಕಚ್ಚಾ ಪೆಟ್ರೋಲಿಯಂ ವಸ್ತುಗಳು ಸಮುದ್ರಮಾರ್ಗವಾಗಿ ಭಾರತದ ತೀರಕ್ಕೆ ತಲುಪುತ್ತಿವೆ. ನಾರ್ತ್ ಸೌತ್ ಟ್ರಾನ್ಸ್ ಪೋರ್ಟ್ ಕಾರಿಡಾರ್ ಯೋಜನೆಯಡಿ ಹಲವು ರಾಷ್ಟ್ರಗಳು ಒಳಗೊಂಡಿವೆ. ಪರಸ್ಪರ ಸಹಯೋಗದೊಂದಿಗೆ ಈ ಯೋಜನೆ ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ರಷ್ಯಾದ ಪೆಟ್ರೋಲಿಯಂ ಉತ್ಪನ್ನಗಳು ದಕ್ಷಿಣದ ಕ್ಯಾಸ್ಪಿಯನ್ ಸಮುದ್ರದ ಮೂಲಕ ಇರಾನ್ ಭೂ ಪ್ರದೇಶಕ್ಕೆ ತಲುಪಿ ನಂತರ ಭೂಮಾರ್ಗದ ಮೂಲಕ ಚಬಹಾರ್ ಬಂದರಿಗೆ ತಲುಪಲಿವೆ. ಇರಾನಿನ ಉತ್ಪನ್ನಗಳ ಆಮದಿಗೂ ಬಂದರು ಸಹಕಾರಿ. ಅಮೇರಿಕ ಈ ಹಿಂದೆ ಹೇರಿದ್ದ ಇರಾನ್ ಮೇಲಣ ಆರ್ಥಿಕ ದಿಗ್ಬಂಧನವು ದ್ವಿರಾಷ್ಟ್ರಗಳ ವ್ಯಾಪಾರಕ್ಕೆ ಮತ್ತು ಬಂದರು ನಿರ್ಮಾಣವೆಂಬ ಸಮರೋಪಾದಿಯ ಕಾರ್ಯಕ್ಕೆ ತಕ್ಕ ಹಿನ್ನಡೆ ಎನಿಸಿದರೂ ಚಬಹಾರ್ ಬಂದರು ಎರಡು ರಾಷ್ಟ್ರಗಳಿಗೆ ವರದಾನವಾಗಿದೆ. ಚೀನಾ ಪಾಕಿಸ್ಥಾನದ ಗ್ವಾದರ್ ಮತ್ತು ಶ್ರೀಲಂಕಾದ ಹಂಬಂತೋಟ ಮೇಲಣ ಹೇರಿರುವ ಸಂಪೂರ್ಣ ಹತೋಟಿಯಂತಲ್ಲದೆ. ಭಾರತದ ಚಬಹಾರ್ ಯೋಜನೆ ಪರಸ್ಪರ ಸಮನ್ವಯತೆಯ, ಪರಸ್ಪರ ಬೆಳವಣಿಗೆ, ಪರಸ್ಪರ ಅಭಿವೃದ್ಧಿಯ ಕೇಂದ್ರವಾಗಿರಲಿದೆ. ದಕ್ಷಿಣ ಚೈನಾದ ಹಲವು ಪ್ರದೇಶಗಳು, ವಿವಿಧ ಪುಟ್ಟ ರಾಷ್ಟ್ರಗಳ ಬಂದರುಗಳು, ದ್ವೀಪಗಳ ಮೇಲೆ ಪ್ರತ್ಯಕ್ಷ ಅಧಿಪತ್ಯ ಸ್ಥಾಪಿಸಲು ಹೊರಟಿರುವ ಚೀನಾ ಪ್ರಸ್ತುತ ತೈವಾನ್ ಸಮಸ್ಯೆ ಸಹಿತ ಕೋವಿಡ್ ನಂತಹ ಸ್ವಯಂಕೃತ ಅಪರಾಧದಿಂದ ಕಂಗೆಟ್ಟಿದೆ.
ಇಷ್ಟಾದರೂ ಬುದ್ಧಿ ಕಲಿಯದಿರುವ ಚೀನಾ ಅಂತಾರಾಷ್ಟ್ರೀಯ ಮಟ್ಟದ ವ್ಯಾಪಾರ, ಹೂಡಿಕೆಯಲ್ಲಿ ಏಕಸ್ವಾಮ್ಯವನ್ನು ಸ್ಥಾಪಿಸಲು ಹೊರಟಿದೆ. ತನ್ನಿಂದಾದ ಆರ್ಥಿಕ ಹೇರಿಕೆಯ ಫಲವಾಗಿ ತತ್ತರಿಸುತ್ತಿರುವ ಶ್ರೀಲಂಕಾದ ದನಿಯನ್ನು ಆಲಿಸದ ಚೀನಾ ಅಲ್ಲಿಂದ ಪಡೆಯಬಹುದಾದ ಲಾಭಾಂಶದ ಮೇಲಷ್ಟೇ ದೃಷ್ಟಿ ನೆಟ್ಟಿದೆ. ವರ್ತಮಾನದಲ್ಲಿ ಚೀನಾದ ಆರ್ಥಿಕ ಕುಟಿಲ ಆಪ್ತತೆಯ ವರ್ತುಲದಲ್ಲಿ ಬಿದ್ದಿರುವ ಶ್ರೀಲಂಕಾ, ಪಾಕಿಸ್ಥಾನದ ದುಸ್ಥಿತಿಗಳು ಚೀನಾದ ಕುತ್ಸಿತ ಪ್ರಭಾವವನ್ನು ಅರಿಯುತ್ತಿವೆ. ಪಾಕಿಸ್ಥಾನದಲ್ಲಿ ಚಹಾವೂ ಬಿಸಿಯಾಗುತ್ತಿದೆ!
ಭಾರತ ಇರಾನ್ ರಷ್ಯಾ ನಡುವಣ ಹೊಸ ಸರಕು ಸಂಪರ್ಕ ಸೇತುವಾಗಲಿರುವ ನಾರ್ತ್ ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್ ಯೋಜನೆಯು ಮೂರು ರಾಷ್ಟ್ರಗಳ ಆರ್ಥಿಕ ಪಾಲುದಾರಿಕೆ ಮತ್ತು ಅಭಿವೃದ್ಧಿಗೆ ಪೂರಕವಾಗಿರಲಿವೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಇರಾನ್ ವಿದೇಶಾಂಗ ಸಚಿವ ಹೊಸೇನ್ ಅಮಿರ್ ಅಬ್ದುಲ್ಲೊಹಿಯನ್ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ಪ್ರವಾದಿ ಬಗ್ಗೆಗಿನ ಭಾರತದ ನಿಲುವಿನ ಬಗ್ಗೆಯೂ ಅವರಿಗೆ ಸ್ಪಷ್ಟತೆ ನೀಡಲಾಗಿತ್ತು. 2016 ರಲ್ಲಿ ಭಾರತ ಇರಾನ್ ದ್ವಿಪಕ್ಷೀಯ ಒಪ್ಪಂದದ ಮೂಲಕ ಚಬಹಾರಿನ ಶಾಹಿದ್ ಬಹೆಸ್ತಿ ಕಿರು ಬಂದರಿನ ನವ ನಿರ್ಮಾಣಕ್ಕೂ ಅಂಕಿತ ಹಾಕಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಟೆಹರಾನ್ ಪ್ರವಾಸ ಕೈಗೊಂಡು ಅಂದಿನ ಇರಾನ್ ಅಧ್ಯಕ್ಷ ಹಸನ್ ರೊಹಾನಿ ಜೊತೆಗೂ ಮಾತುಕತೆ ನಡೆಸಿದ್ದರು. ಅಮೇರಿಕ ಇರಾನ್ ಮೇಲೆ ಹೇರಿದ ಆರ್ಥಿಕ ದಿಗ್ಬಂಧನದ ಕಾರಣ ಚಬಹಾರ್ ಅಭಿವೃದ್ಧಿಗೂ ಕೊಂಚ ಮುಳುವಾಗಿತ್ತು. ಅಮೇರಿಕದ ದಿಗ್ಬಂಧನದ ಹೊರತಾಗಿಯೂ ಭಾರತ-ರಷ್ಯಾದಿಂದ ಕಚ್ಚಾತೈಲ ಆಮದು ಮಾಡಲು ಆರಂಭಿಸಿದೆ. ವಿದೇಶಾಂಗ ಸಚಿವ ಜೈಶಂಕರ್ ಪಾಶ್ಚಿಮಾತ್ಯ ದೇಶಗಳಿಗೆ ನೀಡಿದ ಸಾಂದರ್ಭಿಕ ಸಂದೇಶವೂ ಇಲ್ಲಿ ಉಲ್ಲೇಖನೀಯ ಅಂಶ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಸಮಸ್ಯೆಗಳೇ ವಿಶ್ವದ ಸಮಸ್ಯೆ ಎಂಬಂತೆ ಬಿಂಬಿಸುವುದು ಅರ್ಥಹೀನ ವಿಚಾರ. ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಿಗೂ ಅವುಗಳದ್ದೇ ಆದ ಸಮಸ್ಯೆ ಸವಾಲುಗಳಿರುತ್ತವೆ. ಅವುಗಳ ಬಗ್ಗೆಯೂ ಸ್ಪಂದನಶೀಲ ಮನೋಸ್ಥಿತಿ ಇರಬೇಕು ಎಂಬುದು ವರ್ತಮಾನದಲ್ಲಿ ಭಾರತದ ಗಟ್ಟಿತನಕ್ಕೆ, ರಾಜತಾಂತ್ರಿಕ ಶಕ್ತಿಗೆ ಸಾಕ್ಷಿಯಾಗಿದೆ. ಭಾರತ ರಷ್ಯಾ ನಡುವಿನ ವ್ಯಾಪಾರಕ್ಕೆ ಮಧ್ಯ ಏಷ್ಯಾದಲ್ಲಿ ಕಾರ್ಯರೂಪಕ್ಕೆ ಬರುತ್ತಿರುವ ಅಂತಾರಾಷ್ಟ್ರೀಯ ಉತ್ತರ- ದಕ್ಷಿಣ ಸರಕು ಪಥ(ಐ.ಎನ್. ಎಸ್ .ಟಿ.ಸಿ) ಮಾದರಿಯೆನಿಸಲಿದೆ. ಸುಮಾರು 7,200 ಕಿ.ಮೀ ಉದ್ದದ ಬಹು-ಸ್ತರದ ಸರಕು ಸಾಗಾಣಿಕೆ ಜೋಡಣೆ ಯೋಜನೆ ಇರಾನಿನ ದಕ್ಷಿಣದಲ್ಲಿ ಆರಂಭಗೊಂಡು ರಷ್ಯಾದ ಆಸ್ಟ್ರಖಾನಿಗೆ ಸಂಪರ್ಕ ಕಲ್ಪಿಸುತ್ತದೆ. ಭಾರತ ಮಾತ್ರವಲ್ಲದೆ ಏಷ್ಯಾದ ಹಲವು ರಾಷ್ಟ್ರಗಳ ಸರಕುಗಳನ್ನು ಅಗತ್ಯ ವಸ್ತುಗಳನ್ನು ಪೂರೈಸಲು ಸುಸಜ್ಜಿತ ಮಾರುಕಟ್ಟೆ ಒದಗಿಸಲು ಈ ಯೋಜನೆ ಪೂರಕ. ಇರಾನ್ ಉತ್ತರ ಭಾಗದಲ್ಲಿರುವ ಕ್ಯಾಸ್ಪಿಯನ್ ಸಮುದ್ರದ ಬಂದರುಗಳೊಂದಿಗೆ ದಕ್ಷಿಣದ ಚಬಹಾರ್ ಬಂದರು ಬೃಹತ್ ರಸ್ತೆ, ರೈಲು ಯೋಜನೆಯ ಮೂಲಕ ಜೋಡಿಸಲ್ಪಡುವುದು ಇದರ ವಿಶೇಷ. ಇದರಿಂದ ಪೆಟ್ರೋಲಿಯಂ ಉತ್ಪನ್ನಗಳ ಸುಲಭ ಪೂರೈಕೆಯು ಸಾಧ್ಯವಾಗಲಿದೆ. ಸಮಾನ ಹಿತವಿರುವ, ಲಾಭದಾಯಕ ಅಂತಾರಾಷ್ಟ್ರೀಯ ವ್ಯಾಪಾರಿ ದೃಷ್ಠಿಯಿಂದಲೂ ಭಾರತಕ್ಕೆ ಈ ಯೋಜನೆ ಬಹಳ ಆಪ್ತವೆನಿಸಲಿದೆ.
✍️ವಿವೇಕಾದಿತ್ಯ ಕೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.