ಇತ್ತೀಚೆಗೆ ಭಾರತದ ವೈದ್ಯಕೀಯ ಶಿಕ್ಷಣವನ್ನು ರೂಪಿಸುವ ಮತ್ತು ಮೇಲ್ವಿಚಾರಿಸುವ ನಿಯಂತ್ರಕ ಸಂಸ್ಥೆ ಎನ್.ಎಂ.ಸಿ. ವೈದ್ಯಕೀಯ ಕಾಲೇಜಿಗಳಲ್ಲಿ ಪದವಿಪ್ರಾಪ್ತಿಯ ದಿನ ವಿದ್ಯಾರ್ಥಿಗಳಿಗೆ ವಿದೇಶೀ ಮೂಲದ ಹಿಪ್ಪೋಕ್ರೇಟ್ಸ್ ಶಪಥವನ್ನು ಬೋಧಿಸುವ ಬದಲು ಭಾರತದ ಚರಕ ಶಪಥವನ್ನು ಬೋಧಿಸಬಹುದೆನ್ನುವ ಸಲಹೆಯನ್ನು ನೀಡಿತು. ಅನೇಕ ರಾಷ್ಟ್ರಗಳು ಆಧುನಿಕ ವೈದ್ಯ ವಿಜ್ಞಾನದ ವಿಧ್ಯಾರ್ಥಿಗಳಿಗೆ ತಮ್ಮ ನೆಲದ ಶಪಥವನ್ನು ಬೋಧಿಸುತ್ತವೆ. ಭಾರತದಲ್ಲಿಯೂ ಈ ಪದ್ಧತಿ ಅನುಷ್ಠಾನವಾಗಬೇಕೆಂಬುದು ಎನ್.ಎಂ.ಸಿಯ ಆಶಯ. ಹಿಪ್ಪೋಕ್ರೇಟ್ ಶಪಥದ ಜಗದ್ವ್ಯಾಪಿ ಮಾಡುವಲ್ಲಿ ಅಮೆರಿಕ, ಬ್ರಿಟಿಷ್ ಜನರ ಮೆಡಿಕಲ್ ಕೌನ್ಸಿಲ್ ಸೇರಿದಂತೆ ಅನೇಕ ಪಾಶ್ಚಿಮಾತ್ಯ ಸಂಸ್ಥೆಗಳ ಕೈವಾಡವಿದೆ. ತಮ್ಮ ವಸಾಹತು ರಾಷ್ಟ್ರಗಳಲ್ಲಿ ಐರೋಪ್ಯರು ಹಿಪ್ಪೋಕ್ರೇಟ್ ಶಪಥದಂತಹ ಅನೇಕ ವಸಾಹತುಶಾಹಿ ಕುರುಹುಗಳನ್ನು ಉಳಿಸಿಹೋಗಿರುವುದು ನಮಗೆಲ್ಲ ತಿಳಿದಿರುವ ವಿಷಯವೇ.
ಸಹಜವಾಗಿ ಎನ್.ಎಂ.ಸಿಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಯಿತು. ಎನ್.ಎಂ.ಸಿ ಆಧುನಿಕ ವೈದ್ಯ ಪದ್ಧತಿಯನ್ನು ನಾಶ ಮಾಡುತ್ತಿದೆ ಎಂಬ ಆರೋಪವೂ ವ್ಯಕ್ತವಾಯಿತು. ಭಾರತೀಯ ವೈದ್ಯರು,ಭಾರತ ಮೂಲದ ಶಪಥವನ್ನು ಸ್ವೀಕರಿಸುವುದರಿಂದ ಆಧುನಿಕ ವೈದ್ಯ ಪದ್ಧತಿಯ ನಾಶ ಹೇಗಾಗುತ್ತದೆ? ಆಧುನಿಕ ವೈದ್ಯ ವಿಜ್ಞಾನದ ಬೆಳವಣಿಗೆಯಲ್ಲಿ ಭಾರತೀಯ ವೈದ್ಯರ ಕೊಡುಗೆಯಿಲ್ಲವೆ? ತಮ್ಮದೇ ನೆಲ ವೈದ್ಯಕೀಯ ಶಪಥವನ್ನು ವಿದ್ಯಾರ್ಥಿಗಳಿಗೆಬೋಧಿಸುತ್ತಿರುವ ಚೀನಾ ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಆಧುನಿಕ ವೈದ್ಯ ಪದ್ಧತಿ ನಾಶವಾಗಿ ಹೋಗಿದೆಯೇ? ಒಂದನ್ನು ನಾವೆಲ್ಲರೂ ನೆನಪಿನಲ್ಲಿ ಇಡಬೇಕು,ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಜಗತ್ತಿನ ಎಲ್ಲಾ ಭಾಗದ ವಿಜ್ಞಾನಿಗಳೂ ಶ್ರಮಿಸಿದ್ದಾರೆ. ಅನಾದಿ ಕಾಲದಿಂದಲೂ ಜಗತ್ತಿನ ಎಲ್ಲಾ ಭಾಗದ ವಿಜ್ಞಾನಿಗಳ ನಿರಂತರ ಸಂಶೋಧನೆಗಳ ಫಲವಾಗಿ ಇವತ್ತಿನ ವೈದ್ಯಕೀಯ ಕ್ಷೇತ್ರ ಬೆಳೆದುನಿಂತಿದೆ, ಮತ್ತು ಬೆಳೆಯುತ್ತಿದೆ. ಇದಕ್ಕೆ ಭಾರತದ ಕೊಡುಗೆಯೂ ಸಾಕಷ್ಟಿದೆ.
ಕೇವಲ ಐರೋಪ್ಯರು ಮಾತ್ರ ವೈದ್ಯ ವಿಜ್ಞಾನಕ್ಕೆ ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆಂದು ಬಿಂಬಿಸಿ ಇಡೀ ವೈದ್ಯಕೀಯ ಕ್ಷೇತ್ರವನ್ನು ಪರಿಗಣಿಸಿ, ಹಿಪ್ಪೋಕ್ರೇಟ್ಸ್ಗೆ “ಫಾದರ್ ಆಫ್ ಮೆಡಿಸಿನ್” ಎಂಬ ಬಿರುದನ್ನಿತ್ತು ಅವನ ಹೆಸರಿನ ಶಪಥವನ್ನು ಜಗತ್ತಿನಾದ್ಯಂತ ವೈದ್ಯ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಹಿಪ್ಪೋಕ್ರೇಟ್ಸ್ನ ವಿಜ್ಞಾನ ತಪ್ಪು ಅಥವಾ ಸುಳ್ಳು ಎಂದಲ್ಲ. ಅಥವಾ ಹಿಪ್ಪೋಕ್ರೇಟ್ ಶಪಥ ಸರಿಯಿಲ್ಲವೆಂದೂ ಅಲ್ಲ. ನಮ್ಮದೇ ಆದ ಭವ್ಯ ವೈದ್ಯ ಪರಂಪರೆಯಿದೆ. ಸುಶ್ರುತ, ಚರಕ, ಅಗ್ನಿವೇಷ ಮುಂತಾದವರಿಂದ ಹಿಡಿದು ಡಾ. ಬಿಧನ್ ಚಂದ್ರರಾಯ್, ಡಾ. ಆನಂದಿಬಾಯಿ ಜೋಷಿ, ಡಾ. ಉಪೇಂದ್ರನಾಥ ಬ್ರಹ್ಮಚಾರಿ, ಡಾ. ಇಂದಿರಾ ಹಿಂದುಜಾ, ಡಾ.ಎಂ.ಸಿ.ಮೋದಿ, ಡಾ.ಗಗನ್ ದೀಪ್, ಡಾ. ದೇವಿಶೆಟ್ಟಿ, ಯಲ್ಲಪ್ರಗದ ಸುಬ್ಬ ರಾವ್ ಸೇರಿದಂತೆ ಸಾವಿರಾರು ಮಹನೀಯರ ಶ್ರಮದಿಂದ ಬೆಳೆದಬಂದ, ಬರುತ್ತಿರುವ, ಭವ್ಯ ವೈದ್ಯ ಪರಂಪರೆ ನಮ್ಮದು. ಈ ಶ್ರೇಷ್ಠ ಪರಂಪರೆಯ ಸಂಕೇತದಂತಿರುವ ಚರಕ ಶಪಥವನ್ನು ಭಾರತೀಯ ವೈದ್ಯ ವಿದ್ಯಾರ್ಥಿಗಳಿಗೆ ಬೋಧಿಸಬಹುದೆಂದೇ ಎನ್.ಎಂ.ಸಿ.ಸಲಹೆ ನೀಡಿದ್ದು.
ಹಾಗಾದರೆ ಹಿಪ್ಪೋಕ್ರೇಟ್ಸ್ ಯಾರು ? ಅವನ ಹೆಸರಿನ ಶಪಥವನನ್ನು ಯಾಕಾಗಿ ಜಗತ್ತಿನಾದ್ಯಂತ ನವ ವೈದ್ಯರಿಗೆ ಬೋಧಿಸಲಾಗುತ್ತದೆ? ಹಿಪ್ಪೋಕ್ರೇಟ್ಸ್ ಪ್ರಾಚೀನ ಗ್ರೀಸ್ನಲ್ಲಿ ವಾಸವಿದ್ದ ವೈದ್ಯ. ವೈದ್ಯಕೀಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನೂ ಕೊಟ್ಟಿದ್ದಾನೆ. ʻಏನ್ಷಿಯಂಟ್ ಗ್ರೀಕ್ ಮೆಡಿಸಿನ್’ ಅನ್ನು ವೃತ್ತಿಯನ್ನಾಗಿ ಮಾಡಿದ ಕೀರ್ತಿಯೂ ಇವನದ್ದೇ. ಯೂರೋಪಿನಲ್ಲಿ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಹರಿದು ಹಂಚಿಹೋಗಿದ್ದ ವೈದ್ಯ ವಿಜ್ಞಾನವನ್ನು ಸಂಘಟಿಸಿ, ರೂಪಿಸಿ ಆರೋಗ್ಯ ಕ್ಷೇತ್ರದ ಬೆಳವಣಿಗೆಗೆ ಮಹತ್ತರವಾದ ಕೊಡುಗೆಯನ್ನು ಕೊಟ್ಟವರಲ್ಲಿ ಮೊದಲಿಗ. ಹಾಗೆಯೇ ಅವನು ಪ್ರತಿಪಾದಿಸಿದ ಅನೇಕ ವಿಚಾರಗಳು ಪ್ರಸ್ತುತವಲ್ಲವೆಂದೂ ಆಧುನಿಕ ವಿಜ್ಞಾನ ಈಗ ತಿರಸ್ಕರಿಸಿದೆ. ಇವನ ಹಾಗೆ ಜಗತ್ತಿನಾದ್ಯಂತ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಅಪಾರವಾದ ಕೊಡುಗೆಯನ್ನು ಕೊಟ್ಟಂತಹ ಅನೇಕ ಮಂದಿ ಅಜ್ಞಾತ ಮಹನೀಯರಿದ್ದಾರೆ. ಭಾರತದ ಕೊಡುಗೆಯ ಬಗೆಗೆ ನಮಗೆಲ್ಲಾ ತಿಳಿದೇ ಇದೆ. ಹಿಪ್ಪೋಕ್ರೇಟ್ಸ್ಗಿಂತಲೂ ಮುನ್ನ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆದ, ಪ್ರಸ್ತುತತೆ ಇರುವ ವಿಚಾರಗಳನ್ನು ಮಂಡಿಸಿದ ಅನೇಕ ವೈದ್ಯರಿದ್ದಾರೆ.
ಹೌದು! ಯೂರೋಪಿನವರು ಮಾತ್ರ ಕಟ್ಟಿದ್ದಲ್ಲ ವಿಜ್ಞಾನ. ಯೂರೋಪಿನಲ್ಲಿ ಬಹುಶಃ ಹಿಪ್ಪೋಕ್ರೇಟ್ಸ್ ಮೊದಲಿಗನಿರಬಹುದೇನೋ, (ಅಲ್ಲವೆಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತಿದೆ) ಆದರೆ ಜಗತ್ತಿನಲ್ಲಂತೂ ಅಲ್ಲವೇ ಅಲ್ಲ. ಈಜಿಪ್ಟಿನ ಅಮೋಟೆಪ್ ಇರಬಹುದು, ಕಶ್ಯಪ, ಅಗ್ನಿವೇಷ, ಚರಕ, ಸುಶ್ರುತ ಹೀಗೆ ಅನೇಕ ಮಂದಿ ಸಂಘಟಿತ, ವ್ಯವಸ್ಥಿತ ವೈದ್ಯ ವಿಜ್ಞಾನವನ್ನು ಪ್ರತಿಪಾದಿಸಿದ್ದಾರೆ,ಇದನ್ನು ಯೂರೋಪಿನ ಇತಿಹಾಸಕಾರರೇ ದಾಖಲಿಸಿದ್ದಾರೆ.
ಹಾಗಾದರೆ ಹಿಪ್ಪೋಕ್ರೇಟ್ಸ್ಗಿಂತಲೂ ಮುನ್ನ ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆಯನ್ನು ಕೊಟ್ಟಂತಹ ಅನೇಕರನ್ನು ಕಡೆಗಣಿಸಿ, ದಾಖಲಿತ ಇತಿಹಾಸವಿದ್ದೂ ಕೂಡ ಹಿಪ್ಪೋಕ್ರೇಟ್ಸ್ಗೆ ಫಾದರ್ ಆಫ್ ಮೆಡಿಸಿನ್ ಸ್ಥಾನವನ್ನು ಕೊಟ್ಟು, ಅವನೇ ಶ್ರೇಷ್ಠ ಎಂದು ಅವನ ಶಪಥವನ್ನು ಜಗತ್ತಿನಾದ್ಯಂತ ಬೋಧಿಸುವ ವಸಾಹತುಶಾಹಿ ಮನಸ್ಥಿತಿ ಯಾತಕ್ಕಾಗಿ? ನಮ್ಮದೇ ಇರಬೇಕಾದರೆ ಯೂರೋಪಿನದ್ದು ಯಾಕೆ? ನಮ್ಮಲ್ಲಿ ಚಿನ್ನದೊಡವೆಗಳನ್ನು ಇಟ್ಟುಕೊಂಡು ಇತರರ ಬೆಳ್ಳಿಯ ಮೇಲೆ ಆಸೆ ಯಾಕೆ? ಅವನ ಶಪಥದಲ್ಲೂ ಸದ್ವಿಚಾರಗಳಿವೆ, ನಮ್ಮದರಲ್ಲೂ ಇವೆ. ನಾವು ನಮ್ಮದನ್ನು ಯಾಕೆ ಅಪ್ಪಿಕೊಳ್ಳಬಾರದು ? ಯೂರೋಪಿನವರು ತಮ್ಮ ಶ್ರೇಷ್ಠತೆಯನ್ನು ಜಗತ್ತಿನಾದ್ಯಂತ ಸಾರಲು ಅವಿರತ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ ಅದು ಒಳ್ಳೆಯ ಮಾರ್ಗದಲ್ಲಿ ಆದರೂ ಸರಿ, ಅಥವಾ ವಾಮಮಾರ್ಗದಲ್ಲಾದರೂ ಸರಿ. 1638-40 ರಲ್ಲಿ ಪೆರುವಿನ ಪಾರಂಪರಿಕ ವೈದ್ಯ ವಿಜ್ಞಾನದಲ್ಲಿ ಬಳಕೆಯಲ್ಲಿದ್ದ quinine ಎಂಬ ಮಲೇರಿಯಾ ಔಷಧಿಯನ್ನು ಪೆರುವಿನ ವೈಸರಾಯ್ ಹೆಂಡತಿ ಕೌಂಟೆಸ್ ಸಿಂಕಾನ್ ಯೂರೋಪಿಗೆ ಪರಿಚಯಿಸಿದ್ದಳು. ಅದನ್ನು ಐರೋಪ್ಯರೇ ಕಂಡು ಹಿಡಿದದ್ದು ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಅದರ ಮೇಲೆ ಸಂಶೋಧನೆಯನ್ನೇನೋ ಮಾಡಿದ್ದರು. ಆದರೆ ಕಂಡುಹಿಡಿದದ್ದು ಮಾತ್ರ ಅವರಲ್ಲ. ಪೆರುವಿನ ನತದೃಷ್ಠ ಆದಿವಾಸಿಗಳು, ಆ ಔಷಧಿಯನ್ನು ಸಂಸ್ಕರಿಸಲಾಗಿದ್ದ ಮರಕ್ಕೆ ಸಿಂಕಾನ್ ಟ್ರೀ ಎಂದೇ ಹೆಸರಿಡಲಾಗಿದೆ. ಐರೋಪ್ಯರೇ ಪಾಶ್ಚಿಮಾತ್ಯರೇ ಶ್ರೇಷ್ಠ ಬಿಡಿ!
ಹಿಪ್ಪೋಕ್ರೇಟ್ಸ್ಗಿಂತ ಮುಂಚೆ ಇಂದಿಗೂ ಪ್ರಸ್ತುತವಿರುವ (ಕೆಲವು ವಿಚಾರಗಳನ್ನು ಹೊರತುಪಡಿಸಿ)ವೈದ್ಯಕೀಯ ವಿಜ್ಞಾನವನ್ನು ಶಸ್ತ್ರ ವಿದ್ಯೆಯನ್ನು ಸುಶ್ರುತ ಅಭ್ಯಸಿಸಿದ್ದ, ಸುಶ್ರತನ ಗೌರವಾರ್ಥ ಆಸ್ಟ್ರೇಲಿಯಾದ ರಾಯಲ್ ಕಾಲೇಜ್ ಆಫ್ ಸರ್ಜನ್ನಲ್ಲಿ ಅವನ ಪ್ರತಿಮೆಯನ್ನು ಫಾದರ್ ಆಫ್ ಸರ್ಜರಿ ಎಂಬ ಅಡಿಬರಹದೊಂದಿಗೆ ಸ್ಥಾಪಿಸಲಾಗಿದೆ. ಅನೇಕ ಪ್ಲಾಸ್ಟಿಕ್ ಸರ್ಜನ್ ಕಾನ್ಫರೆನ್ಸ್ಗಳಲ್ಲಿ ಅವನ ಶ್ಲೋಕವನ್ನು ಉಚ್ಛರಿಸಿ ಗೌರವ ಸೂಚಿಸಲಾಗುತ್ತದೆ. ಹಿಪ್ಪೋಕ್ರೇಟ್ಸ್ಗಿಂತ ಮುಂಚೆ ಸರ್ಜರಿಯೇ ಇತ್ತು ಎನ್ನುವುದಾದರೆ ಸಂಘಟಿತ ವೈದ್ಯಕೀಯ ಇದ್ದಿರಲೇಬೇಕಲ್ವ? ಅದರ ಬಗ್ಗೆ ದಾಖಲಿತ ಇತಿಹಾಸವೇ ಇದೆ. ಬ್ರಿಟೀಷರೇ ದಾಖಲಿಸಿ ಸಂಗ್ರಹಿಸಿ ಯೂರೋಪಿಗೆ ಕೊಂಡೊಯ್ದು ಅಧ್ಯಯನವನ್ನು ಮಾಡಿ ನಮಗೆ ಹೊಸದೆಂದು ಪರಿಚಯಿಸಿದ್ದಾರೆ.
ಎಲ್ಲರ ಕೊಡುಗೆಯಿಂದ ವೈದ್ಯಕೀಯ ಕ್ಷೇತ್ರ ಬೆಳೆದು ಬರುತ್ತಿದೆ. ಐರೋಪ್ಯರ ಕೊಡುಗೆಯೂ ಇದೆ, ಗೌರವಿಸೋಣ, ಆದರೆ ನಮ್ಮದನ್ನು ಮರೆಯದಿರೋಣ. ಟ್ಯಾಗೋರರೂ ಶ್ರೇಷ್ಠ, ಷೇಕ್ಸ್ಪಿಯರ್ ಕೂಡ ಶ್ರೇಷ್ಠ. ಆದರೆ ನಾವು ಪ್ರೇರಣೆಯನ್ನು ಪಡೆಯಬೇಕಾದದ್ದು ಟ್ಯಾಗೋರರಿಂದ, ನಮ್ಮವರಿಂದ. ನಮ್ಮ ಸಂಸ್ಕೃತಿ, ವಿಚಾರಗಳಿಂದ. ಇದನ್ನೇ ಎನ್.ಎಂ.ಸಿ ಹೇಳಿದ್ದು. ಇದು ವಿಜ್ಞಾನದ ನಾಶವೂ ಅಲ್ಲ, ಅಳಲೇಕಾಯಿ ಪಾಂಡಿತ್ಯವೂ ಅಲ್ಲ. ಯೂರೋಪಿನದ್ದೆಲ್ಲವೂ ಶ್ರೇಷ್ಠ, ನಮ್ಮದೆಲ್ಲವೂ ಕನಿಷ್ಠ ಅನ್ನುವ ದಾಸ್ಯದ ಮನಸ್ಥಿತಿಯಿಂದ ಹೊರಬರಬೇಕು. ಈ ನಿಟ್ಟಿನಲ್ಲಿ ಎನ್.ಎಂ.ಸಿ ಅನೇಕ ಯೋಜನೆಗಳನ್ನು ರೂಪಿಸಿದೆ. ಯೋಗ, ಪ್ರಾಣಾಯಾಮಗಳ ಕಡೆಗೂ ಇದೇ ರೀತಿಯ ಕೀಳರಿಮೆ ನಮ್ಮಲ್ಲಿತ್ತು ಆದರೆ ಇವತ್ತು, ಅವುಗಳು ಜಗದ್ವ್ಯಾಪಿಯಾಗಿದೆ. ಎಲ್ಲ ವೈದ್ಯ ಪದ್ಧತಿಗಳೂ ವಿಭಿನ್ನ ಮತ್ತು ಶ್ರೇಷ್ಠ. ಆಧುನಿಕತೆಯ ಹೆಸರಿನಲ್ಲಿ ಪಾರಂಪರಿಕ ವೈದ್ಯ ಪದ್ಧತಿಗಳನ್ನು ಕಡೆಗಣಿಸುವುದು ಸಲ್ಲ. ಎಲ್ಲ ನದಿಗಳೂ ಸಮುದ್ರಕ್ಕೆ ಸೇರುವಂತೆ, ಎಲ್ಲಾ ವೈದ್ಯಕೀಯ ಪದ್ಧತಿಗಳ ಗುರಿ ಸ್ವಸ್ಥ ಸಮಾಜದ ನಿರ್ಮಾಣವೇ ಆಗಿದೆ. ಭಾರತದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಂಸ್ಕೃತಿಕ ಪುನರುತ್ಥಾನವಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಆಗುತ್ತದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಲಿ. “ಶ್ರೇಯೋ ಭೂಯಾತ್ ಸಕಲ ಜನಾನಃ”.
✍️ ಮಂಚಲ್ ಮಹೇಶ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.