ದಾವೋಸ್ : ಬಂಡವಾಳ ಹೂಡಿಕೆ ಸಂಸ್ಥೆಗಳನ್ನು ಕರ್ನಾಟಕ ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ. ರಾಜ್ಯವನ್ನು ಸಮೃದ್ಧಿಗೊಳಿಸುವ ಜೊತೆಗೆ ಸಂಸ್ಥೆಗಳ ಪರಿಶ್ರಮಕ್ಕೆ ಸಾರ್ಥಕತೆಯನ್ನು ಪಡೆದು, ರಾಜ್ಯದ ಯಶೋಗಾಥೆಯಲ್ಲಿ ಭಾಗಿಗಳಾಗಿರಿ ಎಂದು ವಿಶ್ವದ ಪ್ರಮುಖ ಸಂಸ್ಥೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ದಾವೋಸ್ನಲ್ಲಿ ಜರುಗಿದ ವಿಶ್ವ ಆರ್ಥಿಕ ಶೃಂಗ ಸಭೆಯ ಸಂದರ್ಭದಲ್ಲಿ ಕರ್ನಾಟಕದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಲಾಂಚ್ ಇವೆಂಟ್ನಲ್ಲಿ ಅವರು ಮಾತನಾಡಿದರು.
ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಪಾಲ್ಗೊಳ್ಳುವಂತೆ ಹೂಡಿಕೆದಾರರಿಗೆ ಅವರು ಆಹ್ವಾನ ನೀಡಿದರು.
ಕರ್ನಾಟಕದಲ್ಲಿ ಕೈಗಾರಿಕೆ ಹಾಗೂ ಉದ್ಯಮಗಳ ಸ್ಥಾಪನೆಗೆ ಪೂರಕವಾಗಿ ಎರಡು ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಸಂಶೋಧನೆಗೆ ಹೆಚ್ಚು ಪ್ರೋತ್ಸಾಹವನ್ನು ನೀಡುವ ಆರ್ ಎಂಡ್ ಡಿ ಪಾಲಿಸಿ, ಹೆಚ್ಚು ಉದ್ಯೋಗವನ್ನು ಒದಗಿಸುವ ಉದ್ಯಮಗಳಿಗೆ ಹೆಚ್ಚು ಪ್ರೋತ್ಸಾಹಕಗಳನ್ನು ನೀತಿಗಳನ್ನು ಜಾರಿಗೆ ತರಲಾಗಿದೆ. ಈ ಎರಡೂ ನೀತಿಗಳ ಲಾಭಗಳನ್ನು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಸ್ಥೆಗಳು ಪಡೆದುಕೊಳ್ಳಬಹುದಾಗಿದೆ ಎಂದರು.
ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯವರು ಸ್ವತ: ಉದ್ಯಮಿಯಾಗಿದ್ದು, ದೊಡ್ಡ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆಯ ಜೊತೆಗೆ ಎಥನಾಲ್ ಉತ್ಪಾದನೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಇಂತಹ ಸಾಧಕರು ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉನ್ನತ ಶಿಕ್ಷಣ, ಐಟಿಬಿಟಿ ಸಚಿವ ಅಶ್ವತ್ಥನಾರಾಯಣ ಹಾಗೂ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯಂತಹ ದಕ್ಷ ಸಚಿವರ ಸಹಕಾರದೊಂದಿಗೆ ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ತರಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ, ಐಟಿ ಬಿಟಿ ಸಚಿವ ಅಶ್ವತ್ಥ ನಾರಾಯಣ ಅವರು, ಕರ್ನಾಟಕದಲ್ಲಿ ಕಾರ್ಮಿಕ ನೀತಿ, ಭೂಮಿ ಹಾಗೂ ಲೈಸೆನ್ಸ್ ಗಳನ್ನು ಪಡೆಯುವ ಸರಳ ಪ್ರಕ್ರಿಯೆಗಳ ಮೂಲಕ ಈಸ್ ಆಫ್ ಡೂಯಿಂಗ್ ಬಿಸನೆಸ್ ನೀಡುವುದು ಕರ್ನಾಟಕ ಸರ್ಕಾರಕ್ಕೆ ಆದ್ಯತೆಯ ವಿಷಯವಾಗಿದೆ. ಕರ್ನಾಟಕ , ಅದರಲ್ಲಿಯೂ ಬೆಂಗಳೂರು ನಗರ ಎಲ್ಲ ರಂಗಗಳ ಸಂಶೋಧನಾ ಕಾರ್ಯಗಳಿಗೆ ಕೇಂದ್ರವಾಗಿದೆ. ಬಹಳಷ್ಟು ಯೂನಿಕಾರ್ನ್ಗಳು, ಡೆಕಾಕಾರ್ನಾಗಳು ಬೆಂಗಳೂರಿನಲ್ಲಿದೆ. ಕರ್ನಾಟಕ ಮಾನವೀಯ ಮೌಲ್ಯಗಳು, ಕಾಸ್ಮೊಪಾಲಿಟನ್ ಚಿಂತನೆ ಹಾಗೂ ಸಂಸ್ಕೃತಿ ವೈವಿಧ್ಯತೆಗಳಿಂದ ಕೂಡಿದೆ. ಆವಿಷ್ಕಾರ ಹಾಗೂ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಬೆಂಗಳೂರು ಟೆಕ್ ಸಮಿಟ್, ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ನವೆಂಬರ್ನಲ್ಲಿ ಆಯೋಜಿಸಲಾಗುತ್ತಿದೆ. ಕೈಗಾರಿಕೆಗಳೂ ಸೇರಿದಂತೆ ಎಲ್ಲ ವಲಯಗಳಿಗೂ ನೀತಿಗಳನ್ನು ರೂಪಿಸಲಾಗಿದೆ. ರಾಜ್ಯದಲ್ಲಿ ಸ್ಟಾರ್ಟ್ ಅಪ್ಗಳಿಗೆ ಆರ್ಥಿಕ ಸಹಾಯ, ಪ್ರೋತ್ಸಾಹಕಗಳನ್ನು ಸರ್ಕಾರ ಒದಗಿಸುತ್ತಿದೆ. ರಾಜ್ಯದಲ್ಲಿ ಬಂಡವಾಳ ಹೂಡುವ ಉದ್ಯಮಗಳು, ಕೈಗಾರಿಕೆಗಳಿಗೆ ಸರ್ಕಾರ ಎಲ್ಲ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದರು.
ಬೈಜೂಸ್ ಸಂಸ್ಥೆ:
ಅಂತರರಾಷ್ಟ್ರೀಯ ಮಟ್ಟದ ಬೈಜೂಸ್ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿ ತನ್ನ ಕೇಂದ್ರ ಸ್ಥಾನವನ್ನು ಹೊಂದಿದ್ದು, ಕಳೆದ ಹಲವಾರು ವರ್ಷಗಳಿಂದ ತನ್ನ ಟುಟೋರಿಯಲ್ ಆ್ಯಪ್ ಮೂಲಕ ದೇಶದಾದ್ಯಂತ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಬೈಜೂಸ್ ಸಂಸ್ಥೆಯ ಮುಖ್ಯಸ್ಥರಾದ ದಿವ್ಯಾ ಗೋಕುಲನಾಥ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬೈಜೂ ಸಂಸ್ಥೆ ಬೆಂಗಳೂರಿನಲ್ಲಿ ಅಭಿವೃದ್ಧಿಹೊಂದಲು ಸಹಕಾರ ನೀಡಿದ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಮೀಶೋ , ಇ-ಕಾಮರ್ಸ್ ಸಂಸ್ಥೆ :
ಮೀಶೋ ಇ-ಕಾಮರ್ಸ್ ವೇದಿಕೆಯಾಗಿದ್ದು, ಸಣ್ಣ ಉದ್ದಿಮೆಗಳ ಉತ್ಪನ್ನಗಳಿಗೆ ಆನ್ ಲೈನ್ ಮಾರುಕಟ್ಟೆ ಅವಕಾಶಗಳನ್ನು ಒದಗಿಸಿ,ಕಡಿಮೆ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಜನರಿಗೆ ಲಭ್ಯವಾಗಿಸುವ ಸಂಸ್ಥೆಯಾಗಿದೆ. ಸಂಸ್ಥೆಯ ಮುಖ್ಯಸ್ಥರಾದ ವಿದಿತ್ ಆತ್ರೇಯ ಅವರು ಮೀಶೋ ಸಂಸ್ಥೆಯ ಬಗ್ಗೆ ವಿವರಿಸುತ್ತಾ, ಬಹಳಷ್ಟು ಯೂನಿಕಾರ್ನ್ ಕಂಪನಿಗಳು ಭಾರತದಲ್ಲಿ ತಲೆಎತ್ತುತ್ತಿದ್ದು ವಿಶ್ವದ ಮಟ್ಟದಲ್ಲಿ ಸಾಧನೆ ಮಾಡುತ್ತಿದೆ. ಇಲ್ಲಿನ ಇಕೋಸಿಸ್ಟಂ , ಆಧುನಿಕ ತಂತ್ರಜ್ಞಾನ ಇದಕ್ಕೆ ಪೂರಕವಾಗಿದೆ ಎಂದರು. ವಿಶ್ವ ಆರ್ಥಿಕ ಶೃಂಗ ಸಭೆ ವಿಶ್ವಕ್ಕೆ ಭಾರತದ ಯೂನಿಕಾರ್ನ್ ಕಂಪನಿಗಳನ್ನು ಪರಿಚಯಿಸುವ ಉತ್ತಮ ವೇದಿಕೆಯಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.