ಫೆಬ್ರವರಿ 28, ದೇಶವೇ ಸಂಭ್ರಮಿಸುವ ದಿನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ತಮ್ಮ ಮಹತ್ತರ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ ದಿನವಿದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ. 1928 ರ ಫೆಬ್ರವರಿ 28 ರಂದು ಸಿ.ವಿ.ರಾಮನ್ ಅವರು ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದರು. ಎರಡು ವರ್ಷಗಳ ನಂತರ ಈ ಆವಿಷ್ಕಾರಕ್ಕಾಗಿ ರಾಮನ್ ಅವರಿಗೆ ನೊಬೆಲ್ ಪುರಸ್ಕಾರ ದೊರಕಿತು. ಮುಂದಿನ ದಿನಗಳಲ್ಲಿ ಅದು ರಾಮನ್ ಪರಿಣಾಮವೆಂದೇ ಪ್ರಸಿದ್ಧವಾಯಿತು. ಇದು ಇತಿಹಾಸ. 1987 ರಿಂದಲೂ ದೇಶಾದ್ಯಂತ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. 1930 ರಿಂದ ಇಂದಿನವರೆಗೆ – ಭಾರತದಲ್ಲೇ ಹುಟ್ಟಿ, ಬೆಳೆದು, ತಮ್ಮ ಕಾರ್ಯಕ್ಷೇತ್ರವನ್ನು ವಿದೇಶಕ್ಕೆ ಬದಲಿಸದ ಏಕೈಕ ನೊಬಲ್ ಪುರಸ್ಕೃತ ವಿಜ್ಞಾನಿ – ಸಿ.ವಿ.ರಾಮನ್.
ಸರ್ ಚಂದ್ರಶೇಖರ ವೆಂಕಟರಾಮನ್ – ಸರ್ ಸಿ.ವಿ.ರಾಮನ್, ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ, ಚಂದ್ರಶೇಖರ ವೆಂಕಟರಾಮನ್ರವರು, ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು 1930 ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ “ರಾಮನ್ ಎಫೆಕ್ಟ್” ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು. ಚಂದ್ರಶೇಖರ ವೆಂಕಟಾರಾಮನ್, ನವೆಂಬರ್ 7, 1888 ರಲ್ಲಿ ತಮಿಳುನಾಡುನ ತಿರುಚಿನಾಪಳ್ಳಿ ಜಿಲ್ಲೆಯ ’ತಿರುವನೈಕಾವಲ್’ ಎಂಬಲ್ಲಿ ಜನಿಸಿದರು. ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿ, ಪಾರ್ವತಿ ಅಮ್ಮಾಳ್. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು.
1900 : ತಮ್ಮ 12 ನೆ ವಯಸ್ಸಿನಲ್ಲೇ ಮೆಟ್ರಿಕ್ಯುಲೆಶನ್ ಮುಗಿಸಿದರು.
1907 : ಎಂ. ಎಸ್ಸಿ. ಪದವಿ
1917 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯರಾದರು
1924 ರಲ್ಲಿ ’ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿ’ಗೆ ರಾಮನ್ ಆಯ್ಕೆಯಾದರು
ಮಾರ್ಚ್ 16, 1928 ರಲ್ಲಿ ತಮ್ಮ ಶೋಧನೆ, ’ರಾಮನ್ ಎಫೆಕ್ಟ್’ನ್ನು ’ಬೆಂಗಳೂರಿ’ನಲ್ಲಿ ಬಹಿರಂಗಪಡಿಸಿದ ರಾಮನ್, 1930 ರಲ್ಲಿ ಅದಕ್ಕಾಗಿ ’ನೋಬೆಲ್ ಪ್ರಶಸ್ತಿ’ಗಳಿಸಿದರು.
ಗೌರವ, ಪ್ರಶಸ್ತಿಗಳು-ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ,ನೈಟ್ ಹುಡ್ ಪ್ರಶಸ್ತಿ,ನೋಬೆಲ್ ಪ್ರಶಸ್ತಿ (1930), ಭಾರತ ರತ್ನ ಪ್ರಶಸ್ತಿ (1954),
ಡಾ. ರಾಮನ್, 6, ಮೇ, 1907 ರಲ್ಲಿ ಲೋಕಸುಂದರಿ ಅಮ್ಮಾಳ್ ಎಂಬ ಹುಡುಗಿಯೊಂದಿಗೆ ವಿವಾಹವಾದರು. ಚಂದ್ರಶೇಖರ್, ಮತ್ತು ರಾಧಾಕೃಷ್ಣನ್, ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ಇಬ್ಬರೂ ವಿಜ್ಞಾನಿಗಳು.
1934ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಡಾ. ರಾಮನ್, ತದನಂತರ 1943 ರಲ್ಲಿ ರಾಮನ್ ಸಂಶೋಧನಾ ಕೆಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಪ್ರೊ. ರಾಮನ್ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಂಬ ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು ಅವರ ಜೀವಿತ ಕಾಲದಲ್ಲೇ ಸ್ಥಾಪಿಸಿ ಬಹಳಷ್ಟು ಸಂಶೋಧನೆಗಳನ್ನು ಮಾಡಿದರು. ಈ ಸಂಸ್ಥೆ ವಿಶೇಷವಾಗಿ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನ ಸಂಸ್ಥೆಯಾಗಿದೆ. ನವೆಂಬರ್ 21, 1970 ರಲ್ಲಿ, ಪ್ರೊ.ರಾಮನ್ರವರು, ದೇಮಹಳ್ಳಿಯಲ್ಲಿ ನಿಧನರಾದರು.
ಸ್ವಾವಲಂಬಿ ಸಂಶೋಧನಾಲಯಗಳ ಸ್ಥಾಪನೆ: ಬಂಗಾಳದಲ್ಲಿ ರಾಜ್ಯ ವಿಭಜನೆ ವಿರುದ್ದ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ತೀವ್ರಗೊಂಡಿದ್ದ ಕಾಲವದು. ಇದರಿಂದಾಗಿ ಪ್ರತಿಷ್ಟಿತ ವಿಜ್ಞಾನ ಸಂಸ್ಥೆಗಳಲ್ಲಿ ಭಾರತೀಯರೇ ಹುದ್ದೆ ಅಲಂಕರಿಸಬೇಕೆಂದು ಕೋಲ್ಕತ್ತಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಇದರಿಂದಾಗಿ ಪ್ರತಿಭಾನ್ವಿತ ರಾಮನ್ರವರು ತಾವು ಕೆಲಸ ಮಾಡುತ್ತಿದ್ದ ಐಸಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಪ್ರೊಫೆಸರ್ ಹುದ್ದೆಗೆ ವಿಶ್ವವಿದ್ಯಾಲಯ ಸೇರಿದರು. 1921 ರಲ್ಲಿ ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿ ಹಡಗಿನಲ್ಲಿ ಭಾರತಕ್ಕೆ ರಾಮನ್ ಪ್ರಯಾಣಿಸುತ್ತಿದ್ದರು. ಆಗವರು ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿದ್ದರು. ಅಷ್ಟರಲ್ಲಾಗಲೇ ಅವರು ದೃಗ್ವಿಜ್ಞಾನ ಮತ್ತು ಧ್ವನಿ ವಿಜ್ಞಾನಗಳ ಅಧ್ಯಯನದಲ್ಲಿ ನಡೆಸಿರುವ ಸಂಶೋಧನೆ ಕುರಿತು ಇಂಗ್ಲೆಂಡ್ನ ಜೆ.ಜೆ. ಥಾಮ್ಸನ್ ಮತ್ತು ಲಾರ್ಡ್ ರುದರರ್ಫರ್ಡ್ ರಂಥಹ ವಿಜ್ಞಾನಿಗಳ ಗಮನ ಸೆಳೆದಿದ್ದರು. ಹಡಗಿನ ಪಯಣದಲ್ಲಿ ಸಾಗರದ ಶುಭ್ರ ನೀಲಿ ಬಣ್ಣವನ್ನು ಕಂಡು ವಿಸ್ಮಯಗೊಂಡರು. ಆಗಸದ ನೀಲಿ ಬಣ್ಣಕ್ಕೆ ಕಾರಣವೇನೆಂದು ಲಾರ್ಡ್ ರಾಲೆ ಎಂಬ ವಿಜ್ಞಾನಿ ಅದಾಗಲೇ ವಿವರಣೆ ನೀಡಿ ನೊಬೆಲ್ ಪ್ರಶಸ್ತಿ ಪಡೆದುಕೊಂಡಿದ್ದ. ವಾಯುಮಂಡಲದಲ್ಲಿರುವ ಧೂಳಿನ ಕಣಗಳು ಮತ್ತು ವಿವಿಧ ಅನಿಲಗಳು ಬೆಳಕನ್ನು ಚದುರಿಸುವುದರಿಂದ ಬೆಳಕಿನಲ್ಲಿರುವ ನೀಲಿ ಬಣ್ಣ ಹೆಚ್ಚು ಚದುರುತ್ತದೆ, ಹಾಗಾಗಿ ಬಾನಿನ ಬಣ್ಣ ನೀಲಿ ಎಂದು ವಿವರಿಸಿದ್ದ. ಆದರೆ ಸಮುದ್ರದ ಬಣ್ಣಕ್ಕೆ ಕಾರಣ ಕೊಡಲು ಸಾಧ್ಯವಾಗಿರಲಿಲ್ಲ.ರಾಮನ್ ಕಣ್ಣ ಮುಂದೆ ನೀಲಿ ಬಣ್ಣ ಹೊದ್ದ ನೀರು ಕಂಗೊಳಿಸುತ್ತಿತ್ತು. ಮೈ ಮನವೆಲ್ಲ ಬೆಳಕಿನ ಚದುರುವಿಕೆಯ ವಿಷಯದಲ್ಲಿ ಲೀನವಾಗಿತ್ತು. ನೀರಿನ ಅಣುಗಳು ಬೆಳಕಿನಲ್ಲಿರುವ ನೀಲಿ ಬಣ್ಣವನ್ನು ಹೆಚ್ಚಿನ ಪ್ರಮಾಣದಲ್ಲಿ ಚದುರಿಸುವುದೇ ಈ ನೀಲಿಗೆ ಕಾರಣವೆಂದು ಆಲೋಚಿಸತೊಡಗಿದರು. ಸಮುದ್ರದ ನೀರನ್ನು ಅಲ್ಲಿಯೇ ಪಾತ್ರೆಗಳಲ್ಲಿ ಸಂಗ್ರಹಿಸಿ ರೋಹಿತ ದರ್ಶಕ ಬಳಸಿ ಹಡಗಿನಲ್ಲಿಯೇ ಪ್ರಯೋಗ ಮಾಡತೊಡಗಿದರು. ಹಡಗು ಮುಂಬೈ ಬಂದರು ತಲುಪುವ ಹೊತ್ತಿಗೆ ಅವರ ಪ್ರಯೋಗ ಫಲಿತಾಂಶಗಳು ಸಂಶೋಧನ ಲೇಖನವಾಗಿದ್ದವು. ಶೀಘ್ರದಲ್ಲೇ ಪ್ರಸಿದ್ದ ನೇಚರ್ ಪತ್ರಿಕೆಯಲ್ಲಿ ಪ್ರಕಟವಾದವು.
ಬೆಳಕಿನ ಚದುರುವಿಕೆ ಕುರಿತು ಸಂಶೋಧನೆ
ವಿಜ್ಞಾನದಲ್ಲಿ ಸಂಶೋಧನೆಗಳು ಬಹುಮಟ್ಟಿಗೆ ಏಕ ವ್ಯಕ್ತಿಯ ಸಾಹಸಗಾಥೆಗಳಲ್ಲ, ಬದಲಿಗೆ ಹಲವು ದಿಗ್ಗಜರ ಸಾಂಘಿಕ ಪ್ರಯತ್ನ. ರಾಮನ್ರವರಿಗೆ ಸಹಾಯಕ ಸಂಶೋಧಕರಾಗಿದ್ದ ಕೆ.ಆರ್. ರಾಮನಾಥನ ಅವರು, ಇಂದು ’ರಾಮನ್ ರೇಖೆಗಳು’ ಎಂದು ಕರೆಯಲಾಗುವುದನ್ನು 1921 ರಲ್ಲಿಯೇ ಗುರುತಿಸಿದ್ದರಾದರೂ, ಅವುಗಳು ದ್ರವದಲ್ಲಿನ ಅಶುದ್ದತೆಯಿಂದಾಗಿ ಕಾಣುವ ರೇಖೆಗಳು ಎಂದು ತಪ್ಪು ತಿಳಿಯಲಾಯಿತು. ತದನಂತರ ಬೆಳಕಿನ ಚದುರುವಿಕೆಯನ್ನು ಪ್ರಾಯೋಗಿಕವಾಗಿ ಸ್ಪಷ್ಟಪಡಿಸಲು ರಾಮನ್ ತನ್ನ ಶಿಷ್ಯಂದಿರೊಂದಿಗೆ ತೊಡಗಿದರು. ಇವರಲ್ಲಿ ಬಡತನದ ಮಧ್ಯೆಯೂ ಸಂಶೋಧಕನಾಗಿ ರೂಪುಗೊಳ್ಳುತ್ತಿದ್ದ ಕೆ.ಎಸ್. ಕೃಷ್ಣನ್ ಬಹು ಪ್ರಮುಖರು. 1927 ರ ಹೊತ್ತಿಗೆ ಅಮೇರಿಕಾದ ಡೆನಿಸ್ ಕಾಂಪ್ಟನ್ ರವರಿಗೆ ‘ಕಾಂಪ್ಟನ್ ಪರಿಣಾಮ’ದ ಆವಿಷ್ಕಾರಕ್ಕಾಗಿ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಘನ ದ್ರವ್ಯಗಳಲ್ಲಿ ಕ್ಷ-ಕಿರಣಗಳ ಚದುರುವಿಕೆಯನ್ನು ಮತ್ತು ಆ ಮೂಲಕ ಅವುಗಳ ಅಲೆಯುದ್ದ ಹೆಚ್ಚುವ ವಿಶಿಷ್ಟ ವಿದ್ಯಮಾನವನ್ನು ಕಾಂಪ್ಟನ್ ವಿವರಿಸಿದ್ದರು. ಅಲ್ಲದೆ, ಅಷ್ಟರಲ್ಲಾಗಲೇ ಬೆಳಕು ಯಾವುದೇ ಮಾಧ್ಯಮದ ಮೂಲಕ ಚಲಿಸುವಾಗ ಉಂಟಾಗುವ ಪರಿಣಾಮದ ಕುರಿತು ಸೈದ್ದಾಂತಿಕ ಹೊಳಹುಗಳು ದೊರೆತಿದ್ದವು. 1923 ರಲ್ಲಿ ಜರ್ಮನಿಯ ಭೌತವಿಜ್ಞಾನಿಗಳಾದ ಸ್ಮೆಕೆಲ್, ಬಾರ್ನ್, ಹೈಸೆನ್ಬರ್ಗ್, ಕ್ರಾಮರ್ ಹಾಗೂ 1927 ರಲ್ಲಿ ಡಿರಾಕ್ ಎಂಬ ವಿಜ್ಞಾನಿಗಳು, ಬೆಳಕಿನ ಕಿರಣವು ಯಾವುದೇ ಪದಾರ್ಥದ ಮೂಲಕ ಹಾದುಹೋಗುವಾಗ ಚದುರುವಿಕೆಯಿಂದ ಕಿರಣದ ಅಲೆಯುದ್ದದಲ್ಲಿ ವ್ಯತ್ಯಾಸವಾಗುತ್ತದೆಂದು ಊಹಿಸಿದ್ದರು. ಇದನ್ನು ಪ್ರಾಯೋಗಿಕವಾಗಿ ನಿರೂಪಿಸಲು ಹಲವು ವಿಜ್ಞಾನಿಗಳ ತಂಡ ಪೈಪೋಟಿ ನಡೆಸಿತ್ತು.
ರಾಮನ್ ಪರಿಣಾಮ ಎಂದರೇನು?
1928 ರ ಫೆಬ್ರವರಿ 28 ರಂದು ತಮ್ಮ ಪ್ರಯೋಗದಲ್ಲಿ ರಾಮನ್ ಮತ್ತು ಕೃಷ್ಣನ್ ಮೊದಲ ಯಶಸ್ಸು ಕಂಡರು. ದ್ರವ ಮಾಧ್ಯಮದಲ್ಲಿ ಬೆಳಕಿನ ಅಲೆಗಳನ್ನು ದ್ರವದ ಅಣುಗಳು ಚದುರಿಸುವ ಮೂಲಕ ಬೆಳಕಿನ ರೋಹಿತ ರೇಖೆಯ ಅಲೆಯುದ್ದ ವ್ಯತ್ಯಾಸವಾಗಿ ಹೊಸ ರೇಖೆಗಳು ಪ್ರಕಟವಾಗುವ ಹೊಸ ವಿದ್ಯಮಾನವನ್ನು ಅಂದು ಅವರಿಬ್ಬರು ಕಂಡರು. ಸೂಕ್ಷ್ಮ ಕಣ (ಕ್ವಾಂಟಂ) ಸಿದ್ದಾಂತ ಬೆಳೆದು ಬರುತ್ತಿದ್ದ ಕಾಲವದು. ಬೆಳಕಿನ ಕಿರಣ ಅಸಂಖ್ಯಾತ ಶಕ್ತಿಯ ಪ್ಯಾಕೆಟ್ ಅಥವಾ ಪೋಟಾನುಗಳ ಪ್ರವಾಹ ಎಂದು ಇದು ಹೇಳುತ್ತದೆ. ಇದನ್ನು ರಾಮನ್ ಬಳಸಿಕೊಂಡು ತನ್ನ ಆವಿಷ್ಕಾರವನ್ನು ವಿವರಿಸಿದರು. ಮಾಧ್ಯಮದ ಮೂಲಕ ಬೆಳಕು ಹಾದು ಹೋಗುವಾಗ ಬೆಳಕಿನ ಕಿರಣದಲ್ಲಿರುವ ಪೋಟಾನುಗಳು ಮತ್ತು ಮಾಧ್ಯಮದ ಅಣುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಇಲ್ಲಿ ಮೂರು ಸಾಧ್ಯತೆಗಳಿವೆ –
ಮೊದಲನೆಯ ಸಾಧ್ಯತೆ, ಡಿಕ್ಕಿ ಹೊಡೆದ ಪೋಟಾನು ಅಥವಾ ಅಣುಗಳು ಹಿಗ್ಗುವಂತವಾಗಿದ್ದರೆ, ಡಿಕ್ಕಿ ಹೊಡೆದ ನಂತರದಲ್ಲಿ ಅವುಗಳಲ್ಲಿನ ಶಕ್ತಿಯಲ್ಲಿ ಏರುಪೇರು ಆಗಿರುವುದಿಲ್ಲ. ಇಂಥಹ ಹಿಗ್ಗುವ ಸ್ವಭಾವದ ಚದುರುವಿಕೆಯನ್ನು ರಾಲೆ ಚದುರುವಿಕೆ ಎನ್ನುತ್ತಾರೆ.
ಎರಡನೆಯ ಸಾಧ್ಯತೆ, ಡಿಕ್ಕಿ ಹೊಡೆದಾಗ ಮಾಧ್ಯಮ ಅಣುಗಳು ಮೂಲ ಬೆಳಕಿನ ಕಿರಣದಿಂದ ಸ್ವಲ್ಪಾಂಶ ಶಕ್ತಿಯನ್ನು ಹೀರಿದ ಪರಿಣಾಮವಾಗಿ ಚದುರಿಸಲ್ಪಟ್ಟ ಬೆಳಕಿನ ಶಕ್ತಿ ಕಡಿಮೆಯಾಗಿ ಅದರ ಅಲೆಯುದ್ದ ಹೆಚ್ಚುವುದು.
ಮತ್ತೊಂದು ಸಾಧ್ಯತೆ, ಸ್ವಯಂ ಅಣುಗಳು ಬೆಳಕಿನ ಕಿರಣಗಳಿಗೆ ಶಕ್ತಿಯನ್ನು ನೀಡುವ ಮೂಲಕ ಚದುರಿಸಲ್ಪಟ್ಟ ಕಿರಣದ ಶಕ್ತಿ ಹೆಚ್ಚಿ ಅಲೆಯುದ್ದ ಕಡಿಮೆಯಾಗುವುದು. ಕೊನೆಯ ಇವೆರಡೂ ಸಾಧ್ಯತೆಗಳಲ್ಲಿ, ಅಂದರೆ ಡಿಕ್ಕಿ ಹೊಡೆದ ಸ್ವಲ್ಪಾಂಶ ಬೆಳಕಿನ ಕಿರಣಗಳಲ್ಲಿನ ಅಲೆಯುದ್ದ ಬದಲಾಗಿ, ಆ ಕಿರಣದ ಬಣ್ಣವೂ ಬದಲಾಗುತ್ತದೆ.
ಪರಿಣಾಮವಾಗಿ ಮೂಲ ರೋಹಿತ ರೇಖೆಯ ಇಕ್ಕೆಲೆಗಳಲ್ಲಿ ನೂತನ ರೇಖೆಗಳು ಪ್ರಕಟವಾಗುತ್ತವೆ. ಅವುಗಳ ಅಲೆಯುದ್ದ, ತೀವ್ರತೆ ಮಾಧ್ಯಮದ ಅಣುಗಳ ರಚನೆಯನ್ನು ಅವಲಂಬಿಸಿದೆ. ಡಿಕ್ಕಿ ಹೊಡೆದು ಚದುರಿದ 10 ಲಕ್ಷ ಬೆಳಕಿನ ಕಣಗಳು ಅಥವಾ ಪೋಟಾನ್ಗಳ ಪೈಕಿ ಕೇವಲ ಒಂದು ಮಾತ್ರವೇ ವಿದ್ಯಮಾನಕ್ಕೆ ಒಳಗಾಗುತ್ತವೆ. ಹೀಗೆ ಬೆಳಕಿನ ಚದುರುವಿಕೆಯ ವಿದ್ಯಮಾನಕ್ಕೆ ರಾಮನ್ ಪರಿಣಾಮ ಎನ್ನುತ್ತೇವೆ.
ರಾಮನ್ ಪರಿಣಾಮದ ಮಹತ್ವ
ಇಂದು ‘ರಾಮನ್ ಪರಿಣಾಮ’ ದ್ರವ್ಯದ ಅಣುರಚನೆಯನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಮೈಕ್ರೋವೇವ್, ಲೇಸರ್, ಇನ್ಫ್ರಾರೆಡ್, ಅಲ್ಟ್ರಾ ವಯೋಲೆಟ್, ಮತ್ತು ಕ್ಷ-ಕಿರಣ ರಾಮನ್ ಸ್ಪೆಕ್ಟ್ರೋಸ್ಕೋಪಿ ಇಂದು ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು. ಭೌತ, ಜೀವ, ರಸಾಯನ ಮತ್ತು ಖಗೋಳ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನದ ಹಲವು ವಿಭಾಗಗಳಲ್ಲಿ ಇದರ ಪರಿಣಾಮವಿದೆ. ರಾಮನ್ ಪರಿಣಾಮ ಕುರಿತು ಆಲ್ಬರ್ಟ್ ಐನ್ಸ್ಟೀನ್ ಸರಳವಾಗಿ ಈ ರೀತಿ ಹೇಳಿದ್ದಾರೆ: ವಸ್ತುವಿನಲ್ಲಿ ಬೆಳಕಿನ ಚದುರುವಿಕೆಯಿಂದ ಬೆಳಕಿನ ಶಕ್ತಿಯಲ್ಲಾಗುವ ಬದಲಾವಣೆಯನ್ನು ಗುರುತಿಸಿದವರಲ್ಲಿ ರಾಮನ್ ಮೊದಲಿಗರು. ನನಗಿನ್ನೂ ಸ್ಪ ಷ್ಟವಾಗಿ ನೆನಪಿದೆ – ಬರ್ಲಿನ್ನಿನ ಭೌತಶಾಸ್ತ್ರ ಗೋಷ್ಟಿಯಲ್ಲಿ ಭಾಗವಹಿಸಿದ ನಮ್ಮೆಲ್ಲರ ಮೇಲೆ ಈ ಆವಿಷ್ಕರ ಗಾಢ ಪರಿಣಾಮ ಬೀರಿತ್ತು. ಇಂದಿನ ದುರಂತವೆಂದರೆ, ’ರಾಮನ್ ಪರಿಣಾಮ’ ವನ್ನು ಈ ದೇಶದಲ್ಲಿಯೇ ಆವಿ?ರಿಸಿದ್ದರೂ ಕೂಡ, ಈ ಪರಿಣಾಮದ ಆಧಾರದಲ್ಲಿ ಕಾರ್ಯನಿರ್ವಹಿಸುವ ಲೇಸರ್ ಉಪಕರಣಗಳನ್ನು ತಯಾರಿಸಲಾಗದೇ ಇಂದಿಗೂ ಆಮದು ಮಾಡಿಕೊಳ್ಳುತ್ತಿದ್ದೇವೆ.
ರಾಮನ್ ಮತ್ತು ಅವರು ಹುಟ್ಟು ಹಾಕಿದ ಅಪ್ಪಟ ಸ್ವಾವಲಂಬನೆಯ ವಿಜ್ಞಾನ ಚಿಂತನೆಯ ಬಗ್ಗೆ ಚರ್ಚೆ ಮಾಡಲೇಬೇಕಾದ ಸಂದರ್ಭವಿದು. ಜಗತ್ತಿನ ಭವಿಷ್ಯವನ್ನು ರೂಪಿಸುವಲ್ಲಿ ಭಾರತೀಯರು ಮಹತ್ವದ ಪಾತ್ರವಹಿಸಲಿದ್ದಾರೆಂದು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಈಗಾಗಲೇ ಮನವರಿಕೆಯಾಗಿದೆ. ದೇಶವೊಂದರ ಆರ್ಥಿಕ ಪ್ರಗತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ. ಇಂದಿನ ವಿಶ್ವ ವ್ಯಾಪಾರ ಸಂಸ್ಥೆಯಿಂದ ಪ್ರೇರಿತವಾದ ಜಾಗತೀಕರಣದ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಉತ್ತೇಜನ ನೀಡದಿರುವ ದೇಶಗಳಿಗೆ ಉಳಿಗಾಲವಿಲ್ಲ. ಜಗತ್ತಿನೆಲ್ಲೆಡೆ ನೊಬಲ್ ಪುರಸ್ಕೃತರನ್ನು ಪೋಷಿಸುವ ಸಂಸ್ಥೆ ವಿಶ್ವವಿದ್ಯಾಲಯ. ಈ ನಿಟ್ಟಿನಲ್ಲಿ ನಮ್ಮ ದೇಶದ ವಿಶ್ವವಿದ್ಯಾಲಯಗಳು ಕಳೆದ ಎಂಬತ್ಮೂರು ವರ್ಷಗಳಲ್ಲಿ ಮತ್ತೊಬ್ಬ ಸಿ.ವಿ.ರಾಮನ್ ಅನ್ನು ಕೊಟ್ಟಿಲ್ಲ. ಇದರ ಬಗ್ಗೆ ಕಾರಣ ಹುಡುಕ ಹೊರಟರೆ ನಮ್ಮೆಲ್ಲ ಪ್ರತಿಭಾವಂತ ವಿದ್ಯಾರ್ಥಿಗಳು ಮೂಲ ವಿಜ್ಞಾನ ಅಧ್ಯಯನದಿಂದ ವಿಮುಖರಾಗಿರುವ ಕಠೋರ ಸತ್ಯ ಗೋಚರಿಸುತ್ತದೆ. ಒಂದೆಡೆ ಸಂಪನ್ಮೂಲಗಳ ಕೊರತೆ, ಮತ್ತೊಂದೆಡೆ ಅನ್ವೇಷಕ ಪ್ರವೃತ್ತಿಯ ವಿದ್ಯಾರ್ಥಿಗಳ ಅಭಾವ. ಈ ನೆಪಗಳಿಗೂ ಮಿಗಿಲಾದ ಒಂದು ಪ್ರಮುಖ ಕಾರಣವೊಂದಿದೆ. ಅದುವೇ ಬದಲಾಗುತ್ತಿರುವ ಆದ್ಯತೆ.
ಜಗತ್ತಿನ ಮೂರನೆಯ ಅತಿ ದೊಡ್ಡ ಸಂಖ್ಯೆಯ ವಿಜ್ಞಾನ ಮತ್ತು ತಂತ್ರಜ್ಞಾನ ಪದವೀಧರರನ್ನು ಉತ್ಪಾದಿಸುತ್ತಿರುವ ದೇಶ ನಮ್ಮದು. ಸದ್ಯಕ್ಕೆ ಫ್ಯಾಕ್ಟರಿಯಲ್ಲಿ ಹೊರಬರುವ ಉತ್ಪನ್ನಗಳಂತೆ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಆದರೆ ಮೂಲ ವಿಜ್ಞಾನ ವಿಷಯಗಳನ್ನು ಗಂಭೀರವಾಗಿ ಅಭ್ಯಸಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ತಮ್ಮದೇ ದೇಶ ಕಟ್ಟುವ ಸವಾಲೆಸೆಯಬಲ್ಲ ಕೆಲಸಗಳಿಂದ ವಿಮುಖರಾಗುತ್ತಾ ವಿದೇಶಗಳಲ್ಲಿ ಸಾಮಾನ್ಯರೂ ಮಾಡಬಹುದಾದಂಥ ಸಣ್ಣ-ಪುಟ್ಟ ಕೆಲಸಗಳಿಗೆ ಶರಣಾಗುತ್ತಿದ್ದಾರೆ.
ಶಕ್ತಿ ಮತ್ತು ರಕ್ಷಣಾ ಸಂಶೋಧನಾ ಇಲಾಖೆಗಳನ್ನು ಸ್ವಾವಲಂಬನೆಯ ದಾರಿಗೆ ಎಳೆದ ರಾಜಾರಾಮಣ್ಣನವರನ್ನೂ ಇಂದು ನೆನೆಯಬೇಕು. ಸೂಪರ್ ವಾಹಕಕ್ಕೆ ಸಂಬಂಧಿಸಿದ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿ ಇದೀಗ ನ್ಯಾನೊ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮಗ್ನರಾಗಿರುವ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್, ವಾಯು ಚಲನ ವಿಜ್ಞಾನದ ಜಗದ್ಗುರು ರೊದ್ದ ನರಸಿಂಹ, ಬಾಹ್ಯಾಕಾಶ ಕ್ಷೇತ್ರದಲ್ಲಿನ ದೇಶದ ಅಪ್ರತಿಮ ಸಾಧನೆಯ ರೂವಾರಿ ಉಡುಪಿ ರಾಮಚಂದ್ರ ರಾವ್, ಜೀವ ವಿಜ್ಞಾನದ ಕ್ಲಿಷ್ಟ ಲೆಕ್ಕಾಚಾರಗಳನ್ನು ಗಣಿತದೊಂದಿಗೆ ತಾಳೆನೋಡುತ್ತಾ ಪರಿಸರ ವಿಜ್ಞಾನದಲ್ಲಿ ವಿಶ್ವಮಾನ್ಯ ಸಾಧನೆಗೈದಿರುವ ಮಾಧವ ಗಾಡ್ಗೀಳ್, ಪರಮಾಣು ವಿಜ್ಞಾನವನ್ನು ಕಲಿತೂ ಗಾಂಧಿವಾದಿಯಾಗಿ ರೂಪುಗೊಂಡು ಸಾಮಾನ್ಯರಿಗೆ ವಿಜ್ಞಾನ ಮುಟ್ಟಿಸಿದ ಹೆಚ್.ನರಸಿಂಹಯ್ಯ, ರಾಕೆಟ್ ತಂತ್ರಜ್ಞಾನ ಅಭ್ಯಸಿಸಿ ದೇಶದ ಮುಂಚೂಣಿ ಯೋಜನೆಗಳ ಸೂತ್ರಧಾರಿಯಾದ ಅಬ್ದುಲ್ ಕಲಾಮ್. ನಮ್ಮ ವಿಜ್ಞಾನ ವಿದ್ಯಾರ್ಥಿಗಳಿಗೆ ರೋಲ್ ಮಾಡಲಗಳಾಗಬೇಕು. ಹಾಗಾದಲ್ಲಿ ಮಾತ್ರ ನಮ್ಮ ದೇಶವೂ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲಬಹುದು. ವಿಜ್ಞಾನಗಳು ಕೇವಲ ಪ್ರಯೋಗಗಳಿಗೆ ಸೀಮಿತವಾಗದೆ, ಎಲ್ಲ ಶೋಷಿತ ಮನುಜರ ಬಿಡುಗಡೆಯ ಹಾದಿಯಾಗಿ, ಸಾಮಾಜಿಕ ದುರಂತಗಳ ಬಗ್ಗೆ ಎಚ್ಚರಿಸುವ ದನಿಯಾಗಬೇಕು. ಇಂದು ಮಾತ್ರವಲ್ಲ, ಅನುದಿನವೂ ವಿಜ್ಞಾನ ದಿನವಾಗಲಿ ಎಂಬುದು ವಿಜ್ಞಾನಾಸಕ್ತರೆಲ್ಲರ ಹಾರೈಕೆ.
✍️ ಡಾ. ಗೋಪಾಲಕೃಷ್ಣ ಧೃವರಾಜ ಕಮಲಾಪೂರ
ಅಧ್ಯಾಪಕರು, ವಿದ್ಯುತ ವಿಭಾಗ,
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜನೀಯರಿಂಗ್ ಕಾಲೇಜು,
ಧಾರವಾಡ, ಮೊಬೈಲ್ : 94800248486
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.