Aloe vera ಅಥವಾ Aloe barbadensis ಇದರ ಸಸ್ಯಶಾಸ್ತ್ರೀಯ ಹೆಸರು. ಕನ್ನಡದಲ್ಲಿ ಲೋಳೆಸರ, ಸಂಸ್ಕೃತದಲ್ಲಿ ಕುಮಾರಿ, ಕನ್ಯಾ. ಆಯುರ್ವೇದದ ಸುಪ್ರಸಿದ್ಧ ಔಷಧ ಕುಮಾರಿ ಆಸವ ಇದರಿಂದ ತಯಾರಾಗುವಂತದ್ದು.
ಚಾರಿತ್ರಿಕ ಹಿನ್ನೆಲೆ
ಗ್ರೀಸ್, ಈಜಿಪ್ಟ್, ಭಾರತ, ಮೆಕ್ಸಿಕೋ, ಜಪಾನ್, ಚೈನಾ ದೇಶಗಳಲ್ಲಿ ಔಷಧಿಯಾಗಿ ಬಳಸುತ್ತಿದ್ದರು. ಈಜಿಪ್ಟ್ ದೇಶದ ರಾಣಿಯರು ಪ್ರಮುಖ ಸೌಂದರ್ಯವರ್ಧಕವಾಗಿ ಇದನ್ನು ಬಳಸುತ್ತಿದ್ದರು. ಅಲೆಕ್ಸಾಂಡರ್, ಕೊಲಂಬಸ್ ಇವರು ಸೈನಿಕರ ಗಾಯಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಿದ್ದರು. 1800 ರಲ್ಲಿ ಅಮೇರಿಕಾದಲ್ಲಿ ಇದನ್ನು ಮಲಬದ್ಧತೆಯ ನಿವಾರಣೆಗಾಗಿ ಬಳಸುತ್ತಿದ್ದರು. 1930 ರಲ್ಲಿ ವಿಕಿರಣಗಳಿಂದ ಉಂಟಾದ ಡರ್ಮಟೈಟಿಸ್ ಚರ್ಮದ ತೊಂದರೆಗಳಲ್ಲಿ ಬಳಕೆ ಆಯಿತು.
ಉಪಯೋಗಗಳು
1. ರಕ್ಷಣಾತ್ಮಕ ವಾದ 75 ಅಂಶಗಳಿವೆ. ವಿಟಮಿನ್ ಇ, ವಿಟಮಿನ್ ಎ, ವಿಟಮಿನ್ ಸಿ- ಔಷಧೀಯ ಜಾಡಮಾಲಿ ಆಗಿ ಕಾರ್ಯನಿರ್ವಹಿಸುತ್ತವೆ. ಇತರ ಅಗತ್ಯ ವಿಟಮಿನ್ ಗಳಾದ ವಿಟಮಿನ್ ಬಿ12, ಫೋಲಿಕ್ ಆಸಿಡ್, ಕೋಲೀನ್ ಇವೆ.
2. ಚರ್ಮಕ್ಕೆ ಹಚ್ಚಿದಾಗ Bradykinase ಕಿಣ್ವವು ನೋವು ಉರಿಯೂತವನ್ನು ಕಡಿಮೆ ಮಾಡುತ್ತದೆ.
3. ಇದರಲ್ಲಿನ ಕೆಲವು ಕಿಣ್ವಗಳು ಸಕ್ಕರೆಯ ಜಟಿಲ ಕಣಗಳನ್ನು ಹಾಗೂ ಕೊಬ್ಬನ್ನು ಸರಳ ಕಣಗಳಾಗಿ ಒಡೆಯುವ ಜೀರ್ಣಕ್ರಿಯೆಗೆ ಸಹಕಾರಿ.
4. ಕ್ಯಾಲ್ಸಿಯಂ, ಕ್ರೋಮಿಯಂ, ತಾಮ್ರ, ಸೆಲಿನಿಯಂ, ಮ್ಯಾಗ್ನಿಷಿಯಂ, ಮ್ಯಾಂಗನೀಸ್, ಪೊಟ್ಯಾಶಿಯಂ, ಸೋಡಿಯಂ, ಜಿಂಕ್ ಲವಣಾಂಶಗಳನ್ನು ಒಳಗೊಂಡಿರುವುದರಿಂದ ಹಲವು ಜೀವ ರಾಸಾಯನಿಕ ಕ್ರಿಯೆಗಳಲ್ಲಿ ಸಹಕಾರಿ.
5. Alprogen ಎನ್ನುವ ಗ್ಲೈಕೋಪ್ರೋಟೀನ್ ಅಂಶವು ಅಲರ್ಜಿಯ ವಿರುದ್ಧವಾಗಿ ಕೆಲಸ ಮಾಡುತ್ತದೆ.
6. C-glucosyl chromone ಎಂಬ ಅಂಶವು antiinflammatory, ಉರಿಯೂತ ನಿವಾರಕವಾಗಿದೆ.
7. 12- Anthraquinone ಅಂಶವು ಮಲ ವಿರೇಚಕವಾಗಿದೆ.
8. Aloin, emodin ಎಂಬ ಅಂಶಗಳು ನೋವುನಿವಾರಕ, ಬ್ಯಾಕ್ಟೀರಿಯಾ ರೋಗಾಣು ನಾಶಕ, ಉರಿಯೂತ ನಿವಾರಕ ಆಗಿವೆ.
9. Auxins, Gibberellin ಅಂಶಗಳು ಉರಿಯೂತ ನಿವಾರಕ ಹಾಗೂ ಗಾಯಗಳನ್ನು ಮಾಯಿಸುವ ಗುಣ ಹೊಂದಿವೆ.
10. ಮನುಷ್ಯನ ಕೋಶಗಳ ಬೆಳವಣಿಗೆಗೆ ಅಗತ್ಯವಿರುವ 22 ಅಮೈನೋ ಆಮ್ಲಗಳ ಪೈಕಿ 20 ಅಮೈನೋ ಆಸಿಡ್ಗಳು ಲೋಳೆಸರದಲ್ಲಿ ಅಡಕವಾಗಿವೆ.
11. Salycilic acid ಅಂಶವು ಬ್ಯಾಕ್ಟೀರಿಯಾ ನಿರೋಧಕ ಹಾಗೂ ಉರಿಯೂತ ಶಾಮಕ.
12. Mucopoysaccharide ಅಂಶಗಳು ತೇವಾಂಶವನ್ನು ಚರ್ಮಕ್ಕೆ ಹೊಂದಿಸಲು ಪಾತ್ರ ವಹಿಸುವುದರಿಂದ , ಚರ್ಮದ ಮೇಲೆ ಲೇಪಿಸುವುದರಿಂದ, dry skin, ಒಣಚರ್ಮದ ಸಂದರ್ಭದಲ್ಲಿ ಪ್ರಯೋಜನಕಾರಿ. ಅಷ್ಟೇ ಅಲ್ಲದೆ, ಮೊಡವೆಗಳನ್ನು ಕೂಡ ನಿಯಂತ್ರಿಸುತ್ತದೆ.
ಆಯುರ್ವೇದದ ಆಧಾರ
ಆಯುರ್ವೇದದ ಭಾವ ಪ್ರಕಾಶ ಗ್ರಂಥದ ಪ್ರಕಾರ ಇದು ಶೀತಲ ಸ್ವಭಾವದ, ಕಹಿರಸ ಹೊಂದಿರುವ ಇದು ಬಲವರ್ಧಕ, ಮುಪ್ಪು ಮತ್ತು ರೋಗವನ್ನು ದೂರ ಇಡಬಲ್ಲ ರಸಾಯನ, ಕಣ್ಣಿಗೆ ಹಿತ, ಸಂತಾನಶಕ್ತಿ ವರ್ಧಕ, ವಿಷ ನಿವಾರಕ, ವಾತ ಶಾಮಕ, ಕಫದಿಂದ ಉಂಟಾದ ಜ್ವರವನ್ನು ಶಮನಗೊಳಿಸುವಂತದ್ದು, ಯಕೃತ್ (liver) ಮತ್ತು ಪ್ಲೀಹಕ್ಕೆ (spleen) ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವಂತದ್ದು, ಗ್ರಂಥಿ (ಗಂಟು ಬಾವು ಅಥವಾ cyst) ನಿವಾರಿಸುವಂತದ್ದು, ಸುಟ್ಟಗಾಯಗಳನ್ನು ಮಾಯಿಸುವಂತದ್ದು, ರಕ್ತ ಹಾಗೂ ಚರ್ಮದ ತೊಂದರೆಗಳನ್ನು ಪರಿಹರಿಸುವಂತದ್ದು, ಪಿತ್ತದಿಂದ ಆಗಬಹುದಾದ ವ್ಯಾಧಿಗಳನ್ನು ಶಮನಗೊಳಿಸುವಂತದ್ದು.
ಮುಂಜಾಗ್ರತೆಗಳು
1. ಗರ್ಭಿಣಿಯರಲ್ಲಿ ಗರ್ಭಾಶಯದ ಮಾಂಸಪೇಶಿಗಳ ನ್ನು ಸಂಕೋಚಗೊಳಿಸುವ ಸ್ವಭಾವ ಇರುವುದರಿಂದ ಗರ್ಭಿಣಿಯರು ಸೇವಿಸಬಾರದು.
2. ಎದೆ ಹಾಲುಣಿಸುವ ತಾಯಂದಿರು ಸೇವಿಸಿದಲ್ಲಿ ಶಿಶುವಿನಲ್ಲಿ ಜೀರ್ಣಾಂಗ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಅನುಭವದಿಂದ, ಸಂಶೋಧನೆಯಿಂದ ಉಲ್ಲೇಖಿಸಲ್ಪಟ್ಟ ಇತರ ಪ್ರಯೋಜನಗಳು
1. ಜೀರ್ಣಾಂಗವ್ಯೂಹದ ತೊಂದರೆಗಳ ನಿವಾರಕ
2. ರಕ್ತಹೀನತೆ ನಿವಾರಕ
3. ಹಾರ್ಮೋನುಗಳ ಅಸಮತೋಲನದ ನಿವಾರಕ
4. ಕೂದಲು ಹಾಗೂ ಚರ್ಮಕ್ಕೆ ಪ್ರಯೋಜನ ಕಾರಕ
5. ರೋಗನಿರೋಧಕ ಶಕ್ತಿ ವರ್ಧಕ
6. ಸೋರಿಯಾಸಿಸ್ ರೋಗದ ನಿಯಂತ್ರಕ
7. ವಸಡುಗಳ ಸೋಂಕು ನಿವಾರಕ,ವಸಡು ರಕ್ಷಕ
8. ಶ್ವಾಸಕೋಶದ ತೊಂದರೆಗಳ ನಿವಾರಕ
9. ಕೊಲೆಸ್ಟ್ರಾಲ್ ಅಂಶ ನಿಯಂತ್ರಕ
10. ರುಮಾಟಾಯ್ಡ್ ಆರ್ಥೈಟಿಸ್ ಪ್ರತಿಬಂಧಕ
11. ರಕ್ತದಲ್ಲಿನ ಹೆಚ್ಚಾದ ಸಕ್ಕರೆಯ ನಿಯಂತ್ರಕ
12. ಮೂಲ ವ್ಯಾಧಿಯಲ್ಲಿ (piles) ಉಪಕಾರಕ
13. ಹೆಚ್ಚಿದ ರಕ್ತದೊತ್ತಡದ ನಿಯಂತ್ರಕ.
ಸೇವನೆಗೆ ಸರಳ ಮನೆಮದ್ದು- ಲೋಳೆಸರದ ಜ್ಯೂಸ್….
ಬೇಕಾದ ಸಾಮಗ್ರಿಗಳು – ನಿಂಬೆಹಣ್ಣು 1, ಜೇನು 2 ಚಮಚ, ಒಂದು ಲೋಳೆಸರದ ತಿರುಳು, ಉಪ್ಪು- ಒಂದು ಚಿಟಿಕೆ, ಹಸಿಶುಂಠಿ- ಸಣ್ಣಗಾತ್ರದ ಮೂರು ತುಂಡು, ಒಂದು ಲೋಟ ನೀರು
ತಯಾರಿಸುವ ವಿಧಾನ : ಒಂದು ಲೋಳೆಸರದ ಕೋಡನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ಚೂರಿಯ ಸಹಾಯದಿಂದ ಎಬ್ಬಿಸಿ ತೆಗೆದು, ಒಳಗಿನ ಜೆಲ್ಲಿಯ ತರದ pulp ಅಂದರೆ ತಿರುಳನ್ನು ಪ್ರತ್ಯೇಕಿಸಿ, ತೊಳೆದು ಗ್ರೈಂಡರ್ಗೆ ಹಾಕಬೇಕು. ಅದಕ್ಕೆ ಹಸಿಶುಂಠಿಯ ಸಣ್ಣದಾದ ಮೂರು ತುಂಡುಗಳನ್ನು ಸೇರಿಸಬೇಕು. ಒಂದು ಲೋಟ ನೀರನ್ನು ಸುರಿಯಬೇಕು. ನಂತರ ಗ್ರೈಂಡರ್ನಲ್ಲಿರುವ ಈ ಮಿಶ್ರಣವನ್ನು ಸ್ವಿಚ್ ಆನ್ ಮಾಡಿ ಸ್ವಲ್ಪ ಹೊತ್ತು ಬಿಡಬೇಕು. ಹಾಕಿದ ವಸ್ತುಗಳು ಸರಿಯಾದ ಮಿಶ್ರಣವಾಗಿ ರೂಪುಗೊಳ್ಳುವ ತನಕ. ನಂತರ ಸ್ವಿಚ್ ಆಫ್ ಮಾಡಿ ಮಿಶ್ರಣವನ್ನು ಸೋಸಬೇಕು. ನಂತರ ಒಂದು ನಿಂಬೆಹಣ್ಣನ್ನು ಕಿವುಚಿ ಅದರ ರಸವನ್ನು ಹಾಗೂ ಎರಡು ಚಮಚ ಜೇನನ್ನು ಅದಕ್ಕೆ ಸೇರಿಸಬೇಕು (ಸಕ್ಕರೆ ಕಾಯಿಲೆ ಇದ್ದವರು ಜೇನನ್ನು ಸೇರಿಸಲೇ ಬಾರದು). ಒಂದು ಚಿಟಿಕೆ ಉಪ್ಪನ್ನು ಕೊನೆಯಲ್ಲಿ ಹಾಕಿ ಚೆನ್ನಾಗಿ ತಿರುಗಿದ ನಂತರ ನೀವು ಕುಡಿಯಬಹುದಾದ ಲೋಳೆಸರದ ಹೆಲ್ತ್ ಜ್ಯೂಸ್ ಸಿದ್ಧವಾಯಿತು. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದಲ್ಲಿ ಇದರ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ಮೇಲೆ ಹೇಳಿದ ಎಲ್ಲಾ ಲಾಭಗಳನ್ನು ಇಷ್ಟರಿಂದಲೇ ಪಡೆಯಬಹುದಾಗಿದೆ.
✍️ ಡಾ. ಆರ್. ಪಿ. ಬಂಗಾರಡ್ಕ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.