ಎಲ್ಲೆಡೆ ಒಂದೇ ಸುದ್ದಿ ಕೊರೋನಾ ಮತ್ತು lockdown. ಎರಡು ವರ್ಷಗಳ ಹಿಂದೆ ಈ ಶಬ್ದಗಳ ಅರಿವೇ ಇಲ್ಲದ ನಮಗೆ, ಈಗ ಈ ಶಬ್ದಗಳು ಜೀವನದ ಒಂದು ಭಾಗವಾಗಿದೆಯೆಂದು ಹೇಳಿದರೆ ತಪ್ಪಾಗಲಾರದು. ಈ ಎಲ್ಲಾ ಸುದ್ದಿಗಳಿಂದ ನೀವು ಬೇಸತ್ತಿದ್ದೀರಾ..?! ನಮ್ಮವರನ್ನು ಕಳೆದುಕೊಂಡ ನೋವನ್ನು ಸಹಿಸಿಕೊಳ್ಳುವೆವಾ..?! ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ನಮ್ಮಲ್ಲಿಯೇ ಅಡಗಿದೆ. ಇದಕ್ಕೆ ಉತ್ತರವೇ ನಮ್ಮ ದಿನಚರಿ.!
ದಿನಚರಿ ಅರ್ಥಾತ್ ನಮ್ಮ – ದಿನನಿತ್ಯದ ಕೆಲಸ. ದಿನಚರಿ ಯಾಕೆ ಮುಖ್ಯ..?! ಏಕೆಂದರೆ ಅದು ನಮ್ಮ ಮನಸ್ಸನ್ನು, ಬುದ್ಧಿಯನ್ನು ಹಾಗೂ ಕಾಯವನ್ನು ಸಮತೋಲನದಲ್ಲಿಡಲು ಉಪಕಾರಿಯಾಗುತ್ತದೆ. ಇದು ಹೇಗೆ ಎಂಬುದನ್ನು ತಿಳಿಯೋಣ.
ನಮ್ಮಲ್ಲಿ ಹೆಚ್ಚಿನವರ ದಿನಚರಿ ಶುರುವಾಗುವುದು ಬೆಳಗ್ಗೆ ಮೊಬೈಲ್ನಲ್ಲಿ ಬಡಬಡಿಸುವ Alarmನಿಂದ. ಅದರಲ್ಲಿರುವ snooze ಎಂಬ buttonನನ್ನು ಅದೆಷ್ಟು ಬಾರಿ ಒತ್ತುತ್ತೇವೆಯೋ ಏನೋ..!! ಅದೆಲ್ಲ ಹಾಗಿರಲಿ ಇದಕ್ಕೆ ಏನು ಕಾರಣ ಎಂದು ಅವಲೋಕಿಸಿದರೆ, ನಮ್ಮ ಮನಸ್ಸಿನ ಜಾಡ್ಯತೆ ಮತ್ತು ಬೆಳಿಗ್ಗೆ ಬೇಗ ಎದ್ದೇಳುವ ಇಚ್ಛಾಶಕ್ತಿಯ ಕೊರತೆ. ಇದಕ್ಕೆಲ್ಲಾ ಕಾರಣ ನಮ್ಮ ಹಿಂದಿನ ದಿನದ ದಿನಚರಿ. ಒಂದೊಮ್ಮೆ ನಮ್ಮ ದಿನಚರಿ ಸರಿಯಾದಲ್ಲಿ ನಮ್ಮ ಜೀವನವು ಸರಿಯಾದಂತೆ. ಆದ್ದರಿಂದಲೇ ನಮ್ಮ ಪೂರ್ವಜರು ಮುಂಜಾನೆ ಎದ್ದೇಳುವ ಸಮಯ ಹೇಗಿರಬೇಕು ಎಂದು ಅಷ್ಟಾಂಗ ಹೃದಯದಲ್ಲಿ ಹೀಗೆ ವಿಶ್ಲೇಷಿಸಿದ್ದಾರೆ – “ಬ್ರಾಹ್ಮೆ ಮುಹೂರ್ತೇ ಉತ್ತಿಷ್ಠೇತ್ ಸ್ವಸ್ಥೋ ರಕ್ಷಾರ್ಥಮ್ ಆಯುಷಃ” ಅರ್ಥಾತ್ ಉತ್ತಮ ಆರೋಗ್ಯ ಹಾಗೂ ಆಯುಷ್ಯಕ್ಕಾಗಿ ನಾವು ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು. ಬ್ರಾಹ್ಮಿ ಮುಹೂರ್ತ (3am-6am) ಎಂದರೆ ಸೂರ್ಯೋದಯದಿಂದ ಸುಮಾರು ಒಂದುವರೆ ಗಂಟೆ ಮೊದಲು. ಈ ಸಮಯದಲ್ಲಿ ನಮ್ಮ ಮನಸ್ಸು ಪ್ರಶಾಂತವಾಗಿ ಹಾಗೂ ಶೂನ್ಯ ಆಲೋಚನೆಗಳಿಂದ ಕೂಡಿರುತ್ತದೆ. ಇದರೊಂದಿಗೆ ನಮ್ಮ ಮನಸ್ಸು ಅಧಿಕ ಗ್ರಾಹಕ ಶಕ್ತಿಯನ್ನು ಹೊಂದಿರುತ್ತದೆ ಎಂದು ಅನೇಕ ಸಂಶೋಧನೆಗಳು ದೃಢಪಡಿಸಿವೆ. ಈ ಸಮಯವನ್ನು ಧ್ಯಾನ, ಯೋಗ ಅಥವಾ ಪುಸ್ತಕಗಳನ್ನು ಓದಲು ಉಪಯೋಗಿಸಿದರೆ ನಮ್ಮ ಮನಸ್ಸಿಗೆ ನೂರಾನೆ ಬಲ ಬಂದಂತಾಗುತ್ತದೆ.
ನಮ್ಮ ದಿನಚರಿಯ ಮೊದಲ ಭಾಗ, ಎಚ್ಚರಗೊಂಡ ಕೂಡಲೇ ದೇವರಿಗೆ ನಮಿಸುತ್ತಾ, ಭೂಮಾತೆಗೆ ನಮಸ್ಕರಿಸುತ್ತಾ ನಮ್ಮ ನಿತ್ಯ ವಿಧಿಗಳನ್ನು ಪೂರೈಸುವುದು. ತದನಂತರ ನಾವು ಏಕಾಂತದಲ್ಲಿ ಸಮಯವನ್ನು ಕಳೆಯಬೇಕು. ಈ ಸಮಯದಲ್ಲಿ ಪ್ರಕೃತಿಯ ಸೌಂದರ್ಯ ಆಸ್ವಾದಿಸಲು ವಾಯುವಿಹಾರ ಮಾಡಬಹುದು ಅಥವಾ ನಮ್ಮ ಬುದ್ಧಿ ಮತ್ತು ಮನಸ್ಸನ್ನು ಏಕಾಗ್ರತೆಯಿಂದ ಇಡಲು ಯೋಗ, ಪ್ರಾಣಾಯಾಮ ಹಾಗೂ ಧ್ಯಾನಗಳನ್ನು ಮಾಡುವುದು ಸೂಕ್ತ. ಇದರಿಂದ ಮನಸ್ಸು ಎಂಬ ದಿವ್ಯ ಸಾಗರವು ಒಳ್ಳೆಯ ಆಲೋಚನೆಗಳ ಅಲೆಯಿಂದ ಕೂಡಿ ನಮ್ಮ ಗುರಿಯೆಡೆಗೆ ಸಾಗಲು ಸಹಾಯ ಮಾಡುತ್ತದೆ. ಇದಿಷ್ಟು ಮುಂಜಾನೆ ಮಾಡಬೇಕಾದಂತಹ ಕಾರ್ಯಗಳು.ಉಳಿದ ದಿನದ ಸಮಯವನ್ನು ನಮ್ಮ ಆಹಾರ, ಕೆಲಸ ಮತ್ತು ವಿಶ್ರಾಂತಿಗೆಂದು ವಿಂಗಡಿಸೋಣ.
ಆಹಾರ ಎಂಬುದು ಪ್ರತಿಯೊಬ್ಬ ಜೀವಿಗೂ ದೈಹಿಕ ಕೆಲಸ ಮಾಡಲು ಅತ್ಯವಶ್ಯವಾಗಿದೆ. ನಮ್ಮ ಆಹಾರ-ವಿಹಾರ ನಮ್ಮ ಮನಸ್ಸಿನ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂದರೆ ತಪ್ಪಾಗಲಾರದು. ಏಕೆಂದರೆ ನಮ್ಮ ಗುಣಗಳಿಗೆ ನೇರ ಹೊಣೆ ನಾವು ಸೇವಿಸುವಂತಹ ಆಹಾರ ಪದಾರ್ಥಗಳು. ಬೆಳಗಿನ ಉಪಾಹಾರ, ಮಧ್ಯಾಹ್ನದ ಭೋಜನ ಹಾಗೂ ರಾತ್ರಿಯ ಫಲಾಹಾರ ಎಂದು ಮೂರು ಭಾಗವಾಗಿ ವಿಂಗಡಿಸಿದರೆ ಇವುಗಳ ಮಧ್ಯೆ ಸುಮಾರು ಐದು-ಆರು ಗಂಟೆಗಳ ವಿರಾಮ ಇರಬೇಕು. ಇವೆಲ್ಲದರ ಮಧ್ಯದಲ್ಲಿ ಸರಿಯಾದ ಸಮಯದಲ್ಲಿ ಬೇಕಾದಷ್ಟು ನೀರನ್ನು ಅಥವಾ ದ್ರವಾಹಾರವನ್ನು ಸೇವಿಸುವುದು ಅತಿಮುಖ್ಯ. ಆದಷ್ಟು ಊಟಕ್ಕಿಂತ ಮೊದಲು ಮತ್ತು ಊಟದ ಬಳಿಕ ಅರ್ಧಗಂಟೆ ವ್ಯತ್ಯಾಸದಲ್ಲಿ ನೀರು ಸೇವಿಸುವುದು ಉತ್ತಮ. ನಾವು ತಿನ್ನುವ ಆಹಾರ ಸತ್ವಯುತವಾಗಿ ಹಾಗೂ ಸಾತ್ವಿಕವಾಗಿದ್ದರೆ ನಮ್ಮ ಜೀವನಶೈಲಿಯು ಸಾತ್ವಿಕತೆಯಿಂದ ಕೂಡಿರುತ್ತದೆ. ಅತಿಯಾದ ಖಾರ, ಹುಳಿ ಮತ್ತು ಹಳಸಿದ ಪದಾರ್ಥಗಳು ರಾಜಸಿಕ ಹಾಗೂ ತಾಮಸಿಕ ಗುಣಗಳನ್ನು ಹೆಚ್ಚಿಸುವುದಂತು ಸತ್ಯ. ಸಾತ್ವಿಕ ಆಹಾರದ ಬಗ್ಗೆ ಪರಮಾತ್ಮ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಉಲ್ಲೇಖಿಸುತ್ತಾನೆ –
“ಆಯುಃಸತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ ।
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕಪ್ರಿಯಾಃ ||”
ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಆಹಾರದ ಬಗ್ಗೆ ವಿವರಿಸಿದ್ದಾನೆ. ಯಾವ ಆಹಾರ ನಮ್ಮ ಆಯುಷ್ಯವನ್ನು ವೃದ್ಧಿಗೆ ಪೂರಕವೋ; ಯಾವ ಆಹಾರ ನಮಗೆ ಸೌಮ್ಯ ಸ್ವಭಾವವನ್ನು ಕೊಡುತ್ತದೋ; ಯಾವ ಆಹಾರ ದೇಹಕ್ಕೆ ಪೌಷ್ಟಿಕಾಂಶವನ್ನು ಕೊಡುತ್ತದೋ; ಯಾವ ಆಹಾರ ಆರೋಗ್ಯವನ್ನು ಕೊಡುತ್ತದೋ ಅಂತಹ ಆಹಾರ ಸಾತ್ವಿಕ ಆಹಾರ. ಈ ಆಹಾರವನ್ನು ನೋಡಿದಾಗ ನಮಗೆ ಕೆಟ್ಟ ಭಾವನೆ ಬರುವುದಿಲ್ಲ. ಅದು ರಸವತ್ತಾಗಿರುತ್ತದೆ, ರುಚಿಯಾಗಿರುತ್ತದೆ. ಇದನ್ನು ತಿಂದಾಗ ನಮ್ಮ ಹೊಟ್ಟೆ ತುಂಬುತ್ತದೆ ಮತ್ತು ತಕ್ಷಣ ಹಸಿವೆಯಾಗುವುದಿಲ್ಲ. ನೋಡಲು ಹೃದಯಂಗಮವಾಗಿರುತ್ತದೆ, ತಿಂದ ನೆನಪು ಉಳಿಯುವಂತಿರುತ್ತದೆ. ಪ್ರಕೃತಿ ಸಹಜವಾದ, ರಸವತ್ತಾದ, ರುಚಿಯಾದ, ಹಣ್ಣು-ಹಂಪಲು, ಗಡ್ಡೆ-ಗೆಣಸು, ಬೇಳೆ-ಕಾಳು ಸಾಮಾನ್ಯವಾಗಿ ಸಾತ್ವಿಕ ಆಹಾರವಾಗಿರುತ್ತದೆ. ಆಯುಷ್ಯವನ್ನು ಹೆಚ್ಚಿಸುವ ಶುದ್ಧ ತುಪ್ಪ(ಮಿತವಾಗಿ ಬಳಸಿದಾಗ) ಸಾತ್ವಿಕ ಆಹಾರ. ಇಂಥಾ ಆಹಾರಕ್ಕೆ ಆದ್ಯತೆ ನೀಡಿದಷ್ಟು ನಾವು ಅಧಿಕ ರಕ್ತದೊತ್ತಡ , ಮಧುಮೇಹ ಎಂಬ ಹೆಮ್ಮಾರಿಗಳಿಂದ ದೂರವಾಗುತ್ತೇವೆ.
ವಿಶ್ರಾಂತಿಯ ವಿಚಾರಕ್ಕೆ ಬಂದಾಗ, ಆಹಾರ ತಿಂದ ಕೂಡಲೇ ಮಲಗುವುದು ಸೂಕ್ತವಲ್ಲ. ಬೇಕಾದರೆ ಸ್ವಲ್ಪ ಹೊತ್ತಿನ ಮಟ್ಟಿಗೆ ಕುರ್ಚಿಯಲ್ಲಿ ಕುಳಿತು ವಿರಮಿಸುವುದು ಉತ್ತಮ, ಇಲ್ಲವಾದರೆ ಒಂದು ಹತ್ತು ಹೆಜ್ಜೆ ನಡೆಯುವುದು ಅತ್ಯುತ್ತಮ.
ಇವೆಲ್ಲದರ ಮಧ್ಯದಲ್ಲಿ ಬಸವಣ್ಣನವರು ಹೇಳಿದಂತೆ ‘ಕಾಯಕವೇ ಕೈಲಾಸ’ ಎಂದು ಕೆಲಸ ಮಾಡುವುದು ಮುಖ್ಯ. ನಾವು ಕರ್ಮಯೋಗಿಗಳಾಗಿ, ನಮ್ಮ ಕೆಲಸ ಯಾವುದೇ ಇರಲಿ ಅದನ್ನು ನಾವು 100% ಶ್ರದ್ಧೆಯಿಂದ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ಖಂಡಿತವಾಗಿಯೂ ಸಿಗುತ್ತದೆ ಎಂಬುದು ಸಾರ್ವಕಾಲಿಕ ಸತ್ಯ.
ಇದೆಲ್ಲದರ ಬಳಿಕ ಸಂಜೆ ಹೊತ್ತಿಗೆ ಬಿಡುವು ಮಾಡಿಕೊಂಡು ನಮ್ಮ ಕುಟುಂಬದವರ ಜೊತೆ ಕಾಲಕಳೆಯುವುದು ಅತಿಮುಖ್ಯ. ಇದರಿಂದ ನಮಗೆ ನಮ್ಮ ಹಿರಿಯರಿಂದ ಸ್ಫೂರ್ತಿದಾಯಕ ಅನುಭವಗಳು ದೊರಕುವ ಅಮೂಲ್ಯ ಕ್ಷಣ ಹಾಗೂ ಹಿರಿಯರಿಗೆ ತಮ್ಮ ಮನಸ್ಸನ್ನು ಹಗುರ ಮಾಡುವಂತಹ ಸಮಯ. ಇದರಿಂದ ಕುಟುಂಬದಲ್ಲಿ ಒಗ್ಗಟ್ಟು ಹಾಗೂ ಸಾಮರಸ್ಯ ಒಂದಾಗಿ ಖುಷಿಯೆಂಬ ಸಿಹಿಯು ನೆಲೆಯಾಗುತ್ತದೆ.
ದಿನಚರಿಯ ಕೊನೆಯ ಭಾಗ ರಾತ್ರಿ ನಿದ್ರೆ ಹೋಗುವುದು. ನಮಗೆ 6-8 ಗಂಟೆಗಳ ನಿದ್ದೆ ಅತ್ಯವಶ್ಯ. ಈಗ ಚಲನವಾಣಿ ಎಂಬ ‘ಚಂಚಲ’ವಾಣಿಯು ನಮ್ಮ ದಿನಚರಿಯನ್ನು ಅಡಿಮೇಲು ಮಾಡುತ್ತಿರುವುದು ನಿಜವಾದರೂ ನಮ್ಮ ಇಚ್ಛಾಶಕ್ತಿಯಿಂದ ಚಂಚಲತೆಯನ್ನು ಹಿಮ್ಮೆಟ್ಟಿ ಮಿಂಚಿನಂತೆ ನಮ್ಮ ದಿನನಿತ್ಯದ ಕೆಲಸದಲ್ಲಿ ಭಾಗಿಯಾಗಬೇಕು. ರಾತ್ರಿ ನಿದ್ದೆ ಹೋಗುವ ಸಮಯಕ್ಕಿಂತ ಕನಿಷ್ಠ ಮೂರು ಗಂಟೆ ಮುಂಚೆ ಊಟ ಮಾಡುವುದು ಉತ್ತಮ. ಇದರಿಂದ ನಮ್ಮ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಡೈರಿ ಬರೆಯುವ ಹವ್ಯಾಸವಿದ್ದಲ್ಲಿ ದಿನದಲ್ಲಿ ನಡೆದ ಉತ್ತಮ ಹಾಗೂ ಕೆಟ್ಟ ಘಟನೆಗಳನ್ನು ಪಟ್ಟಿಮಾಡಿ, ತಪ್ಪು ಮಾಡಿದ್ದಲ್ಲಿ ಅದನ್ನು ಸರಿಪಡಿಸುವ ಉಪಾಯ ಹುಡುಕಿಕೊಳ್ಳಬೇಕು. ಈ ಅಭ್ಯಾಸ ಇಲ್ಲವಾದಲ್ಲಿ ಕನಿಷ್ಠಪಕ್ಷ ಕಣ್ಣುಮುಚ್ಚಿ ದಿನದ ಪೂರ್ತಿ ಚಿತ್ರಣವನ್ನು ಮನಸ್ಸಿನಲ್ಲಿ ನೆನಪಿಸಿಕೊಂಡು, ಖುಷಿಯಾದ ಘಟನೆಗಳನ್ನು ಮೆಲುಕು ಹಾಕುತ್ತಾ ನಿದ್ರೆಗೆ ಜಾರುವುದು ಅತಿ ಸೂಕ್ತ.
“Early to bed and early to rise, makes a man healthy, wealthy and wise” ಎಂಬುದನ್ನು ಮನದಟ್ಟು ಮಾಡಿಕೊಂಡು ‘Autosuggestion’ ಎಂಬ alarm on ಮಾಡಿ ನಿದ್ದೆ ಮಾಡಿದರೆ ಸುಖ ನಿದ್ರೆಗೆ ಜಾರುವುದುರಲ್ಲಿ ಯಾವುದೇ ಸಂಶಯವಿಲ್ಲ. ಉತ್ತಮ ನಿದ್ರೆ ಸರ್ವರೋಗಕ್ಕೂ ಮದ್ದು ಎಂಬುದನ್ನು ಅರಿತು ಬಾಳೋಣ.
✍️ ಡಾ. ವಿನಯ ಕುಮಾರ ಟಿ.
ಪ್ರಕೃತಿ ಚಿಕಿತ್ಸೆ ಮತ್ತು ಯೋಗ (BNYS)
ಆಳ್ವಾಸ್ ಕಾಲೇಜು, ಮೂಡುಬಿದಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.