ಬೆಂಗಳೂರು: ಕೇಸರಿ ಶಾಲು, ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಸೂಚಕಗಳನ್ನು ಹೊಂದಿರುವ ವಸ್ತ್ರಗಳನ್ನು ಶಾಲಾ-ಕಾಲೇಜುಗಳಲ್ಲಿ ಧರಿಸಬಾರದು. ಶಾಲಾ ಮಂಡಳಿಗಳು ನಿಗದಿಪಡಿಸಿರುವ ವಸ್ತ್ರ ಸಂಹಿತೆಯನ್ನು ಪಾಲನೆ ಮಾಡಬೇಕು ಎಂದು ಇಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ನಮ್ಮದು ನಾಗರಿಕ ಸಮಾಜ, ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಕರ್ನಾಟಕ ಹೈಕೋರ್ಟ್ನ ಮಧ್ಯಂತರ ಆದೇಶದಲ್ಲಿ ಹೇಳಲಾಗಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಸಿದಂತೆ ಹೈಕೋರ್ಟ್ ನಿನ್ನೆ ಮೌಖಿಕವಾಗಿ ಆದೇಶ ನೀಡಿತ್ತು, ಇಂದು ಮಧ್ಯಂತರ ಆದೇಶವನ್ನು ಪ್ರಕಟಿಸಿದೆ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ. ಯಾವುದೇ ವ್ಯಕ್ತಿಗೆ ಇಂತಹ ಕೃತ್ಯ ನಡೆಸುವುದಕ್ಕೆ ಅವಕಾಶವಿಲ್ಲ. ನಿರಂತರ ಪ್ರತಿಭಟನೆಗಳಿಂದ ಶಾಲೆ ಕಾಲೇಜುಗಳು ಬಂದ್ ಆಗಬಾರದು ಎಂದಿದೆ.
ಈ ಪ್ರಕರಣದ ವಿಚಾರಣೆಯನ್ನು ತುರ್ತು ಆಧಾರದ ಮೇಲೆ ನಡೆಸಲಾಗುತ್ತಿದೆ ಎಂದಿರುವ ಹೈಕೋರ್ಟ್, ಶೈಕ್ಷಣಿಕ ವರ್ಷವನ್ನು ವಿಳಂಬ ಮಾಡುವುದರಿಂದ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾಗುತ್ತದೆ. ಉನ್ನತ ಶಿಕ್ಷಣದ ಪ್ರವೇಶಕ್ಕೆ ಸಮಯ ಈಗಾಗಲೇ ನಿಗದಿಯಾಗಿದೆ. ನಿಗದಿತ ಸಮಯದೊಳಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಕಡ್ಡಾಯವಾಗುತ್ತದೆ ಎಂದಿದೆ.
ಧರ್ಮಾನುಸಾರ ಕೇಸರಿ ಶಾಲು, ಸ್ಕಾರ್ಫ್, ಹಿಜಾಬ್, ಧಾರ್ಮಿಕ ಬಾವುಟಗಳನ್ನು ತರಗತಿಯೊಳಗೆ ತರುವಂತಿಲ್ಲ. ಮುಂದಿನ ಆದೇಶದವರೆಗೂ ಇವುಗಳನ್ನು ನಿರ್ಬಂಧಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದೆ.
ಹೈಕೋರ್ಟ್ ನ ಮಧ್ಯಂತರ ಆದೇಶ ಅಂತಿಮ ಆದೇಶವಾಗುವುದಿಲ್ಲ. ಸೋಮವಾರದ ನಂತರ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಿದ್ದು ಅಲ್ಲಿಯವರೆಗೆ ಯಾವುದೇ ಧಾರ್ಮಿಕ ಗುರುತು ಹೊಂದಿರುವ ಬಟ್ಟೆಗಳನ್ನು ಧರಿಸದಂತೆ ಸೂಚನೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.