ಮಾನವನ ರಕ್ತವು 20 ಶೇಕಡಾ ಆಸಿಡ್ ಎಂಬತ್ತು ಶೇಕಡ ಅಲ್ಕಲಿ ಅಂದರೆ ಕ್ಷಾರೀಯ ಅಂಶದಿಂದ ಕೂಡಿದೆ. ಆಸಿಡ್ ಅಥವಾ ಆಮ್ಲ ಎಂಬುದು ಜೀರ್ಣಕ್ರಿಯೆಗೆ ಸಹಕಾರಿ ಎಂಬುದು ನಿಜ. ಆದರೆ ಇದು ಅತಿಯಾದರೆ ಎದೆಯುರಿಗೆ ಕಾರಣವಾದ ಅಸಿಡಿಟಿ ಉಂಟಾಗುತ್ತದೆ. ಹೊಟ್ಟೆಯುರಿ, ಎದೆ ಅಥವಾ ಹೊಟ್ಟೆ ಭಾಗದಲ್ಲಿ ನೋವು, ಹುಳಿ ತೇಗು ಬರುವುದು, ಅರುಚಿ, ವಾಕರಿಕೆ, ನಾಲಗೆ ಮೇಲೆ ಬೆಳ್ಳನೆಯ ಪದರ ನಿರ್ಮಾಣವಾಗುವುದು ಇದರ ಕೆಲವು ಲಕ್ಷಣಗಳು. ಆರಂಭದ ಹಂತದಲ್ಲಿ ಇದನ್ನು ಎಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಎಂದು ಹಗುರವಾಗಿ ಭಾವಿಸುವ ಜನರೇ ಹೆಚ್ಚು. ಈ ಕಾರಣಕ್ಕೆ ಆಹಾರದ ಮತ್ತು ಜೀವನ ಪದ್ಧತಿಯ ಬಗ್ಗೆ ಜಾಗ್ರತೆ ವಹಿಸದೆ ಆಪತ್ತು ತಂದುಕೊಳ್ಳುವ ಜನರ ಸಂಖ್ಯೆ ಹೆಚ್ಚು. ಹಾಗಾದರೆ ಇದನ್ನು ಸರಿಯಾದ ಚಿಕಿತ್ಸೆ ಮತ್ತು ಜೀವನ ವಿಧಾನಗಳ ಮೂಲಕ ನಿಭಾಯಿಸದಿದ್ದರೆ ಏನಾಗುತ್ತದೆ? ನಾವೆಲ್ಲ ಗ್ಯಾಸ್ಟ್ರಿಕ್ ಅಲ್ಸರ್ ಎಂದು ಕರೆಯುವ ಜಠರದ ಹುಣ್ಣು ಮತ್ತು ಇನ್ನೂ ಅನೇಕ ಜೀರ್ಣಾಂಗ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಜ್ವರ ಮತ್ತು ತಲೆಯಲ್ಲಿ ದಿಮ್ಮು ಹಿಡಿದಂತಾಗುವ ಪ್ರಸಂಗಗಳು ಇಲ್ಲದಿಲ್ಲ. ಜೀರ್ಣಕ್ಕೆ ಕಷ್ಟವಾಗುವಂಥ ಆಹಾರ ಸೇವನೆ, ಮಸಾಲೆ ಪದಾರ್ಥಗಳು, ಧೂಮಪಾನ, ಮಧ್ಯಪಾನ, ನಿದ್ರೆ ಇಲ್ಲದಿರುವುದು, ಮಾನಸಿಕ ಒತ್ತಡ, ಸರಿಯಾಗಿ ಜಗಿಯದೆ ನುಂಗುವುದು, ಅಜೀರ್ಣ, ಋತುಚಕ್ರದ ಸಮಸ್ಯೆ- ಇದೆಲ್ಲವೂ ಎಸಿಡಿಟಿಗೆ ಕಾರಣಗಳಾಗುತ್ತವೆ.
ಹಾಗಾದರೆ ಇದನ್ನು ತಡೆಗಟ್ಟುವುದು ಹೇಗೆ? ಸೂಕ್ತ ನೈಸರ್ಗಿಕ ವಿಧಾನಗಳು ಇವೆಯೇ ಎಂದು ಕೇಳಿದರೆ …ಇವೆ.
1. ಉದ್ದು, ಹಾಲಿನ ಉತ್ಪನ್ನಗಳು, ಕೃತಕ ಬಣ್ಣ ಹಾಕಿದ ಸಿಹಿ ತಿಂಡಿಗಳು, ಜಂಕ್ ಫುಡ್, ಮಸಾಲೆ ಪದಾರ್ಥಗಳು, ಕರಿದ ಪದಾರ್ಥಗಳು- ನಿಮ್ಮ ರುಚಿಯನ್ನು ಹೆಚ್ಚಿಸದಿರಲಿ. ಅವುಗಳು ನಿಮ್ಮ ಅಭಿರುಚಿ ಆಗದಿರಲಿ.
2. ಸರಿಯಾಗಿ ಜಗಿದು ನಿಧಾನವಾಗಿ ತಿನ್ನಿ. ರಾತ್ರಿಯಲ್ಲಿ ಜೀರ್ಣಕ್ಕೆ ಕಷ್ಟವಾಗಬಹುದಾದ ಆಹಾರ ಸೇವಿಸಬೇಡಿ. ರಾತ್ರಿ ಕಡಿಮೆ ತಿನ್ನಿ. ರಾತ್ರಿ ಸಂದರ್ಭ ಜೀರ್ಣಕ್ರಿಯೆ ಮಂದಗತಿಯಲ್ಲಿ ಇರುತ್ತದೆ.
3. ಧೂಮಪಾನ ಮತ್ತು ಮದ್ಯಪಾನ ಮಾಡಬೇಡಿ. ಕಾಫಿಯನ್ನು ದಿನಕ್ಕೆ ಎರಡರಿಂದ ಮೂರು ಕಪ್ ಮಾತ್ರ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸಬೇಡಿ.
4. ಹೊಟ್ಟೆಯನ್ನು ಬಹಳ ದೀರ್ಘ ಸಮಯದವರೆಗೆ ಖಾಲಿ ಬಿಡಬೇಡಿ. ಸರಿಯಾಗಿ ಹಸಿವೆ ಆಗುವಾಗ ತಿನ್ನದೇ ಇರಬೇಡಿ. ಹಸಿವಾಗದೇ ಉಣ್ಣಬೇಡಿ.
5. ಎಲ್ಲಾ ಮಾನಸಿಕ ಒತ್ತಡಗಳನ್ನು ಮರೆತು ಚೆನ್ನಾಗಿ ರಾತ್ರಿ ನಿದ್ರಿಸಿ. ಮಲಗುವಾಗ ಹಗುರವಾದ ಅನುಕೂಲಕರ ಬಟ್ಟೆಗಳನ್ನು ಧರಿಸಿ.
6. ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ. ಒಂದೇ ಸಲ ತುಂಬಾ ನೀರು ಕುಡಿದು ಆಮೇಲೆ ಕುಡಿಯದೇ ಇರುವುದು ಒಳ್ಳೆಯದಲ್ಲ. ಆಗಾಗ ಸಾಕಷ್ಟು ಪ್ರಮಾಣದಲ್ಲಿ ದಿನವಿಡಿ ನೀರು ಕುಡಿಯಿರಿ.
7. ಒಂದು ವೇಳೆ ಎದೆಯುರಿ ಅಥವಾ ಅಸಿಡಿಟಿಯ ಲಕ್ಷಣಗಳು ಯಾವುದೇ ಕಾರಣಕ್ಕೆ ಕಂಡುಬಂದಲ್ಲಿ, ಆಗ ಒಂದರಿಂದ ಎರಡು ಲೀಟರಿನಷ್ಟು ಉಗುರುಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಉಪ್ಪು ಸೇರಿಸಿ, ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ, ತಕ್ಷಣ ಅದನ್ನು ಸಂಪೂರ್ಣ ಗಂಟಲಿಗೆ ಬೆರಳು ಹಾಕಿ ವಾಂತಿ ಮಾಡಿಕೊಳ್ಳಿ.
8. ಮಾಗದೇ ಇರುವಂತಹ ಹಣ್ಣುಗಳನ್ನು ಸೇವಿಸಬೇಡಿ. ಉದಾಹರಣೆ: ಮಾವಿನಕಾಯಿ.
9. ಹೊಟ್ಟೆ ತುಂಬುವಷ್ಟು ಬಲಾತ್ಕಾರದಿಂದ ಆಹಾರವನ್ನು ತುರುಕಬೇಡಿ. ಯಾವುದೇ ವಿಶೇಷ ಸಂದರ್ಭಗಳಲ್ಲಿ ಕೂಡ ಇದನ್ನು ಅನುಸರಿಸಿ. ನಿಮ್ಮ ಆಯ್ಕೆಯ ಕೆಲವೊಂದು ಸೂಕ್ತ ಆಹಾರಗಳನ್ನು ಮಾತ್ರ ಸೇವಿಸಿ. ವಿಶೇಷ ಸಮಾರಂಭಗಳಲ್ಲಿ ಅಲ್ಲಿ ಇಟ್ಟಿರುವ ಎಲ್ಲಾ ಬಗೆಯ ಆಹಾರವನ್ನು ಸ್ವಲ್ಪ ಸ್ವಲ್ಪ ತಿಂದೇ ತೀರುತ್ತೇನೆ ಎಂಬ ಹಠ ಬೇಡ.
10. ಎಸಿಡಿಟಿಗೆ ಅತ್ಯಂತ ಸುಲಭವಾಗಿ, ಮತ್ತು ವೈದ್ಯರ ಚೀಟಿ ಇಲ್ಲದೆ ಔಷಧಿ ಅಂಗಡಿಗಳಲ್ಲಿ ಸಿಗುವ ಮಾತ್ರೆಗಳನ್ನು ಖರೀದಿಸಿ ತಿನ್ನಬೇಡಿ. ಏಕೆಂದರೆ ಅವುಗಳನ್ನು ನಿರಂತರವಾಗಿ ಸೇವಿಸುವುದರಿಂದ ಔಷಧಿಗಳ ವ್ಯಸನಕ್ಕೆ ನೀವು ದಾಸರಾಗುತ್ತೀರಿ. ಅಷ್ಟೇ ಅಲ್ಲ, ಅವುಗಳೆಲ್ಲವೂ ನಿರ್ದಿಷ್ಟವಾದ ಅಡ್ಡ ಪರಿಣಾಮಗಳಿಂದ ಕೂಡಿದೆ.
ಪರಿಹಾರೋಪಾಯಗಳು
1. ಅರ್ಥ ಗ್ಲಾಸಿನಷ್ಟು ತಂಪು ಹಾಲನ್ನು ಕುಡಿಯುವುದರಿಂದ ತಕ್ಷಣ ಪ್ರಯೋಜನ ಕಾಣಿಸಿಕೊಳ್ಳುವುದು. ಬಿಸಿಯಾದ ಹಾಲನ್ನು ಮಾತ್ರ ಕುಡಿಯಬೇಡಿ.
2. ಪುದಿನ ಎಲೆಗಳ ಜ್ಯೂಸ್ ಮಾಡಿ ಕುಡಿಯುವುದು ಅತ್ಯಂತ ಉತ್ಕೃಷ್ಟ ಉಪಾಯ.
3. ಎಳನೀರು ಸೇವನೆ ಖಾಲಿ ಹೊಟ್ಟೆಗೆ ಮಾಡುವಂಥದ್ದು ಅಸಿಡಿಟಿಗೆ ರಾಮಬಾಣ. ಇದು ಶಾಶ್ವತವಾದ ಪ್ರಯೋಜನವನ್ನು ಕೂಡ ಒದಗಿಸಿ ಕೊಡುವಂತದ್ದು. ಅಷ್ಟೇ ಅಲ್ಲ ದೇಹದಲ್ಲಿ ಲವಣಾಂಶಗಳನ್ನು ಭರ್ತಿ ಮಾಡುವಂತದ್ದು.
4. ಫ್ಲೇವರ್ ಅಥವಾ ಬಣ್ಣ ಹಾಕದ ಸಹಜವಾಗಿ ತಯಾರಿಸಿದ ಐಸ್ ಕ್ರೀಂ ತಿನ್ನುವುದು ತಾತ್ಕಾಲಿಕವಾದ ಉಪಶಮನ ನೀಡುವುದು.
5. ಆಹಾರದ ನಂತರ ಒಂದು ಲವಂಗವನ್ನು ಬಾಯಿಯಲ್ಲಿ ಜಗಿದು ನಿಧಾನವಾಗಿ ನುಂಗುವುದು ಒಳ್ಳೆಯದು.
6. ಬಟಾಟೆಯಲ್ಲಿ ಪೊಟ್ಯಾಶಿಯಂ ಲವಣಾಂಶ ಇರುವುದರಿಂದ ಸರಿಯಾಗಿ ಬೇಯಿಸಿದ ಬಟಾಟೆಯನ್ನು ಸೇವಿಸುವುದು ಒಳ್ಳೆಯದು.
7. ಸೌತೆಕಾಯಿ, ಕಲ್ಲಂಗಡಿ ಹಣ್ಣು ಇವುಗಳನ್ನು ಸೇವಿಸುವುದು, ಬಾಳೆಯ ದಂಡಿನ ತಾಜಾ ರಸವನ್ನು ಸೇವನೆ ಮಾಡುವುದು ಅತ್ಯುತ್ತಮ.
8. ಒಂದು ಬೆಲ್ಲದ ಚೂರನ್ನು ಬಾಯಿಯಲ್ಲಿ ಇಟ್ಟು ಅದರ ರಸವನ್ನು ಜೊಲ್ಲಿನೊಂದಿಗೆ ನಿಧಾನವಾಗಿ ಸೇವಿಸುವಂತದ್ದು ತಕ್ಷಣದ ಪರಿಹಾರ.
9. ಕೆಲವು ತುಳಸಿ ಎಲೆಗಳನ್ನು ಬೆಳಗ್ಗೆ ಬಾಯಲ್ಲಿ ಹಾಕಿ ಜಗಿದು ನುಂಗುವುದು.
10. ಕುದಿಸಿ ಆರಿಸಿದ ನೀರಿನಲ್ಲಿ ಮಾಡಿದ ನಿಂಬೆ ಹಣ್ಣಿನ ಜ್ಯೂಸ್ ಆಹಾರ ಸೇವನೆಯ ಒಂದು ಗಂಟೆ ಮೊದಲು ಸೇವಿಸಬೇಕು. ನಿಂಬೆಯಲ್ಲಿ ಪೊಟ್ಯಾಷಿಯಂ ಇರುವುದರಿಂದ ಆಮ್ಲವನ್ನು ಕಡಿಮೆ ಮಾಡಿ ಜೀರ್ಣಶಕ್ತಿಯನ್ನು ಊರ್ಜಿತ ಗೊಳಿಸುವುದು.
11. ಬಿಳಿ ನೀರುಳ್ಳಿಯನ್ನು ಮೊಸರಿನೊಂದಿಗೆ ಒಂದು ವಾರ ಕಾಲ ಸೇವಿಸುವುದು ಲಾಭದಾಯಕ.
12. ಜೀರಿಗೆ, ಕೊತ್ತಂಬರಿ, ಕಲ್ಲು ಸಕ್ಕರೆ ಸಮಪ್ರಮಾಣದಲ್ಲಿ ಸೇರಿಸಿ ಪುಡಿಮಾಡಿ ದಿನಕ್ಕೆ ಎರಡು ಬಾರಿ ಎರಡು ಚಮಚದಷ್ಟು ಸೇವಿಸಬೇಕು.
13. ಅರ್ಧ ಚಮಚದಷ್ಟು ಕರಿಮೆಣಸಿನ ಪುಡಿಯನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.
14. ಆಹಾರ ಸೇವನೆಯ ಅರ್ಧಗಂಟೆ ಮೊದಲು ಅಥವಾ ಅರ್ಧ ಗಂಟೆ ನಂತರ ವಜ್ರಾಸನದಲ್ಲಿ ಐದು ನಿಮಿಷ ಕುಳಿತುಕೊಳ್ಳುವುದರಿಂದ ಎಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ.
15. ಹರಿತಕಿ, ಆಮಲಕ, ವಿಭೀತಕಿ( ಅಣಿಲೆಕಾಯಿ, ನೆಲ್ಲಿಕಾಯಿ, ಶಾಂತಿಕಾಯಿ) ( ತ್ರಿಫಲ) ಇದನ್ನು ಪುಡಿಮಾಡಿ ಚೂರ್ಣ ರೂಪಕ್ಕೆ ತಂದು, ಬಿಸಿನೀರಿನಲ್ಲಿ ಕರಗಿಸಿ ನಿತ್ಯ ಒಂದು ಅಥವಾ ಎರಡು ಬಾರಿ ಸೇವಿಸುವುದು.
16. ಒಂದು ಚಮಚದಷ್ಟು ಚೆನ್ನಾಗಿ ಜಜ್ಜಿದ ಅಜಮೋದ( ಓಮ) ಬೀಜಗಳನ್ನು 1 ಚಮಚ ನಿಂಬೆರಸದೊಂದಿಗೆ ಸೇರಿಸಿ ಒಂದು ಗ್ಲಾಸ್ ನೀರಿನೊಂದಿಗೆ ಸೇರಿಸಿ ಕುಡಿಯಬೇಕು.
17. ಹಸಿ ಕ್ಯಾರೆಟನ್ನು ಹಸಿಯಾಗಿ ಸೇವಿಸುವುದು ಅಥವಾ ಅದರ ಜ್ಯೂಸ್ ಮಾಡಿ ಕುಡಿಯುವುದು.
ಹೊಟ್ಟೆ ಸರಿಯಾಗಿದ್ದರೆ ಹೃದಯ ಸರಿಯಾಗಿರುತ್ತದೆ. ಹೊಟ್ಟೆ ಸರಿಯಾಗಿದ್ದರೆ ಮೆದುಳು ಚುರುಕಾಗಿರುತ್ತದೆ. ಹೊಟ್ಟೆಯೇ ಎಲ್ಲ ರೋಗಗಳಿಗೂ ಮೂಲ. ನಿಮ್ಮ ಹೊಟ್ಟೆ ಚೆನ್ನಾಗಿರಲಿ. ನಿಮ್ಮ ಹೊಟ್ಟೆ ಸಿಕ್ಕಿದ್ದನ್ನು ತುಂಬಿಸುವ ಕಸದ ಡಬ್ಬ ಆಗದಿರಲಿ.
✍️ ಆರ್ .ಪಿ .ಬಂಗಾರಡ್ಕ.M.S.(Ayu)
ಖ್ಯಾತ ಆಯುರ್ವೇದ ತಜ್ಞ ವೈದ್ಯರು ಹಾಗೂ ಆಡಳಿತ ನಿರ್ದೇಶಕರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ,
ನರಿಮೊಗರು, ಪುತ್ತೂರು .ದ.ಕ.574202
ಅಸಿಸ್ಟೆಂಟ್ ಪ್ರೊಫೆಸರ್, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ.
www.prasadini.com
mail id:rpbangaradka@gmail.com
Mob. 9740545979
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.