ದೇಶ ಬಲಿಷ್ಠವಾಗಿದೆ. ಹಲವು ಸ್ತರಗಳಲ್ಲಿ ಶಕ್ತಿಶಾಲಿಯಾಗುತ್ತಲಿದೆ. ಇಪ್ಪತ್ತೊಂದನೆಯ ಶತಮಾನದ ಎರಡನೇ ದಶಕವು ದೇಶದ ಆರ್ಥಿಕ ಪ್ರಗತಿಗೂ ಸಾಕ್ಷಿಯಾಗುತ್ತ ಅರ್ಥವ್ಯವಸ್ಥೆಯನ್ನು ಸದೃಢವಾಗಿಸುತ್ತಿದೆ. ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಸಹಿತ ಎಲ್ಲ ಸಾಂಸ್ಥಿಕತೆಗಳು ದೇಶವನ್ನು ಮತ್ತಷ್ಟೂ ಉಜ್ವಲವಾಗಿಸುವತ್ತ ಪಣತೊಟ್ಟಿವೆ. ಆಡಳಿತವು ಪ್ರಜೆಗಳ ಒಳಿತು ಕ್ಷೇಮವನ್ನು ಬಯಸಿದೆ. ವಿಶ್ವದ ಹಲವು ರಾಷ್ಟ್ರಗಳು ಭಾರತದತ್ತ ನೋಡುತ್ತಿವೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭ ವಿಶ್ವದ ಹಲವು ರಾಷ್ಟ್ರಗಳಿಗೆ ವ್ಯಾಕ್ಸಿನ್ ಮೈತ್ರಿ ಮೂಲಕ ಅತಿ ಹೆಚ್ಚು ಲಸಿಕೆ ಪೂರೈಸಿದ ಏಕೈಕ ರಾಷ್ಟ್ರವಾಗಿಯೂ ಭಾರತ ಅಪತ್ಭಾಂಧವ ಎನಿಸಿದೆ.
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಜನಜೀವನ ಇಲ್ಲಿನ ಸಂಸ್ಕೃತಿ, ಬಹುಸ್ಫುರತೆ, ಯೋಗ ಆಧ್ಯಾತ್ಮದತ್ತ ಹಲವು ಮಂದಿ ಆಕರ್ಷಿತರಾಗಿದ್ದಾರೆ. ಮಾತ್ರವಲ್ಲ ಇಲ್ಲಿನ ಜನಸಂಖ್ಯೆಯೂ ಜಗತ್ತಿನ ಬೃಹತ್ ಉದ್ಯಮಗಳಿಗೆ ದೊಡ್ಡ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಯೋಜನೆಗಳು ಹೊಸತನ, ನಾವೀನ್ಯದೊಂದಿಗೆ ದೇಶದಲ್ಲಿ ಉತ್ಪಾದಕತೆಯ ಶಕೆಗೆ ನಾಂದಿ ಹಾಡಿವೆ. ಇವೆಲ್ಲವೂ ದೇಶದ ಆರ್ಥಿಕತೆ, ಆಡಳಿತ ವೈಖರಿ ಸಹಿತ ದೇಶದ ಅಭಿವೃದ್ಧಿಯ ಬಗ್ಗೆಗಿನ ಮಾತುಗಳಾದರೆ. ಭಾರತೀಯ ಸಂಸ್ಕೃತಿಯ ಅಂತರ್ಗತವಾಗಿರುವ ಪ್ರತಿಮೆಗಳ ನಿರ್ಮಾಣ ದೇಶದ ಉದಾತ್ತ ಧಾರ್ಮಿಕತೆ, ಸಾಮಾಜಿಕ ಕಳಕಳಿಯ ದ್ಯೋತಕಗಳಾಗಿ ಭಾವಿ ಜನಾಂಗಕ್ಕೆ ಸತ್ಪ್ರೇರಣೆಯಾಗುತ್ತಲಿವೆ.
ಇಂದಿನ ಅಪ್ರತಿಮ ಭಾರತಕ್ಕೆ ಪ್ರತಿಮೆಗಳ ಮೆರುಗಿದೆ! ದೇಶದ ಅವಿಚ್ಛಿನ್ನ ಪರಂಪರೆ, ಧಾರ್ಮಿಕತೆ ಸಹಿತ ಸಮಾಜಕ್ಕೆ ಮಾರ್ಗದರ್ಶಿಯಾದ ವ್ಯಕ್ತಿಗಳನ್ನು ಅಜರಾಮರವಾಗಿಸುವ ಕಾರ್ಯವೂ ಪ್ರತಿಮೆ, ಶಿಲ್ಪ ನಿರ್ಮಾಣದ ಮೂಲಕ ನಡೆಯುತ್ತಿರುವುದು ಸಂತಸದ ವಿಚಾರ. ಏಕತಾ ಪ್ರತಿಮೆ, ಸಮಾನತಾ ಪ್ರತಿಮೆಗಳು ದೇಶದ ಇತಿಹಾಸ, ಧಾರ್ಮಿಕ ಒಡಲನ್ನು ಅರಿಯಲು ತಿಳಿಯಲು ಹಾಗೆಯೇ ಮಥಿಸಲು ಸಹಕಾರಿಯೂ ಹೌದು. ಪ್ರತಿಮೆಗಳು ವ್ಯಕ್ತಿ, ವ್ಯಕ್ತಿತ್ವದ ಬಗ್ಗೆ ಪೂಜ್ಯ ಭಾವವನ್ನು ಮೂಡಿಸುವುದು ಮಾತ್ರವಲ್ಲದೆ ದಿವ್ಯತೆಯ ಅನುಭವವನ್ನು ನೀಡಬಲ್ಲವು. ಹಿಂದೂ ಧರ್ಮಕ್ಕೆ ಮೂರ್ತಿ ಆರಾಧನೆ ಹೊಸತೇನಲ್ಲ. ಶಾಕ್ತ, ವೈಷ್ಣವ, ಶೈವ ಪಂಥಗಳು ಸಹಿತ ಜೈನ, ಬೌದ್ಧ ಮತಸ್ಥರು ಈ ದೇಶದಲ್ಲಿ ಮೂರ್ತಿ ಪೂಜೆಗೆ ಹೆಚ್ಚಿನ ಆದ್ಯತೆ ನೀಡಿ, ಶಿಲ್ಪಕಲೆಯನ್ನು ಪ್ರೋತ್ಸಾಹಿಸಿದ್ದರು. ಶಿಲ್ಪ ನಿರ್ಮಾಣವೂ ಪ್ರಾಚೀನ ಭಾರತದ ಕಲಿಕೆಗಳಲ್ಲಿ ಒಂದಾಗಿತ್ತು. ಮಥುರಾ ಮತ್ತು ಗಾಂಧಾರದ ಶಿಲ್ಪಗಳಿಗೆ ವಿಶ್ವದಾದ್ಯಂತ ಬೇಡಿಕೆಯಿತ್ತು.
ಕೇದಾರನಾಥದಲ್ಲಿ ಲೋಕಾರ್ಪಣೆ ಕಂಡ ಆದಿ ಶಂಕರಾಚಾರ್ಯರ ಪ್ರತಿಮೆ, ಗುಜರಾತಿನ ನರ್ಮದೆಯ ತಟದಲ್ಲಿ ನಿರ್ಮಿತ ಸರ್ದಾರ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆ, ಹೈದರಾಬಾದಿನಲ್ಲಿ ಲೋಕಾರ್ಪಣೆಗೆ ಸಜ್ಜಾಗಿರುವ 11 ನೇ ಶತಮಾನದ ವೈಷ್ಣವ ಸಂತ ರಾಮಾನುಜರ ಸಮಾನತಾ ಪ್ರತಿಮೆಯೂ ಭವ್ಯ ಭಾರತದ ಸಾಮಾಜಿಕತೆ, ಧಾರ್ಮಿಕತೆ ಸಹಿತ ತತ್ವ ವೈಚಾರಿಕತೆಯ ಪುನರಾವಲೋಕನಕ್ಕೂ ನಾಂದಿ ಹಾಡಲಿವೆ ಎಂಬುದು ನಿಚ್ಚಳ. ಶತಮಾನಗಳ ಹಿಂದೆ ಅವತರಿಸಿ ಅಂದಿನ ಸಮಾಜಕ್ಕೆ ಮಾರ್ಗದರ್ಶಿ ಎನಿಸಿದ್ದ ತತ್ವಗಳು ಇಂದಿಗೂ ಪ್ರಸ್ತುತವೇ ಆಗಿವೆ. ಎಂಟನೇ ಶತಮಾನದಲ್ಲಿ ಕೇರಳದ ಕಾಲಡಿಯಲ್ಲಿ ಜನಿಸಿದ್ದ ಆದಿ ಶಂಕರರು ಹೇಗೆ ದೇಶದುದ್ದಕ್ಕೂ ಸಂಚರಿಸಿ, ತಮ್ಮ ತತ್ವಗಳಿಂದ ಜನರನ್ನು, ಧಾರ್ಮಿಕ ಬೌದ್ಧಿಕ ವಲಯವನ್ನು ಪ್ರಭಾವಿಸಿದ್ದರು ಎಂಬುದನ್ನು ಅರಿಯಲು, ತಿಳಿಯಲು ಇಂತಹ ಪ್ರಯತ್ನಗಳು ಸಹಕಾರಿಯಾದಾವು ಎನ್ನುವ ನಂಬಿಕೆ. ಶಂಕರರು ತೋರಿದ ಸತ್ಪಥ ಯಾವುದು, ಅದ್ವೈತ ಚಿಂತನೆಯ ತಿಳಿವೇನು? ಶಂಕರರ ಅವಿಚ್ಛಿನ್ನ ಪರಂಪರೆಯು ಇಂದಿಗೂ ಹೇಗೆ ಮುಂದುವರೆದಿದೆ. ಅವರ ತಾತ್ವಿಕ ಬೌದ್ಧಿಕ ಹರಿವು ಹೇಗೆ ಮುಂದುವರಿದಿದೆ. ಹೀಗೆ ಓರ್ವ ಮಹಾನ್ ಪ್ರಖರ ತತ್ವಜ್ಞಾನಿ, ಸಿದ್ಧಾಂತಿಯ ಬಗ್ಗೆ ಪೂಜ್ಯಭಾವ ಮೂಡಲು, ಅವರ ತತ್ವಾದರ್ಶಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ಪ್ರತಿಮೆಯೂ ಒಂದು ಮಾಧ್ಯಮವಾಗಬಹುದು. ಹೀಗೆ ದಾರ್ಶನಿಕರು, ತತ್ವಜ್ಞರು, ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು, ಉದಾತ್ತ ಚಿಂತಕರು ತೋರಿದ ಸತ್ಪಥವು ಸಮಾಜಕ್ಕೆ ಎಂದಿಗೂ ಮಾರ್ಗದರ್ಶಿ. ಬೌದ್ಧಿಕ ಚಿಂತನೆ, ವೈಚಾರಿಕತೆ, ಧಾರ್ಮಿಕ ನಿಷ್ಠೆ, ಬೇಕು ಬೇಡಗಳ ಒಳನೋಟ, ಲೌಕಿಕ – ಅಲೌಕಿಕ ವಿಚಾರಗಳ ತತ್ವಬೋಧೆಗಳು ದೇಶದ ಧಾರ್ಮಿಕ ಇತಿಹಾಸದ ಬಗ್ಗೆಯೂ ಬೆಳಕು ಚೆಲ್ಲುವಂತೆ ಮಾಡಬಲ್ಲವು. ಆಯಾ ಕಾಲಘಟ್ಟದಲ್ಲಿ ಇವರು ತೋರಿದ ಧೀಶಕ್ತಿ, ಧಾರ್ಮಿಕ ಮತ್ತು ಸಮಾಜಿಕ ಪುನರುತ್ಥಾನದ ಕಾರ್ಯಗಳು ಭಾವಿ ಭಾರತಕ್ಕೆ ಅತಿ ಅವಶ್ಯಕವೂ ಹೌದು. ಆಧುನಿಕತೆಯ ಮಧ್ಯೆ ಬಿಡುವಿರದ ಜನಜೀವಿತದಲ್ಲಿ ಮೌಲ್ಯಗಳ ಹುಡುಕುವಿಕೆಯ ಅವಕಾಶವನ್ನು ಶಿಲ್ಪಗಳು ನೆನಪಿಸಬಲ್ಲವು. ಭಾವಿ ಭಾರತಕ್ಕೆ ಆಧುನಿಕತೆ, ಆರ್ಥಿಕ ಪ್ರಗತಿಯೊಂದಿಗೆ ಧಾರ್ಮಿಕ, ಸಾಂಸ್ಕೃತಿಕ ಮೌಲ್ಯಗಳ ಅವಶ್ಯಕತೆಯೂ ಬಹಳಷ್ಟಿದೆ. ಈ ಮೌಲ್ಯವನ್ನು ನೆನಪಿಸಲು ಪ್ರತಿಮೆಗಳು ಸಹಕಾರಿಯಾಗಬಲ್ಲವು.
ದೇಶಕ್ಕೆ ಮೂರ್ತಿ, ಶಿಲ್ಪ, ಪ್ರತಿಮೆಗಳ ನಿರ್ಮಾಣ ಹೊಸತೇನಲ್ಲ. ಮೂರ್ತಿ, ಪ್ರತಿಮೆಗಳು ನಿರ್ದಿಷ್ಟ ವ್ಯಕ್ತಿತ್ವದ ಭಾವ ಸ್ಪುರಣದೊಂದಿಗೆ, ಅದರೊಳಗೆ ಅಡಕವಾಗಿರುವ ಶಕ್ತಿಯೂ ಭಕ್ತಿಯನ್ನು ಸ್ಪುರಿಸಿ ಜೀವನಕ್ಕೆ ಹೊಸ ಭಾಷ್ಯವನ್ನು ಬರೆಯಬಲ್ಲುದು. ಶತ ಶತಮಾನಗಳಿಂದ ಮುಂದುವರಿದಿರುವ ಈ ಪ್ರಕ್ರಿಯೆಯು ದೇವರ ಪ್ರತಿಷ್ಠೆ, ಮೂರ್ತಿ ಪ್ರತಿಷ್ಠೆ, ಕಲಶ, ಕಲಶೋತ್ಸವ ಎಂದೇ ಕರೆಯಲ್ಪಡುತ್ತದೆ. ಬಯಲು ಆಲಯದ ಮೂರ್ತಿಗಳಿಗೆ ವ್ಯತ್ಯಾಸಗಳಿದ್ದರೂ, ನೀಡುವ ಸಂದೇಶ ಒಂದೇ ಆಗಿರಲೂಬಹುದು. ಸಮಾಜಿಕ ಸ್ತರದಲ್ಲಿ ಒಳಿತನ್ನು ಮಾಡಬಲ್ಲ ಧಾರ್ಮಿಕ ಅಭ್ಯುದಯ. ದಯೆ, ಕರುಣೆ, ಪರರಿಗೆ ಒಳಿತನ್ನು ಮಾಡು ಎನ್ನುವ ಸಂದೇಶವನ್ನು ಇವು ನೀಡುತ್ತವೆ. ಭಕ್ತಿ ಮತ್ತು ಶ್ರದ್ಧೆಯ ಭಾವಗಳು ಮೂಡುವಂತೆ ಮಾಡುವುದು ಇವುಗಳ ಮುಖ್ಯ ಉದ್ದಿಶ್ಯವಾಗಿದೆ. ಏಕತಾ ಪ್ರತಿಮೆ, ಆದಿ ಶಂಕರರ ಪ್ರತಿಮೆ, ಸಮಾನತಾ ಪ್ರತಿಮೆಗಳು ವ್ಯಕ್ತಿತ್ವದ ಆರಾಧನೆಯೊಂದಿಗೆ ಅವರ ನೀಡಿದ ಸಂದೇಶವನ್ನು ಸ್ಮರಿಸುವಂತೆ ಮಾಡುತ್ತದೆ.
ಕೇದಾರನಾಥದಲ್ಲಿ ನಿರ್ಮಾಣಗೊಂಡ ಅದ್ವೈತ ಸಿದ್ಧಾಂತದ ಹರಿಕಾರ, ಹಿಂದೂ ಧರ್ಮ ಪುನರುತ್ಥಾನಕ್ಕೆ ನಾಂದಿ ಹಾಡಿದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನ. 5 ರಂದು ಲೋಕಾರ್ಪಣೆಗೊಳಿಸಿದ್ದರು. 12 ಅಡಿ ಎತ್ತರವಿರುವ, ಕೃಷ್ಣ ಶಿಲೆಯಲ್ಲಿ ನಿರ್ಮಿತ ಪ್ರತಿಮೆಯನ್ನು ಮೈಸೂರಿನವರಾದ ಶಿಲ್ಪಿ ಯೋಗಿರಾಜ್ ನಿರ್ಮಿಸಿದ್ದರು. 35 ಟನ್ ತೂಗುವ ಶಂಕರರ ಈ ಶಿಲ್ಪವು ಆಸೀನ ಸ್ಥಿತಿಯಲ್ಲಿದೆ. ಉತ್ತರಾಖಂಡದ ಕೇದಾರನಾಥ ಧಾಮ ಯೋಜನೆಯ ಭಾಗವಾಗಿ ಈ ಶಿಲ್ಪ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಕೇದಾರನಾಥ ಹಿಂದೂ ಯಾತ್ರಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿರುವ ಸಕಲ ಮೂಲಭೂತ ಸೌರ್ಕರ್ಯಗಳನ್ನು ಕಲ್ಪಿಸಲಿದೆ. ಹೀಗೆ ನರ್ಮದಾ ತಟದಲ್ಲಿ ನಿರ್ಮಾಣ ಹೊಂದಿರುವ ಏಕತಾ ಪ್ರತಿಮೆಯೂ ತನ್ನದೆ ಆದ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಜಗತ್ತಿನ ಎತ್ತರದ ಪ್ರತಿಮೆ ಎಂಬ ಖ್ಯಾತಿಗೆ ಭಾಜನವಾಗಿದೆ. ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧ ಪ್ರತಿಮೆಗಿಂತಲೂ ಎತ್ತರವಾಗಿದೆ ವಲ್ಲಭರ ಈ ಏಕತಾ ಪ್ರತಿಮೆ. ಸ್ಪ್ರಿಂಗ್ ಟೆಂಪಲ್ ಬುದ್ಧ ಪ್ರತಿಮೆ 153 ಮೀ. ಎತ್ತರವಾದರೆ, ಸರ್ದಾರರ ಪ್ರತಿಮೆ 182 ಮೀ. ಎತ್ತರವಿದೆ, ಮಾತ್ರವಲ್ಲ ಈ ಪ್ರತಿಮೆ ನಿರ್ಮಾಣದಲ್ಲಿ ದೇಶದ ನಾನಾ ಭಾಗಗಳಿಂದ ಜನಸಾಮಾನ್ಯರು ನೀಡಿದ ಕಬ್ಬಿಣ,ಲೋಹದ ವಸ್ತುಗಳು ಸೇರಿವೆ ಎಂಬುದು ವಿಶೇಷ. ಸರ್ದಾರ ಪಟೇಲರ ತ್ಯಾಗ, ಸಾಮಾಜಿಕ ಕಳಕಳಿ, ದೇಶದ ಐಕ್ಯತೆಗಾಗಿ ಅವರು ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸುವ ಜೊತೆಜೊತೆಯಲ್ಲಿ ಭಾವಿ ಜನಾಂಗದಲ್ಲಿ ದೇಶಭಕ್ತಿಯನ್ನು ಅನುರಣಿಸುವಂತೆ ಮಾಡುವ ಕಾರ್ಯವೂ ಈ ಕೇಂದ್ರದ ಮೂಲಕ ನಡೆಯುತ್ತಿದೆ.
ದಕ್ಷಿಣ ಭಾರತದಲ್ಲಿ ಭಕ್ತಿಪಂಥವನ್ನು ಬಲಪಡಿಸಿ, ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಸಂತ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯೂ ಇಂದು ಲೋಕಾರ್ಪಣೆಗೆ ಸಜ್ಜಾಗಿದೆ. ತೆಲಂಗಾಣದ ಹೈದಾರಾಬಾದ್ ಸಮೀಪ ನಿರ್ಮಾಣವಾಗಿರುವ 216 ಅಡಿ ಎತ್ತರದ ಆಸೀನ ಸ್ಥಿತಿಯಲ್ಲಿರುವ ಪ್ರತಿಮೆಯನ್ನು ಫೆ. 5 ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ವೈಷ್ಣವ ಸಂತ ರಾಮಾನುಜರು ಶ್ರೀ ಪೆರಂಬದೂರಿನಲ್ಲಿ ಜನಿಸಿ ಅಂದಿನ ತಮಿಳುನಾಡು ಸಹಿತ ತೆಲುಗುನಾಡಿನಲ್ಲಿ ಸಾಮಾಜಿಕ ಸಮಾನತೆ,ಸಮರಸತೆಗಾಗಿ ಶ್ರಮಿಸಿದ್ದರು. ವಿಶಿಷ್ಟಾದ್ವೈತ ಸಿದ್ಧಾಂತದ ಮೂಲಕ ಧಾರ್ಮಿಕ ಬೌದ್ಧಿಕ ವಲಯವನ್ನು ಪ್ರಭಾವಿಸಿದವರು ರಾಮಾನುಜಾಚಾರ್ಯರು. ಫೆ. 2 ರಂದು ಶ್ರೀ ರಾಮಾನುಜರ ಸಹಸ್ರಾಬ್ದಿ ಸಮಾರೋಹ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಇದೇ ಕೇಂದ್ರದಲ್ಲಿ ಸ್ಥಾಪಿಸಲಾಗುವ 120 ಕಿ.ಗ್ರಾಂ ತೂಕದ ರಾಮಾನುಜರ ಚಿನ್ನದ ಆರಾಧನಾ ಮೂರ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ.
ಇಲ್ಲಿ ಗಮನಿಸಬೇಕಾದ ಮಗದೊಂದು ಅಂಶವೇನೆಂದರೆ ಭಾರತ ದೇಶದ ಧಾರ್ಮಿಕ ಪರಂಪರೆಯಲ್ಲಿ ಮೂರ್ತಿ ಆರಾಧನೆಯ ಮಹತ್ವವನ್ನು, ಆಕರ್ಷಕ, ಐತಿಹಾಸಿಕ, ಪೂಜ್ಯತೆಯ ಭಾವವನ್ನು ಹೊಂದಿರುವ ಬಹಳ ಪ್ರಾಚೀನವೆನ್ನುವ ಹತ್ತು ಹಲವು ಆರಾಧನಾ ಮೂರ್ತಿಗಳು ಬ್ರಿಟಿಷ್ ಕಾಲದಲ್ಲೇ ವಿಶ್ವದ ಹಲವು ಮ್ಯೂಸಿಯಂಗಳಲ್ಲಿ ಪ್ರದರ್ಶನಿ ವಸ್ತು ಎಂಬಂತೆ ಒಯ್ಯಲಾಗಿತ್ತು. ಅಂತಹ ಮೂರ್ತಿಗಳು ಮರಳಿ ಭಾರತಕ್ಕೆ ತಲುಪುತ್ತಿರುವುದು ಸಂತಸದ ವಿಚಾರ. ಶತಮಾನಗಳ ಹಳಮೆಯ ಕಾಶಿಯ ಅನ್ನಪೂರ್ಣೇಶ್ವರಿ ವಿಗ್ರಹವೂ ಇಂತಹ ಮ್ಯೂಸಿಯಂನಿಂದ ಹೊರಬಂದು ಸ್ವಸ್ಥಾನಕ್ಕೆ ತಲುಪಿ ಪುನಪ್ರತಿಷ್ಠೆಯಾಗಿದೆ. ಅನ್ನಪೂರ್ಣೇಶ್ವರಿ ದೇವಿ – ಆರೋಗ್ಯ ಸಂರಕ್ಷಕಿ, ದೇಹ ಪೋಷಕಿ, ಅನ್ನಾಹಾರವನ್ನು ನೀಡುವ ತಾಯಿ ಎಂಬ ನಂಬಿಕೆ, ಪ್ರತೀತಿ ಜನಜನಿತವಾಗಿದೆ. ಹೀಗೆ ವಿಶ್ವದ ಹಲವು ರಾಷ್ಟ್ರಗಳ ಸೋ ಕಾಲ್ಡ್ ಅಂತಾರಾಷ್ಟ್ರೀಯ ಮ್ಯೂಸಿಯಂಗಳಲ್ಲಿ ಪ್ರದರ್ಶನಿಯಂತಿಡಲಾಗಿದ್ದ ಹಲವು ಮೂರ್ತಿಗಳನ್ನು ಭಾರತಕ್ಕೆ ತರಿಸುವಂತಾಗಲು ಕೇಂದ್ರ ಸರಕಾರ ಪಣತೊಟ್ಟಿದೆ. ಪರಂಪರೆ, ಸಂಸ್ಕೃತಿ, ಧರ್ಮ, ಆಚರಣೆಗಳ ಮೂರ್ತರೂಪವಾಗಿರುವ ಇಂತಹ ಅಸಂಖ್ಯ ವಿಗ್ರಹಗಳು ಜನರ ನಂಬಿಕೆಯ ದ್ಯೋತಕಗಳು. ಶ್ರೀಲಂಕಾದ ಬುಡಕಟ್ಟು ಸಮೂಹವೊಂದು ಬ್ರಿಟಿಷರು ಕದ್ದೊಯ್ದ ತಮ್ಮ ಪೂರ್ವಜರ ದೇಹದ ಬಿಡಿಭಾಗಗಳು ಮರಳಿ ಪಡೆಯಲು ಹವಣಿಸಿ, ಹೋರಾಡಿ ಯಶಸ್ಸು ಕಂಡಂತೆ, ಭಾರತೀಯರು ಅದರಲ್ಲೂ ಕೇಂದ್ರ ಸರಕಾರ, ವಿದೇಶಾಂಗ ಸಚಿವಾಲಯ, ದೇಶದ ಪ್ರತಿಷ್ಠಿತ ರಾಯಭಾರ ಕಚೇರಿ ಸಂಸ್ಕೃತಿಯ ದ್ಯೋತಕವಾಗಿರುವ ಪ್ರಾಚೀನ ಮೂರ್ತಿಗಳು, ವಿಗ್ರಹಗಳನ್ನು ಮರಳಿ ದೇಶಕ್ಕೆ ತರಿಸುತ್ತಿರುವ ಶ್ರಮ ಶ್ಲಾಘನೀಯ.
ವಿಗ್ರಹಗಳು ಕೇವಲ ಕಲ್ಲಿನ ಕೆತ್ತನೆಯಲ್ಲ, ಅದು ಪೂಜ್ಯತೆಯ ಭಾವದ್ರೂಪಿ. ಧ್ಯಾನ, ಆಧ್ಯಾತ್ಮದ ಪ್ರೇರಕ ಶಕ್ತಿ. ಪ್ರಾಚೀನ ಭಾರತದ ಮೇರು ರಾಜವಂಶಜರು ನಿರ್ಮಿತ ಇಂತಹ ಅಸಂಖ್ಯ ಮೂರ್ತಿಗಳು ಇಂದಿಗೂ ದೇಗುಲಗಳಲ್ಲಿ ಸ್ಥಿತವಾಗಿ ನಂಬಿದವಗೆ ಇಂಬು ನೀಡುತ್ತಿವೆ. ಆಧುನಿಕ ಭಾರತದ ಶಿಲ್ಪ ನಿರ್ಮಾಣ ಪ್ರಕ್ರಿಯೆಯೂ ಆಸ್ಥೆ, ಶ್ರದ್ಧೆ, ಭಕ್ತಿಯ ಭಾವವನ್ನು ಜಾಗೃತಗೊಳಿಸಲಿ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.