ಬಿಜೆಪಿಯ ಇಬ್ಬರು ವಕ್ತಾರರು ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೀಡಿರುವ ಹೇಳಿಕೆಗೆ ಭಾರತದ ವಿರುದ್ಧ ಅನೇಕ ಗಲ್ಫ್ ರಾಷ್ಟ್ರಗಳಿಂದ ದೊಡ್ಡಮಟ್ಟದಲ್ಲಿ ಟೀಕೆ ಮತ್ತು ಖಂಡನೆ ವ್ಯಕ್ತವಾಗುತ್ತಿದೆ.
ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರು ಟಿವಿ ಡಿಬೆಟ್ ಸಂದರ್ಭದಲ್ಲಿ ನೀಡಿರುವ ಅವಹೇಳನಕಾರಿ ಹೇಳಿಕೆಗಳು ಅರಬ್ ಜಗತ್ತನ್ನು ಆಕ್ರೋಶಕ್ಕೀಡಾಗುವಂತೆ ಮಾಡಿದೆ. ಸೌದಿ ಅರೇಬಿಯಾ, ಇಂಡೋನೇಷಿಯಾ, ಕತಾರ್ ಸೇರಿದಂತೆ ಸುಮಾರು 15 ರಾಷ್ಟ್ರಗಳು ಈ ಹೇಳಿಕೆಯನ್ನು ಖಂಡಿಸಿವೆ. ಈಗಾಗಲೇ ಬಿಜೆಪಿ ನೂಪುರ್ ಶರ್ಮ ಅವರನ್ನು ವಕ್ತಾರ ಸ್ಥಾನದಿಂದ ಕೆಳಗಿಳಿಸಿದೆ.
ಈ ಸನ್ನಿವೇಶವನ್ನು ಅತ್ಯಂತ ಸೂಕ್ಷ್ಮವಾಗಿ ಭಾರತ ಸರ್ಕಾರ ನಿಭಾಯಿಸುತ್ತಿದೆ. ಒಂದು ಧರ್ಮದ ಭಾವನೆಗಳಿಗೆ ಧಕ್ಕೆ ತರುವ ವರ್ತನೆ ಖಂಡನೀಯ ಎಂಬುದು ನಿಜ. ಆದರೆ ಒಬ್ಬ ವ್ಯಕ್ತಿಯ ಹೇಳಿಕೆಗೆ ಇಡೀ ದೇಶವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಿರುವ ಮತ್ತು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಬೋಧನೆ ಮಾಡುತ್ತಿರುವ ದೇಶಗಳ ಪೈಕಿ ಹಲವು ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯವೇ ಇಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕಾರ್ಪೋರೇಶನ್ ಮತ್ತು ಪಾಕಿಸ್ತಾನದಂತಹ ರಾಷ್ಟ್ರ ಭಾರತದ ವಿರುದ್ಧ ನೀಡಿರುವ ಹೇಳಿಕೆಗೆ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಪ್ರತಿಕ್ರಿಯೆಗೆ ಪ್ರತ್ಯುತ್ತರ ನೀಡಿರುವ ವಿದೇಶಾಂಗ ಸಚಿವಾಲಯ, “ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ರಾಷ್ಟ್ರಕ್ಕೆ ಮತ್ತೊಂದು ರಾಷ್ಟ್ರ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಬೋಧಿಸುವ ಅರ್ಹತೆ ಇಲ್ಲ” ಎಂದಿದೆ.
“ಪಾಕಿಸ್ತಾನದಲ್ಲಿ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು ಸೇರಿದಂತೆ ಅಲ್ಪಸಂಖ್ಯಾತರ ವ್ಯವಸ್ಥಿತ ಕಿರುಕುಳಕ್ಕೆ ಜಗತ್ತು ಸಾಕ್ಷಿಯಾಗಿದೆ” ಎಂದಿದೆ.
ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕಾರ್ಪೋರೇಶನ್ಗೆ ತಿರುಗೇಟು ನೀಡಿರುವ ಭಾರತ, “ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ಭಾರತ ನೀಡುತ್ತದೆ ಮತ್ತು 57 ಸದಸ್ಯರನ್ನು ಒಳಗೊಂಡಿರುವ ಈ ಸಂಸ್ಥೆಯ ಹೇಳಿಕೆಯು ಪಟ್ಟಭದ್ರ ಹಿತಾಸಕ್ತಿಗಳ ಆಜ್ಞೆಯ ಮೇರೆಗೆ ಅನುಸರಿಸುತ್ತಿರುವ ಅದರ ವಿಭಜಕ ಕಾರ್ಯಸೂಚಿಯನ್ನು ಬಹಿರಂಗಪಡಿಸಿದೆ” ಎಂದು ಹೇಳಿದೆ.
ಇನ್ನೊಂದೆಡೆ ಕತಾರ್, ಇರಾನ್ ಮತ್ತು ಕುವೈಟ್ ಮುಂತಾದ ದೇಶಗಳಲ್ಲಿ ಭಾರತೀಯ ರಾಯಭಾರಿಗಳಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಇಲ್ಲಿ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತಷ್ಟು ಹಾನಿಯಾಗುವುದನ್ನು ಭಾರತ ತಪ್ಪಿಸಿದೆ. ದ್ವೀಪಕ್ಷೀಯ ಸಂಬಂಧ ಮತ್ತು ವ್ಯವಹಾರಿಕ ಸಂಬಂಧಕ್ಕೆ ಧಕ್ಕೆ ಬರಬಾರದು ಎಂಬ ಉದ್ದೇಶ ಇದರ ಹಿಂದಿದೆ.
ಆದರೆ ಭಾರತಕ್ಕೆ ಬುದ್ಧಿ ಹೇಳುತ್ತಿರುವ ಈ ದೇಶಗಳು ಮಾನವ ಹಕ್ಕುಗಳು ಮತ್ತು ನಾಗರಿಕರ ಸ್ವಾತಂತ್ರ್ಯದ ಪ್ರತಿಪಾದಕರಂತು ಅಲ್ಲವೇ ಅಲ್ಲ. ಅಷ್ಟಕ್ಕೂ ಭಾರತಕ್ಕೆ ಬೋಧಿಸಲು ಗಲ್ಫ್ ರಾಷ್ಟ್ರಗಳ ಅರ್ಹತೆ ಏನು?
ಭಾರತದ ವಿರುದ್ಧ ಖಂಡನೆ ವ್ಯಕ್ತಪಡಿಸಿರುವ 15 ದೇಶಗಳಲ್ಲಿ ರಾಜಕೀಯ ಮತ್ತು ನಾಗರಿಕ ಸ್ವಾತಂತ್ರ್ಯ ಎಂಬುದು ಮರೀಚಿಕೆ. ಫ್ರೀಡಂ ಇನ್ ವರ್ಲ್ಡ್ ವರದಿಯ ಪ್ರಕಾರ, ಈ ಎಲ್ಲಾ 15 ದೇಶಗಳು ನಾಗರಿಕರು ಧಾರ್ಮಿಕ ಸ್ವಾತಂತ್ರ್ಯದ ವಿಷಯದಲ್ಲಿ ಭಾರತಕ್ಕಿಂತ ತುಂಬಾ ಹಿಂದಿವೆ. ಕ್ಯಾಟೋ ಇನ್ಸ್ಟಿಟ್ಯೂಟ್ ಹ್ಯೂಮನ್ ಫ್ರೀಡಂ ಸೂಚ್ಯಂಕ 2019 ರಲ್ಲಿ, ಮುಸ್ಲಿಂ ಪ್ರಾಬಲ್ಯವಿರುವ ಬಹುತೇಕ ಎಲ್ಲಾ ರಾಷ್ಟ್ರಗಳು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿವೆ.
ಮಾತ್ರವಲ್ಲದೆ ಲಿಬಿಯಾ, ಜೋರ್ಡಾನ್, ಇರಾನ್ ಮುಂತಾದ ಹಲವು ಇಸ್ಲಾಮಿಕ್ ದೇಶಗಳಲ್ಲಿ ಕ್ರಿಶ್ಚಿಯನ್ನರು, ಯಹೂದಿಗಳು ಸೇರಿದಂತೆ ಇತರ ಧಾರ್ಮಿಕ ಅಲ್ಪಸಂಖ್ಯಾತರ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ.
ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಧಾರ್ಮಿಕ ಸಹಿಷ್ಣುತೆ ಎಂಬುದು ಅತ್ಯಂತ ಮೇಲ್ಮಟ್ಟದಲ್ಲಿ ಇದೆ. ಯಾವುದೋ ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಇಡೀ ದೇಶದ ಹೇಳಿಕೆ ಎಂಬಂತೆ ಬಿಂಬಿಸುವುದು ಖಂಡನೀಯ. ಒಂದು ಹೇಳಿಕೆಯಿಂದ ಭಾರತದ ಧಾರ್ಮಿಕ ಸೌಹಾರ್ದತೆ ಅಥವಾ ಧಾರ್ಮಿಕ ಪ್ರಜಾಪ್ರಭುತ್ವ ನಾಶವಾಗುವುದಿಲ್ಲ. ಸೌಹಾರ್ದತೆ ಮತ್ತು ಸಹಿಷ್ಣುತೆ ಭಾರತೀಯರ ರಕ್ತದಲ್ಲೇ ಅಂತರ್ಗತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.